ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹೌತಿ ದಾಳಿ ಮತ್ತು ಪನಾಮಾ ಕಾಲುವೆ ಅಸ್ತವ್ಯಸ್ತ: ಜಾಗತಿಕ ಪೂರೈಕೆ ಸರಪಳಿ ಸ್ಥಗಿತ; ಗಿರೀಶ್ ಲಿಂಗಣ್ಣ ಬರಹ

ಹೌತಿ ದಾಳಿ ಮತ್ತು ಪನಾಮಾ ಕಾಲುವೆ ಅಸ್ತವ್ಯಸ್ತ: ಜಾಗತಿಕ ಪೂರೈಕೆ ಸರಪಳಿ ಸ್ಥಗಿತ; ಗಿರೀಶ್ ಲಿಂಗಣ್ಣ ಬರಹ

ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸರಕು ಸಾಗಾಣಿಕೆ ಹಡಗಿನ ಮೇಲೆ ದಾಳಿ ನಡೆಸಿ ಅಪಾರ ನಷ್ಟಕ್ಕೆ ಯತ್ನಿಸಿದ್ದಾರೆ. ಇದು ಜಾಗತಿಕ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಬರಹ ಓದಿ.

ಹೌತಿ ದಾಳಿ ಮತ್ತು ಪನಾಮಾ ಕಾಲುವೆ ಅಸ್ತವ್ಯಸ್ತ: ಜಾಗತಿಕ ಪೂರೈಕೆ ಸರಪಳಿ ಸ್ಥಗಿತ; ಗಿರೀಶ್ ಲಿಂಗಣ್ಣ ಬರಹ
ಹೌತಿ ದಾಳಿ ಮತ್ತು ಪನಾಮಾ ಕಾಲುವೆ ಅಸ್ತವ್ಯಸ್ತ: ಜಾಗತಿಕ ಪೂರೈಕೆ ಸರಪಳಿ ಸ್ಥಗಿತ; ಗಿರೀಶ್ ಲಿಂಗಣ್ಣ ಬರಹ

ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ನಿರಂತರವಾಗಿ ಸಾಗಾಣಿಕಾ ಹಡಗುಗಳ ಮೇಲೆ ದಾಳಿ ನಡೆಸುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿ, ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳ ನಡುವೆ ಈ ಪ್ರದೇಶದಲ್ಲಿನ ಸರಕು ಸಾಗಾಣಿಕೆ ಶೇಕಡಾ 90 ರಷ್ಟು ಕುಸಿತ ಕಂಡಿದೆ ಎಂದು ಅಮೆರಿಕನ್ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೌತಿ ಬಂಡುಕೋರರ ದಾಳಿಯಿಂದಾಗಿ, ಕನಿಷ್ಠ 65 ದೇಶಗಳು ಬಾಧಿಸಲ್ಪಟ್ಟಿವೆ. ಈ ಸಾಗಾಣಿಕಾ ಮಾರ್ಗದ ಮೂಲಕ ಸಾಗಾಣಿಕೆ ನಡೆಸುವ 29 ಪ್ರಮುಖ ಇಂಧನ ಮತ್ತು ಸರಕು ಸಾಗಾಣಿಕಾ ಸಂಸ್ಥೆಗಳು ಬೇರೆ ಮಾರ್ಗದಿಂದ ಕಾರ್ಯಾಚರಿಸುತ್ತಿವೆ ಎಂದು ಪೆಂಟಗನ್‌ನ ರಕ್ಷಣಾ ಗುಪ್ತಚರ ಸಂಸ್ಥೆ (ಡಿಫೆನ್ಸ್ ಇಂಟಲಿಜೆನ್ಸ್ ಏಜೆನ್ಸಿ) ಮಾಹಿತಿ ನೀಡಿದೆ.

ಬ್ರಿಟಿಷ್ ಪೆಟ್ರೋಲಿಯಂ, ಎವರ್‌ಗ್ರೀನ್, ಸಿಎಂಎ ಸಿಜಿಎಂ, ಮಾಯೆರ್ಸ್ಕ್, ಕತಾರ್ ಎನರ್ಜಿ ಮತ್ತು ಶೆಲ್ ಕಂಪನಿಗಳು ಹೌತಿ ದಾಳಿಯಿಂದ ನಷ್ಟಕ್ಕೊಳಗಾಗಿವೆ. ಈ ಕಾರಣದಿಂದಾಗಿ ಸಾಕಷ್ಟು ಹಡಗುಗಳು ಈಗ ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಪ್ರದೇಶವನ್ನು ಬಳಸಿಕೊಂಡು ಸಂಚರಿಸಲಾರಂಭಿಸಿವೆ. ಆದರೆ ಇದೊಂದು ಸುದೀರ್ಘ ಮಾರ್ಗವಾಗಿದ್ದು, ಅಂದಾಜು 20,000 ಕಿಲೋಮೀಟರ್ (11,000 ನಾಟಿಕಲ್ ಮೈಲಿ) ಮತ್ತು ಕನಿಷ್ಠ ಹತ್ತು ದಿನಗಳಷ್ಟು ಹೆಚ್ಚುವರಿ ಪ್ರಯಾಣ ಮಾಡಬೇಕಾಗುತ್ತದೆ. ದೀರ್ಘ ವ್ಯಾಪ್ತಿಯ ಪ್ರಯಾಣದ ಕಾರಣದಿಂದಾಗಿ ಪ್ರತಿಯೊಂದು ಪ್ರಯಾಣಕ್ಕೂ ಅಂದಾಜು 8.2 ಕೋಟಿ ರೂಪಾಯಿ (1 ಮಿಲಿಯನ್ ಡಾಲರ್) ಹೆಚ್ಚುವರಿ ಮೊತ್ತ ತಗಲುತ್ತದೆ.

ಅದರೊಡನೆ, ಕೆಂಪು ಸಮುದ್ರದ ಮಾರ್ಗವಾಗಿ ಸಂಚರಿಸುವ ಹಡಗುಗಳ ವಿಮಾ ಪ್ರೀಮಿಯಂ ಮೊತ್ತವೂ ಈಗ ಸಾಕಷ್ಟು ಹೆಚ್ಚಾಗಿದೆ ಎಂದಿವೆ ವರದಿಗಳು. ಫೆಬ್ರವರಿ ಮಧ್ಯಭಾಗದ ವೇಳೆಗೆ ವಿಮಾ ಪ್ರೀಮಿಯಂ ಹಡಗಿನ ಒಟ್ಟು ಮೌಲ್ಯದ 0.7ರಿಂದ 1% ತನಕ ಹೆಚ್ಚಳ ಕಂಡಿತ್ತು. ಡಿಸೆಂಬರ್ 2023ಕ್ಕೂ ಮುನ್ನ, ವಿಮಾ ಪ್ರೀಮಿಯಂ ಮೊತ್ತ ಹಡಗಿನ ಮೌಲ್ಯದ 0.1%ಕ್ಕೂ ಕಡಿಮೆಯಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಪನಾಮಾ ಕಾಲುವೆಯಲ್ಲಿನ ಅಡಚಣೆಗಳು ಸಮಸ್ಯೆಗೆ ಕಾರಣ

ಪನಾಮಾ ಕಾಲುವೆಯಲ್ಲಿನ ಅಡಚಣೆಗಳ ಕಾರಣದಿಂದಾಗಿ ಈಗಾಗಲೇ ಸಾಗರ ಸಾಗಾಣಿಕೆ ಸಾಕಷ್ಟು ಸಮಸ್ಯೆಗೊಳಗಾಗಿತ್ತು. ಅದರೊಡನೆ, ಈಗ ಕೆಂಪು ಸಮುದ್ರ ಮಾರ್ಗದ ಮೂಲಕ ನಡೆಸುವ ಸಾಗಾಣಿಕೆಗೂ ಅಪಾಯ ಎದುರಾಗಿರುವ ಪರಿಣಾಮವಾಗಿ, ಜಾಗತಿಕ ಸಮುದ್ರ ಸಾಗಾಣಿಕೆಯ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತಿದೆ ಎಂದು ಡಿಫೆನ್ಸ್ ಇಂಟಲಿಜೆನ್ಸ್ ಏಜೆನ್ಸಿ ತಿಳಿಸಿದೆ. ಜಾಗತಿಕ ವ್ಯಾಪಾರದ 10-15% ಸಾಗಾಣಿಕೆಗೆ ಕೆಂಪು ಸಮುದ್ರವೇ ಮಾರ್ಗವಾಗಿದೆ. ಪೆಂಟಗನ್ ವರದಿಯ ಪ್ರಕಾರ, ಕೆಂಪು ಸಮುದ್ರದಲ್ಲಿನ ದಾಳಿ ಮಾನವೀಯ ಸಹಾಯದ ಕಾರ್ಯಾಚರಣೆಗಳನ್ನೂ ವಿಳಂಬಗೊಳಿಸಿದ್ದು, ಸೂಡಾನ್ ಮತ್ತು ಯೆಮೆನ್‌ಗಳಿಗೆ ಪರಿಹಾರ ಸಾಮಗ್ರಿಗಳ ಪೂರೈಕೆ ಇನ್ನಷ್ಟು ತಡವಾಗುತ್ತಿದೆ.

ಇರಾನ್ ಬೆಂಬಲಿತ ಹೌತಿ ಬಂಡುಕೋರರ ದಾಳಿಯಿಂದ ಉಂಟಾಗುವ ಆರ್ಥಿಕ ಪರಿಣಾಮಗಳನ್ನು ಕುರಿತು ಅಮೆರಿಕ ಗುಪ್ತಚರ ಸಂಸ್ಥೆ ಇದೇ ಮೊದಲಬಾರಿಗೆ ಅಧಿಕೃತವಾಗಿ ಮತ್ತು ಸಾರ್ವಜನಿಕವಾಗಿ ಮೌಲ್ಯಮಾಪನ ಮಾಡಿದೆ. ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸಾಗುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಆರಂಭಿಸಿದರು. ಆರಂಭದಲ್ಲಿ ಹೌತಿ ಬಂಡುಕೋರರು ಹಮಾಸ್ ವಿರುದ್ಧ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಪ್ರತೀಕಾರ ರೂಪದಲ್ಲಿ ನಾವು ಕೇವಲ ಇಸ್ರೇಲ್‌ನಿಂದ ಬರುವ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದೇವೆ ಎಂದಿದ್ದರು. ಆದರೆ, ಅಲ್ಪ ಸಮಯದಲ್ಲೇ ಹೌತಿ ಬಂಡುಕೋರರು ಇಸ್ರೇಲ್‌ನ ಮಿತ್ರರಾಷ್ಟ್ರಗಳಾದ ಅಮೆರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳ ಹಡಗುಗಳ ಮೇಲೂ ದಾಳಿ ಆರಂಭಿಸಿದರು.

ಹೌತಿ ದಾಳಿಗಳನ್ನು ತಡೆಯುವ ಸಲುವಾಗಿ, ಅಮೆರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳು ಯೆಮೆನ್‌ನಲ್ಲಿನ ಬಂಡುಕೋರರ ನೆಲೆಗಳ ಮೇಲೆ ವಾಯುದಾಳಿ ನಡೆಸಿ, ನಿರ್ಬಂಧ ಹೇರಿದವು. ಅಮೆರಿಕ 'ಆಪರೇಶನ್ ಪ್ರಾಸ್ಪರಿಟಿ ಗಾರ್ಡಿಯನ್' ಎಂಬ 20 ದೇಶಗಳ ನೌಕಾ ಸಹಯೋಗವನ್ನು ಆರಂಭಿಸಿ, ನೌಕಾ ಕಾರ್ಯಾಚರಣೆಯ ಮೂಲಕ ಕೆಂಪು ಸಮುದ್ರದಲ್ಲಿನ ಅಂತಾರಾಷ್ಟ್ರೀಯ ಸಾಗಾಣಿಕೆಯನ್ನು ಸುರಕ್ಷಿತಗೊಳಿಸಲು ಪ್ರಯತ್ನಿಸಿತು. ಆದರೆ, ಇಂತಹ ಪ್ರಯತ್ನಗಳು ಹೌತಿ ಬಂಡುಕೋರರನ್ನು ತಡೆಯಲು ವಿಫಲವಾಗಿ, ಹಡಗುಗಳ ಮೇಲಿನ ದಾಳಿಗಳು ಅವ್ಯಾಹತವಾಗಿ ಮುಂದುವರಿದವು.

ಭಾರತದ ವ್ಯಾಪಾರದ ಮೇಲಿನ ಪರಿಣಾಮಗಳು

ಯುರೋಪ್ ಜೊತೆಗಿನ ಭಾರತದ 80 ರಷ್ಟು ವ್ಯಾಪಾರ ಕೆಂಪು ಸಮುದ್ರದ ಮೂಲಕವೇ ನಡೆಯುತ್ತದೆ. ಭಾರತ ಈಗ ಕಚ್ಚಾ ತೈಲ, ವಾಹನ ಬಿಡಿಭಾಗಗಳು, ರಾಸಾಯನಿಕಗಳು, ವಸ್ತ್ರಗಳು, ಕಬ್ಬಿಣ ಮತ್ತು ಉಕ್ಕಿನಂತಹ ಪ್ರಮುಖ ವಸ್ತುಗಳ ವ್ಯಾಪಾರದಲ್ಲಿ ಅಡಚಣೆ ಎದುರಿಸುತ್ತಿದೆ. ಹೆಚ್ಚಾಗುತ್ತಿರುವ ಸಾಗಾಣಿಕಾ ವೆಚ್ಚ, ವಿಮಾ ಮೊತ್ತ ಹಾಗೂ ಸುದೀರ್ಘ ಸಂಚಾರದ ಪರಿಣಾಮವಾಗಿ ಆಮದು ಉತ್ಪನ್ನಗಳು ಇನ್ನಷ್ಟು ವೆಚ್ಚದಾಯಕವಾಗಲಿವೆ.

ಸಾಗಾಣಿಕಾ ಮಾರ್ಗಗಳಿಗೆ ಎದುರಾಗಿರುವ ಅಡಚಣೆಯ ಪರಿಣಾಮ ಬಂಡವಾಳ ಸರಕುಗಳ ವಲಯದ ಮೇಲೆ ಉಂಟಾಗಿದ್ದು, ಅನವಶ್ಯಕ ದಾಸ್ತಾನು ಸಂಗ್ರಹಣೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸಿಆರ್‌ಐಎಸ್ಐಎಲ್ ವರದಿ ಮಾಡಿದೆ. ಪ್ರಸ್ತುತ ಉದ್ವಿಗ್ನತೆ ಮಧ್ಯ ಪೂರ್ವದಿಂದ ಭಾರತದ ರಸಗೊಬ್ಬರ ಆಮದಿನ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಜೋರ್ಡಾನ್ ಮತ್ತು ಇಸ್ರೇಲ್‌ಗಳಿಂದ ಮ್ಯೂರಿಯೇಟ್ ಆಫ್ ಪೊಟ್ಯಾಷ್ ಆಮದು ಕಷ್ಟಕರವಾಗುವಂತೆ ಮಾಡಿದೆ.

ಪನಾಮಾ ಕಾಲುವೆಯ ಸಾಗಾಣಿಕಾ ಸ್ಥಿತಿ

ಪನಾಮಾ ಕಾಲುವೆ ಜಾಗತಿಕವಾಗಿ ಒಂದು ಸಂಭಾವ್ಯ ಸಾಗಾಣಿಕಾ ಬಿಕ್ಕಟ್ಟನ್ನು ತಪ್ಪಿಸಿದ್ದು, ಜಾಗತಿಕವಾಗಿ ವಾರ್ಷಿಕ 270 ಬಿಲಿಯನ್ ಡಾಲರ್ ಮೌಲ್ಯದ ವ್ಯಾಪಾರವನ್ನು ಉಳಿಸಿದೆ. ಜಾಗರೂಕತೆಯ ನೀರಿನ ನಿರ್ವಹಣೆ ಮತ್ತು ಕೊಂಚ ಅದೃಷ್ಟದ ನೆರವಿನಿಂದ ಪನಾಮಾ ಕಾಲುವೆ ಇದನ್ನು ಸಾಧಿಸಿದೆ.

ಕಳೆದ ವರ್ಷ ಮಧ್ಯ ಅಮೆರಿಕನ್ ದೇಶದಲ್ಲಿನ ಒಣ ಪರಿಸ್ಥಿತಿಯ ಕಾರಣದಿಂದಾಗಿ, ಪನಾಮಾ ಕಾಲುವೆ ಪ್ರಾಧಿಕಾರ ಪ್ರತಿದಿನವೂ ಕಾಲುವೆಯ ಮೂಲಕ ಸಾಗಬಲ್ಲ ಹಡಗುಗಳ ಸಂಖ್ಯೆಯನ್ನು 22ಕ್ಕೆ ಮಿತಿಗೊಳಿಸಿತು. ಇದು ಪನಾಮಾ ಕಾಲುವೆಯ ಮೂಲಕ ಸಾಮಾನ್ಯವಾಗಿ ಪ್ರತಿದಿನವೂ ಸಾಗುತ್ತಿದ್ದ ಹಡಗುಗಳ ಪ್ರಮಾಣದ 60% ಮಾತ್ರವಾಗಿತ್ತು. ಎರಡು ವಾರಗಳಿಗೂ ಹೆಚ್ಚಿನ ಸುದೀರ್ಘ ಕಾಯುವಿಕೆಯ ಅವಧಿಯನ್ನು ತಪ್ಪಿಸಲು, ಸಾಗಾಣಿಕಾದಾರರು ಮಿಲಿಯನ್‌ಗಟ್ಟಲೆ ಡಾಲರ್ ಪಾವತಿಸಿ, ಸರದಿ ತಪ್ಪಿಸಿ ಮುಂದೆ ಸಾಗಲು ಪ್ರಯತ್ನಿಸುತ್ತಿದ್ದರು.

ಇತ್ತೀಚೆಗೆ ಪನಾಮಾದಲ್ಲಿನ ನೀರಿನ ಮಟ್ಟ ಹೆಚ್ಚಾಗಿದ್ದು, ಕಾಲುವೆ ಪ್ರಾಧಿಕಾರ ದಿನನಿತ್ಯ ಸಂಚರಿಸುವ ಹಡಗುಗಳ ಸಂಖ್ಯೆಯ ಮೇಲಿನ ಮಿತಿಯನ್ನು ಹೆಚ್ಚಿಸಿದೆ. ಮಂಗಳವಾರ ಪ್ರಾಧಿಕಾರ ನೀಡಿರುವ ಹೇಳಿಕೆಯ ಅನುಸಾರ, ಜುಲೈ ಅಂತ್ಯದ ವೇಳೆಗೆ ಪ್ರತಿದಿನವೂ 34 ಹಡಗುಗಳಿಗೆ ಸಂಚರಿಸಲು ಅನುಮತಿ ನೀಡಲಾಗುತ್ತದೆ. ಬರಗಾಲದ ಮುನ್ನ ಹಡಗುಗಳ ಸಂಚಾರ ಮಿತಿ 38 ಆಗಿತ್ತು. ಈಗ ಪನಾಮಾ ಕಾಲುವೆಯನ್ನು ದಾಟಲು ಹಡಗುಗಳು ಎರಡು ದಿನಗಳಿಗೂ ಕಡಿಮೆ ಅವಧಿ ಕಾಯಬೇಕಾಗುತ್ತಿದೆ. ಒಂದು ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದರೆ, ಪನಾಮಾ ಕಾಲುವೆ ಮುಂದಿನ ವರ್ಷದಲ್ಲಿ ಪೂರ್ಣ ಸಾಮರ್ಥ್ಯಕ್ಕೆ ಮರಳಬಹುದು ಎಂದು ಕಾಲುವೆ ಪ್ರಾಧಿಕಾರ ವಿಶ್ವಾಸ ವ್ಯಕ್ತಪಡಿಸಿದೆ. "ಪ್ರಸ್ತುತ ಹವಾಮಾನ ಮುನ್ಸೂಚನೆಯ ಪ್ರಕಾರ, ಮುಂದಿನ ಕೆಲವು ತಿಂಗಳುಗಳ ಕಾಲ ನಿರಂತರವಾಗಿ ಮಳೆ ಬರುವ ಸಾಧ್ಯತೆಗಳಿವೆ. ಒಂದು ವೇಳೆ ಇದೇ ರೀತಿ ಮಳೆ ಮುಂದುವರಿದರೆ, ಕಾಲುವೆ ತನ್ನ ಮಿತಿಯನ್ನು ತೆಗೆದುಹಾಕಿ, 2025ರಿಂದ ಸಹಜವಾಗಿ ಕಾರ್ಯಾಚರಿಸಲಿದೆ" ಎಂದು ಅಧಿಕಾರಿಗಳು ವಿವರಿಸಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.