ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ ಡೆಹ್ರಾಡೂನ್‌ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಹೇಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ ಡೆಹ್ರಾಡೂನ್‌ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಹೇಗೆ

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ ಡೆಹ್ರಾಡೂನ್‌ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಹೇಗೆ

RIMC Dehradun Admissions 2026: ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 2026ನೇ ಸಾಲಿನಲ್ಲಿ 8ನೇ ತರಗತಿಗೆ ಪ್ರವೇಶಾತಿಗೆ ಅರ್ಹ ಬಾಲಕ, ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಸೇರಿ ಮುಖ್ಯ ವಿವರ ಇಲ್ಲಿದೆ.

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ ಡೆಹ್ರಾಡೂನ್‌ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. (ಸಾಂಕೇತಿಕ ಚಿತ್ರ)
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ ಡೆಹ್ರಾಡೂನ್‌ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. (ಸಾಂಕೇತಿಕ ಚಿತ್ರ)

RIMC Dehradun Admissions 2026: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ (ಆರ್‌ಐಎಂಸಿ) 2026ನೇ ಸಾಲಿನಲ್ಲಿ 8ನೇ ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ಬಾಲಕ, ಬಾಲಕಿಯರು ಈ ಶಾಲೆಯಲ್ಲಿ 8ನೇ ತರಗತಿಗೆ ಪ್ರವೇಶ ಪಡೆಯಬಹುದಾಗಿದ್ದು, 2025ರ ಜೂನ್‌ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ ಡೆಹ್ರಾಡೂನ್‌ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಶುರು

ಜನವರಿ 2026ನೇ ಸಾಲಿನ ಶೈಕ್ಷಣಿಕ ವರ್ಷದ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

1) ಅರ್ಹತಾ ಪರೀಕ್ಷೆ: ಬಾಲಕ, ಬಾಲಕಿಯರ ಆಯ್ಕೆಗಾಗಿ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2025ನೇ ಜೂನ್ 1 ರಂದು ನಡೆಸಲಾಗುವುದು. ಅರ್ಜಿ ಸಲ್ಲಿಸಲು 2025 ರ ಮಾರ್ಚ್ 31 ಕೊನೆಯ ದಿನಾಂಕ ಎಂದು ಆರ್‌ಐಎಂಸಿ ತಿಳಿಸಿದೆ.

2) ವಿದ್ಯಾರ್ಹತೆ, ವಯೋಮಿತಿ: ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ 01-01-2026 ರಂತೆ 11 ವರ್ಷದಿಂದ 13 ವರ್ಷದೊಳಗಿರುವ ಬಾಲಕ ಮತ್ತು ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ.

3) ಆರ್‌ಐಎಂಸಿ 8ನೇ ತರಗತಿ ಶುಲ್ಕ: ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ ವಾರ್ಷಿಕ ಶಿಕ್ಷಣ ಶುಲ್ಕ ಸಾಮಾನ್ಯ ವರ್ಗಕ್ಕೆ 98,650 ರೂಪಾಯಿ ಹಾಗೂ ಎಸ್‍ಸಿ / ಎಸ್‍ಟಿ ವರ್ಗಕ್ಕೆ 81,850 ರೂಪಾಯಿ. ಇದು ಕಾಲ ಕಾಲಕ್ಕೆ ಹೆಚ್ಚಾಗಬಹುದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ಪ್ರವೇಶ ಸಮಯದಲ್ಲಿ 30,000 ರೂಪಾಯಿ ಭದ್ರತಾ ಠೇವಣಿ ನೀಡಬೇಕಾಗುತ್ತದೆ. ಈ ಮೊತ್ತವನ್ನು ವಿದ್ಯಾರ್ಥಿಯು ಪದವೀಧರರಾದ ಬಳಿಕ ಹಿಂತಿರುಗಿಸಲಾಗುತ್ತದೆ.

4) ಪ್ರವೇಶಾತಿ ಕೈಪಿಡಿ: ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್, ಪಿನ್ - 248003 ಈ ವಿಳಾಸಕ್ಕೆ ಪತ್ರಬರೆದು ಪಡೆಯಬಹುದು.ಇದಕ್ಕಾಗಿ ಸಾಮಾನ್ಯ ಅಭ್ಯರ್ಥಿಗಳು 600 ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 555 ರೂಪಾಯಿ ಆನ್‍ಲೈನ್ ಪಾವತಿ ಮಾಡಬೇಕು. ಜಾಲತಾಣ http://www.rimc.gov.in ನಲ್ಲಿ ಪಾವತಿ ಸ್ವೀಕರಿಸಿದ ನಂತರ ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಸ್ಪೀಡ್ ಪೋಸ್ಟ್‌ ಮೂಲಕ ಪಡೆದುಕೊಳ್ಳಬಹುದು. ಪ್ರಾಸ್ಪೆಕ್ಟಸ್‍ನ ಸಾಗಾಣಿಕೆಯಲ್ಲಿ ಯಾವುದೇ ಅಂಚೆ ವಿಳಂಬ ಅಥವಾ ನಷ್ಟಕ್ಕೆ ಆರ್‍ಐಎಂಸಿ ಹೊಣೆಗಾರಿಕೆ ಹೊರುವುದಿಲ್ಲ.

5) ಅರ್ಜಿ ಭರ್ತಿ ಮಾಡಿ ಕಳುಹಿಸಿ: ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ಅಕ್ಟೋಬರ್ 2025 ರ ಮಾರ್ಚ್ 31 ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ್, ನಂ.58, ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ರಸ್ತೆ, ಬೆಂಗಳೂರು - 25 ಇವರಿಗೆ ಸಲ್ಲಿಸಬೇಕು. ಈ ಅರ್ಜಿ ನಮೂನೆ ಜತೆಗೆ ದ್ವಿಪ್ರತಿಯಲ್ಲಿ ಮುನ್ಸಿಪಾಲಿಟಿ / ಗ್ರಾಮ ಪಂಚಾಯತ್ ಪ್ರಾಧಿಕಾರ ವತಿಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ಪ್ರಮಾಣ ಪತ್ರದ ದೃಢೀಕೃತ ಪ್ರತಿ, 5 ಪಾಸ್‍ಪೋರ್ಟ್‌ ಸೈಜಿನ ಭಾವಚಿತ್ರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ಆಂಗ್ಲ ಭಾಷೆಯಲ್ಲಿ ನೀಡಿದ ಜಾತಿ ಪ್ರಮಾಣ ಪತ್ರದ ದೃಢೀಕೃತ ಪ್ರತಿ, ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ/ ನೊಂದಾಯಿತ ಅಂಚೆದ್ವಾರ ರವಾನಿಸಲು 42 ರೂಪಾಯಿ ಅಂಚೆ ಚೀಟಿ ಅಂಟಿಸಿದ ಸ್ವ ವಿಳಾಸ ಲಕೋಟೆ, ಶಾಲಾ ಪ್ರಾಚಾರ್ಯರು / ಮುಖ್ಯೋಪಾಧ್ಯಾಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಧೃಡೀಕರಿಸಿದ ಅಭ್ಯರ್ಥಿಯ ಭಾವಚಿತ್ರದೊಂದಿಗೆ ಪಡೆದ ಪ್ರಮಾಣ ಪತ್ರದ ಮೂಲ ಪ್ರತಿ, ತಹಸೀಲ್ದಾರರಿಂದ ಕರ್ನಾಟಕ ರಾಜ್ಯದ ವಾಸಸ್ಥಾನ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಪ್ರತಿ ಇಟ್ಟಿರಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಅಥವಾ ಸಮೀಪದಲ್ಲಿರುವ ತಮ್ಮ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.