ದೆಹಲಿ ಚುನಾವಣೆ 2025 ಎಕ್ಸಿಟ್ ಪೋಲ್: ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ?
ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಫೆ.5ರಂದು ನಡೆಯಲಿದೆ. ಮತದಾನ ಕೇಂದ್ರಗಳು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತವೆ. ಅದಾದ ಬಳಿಕ ಸಂಜೆ 6.30ರ ನಂತರ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಫೆ. 5ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ನಾಳೆ (ಬುಧವಾರ) ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ನಂತರ ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಫಲಿತಾಂಶ ಪ್ರಕಟವಾಗಲಿವೆ. ಕೇಂದ್ರಾಡಳಿತ ಪ್ರದೇಶದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ. ದೆಹಲಿಯ ಎಲ್ಲಾ 70 ಕ್ಷೇತ್ರಗಳ ಮತದಾರರು ಒಂದೇ ಹಂತದ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ಚುನಾವಣೆಯ ಸಮಯದಲ್ಲಿ ಎಕ್ಸಿಟ್ ಪೋಲ್ ಫಲಿತಾಂಶಗಳು ಹೆಚ್ಚು ಗಮನ ಸೆಳೆಯುತ್ತವೆ. ಮತದಾರರು ಮತಗಳನ್ನು ಚಲಾಯಿಸಿದ ನಂತರ ಅವರಿಂದ ಪಡೆದ ಮಾಹಿತಿಯ ಪ್ರಕಾರ ಚುನಾವಣೋತ್ತರ ಫಲಿತಾಂಶ ಹೊರಬೀಳುತ್ತವೆ. ಈ ಎಕ್ಸಿಟ್ ಪೋಲ್ ಫಲಿತಾಂಶವು ದೋಷಗಳಿಂದ ಮುಕ್ತವಾಗಿಲ್ಲದಿದ್ದರೂ, ಚುನಾವಣೆಯ ನಂತರದ ವಿಶ್ಲೇಷಣೆ ಮತ್ತು ಚರ್ಚೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇದಕ್ಕಾಗಿ ಜನರ ನಿರೀಕ್ಷೆ ಹೆಚ್ಚಿರುತ್ತದೆ.
ಸಾಮಾನ್ಯವಾಗಿ ಎಕ್ಸಿಟ್ ಪೋಲ್ ಫಲಿತಾಂಶಗಳು ನಿಜವಾದ ಫಲಿತಾಂಶದ ದಿನಕ್ಕಿಂತ ಮೊದಲು ಸಾಕಷ್ಟು ಆಸಕ್ತಿ ಸೃಷ್ಟಿಸುತ್ತವೆ. ಆದರೆ, ಈ ಹಿಂದೆ ಹಲವು ಬಾರಿ, ಚುನಾವಣೆಯ ನೈಜ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಕ್ಕಿಂತ ತುಂಬಾ ಭಿನ್ನವಾಗಿದ್ದ ಉದಾಹರಣೆಗಳೂ ಇವೆ. ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲೂ ಹೀಗೆಯೇ ಆಗಿತ್ತು. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಬಿಜೆಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು.
ಚುನಾವಣೋತ್ತರ ಸಮೀಕ್ಷೆ ವಿವರ ಎಲ್ಲಿ ಪರಿಶೀಲಿಸಬಹುದು?
ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆ ಮಾಡುವ ಸಂಸ್ಥೆಗಳಲ್ಲಿ ಆಕ್ಸಿಸ್ ಮೈ ಇಂಡಿಯಾ, ಸಿವೋಟರ್, ಐಪಿಎಸ್ಒಎಸ್, ಜನ್ ಕಿ ಬಾತ್ ಮತ್ತು ಟುಡೇಸ್ ಚಾಣಕ್ಯ ಪ್ರಸಿದ್ಧ ಹೆಸರುಗಳು. ಈ ಏಜೆನ್ಸಿಗಳು ಪ್ರಮುಖ ಒಳನೋಟಗಳನ್ನು ಒದಗಿಸುತ್ತವೆ. ಹಾಗಂತಾ ಇವು ನಿಖರ ಫಲಿತಾಂಶಗಳನ್ನು ಖಾತರಿಪಡಿಸುವುದಿಲ್ಲ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಲೈವ್ ಬ್ಲಾಗ್ ಮೂಲಕ ಮಾಹಿತಿ ಸಿಗಲಿದೆ.
ಚುನಾವಣಾ ಆಯೋಗದ ನಿಯಮ
ಚುನಾವಣೋತ್ತರ ಸಮೀಕ್ಷೆಗಳನ್ನು ಬಹಿರಂಗಪಡಿಸುವ ಕುರಿತಾಗಿ ಚುನಾವಣಾ ಆಯೋಗವು ಕಠಿಣ ನಿಯಮಗಳನ್ನು ರೂಪಿಸಿದೆ. ಮಾಧ್ಯಮಗಳ ಮೂಗುದಾರ ಹಿಡಿದಿರುವ ಆಯೋಗ, ಸಂಜೆ 6.30ರವರೆಗೆ ಏಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸುವುದನ್ನು ನಿಷೇಧಿಸಿದೆ. ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಚುನಾವಣೋತ್ತರ ಸಮೀಕ್ಷೆಯನ್ನು ಫಲಿತಾಂಶ ಪ್ರಕಟಿಸುವ ಅಥವಾ ಪ್ರಸಾರ ಮಾಡುವಂತಿಲ್ಲ ಎಂದು ಹೇಳಿದೆ.
ಎಕ್ಸಿಟ್ ಪೋಲ್ ಎಂದರೇನು?
ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆ ಎಂದರೆ ಮತದಾನದ ನಂತರ ಸಮೀಕ್ಷೆ ಸಂಸ್ಥೆಗಳು ಸಂಗ್ರಹಿಸಿದ ಮತದಾರರ ಪ್ರತಿಕ್ರಿಯೆಯನ್ನು ಆಧರಿಸಿ ಫಲಿತಾಂಶಗಳನ್ನು ನೀಡುವುದಾಗಿದೆ. ನಿಜವಾದ ಫಲಿತಾಂಶಗಳನ್ನು ಘೋಷಿಸುವ ಮೊದಲು ಸಾರ್ವಜನಿಕ ಭಾವನೆಗಳನ್ನು ಪ್ರತಿಬಿಂಬಿಸುವುದು ಚುನಾವಣೋತ್ತರ ಸಮೀಕ್ಷೆಗಳ ಹಿಂದಿನ ಉದ್ದೇಶವಾಗಿದ್ದರೂ, ಅವುಗಳ ನಿಖರತೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತವೆ.

ವಿಭಾಗ