SIM Port To BSNL: ಜಿಯೋ, ಏರ್‌ಟೆಲ್, ವಿಐನಿಂದ ಬಿಎಸ್ಎನ್ಎಲ್ಗೆ ಪೋರ್ಟ್ ಆಗ್ಬೇಕಾ? ಇಲ್ಲಿದೆ ಸರಳ ಮಾರ್ಗ
SIM Port To BSNL: ಖಾಸಗಿ ಟೆಲಿಕಾಂಗಳಾದ ಏರ್‌ಟೆಲ್, ಜಿಯೋ, ವಿಐ ಸಿಮ್ಗಳಿಂದ ಬಿಎಸ್ಎನ್ಎಲ್ಗೆ ಪೋರ್ಟ್ ಆಗಬೇಕು ಎಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಸರಳ ಪ್ರಕ್ರಿಯೆ.
BSNL Mobile Number Porting Process: ಸರ್ಕಾರಿ ಒಡೆತನದ ಭಾರತ್ ಸಂಚಾರ್ ನಿಗಮ್ ಲಿಟಿಟೆಡ್ (BSNL) ನಿಷ್ಕ್ರಿಯಗೊಂಡ 2 ವರ್ಷಗಳ ನಂತರ ಮರಳಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸೆಡ್ಡುಹೊಡೆದು ಗ್ರಾಹಕರನ್ನು ಸೆಳೆಯುತ್ತಿದೆ. ಅದಲ್ಲದೆ ಗ್ರಾಹಕರು ಏರ್‌ಟೆಲ್, ರಿಲಯನ್ಸ್ ಜಿಯೋ, ವಿಐ (VODAFONE IDEA) ಜತೆಗಿನ ಹಲವು ವರ್ಷಗಳ ಬಾಂಧವ್ಯ ಮುರಿದುಕೊಂಡು ಬಿಎಸ್ಎನ್ಎಲ್ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ವಿಪರೀತ ದರ ಏರಿಕೆ.
ಮತ್ತೊಂದೆಡೆ ಬಿಎಸ್ಎನ್ಎಲ್ ಕಡಿಮೆ ದರಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅಲ್ಲದೆ, ಬೇರೆ ಬೇರೆ ಸಿಮ್ಗಳನ್ನು ಹೊಂದಿರುವವರು ಸಹ ಬಿಎಸ್ಎನ್ಎಲ್ಗೆ ಬದಲಾಯಿಸಿಕೊಳ್ಳಲು ಚಿಂತಿಸುತ್ತಿದ್ದಾರೆ. ಕೈಗೆಟುಕುವ ದರಗಳಲ್ಲಿ ಯೋಜನೆಗಳಿರುವ ಕಾರಣ ಗ್ರಾಹಕರು ತಮ್ಮ ನಿರ್ಧಾರ ಬದಲಿಸಿಕೊಳ್ಳುತ್ತಿದ್ದಾರೆ. ಈಗಲೂ ಸಾಕಷ್ಟು ಮಂದಿ ಕ್ಯೂನಲ್ಲಿ ನಿಂತು ಬೇರೊಂದು ಸಿಮ್ನಿಂದ ಬಿಎಸ್ಎನ್ಎಲ್ಗೆ ಪೋರ್ಟ್ (ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ) ಆಗುತ್ತಿದ್ದಾರೆ.
ಹಾಗಿದ್ದರೆ ಬಿಎಸ್ಎನ್ಎಲ್ ದರಗಳಿಗೆ ಆಕರ್ಷಿತರಾಗಿ ನಿಮ್ಮ ಸಿಮ್ ಅನ್ನು ಪೋರ್ಟ್ ಮಾಡಲು ನೀವು ಯೋಚಿಸುತ್ತಿದ್ದರೆ, ಕೆಳಗೆ ತಿಳಿಸಿದ ವಿವಿಧ ಹಂತಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ BSNLಗೆ ಬದಲಾಯಿಸಬಹುದು.
ಹಂತ 1: ಯೂನಿಕ್ ಪೋರ್ಟಿಂಗ್ ಕೋಡ್ ಪಡೆಯಿರಿ
ಪ್ರಸ್ತುತ ಸಿಮ್ನಿಂದ ಬಿಎಸ್ಎನ್ಎಲ್ಗೆ ಬದಲಾಯಿಸಲು ನೀವು ಬಯಸಿದರೆ, ನೀವು ಮೊದಲು ವಿಶಿಷ್ಟ ಪೋರ್ಟಿಂಗ್ ಕೋಡ್ (UPC) ಪಡೆಯಬೇಕು.
ಅದಕ್ಕಾಗಿ, ನಿಮ್ಮ ಫೋನ್‌ನಲ್ಲಿ ಮೆಸೇಜ್ ಅಪ್ಲಿಕೇಶನ್ ತೆರೆಯಿರಿ. ಇಂಗ್ಲಿಷ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ PORT ಎಂದು ಟೈಪ್ ಮಾಡಿ. ಅದರ ಮುಂದೆ ನೀವು ಪೋರ್ಟ್ ಮಾಡಲು ಬಯಸುವ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಬೇಕಾಗುತ್ತದೆ.
ಈ ಮೆಸೇಜ್ ಅನ್ನು 1900 ಸಂಖ್ಯೆಗೆ ಸಂದೇಶ ಕಳುಹಿಸಬೇಕು. (ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಿಪೇಯ್ಡ್ ಚಂದಾದಾರರಾಗಿದ್ದರೆ, ಮೆಸೇಜ್ ಮಾಡುವಂತಿಲ್ಲ. ಬದಲಿಗೆ 1900ಕ್ಕೆ ಕರೆ ಮಾಡಬೇಕಾಗುತ್ತದೆ.)
ತದನಂತರ ನಿಮ್ಮ ಫೋನ್‌ಗೆ ವಿಶಿಷ್ಟ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ ಬರುತ್ತದೆ. ಯುಪಿಸಿ ಕೋಡ್ ಎಕ್ಸ್ಫೈಯರಿ ಡೇಟ್ 15 ದಿನಗಳು. ಅಥವಾ ನಿಮ್ಮ ಮೊಬೈಲ್ ಸಂಖ್ಯೆಯು ಮತ್ತೊಂದು ಸಿಮ್ಗೆ ಪೋರ್ಟ್ ಆಗುವವರೆಗೆ ಮಾನ್ಯವಾಗಿರುತ್ತದೆ.
ಹಂತ 2: BSNL ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
ಒಮ್ಮೆ ನೀವು ಯುಪಿಸಿ ಕೋಡ್ ಪಡೆದರೆ, ಹತ್ತಿರದ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರ, ಪೋರ್ಟಿಂಗ್‌ಗೆ ಅಧಿಕೃತ ಫ್ರಾಂಚೈಸಿ ಅಥವಾ ರಿಟೇಲರ್ಗೆ ಭೇಟಿ ನೀಡಬೇಕು.
ಅಲ್ಲಿ ಗ್ರಾಹಕರ ಅರ್ಜಿ ನಮೂನೆ (CAF) ಭರ್ತಿ ಮಾಡಿ. ನಂತರ ಫೋಟೋ ಐಡಿ, ಗುರುತಿನ ಚೀಟಿ (ವಿಳಾಸ ಪುರಾವೆ) ಒದಗಿಸಬೇಕು. ನಂತರ ನೀವು ಸ್ವೀಕರಿಸಿದ ಯುಪಿಸಿ ಕೋಡ್ ಸಲ್ಲಿಸಿ. ಪೋರ್ಟಿಂಗ್ ಶುಲ್ಕವನ್ನು ಪಾವತಿಸಿ.
ಆದಾಗ್ಯೂ, ಪ್ರಸ್ತುತ ಪೋರ್ಟ್ ಮಾಡಲು ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ ಎಂದು ಬಿಎಸ್ಎನ್ಎಲ್ ಹೇಳಿದೆ.
ಹಂತ 3: ಪೋರ್ಟಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿ
ಅಗತ್ಯ ದಾಖಲೆಗಳು ಮತ್ತು ಫಾರ್ಮ್ ಸಲ್ಲಿಸಿದ ನಂತರ, ನಿಮಗೆ ಹೊಸ ಬಿಎಸ್ಎನ್ಎಲ್ ಸಿಮ್ ಕಾರ್ಡ್ ನೀಡಲಾಗುತ್ತದೆ.
ನಿಮ್ಮ ಹಳೆಯ ಸಿಮ್ ಯಾವಾಗ ನಿಷ್ಕ್ರಿಯಗೊಳ್ಳುತ್ತದೋ, ಬಿಎಸ್ಎನ್ಎಲ್ ಸಿಮ್ ಯಾವಾಗ ಆ್ಯಕ್ಟಿವೇಟ್ ಆಗುತ್ತದೋ ಎಂಬುದರ ಮೆಸೇಜ್ ಪಡೆಯಲಿದ್ದೀರಿ.
ಆ ಸೂಚನೆಗಳ ಪ್ರಕಾರ, ನಿಮ್ಮ ಹಳೆಯ ಸಿಮ್ ಡಿಆ್ಯಕ್ಟಿವೇಟ್ ನಂತರ ಫೋನ್‌ಗೆ ಹೊಸ ಸಿಮ್ ಹಾಕಿ.
ಹಂತ 4: ಕೊನೆ ಹಂತ
ಏರ್‌ಟೆಲ್, ಜಿಯೋ ಅಥವಾ ವಿಐನಿಂದ ಬಿಎಸ್ಎನ್ಎಲ್ಗೆ ಪೋರ್ಟ್ ಆಗಬೇಕು ಎಂಬುದು ತುಂಬಾ ಸರಳವಾದ ಪ್ರಕ್ರಿಯೆ.
ಯುಪಿಸಿ ಕೋಡ್ ಪಡೆದ ನಂತರ ಬಿಎಸ್ಎನ್ಎಲ್ ಸೇವಾ ಕೇಂದ್ರ ಭೇಟಿ ನೀಡಿ ಅಗತ್ಯ ಕಾಗದದ ಕೆಲಸ ಪೂರ್ಣಗೊಳಿಸುವುದೇ ಆಗಿದೆ.
ಈ ಹಂತಗಳನ್ನು ಅನುಕರಿಸುವ ಮೂಲಕ ಬಿಎಸ್ಎನ್ಎಲ್ ಸೇವೆಗಳೊಂದಿಗೆ ಆನಂದಿಸಿ.