ಅನುಮತಿ ಇಲ್ಲದೆ ಕಂಟೆಂಟ್ ಬಳಕೆ; ಓಪನ್ಎಐ ವಿರುದ್ಧ ಎಎನ್‌ಐ ಹೂಡಿದ ಮೊಕದ್ದಮೆಗೆ HT ಸಾಥ್, ದೆಹಲಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ
ಅನುಮತಿ ಇಲ್ಲದೆ ತಮ್ಮ ಕಂಟೆಂಟ್ ಬಳಸುವ ಮೂಲಕ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಸುದ್ದಿಸಂಸ್ಥೆ ಎಎನ್ಐ ದೆಹಲಿ ಹೈಕೋರ್ಟ್‌ನಲ್ಲಿ ಕೃತಿಸ್ವಾಮ್ಯ ಮೊಕದ್ದಮೆ ಹೂಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಗೂ ಮುನ್ನ ಎಚ್‌ಟಿ ಡಿಜಿಟಲ್ ಸ್ಟ್ರೀಮ್ಸ್ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳು ಮಧ್ಯಂತರ ಅರ್ಜಿ ಸಲ್ಲಿಸಿವೆ.

ಕೃತಕ ಬುದ್ಧಿಮತ್ತೆ ಕಂಪನಿಯಾದ ಓಪನ್‌ಎಐ (OpenAI) ವಿರುದ್ಧ ಸುದ್ದಿಸಂಸ್ಥೆ ಎಎನ್‌ಐ ಸಲ್ಲಿಸಿದ ಹಕ್ಕುಸ್ವಾಮ್ಯ ಮೊಕದ್ದಮೆಗೆ (copyright lawsuit) ಸಂಬಂಧಿಸಿದಂತೆ, ಹಿಂದೂಸ್ತಾನ್ ಟೈಮ್ಸ್‌ನ ಡಿಜಿಟಲ್ ಅಂಗವಾದ ಎಚ್‌ಟಿ ಡಿಜಿಟಲ್ ಸ್ಟ್ರೀಮ್ಸ್ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳು ಸೋಮವಾರ (ಜನವರಿ 27) ದೆಹಲಿ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿವೆ. ಈ ಕಾನೂನು ಪ್ರಕರಣದಲ್ಲಿ ಎಚ್‌ಟಿ ಡಿಜಿಟಲ್ ಸ್ಟ್ರೀಮ್ಸ್ ಜತೆಗೆ ಐಇ ಆನ್‌ಲೈನ್ ಮೀಡಿಯಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (Express Group), ಎನ್‌ಡಿಟಿವಿ ಕನ್ವರ್ಜೆನ್ಸ್ ಮತ್ತು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (DNPA) ಕೂಡಾ ಮೂರನೇ ವ್ಯಕ್ತಿ ಅಥವಾ ಥರ್ಡ್ ಪಾರ್ಟಿಯಾಗಿ ಸೇರಿಕೊಂಡಿದೆ. ಟೈಮ್ಸ್ ಗ್ರೂಪ್ ಈ ಅರ್ಜಿಯ ಭಾಗವಾಗಿಲ್ಲ.
ಎಎನ್ಐ ಪ್ರಕರಣದ ಮುಂದಿನ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಈ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ. ಓಪನ್ಎಐ ಥರದ ಕಂಪನಿಗಳು ತನ್ನ ವೆಬ್‌ಸೈಟ್‌ಗಳು ಮಾತ್ರವಲ್ಲದೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ಪರವಾನಗಿ, ಅಧಿಕಾರ ಅಥವಾ ಅನುಮತಿ ಇಲ್ಲದೆ ತಮ್ಮ ವಿಷಯ (content) ಮತ್ತು ಮಾಹಿತಿಯನ್ನು (information) ಬಳಸುವ ಮೂಲಕ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂಬುದು ಈ ಸಂಸ್ಥೆಗಳ ವಾದ. ಈ ಪ್ರಕರಣದ ಫಲಿತಾಂಶವು ಡಿಎನ್ಎಎ ಸದಸ್ಯರು ನೇಮಿಸಿಕೊಳ್ಳುವ ಪತ್ರಕರ್ತರು ಮಾತ್ರವಲ್ಲದೆ ಭಾರತೀಯ ಪತ್ರಿಕಾರಂಗದ ಉದ್ಯೋಗಿಗಳ ಜೀವನೋಪಾಯದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಮಾಧ್ಯಮಗಳು ಹೇಳಿವೆ.
ಓಪನ್ಎಐ ಮಾದರಿಗಳಿಗೆ ತರಬೇತಿ ನೀಡಲು ಮತ್ತು ಅದನ್ನು ತನ್ನ ಔಟ್‌ಪುಟ್‌ಗಳಲ್ಲಿ ಬಳಸಲು ಓಪನ್ ಎಐ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಅಸೋಸಿಯೇಟೆಡ್ ಪ್ರೆಸ್ (AP), ದಿ ಅಟ್ಲಾಂಟಿಕ್ ಮತ್ತು ನ್ಯೂಸ್ ಕಾರ್ಪ್‌ನೊಂದಿಗೆ ಪರವಾನಗಿ ಒಪ್ಪಂದಗಳನ್ನು ಮಾಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಎಐ ಮಾದರಿಗಳಿಗೆ (AI models) ತರಬೇತಿ ನೀಡಲು ಬೇಕಾದ ವಿಷಯವನ್ನು ಬಳಸಬೇಕಾದರೆ, ಓಪನ್ಎಐ ಕೂಡಾ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮೂಲ ಪ್ರಕಾಶಕರಿಗೆ ಅನ್ಯಾಯ
ಸರ್ಚ್ ಎಂಜಿನ್‌ಗಳು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ವೆಬ್ ಸ್ಕ್ರಾಪಿಂಗ್ ಸೇವೆಗಳು, ಮೂಲ ಪ್ರಕಾಶಕರಿಗೆ ಯಾವುದೇ ಪರಿಹಾರವನ್ನು ನೀಡದೆ ಸುದ್ದಿಗಳಿಗೆ (news content) ಹಣ ನೀಡುತ್ತವೆ (monetise) ಎಂದು ಡಿಎನ್‌ಪಿಎ ಹೇಳಿದೆ. ಸುದ್ದಿಗಳನ್ನು ನೋಡುವ ಬಳಕೆದಾರರಿಗೆ ಸೆರ್ಚ್ ಇಂಜಿನ್‌ಗಳು ಹೆದ್ದಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಪ್ರೇಕ್ಷಕರ ವ್ಯಾಪ್ತಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ ಎಂದು ಮಧ್ಯಸ್ಥಿಕೆ ಅರ್ಜಿಯಲ್ಲಿ ಹೇಳಲಾಗಿದೆ. ಈಗಾಗಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಡಿಎನ್‌ಪಿಎ ಇದೇ ವಾದ ಮಂಡಿಸಿದೆ.
ಈ ಪ್ರಕರಣದ ಫಲಿತಾಂಶವು ಡಿಎನ್‌ಪಿಎ ಸದಸ್ಯರು ನೇಮಿಸಿಕೊಂಡ ಪತ್ರಕರ್ತರ ಜೀವನೋಪಾಯದ ಮೇಲೆ ಮತ್ತು ಭಾರತೀಯ ಸುದ್ದಿ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಕಾಶಕರು ವಾದಿಸಿದ್ದಾರೆ.
ಓಪನ್ಎಐ ವಾದವೇನು?
ಪ್ರಶ್ನೆಯಲ್ಲಿರುವ ಯಾವುದೇ ದತ್ತಾಂಶವನ್ನು ಭಾರತದಲ್ಲಿ ಸಂಸ್ಕರಿಸಲಾಗಿಲ್ಲ ಅಥವಾ ಸಂಗ್ರಹಿಸಲಾಗಿಲ್ಲ. ಹೀಗಾಗಿ ಇದು ಭಾರತೀಯ ನ್ಯಾಯಾಲಯಗಳು ನ್ಯಾಯವ್ಯಾಪ್ತಿಗೆ ಬರುವುದಿಲ್ಲ ಎಂದು ಓಪನ್ಎಐ ವಾದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 18ರಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರ ಏಕಸದಸ್ಯ ಪೀಠವು ಶಿಕ್ಷಣತಜ್ಞ ಅರುಲ್ ಜಾರ್ಜ್ ಸ್ಕಾರಿಯಾ ಮತ್ತು ವಕೀಲ ಆದರ್ಶ್ ರಾಮಾನಾಜುನ್ ಅವರನ್ನು ಸಲಹೆಗಾರರಾಗಿ ನೇಮಿಸಿತ್ತು.
ಸುಖಾಂತ್ಯ ಕಾಣದ ಪ್ರಕರಣಗಳು
ಸುದ್ದಿ ಪ್ರಕಾಶಕರು ಸೇರಿದಂತೆ ಕಂಟೆಂಟ್ ಕ್ರಿಯೇಟರ್‌ಗಳ ಕೃತಿಸ್ವಾಮ್ಯವನ್ನು (copyrights) ಉಲ್ಲಂಘಿಸಿದ್ದಕ್ಕಾಗಿ ಜಾಗತಿಕವಾಗಿ ಓಪನ್ಎಐ, ಮೆಟಾ, ಆಂಥ್ರೋಪಿಕ್, ಪರ್‌ಪ್ಲೆಕ್ಸಿಟಿ ಮತ್ತು ಇತರ ಎಐ ಕಂಪನಿಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಎಐ ಕಂಪನಿಗಳು ತಮ್ಮ ‘ಮಾದರಿ’ಗಳಿಗೆ ತರಬೇತಿ ನೀಡಲು, ಚಾಟ್‌ಬಾಟ್‌ಗಳಲ್ಲಿ ಫಲಿತಾಂಶಗಳನ್ನು ಹೊರತರಲು ಮತ್ತು ಆನ್‌ಲೈನ್ ಟ್ರಾಫಿಕ್ ಅನ್ನು ಮೂಲ ವೆಬ್‌ಸೈಟ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಂದ ದೂರವಿರಿಸಲು ಕೃತಿಸ್ವಾಮ್ಯ ಪಡೆದ ಮತ್ತು (ಕೆಲವೊಮ್ಮೆ) ಪೇವಾಲ್‌ನಲ್ಲಿರುವ ವಿಷಯವನ್ನು ಬಳಸುತ್ತವೆ. ಇದರಿಂದಾಗಿ ಮೂಲ ಸಂಸ್ಥೆಗಳು ಆದಾಯದಿಂದ ವಂಚಿತವಾಗುತ್ತವೆ ಎಂಬುದು ಹೆಚ್ಚಿನ ಕಂಪನಿಗಳ ವಾದ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕ ಸೇರಿದಂತೆ ಎಲ್ಲಿಯೂ ಯಾವುದೇ ಮೊಕದ್ದಮೆಗಳು ಇನ್ನೂ ಸುಖಾಂತ್ಯ ಕಂಡಿಲ್ಲ.
ಎಐ ಅಲ್ಗಾರಿದಮ್‌ಗಳಿಗೆ (ಸೂತ್ರಗಳಿಗೆ) ತರಬೇತಿ ನೀಡಲು ತಮ್ಮ ಖಾಸಗಿ ಸಂದೇಶಗಳು ಮತ್ತು ಸಾರ್ವಜನಿಕ ಪೋಸ್ಟ್‌ಗಳನ್ನು ಅನುಮತಿ ಪಡೆಯದೆ ಬಳಸಿದ್ದಕ್ಕಾಗಿ ಕೆಲವು ಬಳಕೆದಾರರು ಲಿಂಕ್ಡ್ಇನ್‌ನಂತಹ ಸಾಮಾಜಿಕ ಮಾಧ್ಯಮ ಕಂಪನಿಗಳ ವಿರುದ್ಧವೂ ಮೊಕದ್ದಮೆಗಳನ್ನು ದಾಖಲಿಸಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.

ವಿಭಾಗ