ಅಮೆರಿಕದಲ್ಲಿ ಉದ್ಯಮಿಗಳ ಆಡಳಿತ, ಟ್ರಂಪ್‌- ಮಸ್ಕ್‌ ಪ್ಲಾನ್‌, 20 ಲಕ್ಷದಷ್ಟು ಫೆಡರಲ್ ಸಿಬ್ಬಂದಿ ಸ್ವಯಂ ನಿವೃತ್ತಿ ಆಫರ್‌, 10 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದಲ್ಲಿ ಉದ್ಯಮಿಗಳ ಆಡಳಿತ, ಟ್ರಂಪ್‌- ಮಸ್ಕ್‌ ಪ್ಲಾನ್‌, 20 ಲಕ್ಷದಷ್ಟು ಫೆಡರಲ್ ಸಿಬ್ಬಂದಿ ಸ್ವಯಂ ನಿವೃತ್ತಿ ಆಫರ್‌, 10 ಅಂಶಗಳು

ಅಮೆರಿಕದಲ್ಲಿ ಉದ್ಯಮಿಗಳ ಆಡಳಿತ, ಟ್ರಂಪ್‌- ಮಸ್ಕ್‌ ಪ್ಲಾನ್‌, 20 ಲಕ್ಷದಷ್ಟು ಫೆಡರಲ್ ಸಿಬ್ಬಂದಿ ಸ್ವಯಂ ನಿವೃತ್ತಿ ಆಫರ್‌, 10 ಅಂಶಗಳು

Trump Buyout Offer: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಫೆಡರಲ್ ವ್ಯವಸ್ಥೆ ಸುಧಾರಣೆಗೆ ಮುಂದಾಗಿದೆ. ಎಲಾನ್‌ ಮಸ್ಕ್ ಸಮಿತಿಯ ಶಿಫಾರಸಿನಂತೆ ಕ್ರಮಗಳು ಜರುಗುತ್ತಿದ್ದು, 20 ಲಕ್ಷದಷ್ಟು ಫೆಡರಲ್ ಸಿಬ್ಬಂದಿ ಸ್ವಯಂ ನಿವೃತ್ತಿ ಆಫರ್‌ ರವಾನೆಯಾಗಿದೆ. ಈ ವಿದ್ಯಮಾನದ 10 ಮುಖ್ಯ ಅಂಶಗಳಿವು.

ಅಮೆರಿಕದಲ್ಲಿ ಉದ್ಯಮಿಗಳ ಆಡಳಿತ ಶುರುವಾಗಿದ್ದು, ಟ್ರಂಪ್‌- ಮಸ್ಕ್‌ ಪ್ಲಾನ್‌ ಪ್ರಕಾರ, 20 ಲಕ್ಷದಷ್ಟು ಫೆಡರಲ್ ಸಿಬ್ಬಂದಿ ಸ್ವಯಂ ನಿವೃತ್ತಿ ಆಫರ್‌ ನೀಡಲಾಗಿದೆ.
ಅಮೆರಿಕದಲ್ಲಿ ಉದ್ಯಮಿಗಳ ಆಡಳಿತ ಶುರುವಾಗಿದ್ದು, ಟ್ರಂಪ್‌- ಮಸ್ಕ್‌ ಪ್ಲಾನ್‌ ಪ್ರಕಾರ, 20 ಲಕ್ಷದಷ್ಟು ಫೆಡರಲ್ ಸಿಬ್ಬಂದಿ ಸ್ವಯಂ ನಿವೃತ್ತಿ ಆಫರ್‌ ನೀಡಲಾಗಿದೆ. (Reuters)

Trump Buyout Offer: ಅಮೆರಿಕದಲ್ಲಿ ಈ ಬಾರಿ ಉದ್ಯಮಿಗಳ ಆಡಳಿತ ಶುರುವಾಗಿದೆ. ಮೂಲತಃ ಉದ್ಯಮಿಯಾಗಿರುವ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ಹಿಡಿದಿದ್ದು, ಈ ಬಾರಿ ಪಕ್ಕಾ ಕಾರ್ಪೊರೇಟ್ ಸ್ಟೈಲ್‌ಗೆ ಆಡಳಿತವನ್ನು ಕೊಂಡೊಯ್ಯುವ ಸೂಚನೆ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ಬೆನ್ನಿಗೆ ಫಡೆರಲ್ ವ್ಯವಸ್ಥೆಗೆ ಚುರುಕು ಮುಟ್ಟಿಸಿರುವ ಡೊನಾಲ್ಡ್ ಟ್ರಂಪ್, 20 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿಯ ಆಫರ್ ನೀಡಿದ್ದಾರೆ. ಅಮೆರಿಕದ ಫಡೆರಲ್ ಸರ್ಕಾರದ ವ್ಯವಸ್ಥೆಯಲ್ಲಿ 23 ಲಕ್ಷಕ್ಕೂ ಹೆಚ್ಚು ನಾಗರಿಕರು ವಿವಿಧ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ರಾಯ್ಟಿರ್ಸ್ ಸುದ್ದಿ ಸಂಸ್ಥೆಯ ಇತ್ತೀಚಿನ ವರದಿ ಪ್ರಾಕರ, 75,000ಕ್ಕೂ ಹೆಚ್ಚು ಉದ್ಯೋಗಿಗಳು ಡೊನಾಲ್ಡ್ ಟ್ರಂಪ್ ಅವರ ಈ ಆಫರ್ ಅನ್ನು ಸ್ವೀಕರಿಸಿದ್ದಾರೆ.

ಫೆಡರಲ್ ಆಡಳಿತ ಸುಧಾರಣೆಗೆ ಟ್ರಂಪ್‌- ಮಸ್ಕ್‌ ಪ್ಲಾನ್‌; 10 ಮುಖ್ಯ ಅಂಶ

ಅಮೆರಿಕದ ಫಡರಲ್ ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಡೊನಾಲ್ಡ್‌ ಟ್ರಂಪ್ ಆಡಳಿತವು ಸ್ವಯಂ ನಿವೃತ್ತಿ ಯೋಜನೆಯನ್ನು ಘೋಷಿಸಿತ್ತು. ಫೆ 6ರ ಒಳಗೆ ಈ ಕುರಿತು ನಿರ್ಧರಿಸಬೇಕು ಎಂದು ಸೂಚಿಸಿತ್ತು. ಕಾರ್ಯಾಚರಣೆ ಸುಧಾರಣೆ ಹಾಗೂ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಅಮೆರಿಕದ ಫೆಡರಲ್ ಸರ್ಕಾರ ಈ ಕುರಿತು ತನ್ನೆಲ್ಲ ಉದ್ಯೋಗಿಗಳಿಗೆ ಮಂಗಳವಾರ ಇಮೇಲ್ ಮಾಡಿತ್ತು. ಇದರಲ್ಲಿ ಸೆಪ್ಟೆಂಬರ್ 25ರ ಒಳಗೆ ರಾಜೀನಾಮೆ ನೀಡಿ ಸ್ಥಾನ ತೆರವುಗೊಳಿಸುವವರಿಗೆ 8 ತಿಂಗಳ ವೇತನ ಮತ್ತು ಭತ್ಯೆ ನೀಡುವುದಾಗಿ ಘೋಷಿಸಿದ್ದಾಗಿ ಬಿಬಿಸಿ ವರದಿ ಮಾಡಿದೆ. ಈ ಯೋಜನೆ ಜಾರಿಗೊಳಿಸುವುದಕ್ಕೆ ಈ ವಾರ ಆರಂಭದಲ್ಲಿ ಕೋರ್ಟ್‌ ನ್ಯಾಯಾಧೀಶರೊಬ್ಬರು ಅನುಮತಿ ನೀಡಿದ್ದರು. ಈ ಯೋಜನೆಯನ್ನು ಡೊನಾಲ್ಡ್ ಟ್ರಂಪ್ - ಎಲಾನ್ ಮಸ್ಕ್‌ ಆಡಳಿತ ಸುಧಾರಣೆ ಪ್ಲಾನ್ ಎಂದು ಹೇಳಲಾಗುತ್ತಿದೆ. ಈ ಕುರಿತ 10 ಮುಖ್ಯ ಅಂಶಗಳಿವು

1) 2 ಲಕ್ಷ ಉದ್ಯೋಗಿಗಳು ಸ್ವಯಂ ನಿವೃತ್ತಿ?: ಅಮೆರಿಕದ ಫೆಡರಲ್‌ ವ್ಯವಸ್ಥೆಯಲ್ಲಿ 23 ಲಕ್ಷಕ್ಕೂ ಹೆಚ್ಚು ನಾಗರಿಕರು ವಿವಿಧ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇಕಡ 10 ಅಂದರೆ ಸರಿ ಸುಮಾರು 2 ಲಕ್ಷ ಸಿಬ್ಬಂದಿ ಬಹುತೇಕ ಹಿರಿಯ ಅಧಿಕಾರಿಗಳು ಈ ಉಪಕ್ರಮದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ.

2) 100 ಶತಕೋಟಿ ಡಾಲರ್ ಉಳಿಕೆ ಸಾಧ್ಯತೆ: ಟ್ರಂಪ್ ಸರ್ಕಾರದ ಆಫರ್‌ ಬಹಳ ಸದ್ದುಮಾಡಿದೆ. ಈ ಉಪಕ್ರಮದ ಮೂಲಕ ಟ್ರಂಪ್ ಸರ್ಕಾರ 100 ಶತಕೋಟಿ ಡಾಲರ್ ಉಳಿತಾಯ ಮಾಡುವ ನಿರೀಕ್ಷೆ ಇದೆ.

3) ಫೆಡರಲ್ ಸಿಬ್ಬಂದಿ ಕೆಲಸ ನೀತಿಗಳಲ್ಲಿ ಬದಲಾವಣೆ: ಫೆಡರಲ್‌ ಸಿಬ್ಬಂದಿಯ ಕೆಲಸದ ನೀತಿಗಳನ್ನು ಪರಿಷ್ಕರಿಸಿರುವ ಟ್ರಂಪ್ ಸರ್ಕಾರ, ಕೋವಿಡ್ 19 ಸಾಂಕ್ರಾಮಿಕದ ವೇಳೆ ಪರಿಚಯಿಸಿದ್ದ ರಿಮೋಟ್‌ ವರ್ಕ್‌ ನೀತಿಗಳನ್ನು ಬದಲಾಯಿಸಿದ್ದು, 5 ದಿನ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.

4) ಕೆಲವು ಇಲಾಖೆಗಳಿಗೆ ವಿನಾಯಿತಿ: ಟ್ರಂಪ್ ಸರ್ಕಾರದ ಸ್ವಯಂ ನಿವೃತ್ತಿ ಯೋಜನೆ ಫೆಡರಲ್ ವ್ಯವಸ್ಥೆಯ ಎಲ್ಲ ಇಲಾಖೆಗಳಲ್ಲಿ ಕೆಲಸ ಮಾಡುವವರಿಗೆ ಅನ್ವಯವಾಗಿಲ್ಲ. ಅಂಚೆ ಇಲಾಖೆ, ಸೇನೆ, ವಲಸೆ ಇಲಾಖೆ, ನಿರ್ದಿಷ್ಟ ರಾಷ್ಟ್ರೀಯ ಭದ್ರತಾ ಸಿಬ್ಬಂದಿಗೆ ಈ ಪ್ಯಾಕೇಜ್ ಇಲ್ಲ.

5) ಉದ್ಯೋಗ ಭದ್ರತೆ ಇಲ್ಲ: ಸ್ವಯಂ ನಿವೃತ್ತಿ ಘೋಷಿಸುವವರು ರಿಸೈನ್ ಎಂದು ಇಮೇಲ್ ಸಬ್ಜೆಕ್ಟ್ ಲೈನ್‌ನಲ್ಲಿ ಬರೆದು ಕಳುಹಿಸುವಂತೆ ಸರ್ಕಾರ ಸೂಚಿಸಿತ್ತು. ಇದಲ್ಲದೆ, ಯಾರು ಕೆಲಸದಲ್ಲಿ ಮುಂದುವರಿಯುತ್ತಾರೋ ಅಂಥವರಿಗೆ ಉದ್ಯೋಗ ಭದ್ರತೆ ಇರಲ್ಲ. ಕೆಲಸದ ಪ್ರಗತಿ ಪರಿಶೀಲನೆ ನಡೆಸಿ ಉದ್ಯೋಗಿಂದ ವಜಾಗೊಳಿಸಬಹುದು. ಆಗಲೂ ನಿಮ್ಮನ್ನು ಘನತೆಯಿಂದ ನಡೆಸಿಕೊಳ್ಳಲಾಗುತ್ತದೆ ಎಂದು ಸರ್ಕಾರ ತನ್ನ ಇಮೇಲ್‌ನಲ್ಲಿ ವಿವರಿಸಿದೆ ಎಂದು ವರದಿ ಹೇಳಿದೆ.

6) ಆಡಳಿತ ಸುಧಾರಣೆಯ ಭಾಗ: ಅಮೆರಿಕದ ಶ್ವೇತ ಭವನ ಈ ನಡೆಯನ್ನು ಸಮರ್ಥಿಸಿಕೊಂಡಿದ್ದು, ಆಡಳಿತ ಸುಧಾರಣೆಯ ಭಾಗ ಎಂದು ವಿಶ್ಲೇಷಿಸಿದೆ. ಕೆಲಸ, ಕಾರ್ಯಾಚರಣೆಗಳಿಗೆ ಚುರುಕು ಮುಟ್ಟಿಸುವ ಸಲುವಾಗಿ ಈ ರೀತಿ ಕ್ರಮಗಳನ್ನು ಸಹಜವಾಗಿಯೆ ಮಾಡಲಾಗುತ್ತದೆ ಎಂದು ಅದು ವಿವರಿಸಿದೆ.

7) ಆಡಳಿತ ಸುಧಾರಣೆಗೆ ಸಲಹಾ ಸಮಿತಿ: ಡೊನಾಲ್ಡ್ ಟ್ರಂಪ್ ಸರ್ಕಾರ ಫೆಡರಲ್ ವ್ಯವಸ್ಥೆಯ ಸುಧಾರಣೆಗಾಗಿ ಎಲಾನ್ ಮಸ್ಕ್‌ ಮತ್ತು ವಿವೇಕ್ ರಾಮಸ್ವಾಮಿ ಅವರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಿತ್ತು. ಆದರೆ ಈ ಸಮಿತಿಯಿಂದ ರಾಮಸ್ವಾಮಿ ಹೊರಬಂದಿದ್ದಾರೆ.

8) ಟ್ವಿಟರ್‌ ಸಿಬ್ಬಂದಿಗೆ ಮಸ್ಕ್ ನೀಡಿದ ಪ್ಯಾಕೇಜ್‌ ನೆನಪು: ಎಲಾನ್ ಮಸ್ಕ್ ಅವರ ಆಲೋಚನೆಯಂತೆ ಈಗ ಆಡಳಿತ ಸುಧಾರಣೆಯ ಉಪಕ್ರಮ ಜಾರಿಯಾಗುತ್ತಿದೆ. ಇದನ್ನು ಗಮನಿಸಿರುವ ವಿಶ್ಲೇಷಕರು, ಎಲಾನ್ ಮಸ್ಕ್ 2022ರಲ್ಲಿ ಟ್ವಿಟರ್ ಖರೀದಿ ಮಾಡಿದಾಗ ಅದರಲ್ಲಿದ್ದ ಸಿಬ್ಬಂದಿ ಇದೇ ರೀತಿ ಪ್ಯಾಕೇಜ್ ಘೋಷಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

9) 75000ಕ್ಕೂ ಹೆಚ್ಚು ಸಿಬ್ಬಂದಿ ರಾಜೀನಾಮೆ: ಈಗಾಗಲೇ 75,000ಕ್ಕೂ ಹೆಚ್ಚು ಅಧಿಕಾರಿಗಳು ಈ ಯೋಜನೆಯ ಪ್ರಯೋಜನ ಪಡೆಯುವುದಾಗಿ ಘೋಷಿಸಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಇವರೆಲ್ಲರೂ ತಮ್ಮದೆ ಆದ ಕಾರಣಗಳನ್ನು ಮುಂದಿಟ್ಟುಕೊಂಡು ರಾಜೀನಾಮೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಸರ್ಕಾರದ ಆಫರ್‌ ವ್ಯಾಪಕ ಚರ್ಚೆಗೆ ಒಳಗಾಗಿದೆ.

10) ಕಾರ್ಮಿಕ ಸಂಘಟನೆ ದುರ್ಬಲ: ಅಮೆರಿಕದ ಫೆಡರಲ್ ವ್ಯವಸ್ಥೆಯ ಸಿಬ್ಬಂದಿಯನ್ನು ಒಳಗೊಂಡ ಕಾರ್ಮಿಕ ಯೂನಿಯನ್‌ಗಳಿವೆ. ಆದರೆ ಅವುಗಳು ಸರ್ಕಾರದ ವಿರುದ್ಧ ಪ್ರತಿಭಟಿಸುವಂತೆ ಇಲ್ಲ. ಅವುಗಳಿಗೆ ಆ ಅಧಿಕಾರ ಇಲ್ಲ. ಅವರು ಸಿಬ್ಬಂದಿ ಪರವಾಗಿ ವೇತನ, ಕಾನೂನು ಹಾಗೂ ಇತರೆ ಅಗತ್ಯಗಳ ಬೇಡಿಕೆಗಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಬಹುದು. ಈ ವಿಚಾರದಲ್ಲೂ ಅಷ್ಟೆ, ಪ್ರತಿಭಟಿಸುವ ಹಕ್ಕು ಅವುಗಳಿಗೆ ಇಲ್ಲ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.