Union Budget: ಕೇಂದ್ರ ಬಜೆಟ್ ತಯಾರಿ 6 ತಿಂಗಳು ಮೊದಲೇ ಶುರುವಾಗುತ್ತೆ, ಬಜೆಟ್ ಪ್ರತಿ ಮುದ್ರಣ ಶುರುವಾದರೆ ಅಧಿಕಾರಿಗಳು ಮನೆಗೆ ಹೋಗುವಂತಿಲ್ಲ
Union Budget 2025: ಕೇಂದ್ರ ಬಜೆಟ್ 2025-26 ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ 1 ರಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ವಾಸ್ತವದಲ್ಲಿ, ಕೇಂದ್ರ ಬಜೆಟ್ ತಯಾರಿ 6 ತಿಂಗಳು ಮೊದಲೇ ಶುರುವಾಗುತ್ತೆ. ಇನ್ನು ವಾರ ಮೊದಲು ಬಜೆಟ್ ಪ್ರತಿ ಮುದ್ರಣ ಶುರುವಾದರೆ, ಅದರಲ್ಲಿ ಭಾಗವಹಿಸುವ ಅಧಿಕಾರಿ, ಸಿಬ್ಬಂದಿ ಯಾರೂ ಮನೆಗೆ ಹೋಗುವಂತಿಲ್ಲ.

Union Budget 2025: ಕೇಂದ್ರ ಬಜೆಟ್ 2025ರ ಹಲ್ವಾ ಕಾರ್ಯಕ್ರಮ ಮುಗಿಸಿಕೊಂಡು ಹಣಕಾಸು ಸಚಿವಾಲಯದ ನಿಯೋಜಿತ ಅಧಿಕಾರಿಗಳು ಬಜೆಟ್ ಪ್ರತಿ ಸಿದ್ಧತೆಗಾಗಿ ಈಗಾಗಲೇ ಕೆಲಸ ಶುರುವಮಾಡಿದ್ದಾರೆ. ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಜನವರಿ 31 ರಂದು ಸಂಸತ್‌ನ ಬಜೆಟ್ ಅಧಿವೇಶನ ಶುರುವಾಗಲಿದ್ದು, ಫೆ 1 ರಂದು ಕೇಂದ್ರ ಬಜೆಟ್ 2025-26 ಮಂಡನೆಯಾಗಲಿದೆ. ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದು. ಕಳೆದ ವರ್ಷ ಮೂರನೇ ಅವಧಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿರುವ ಬಿಜೆಪಿ, 2024ರ ಜುಲೈನಲ್ಲಿ ಈ ವರ್ಷದ ಪೂರಕ ಬಜೆಟ್ ಮಂಡಿಸಿತ್ತು.
ಕೇಂದ್ರ ಬಜೆಟ್ ತಯಾರಿಸುವುದು ಹೇಗೆ
ಕೇಂದ್ರ ಬಜೆಟ್ ತಯಾರಿ ಸುಲಭದ ಕೆಲಸವಲ್ಲ. ಸಂಸತ್‌ನಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುವ ಆರು ತಿಂಗಳು ಮೊದಲೇ, ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಬಜೆಟ್‌ನ ತಯಾರಿಯ ಪ್ರಕ್ರಿಯೆಯು ಶುರುವಾಗುತ್ತದೆ.
1) ಹಣಕಾಸು ಸಚಿವಾಲಯದ ಸುತ್ತೋಲೆ: ಮೊದಲನೇಯದಾಗಿ, ಹಣಕಾಸು ಸಚಿವಾಲಯವು ಎಲ್ಲ ಸಚಿವಾಲಯಗಳು, ಇಲಾಖೆಗಳಿಗೆ ಬಜೆಟ್‌ಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ರವಾನಿಸುತ್ತದೆ. ಅದರಲ್ಲಿ, ಪ್ರಸಕ್ತ ಹಣಕಾಸು ವರ್ಷಕ್ಕೆ ಪರಿಷ್ಕೃತ ಅಂದಾಜು ಹಾಗೂ ಮುಂದಿನ ವರ್ಷಕ್ಕೆ ಬಜೆಟ್‌ಗೆ ಬೇಕಾದ ಅಂದಾಜುಗಳ ವಿವರವನ್ನು ಒದಗಿಸುವಂತೆ ಸೂಚಿಸಲಾಗುತ್ತದೆ.
2) ಅಂದಾಜು ವೆಚ್ಚಗಳ ತಾತ್ಕಾಲಿಕ ಹೇಳಿಕೆ ಸಲ್ಲಿಕೆ: ಸುತ್ತೋಲೆಯ ಪ್ರಕಾರ, ಸಚಿವಾಲಯಗಳು ಮತ್ತು ಇಲಾಖೆಗಳು ಆ ಕೇಂದ್ರ ತೆರಿಗೆಗಳು ಮತ್ತು ಸುಂಕಗಳನ್ನು ಒಳಗೊಂಡಂತೆ ತಮ್ಮ ಆದಾಯ ಮತ್ತು ವೆಚ್ಚದ ರಸೀದಿಗಳನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸುತ್ತವೆ. ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಬಜೆಟ್ ಪ್ರಸ್ತಾವನೆಗಳನ್ನು ಬಜೆಟ್ ಅಂದಾಜುಗಳ ತಾತ್ಕಾಲಿಕ ಹೇಳಿಕೆ ರೂಪದಲ್ಲಿ ಸಲ್ಲಿಸುತ್ತವೆ.
3) ಬಜೆಟ್ ಪೂರ್ವ ಸಮಾಲೋಚನೆ: ಇದಾದ ಬಳಿಕ, ಪ್ರತಿಯೊಂದು ಸಚಿವಾಲಯ ಅಥವಾ ಇಲಾಖೆಗಳ ನಿವ್ವಳ ಬಜೆಟ್ ಮಿತಿಗಳನ್ನು ನಿರ್ಧರಿಸುವುದಕ್ಕಾಗಿ ಉನ್ನತ ಸರ್ಕಾರಿ ಅಧಿಕಾರಿಗಳು ಬಜೆಟ್ ಪೂರ್ವ ಚರ್ಚೆಗಳನ್ನು ನಡೆಸುತ್ತಾರೆ. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಬೆ ನಡೆಯುತ್ತದೆ. ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಶುರುವಾಗುತ್ತದೆ.
4) ಇಲಾಖೆಗಳ ಬಜೆಟ್‌ಗೆ ತಾತ್ಕಾಲಿಕ ಮಿತಿ ನಿರ್ಣಯ: ಇದರ ಜತೆಜತೆಗೆ ಹಣಕಾಸು ಸಚಿವಾಲಯವು ವಿವಿದ ಇಲಾಖೆಗಳಿಗೆ ಅವುಗಳ ಮುಂಬರಲಿರುವ ವೆಚ್ಚಗಳಿಗಾಗಿ ಆದಾಯ ವ್ಯಯಕ್ಕೆ ತಾತ್ಕಾಲಿಕ ಮಿತಿಯನ್ನು ಹಂಚಿಕೆ ಮಾಡುತ್ತದೆ. ಹಂಚಿಕೆ ಅಥವಾ ಪರಿಷ್ಕರಣೆಗಳಿಗೆ ಯಾವುದೇ ಆಕ್ಷೇಪಣೆ ಎದುರಾದರೆ, ಅಂತಹ ಸಂದರ್ಭದಲ್ಲಿ ಹಣಕಾಸು ಸಚಿವಾಲಯವು ಪ್ರಧಾನ ಮಂತ್ರಿ ಅಥವಾ ಕೇಂದ್ರ ಸಚಿವ ಸಂಪುಟದೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುತ್ತದೆ.
5) ಬಜೆಟ್ ಭಾಷಣದ ಪ್ರತಿಗೆ ಸಿದ್ಧತೆ: ಬಜೆಟ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ಅಂತಿಮಗೊಳಿಸಿದ ನಂತರ, ಹಣಕಾಸು ಸಚಿವರ ಬಜೆಟ್ ಭಾಷಣದ ಕರಡು ಪ್ರತಿಯನ್ನು ಹಣಕಾಸು ಸಚಿವಾಲಯವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮಾಹಿತಿಯೊಂದಿಗೆ ತಯಾರಿಸುತ್ತದೆ.
ಹಲ್ವಾ ಕಾರ್ಯಕ್ರಮ; ಬಜೆಟ್ ಪ್ರತಿ ಮುದ್ರಣ ಶುರುವಾದರೆ ಅಧಿಕಾರಿಗಳು ಮನೆಗೆ ಹೋಗುವಂತಿಲ್ಲ
ಕೇಂದ್ರ ಬಜೆಟ್ ಭಾಷಣದ ಪ್ರತಿಯನ್ನು ಹಣಕಾಸು ಸಚಿವಾಲಯವು ತನ್ನದೇ ಸ್ವಂತ ಮುದ್ರಣಾಲಯದಲ್ಲಿ ಮುದ್ರಿಸುತ್ತದೆ. ಹಣಕಾಸು ಹೇಳಿಕೆಯನ್ನ ಪ್ರಸ್ತುತ ಪಡಿಸುವ ತಿಂಗಳುಗಳ ಮೊದಲೇ ಈ ಮುದ್ರಣಾಲಯಕ್ಕೆ ಪ್ರವೇಶ ನಿರ್ಬಂಧ ಹೇರಲಾಗುತ್ತದೆ. ಅಂತಿಮ ಹಂತದಲ್ಲಿ ಅಂದರೆ ಬಜೆಟ್ ಮಂಡನೆಗೆ ಒಂದು ವಾರ ಇರುವಾಗ ಹಲ್ವಾ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಇದು ಬಜೆಟ್ ಭಾಷಣದ ಪ್ರತಿಯನ್ನು ಮುದ್ರಿಸುವ ಕಾರ್ಯದಲ್ಲಿ ಭಾಗವಹಿಸುವ ಅಧಿಕಾರಿ, ಸಿಬ್ಬಂದಿಗೆ ವಿತ್ತ ಸಚಿವರು ಸಿಹಿ ಹಂಚುತ್ತಾರೆ. ಇದಾದ ಬಳಿಕ ಈ ಅಧಿಕಾರಿ, ಸಿಬ್ಬಂದಿ ತಂಡ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿರುವ ಮುದ್ರಣಾಲಯಕ್ಕೆ ಹೋಗುತ್ತದೆ. ಅಲ್ಲಿಗೆ ಅವರು ಫೋನ್, ಇಲೆಕ್ಟ್ರಾನಿಕ್ ಗಾಜೆಟ್‌ಗಳನ್ನು ಕೊಂಡೊಯ್ಯುವಂತೆ ಇಲ್ಲ. ಬಜೆಟ್ ಮಂಡನೆಯಾಗುವ ತನಕ ಈ ಅಧಿಕಾರಿ, ಸಿಬ್ಬಂದಿ ತಮ್ಮ ಮನೆಗಳಿಗೂ ಹೋಗುವಂತೆ ಇಲ್ಲ. ಅವರ ಸಾರ್ವಜನಿಕ ಚಟುವಟಿಕೆಗಳಿಗೆ ನಿರ್ಬಂಧವಿರುತ್ತದೆ.
ಇನ್ನು ಬಜೆಟ್ ಭಾಷಣದ ಪ್ರತಿ ಮುದ್ರಣವಾದ ಬಳಿಕ ಅದನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ರಾಷ್ಟ್ರಪತಿಯವರ ಒಪ್ಪಿಗೆ ಪಡೆಯಲಾಗುತ್ತದೆ. ಬಳಿಕ ಫೆಬ್ರವರಿ 1 ರಂದು ಬಜೆಟ್ ಪ್ರತಿಯನ್ನು ಸಂಸತ್ತಿನಲ್ಲಿ ವಿತ್ತ ಸಚಿವರು ಮಂಡಿಸುತ್ತಾರೆ. ಇದನ್ನು ಅನುಮೋದಿಸುವುದಕ್ಕಾಗಿ ಹಣಕಾಸು ಮಸೂದೆಯನ್ನು ಮಂಡಿಸುತ್ತಾರೆ.
ಸರಳವಾಗಿ ಹೇಳಬೇಕು ಎಂದರೆ, ಬಜೆಟ್ ಎಂಬುದು ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಹೇಳಿಕೆಯಾಗಿದ್ದು, ಇದು ಏಪ್ರಿಲ್ 1 ರಿಂದ ಮಾರ್ಚ್ 31ರ ತನಕ ಮುಂದಿನ ವರ್ಷದ ಹಣಕಾಸು ಯೋಜನೆಗಳ ವಿವರವಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ತನ್ನ ಪ್ರಸ್ತಾವಿತ ಖರ್ಚು ಮತ್ತು ಆದಾಯಗಳ ವಿವರವನ್ನು ಸಂಸತ್ತಿಗೆ ಒದಗಿಸಿ, ಸದಸ್ಯರ ಅನುಮೋದನೆ ಪಡೆದುಕೊಳ್ಳುವುದು ವಾಡಿಕೆ. ಈ ಬಜೆಟ್ ಕಡತಕ್ಕೆ ಹಿಂದಿಯಲ್ಲಿ ಬಹಿಖಾತಾ ಎಂದು ಹೇಳಲಾಗುತ್ತಿದ್ದು 2019ರಿಂದ ಇದು ಚಾಲ್ತಿಗೆ ಬಂದಿದೆ. ಇದರಲ್ಲಿ ಭಾರತ ಸರ್ಕಾರದ ಆರ್ಥಿಕ, ಹಣಕಾಸು, ಖರ್ಚು ವೆಚ್ಚ, ಆದಾಯ ನೀತಿಗಳ ವಿವರವಿರುತ್ತದೆ.

ವಿಭಾಗ