ಸಂಪಾದಕೀಯ: ಸುಳ್ಳುಸುದ್ದಿಯ ರಾಕ್ಷಸ ಶಕ್ತಿಗೆ ಕಡಿವಾಣ ಹಾಕಲೇಬೇಕಾದ ಅಗತ್ಯ ಸಾರಿಹೇಳಿದೆ ಮಣಿಪುರದ ಮಹಿಳಾ ದೌರ್ಜನ್ಯ ಪ್ರಕರಣ
ಮಣಿಪುರ ಹಿಂಸಾಚಾರವು 'ಸುಳ್ಳು ಸುದ್ದಿ'ಯ ರಾಕ್ಷಸ ಶಕ್ತಿಯನ್ನೂ ಬೆಳಕಿಗೆ ತಂದಿದೆ. ಸುಳ್ಳು ಸುದ್ದಿ, ತಿರುಚಿದ ಮಾಹಿತಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಕಡಿವಾಣ ಹಾಕಬೇಕಿದೆ. ಜನರೂ ಸಹ ಸಮಾಜದ ಸ್ವಾಸ್ಥ್ಯ ಕದಡುವ ಸುಳ್ಳು ಸುದ್ದಿ, ತಿರುಚಿದ ಮಾಹಿತಿಗಳನ್ನು ಪೂರ್ವಾಪರ ವಿವೇಚನೆಯಿಲ್ಲದೆ ನಂಬುವುದು, ಫಾರ್ವಾರ್ಡ್-ಶೇರ್ ಮಾಡುವುದನ್ನು ನಿಲ್ಲಿಸಬೇಕಿದೆ.
ಎಪ್ಪತ್ತ ಏಳು ದಿನಗಳು. ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಅವರ ಮೇಲೆ ನಡೆದ ಕ್ರೂರ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯಿಸಲು ಮಣಿಪುರ ಸರ್ಕಾರ ತೆಗೆದುಕೊಂಡ ಸಮಯ ಎಪ್ಪತ್ತ ಏಳು ದಿನಗಳು. ಮಣಿಪುರ ಹಿಂಸಾಚಾರದ ಬಗ್ಗೆ ಜಗತ್ತಿನ ಗಮನ ಸೆಳೆದ ಮಹಿಳಾ ದೌರ್ಜನ್ಯ ಪ್ರಕರಣಕ್ಕೆ ಇರುವ ಹಲವು ಕಾರಣಗಳ ಪೈಕಿ ಪ್ರಮುಖವಾದದ್ದು ‘ಸುಳ್ಳು ಸುದ್ದಿ’ಯೊಂದನ್ನು (ಫೇಕ್ ನ್ಯೂಸ್) ಅಲ್ಲಿನ ಜನರು ಸತ್ಯ ಎಂದು ನಂಬಿದ್ದು. ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಆರಂಭದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಒಮ್ಮೆ ಅಲ್ಲಿನ ಬರ್ಬರ ಕೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಅನಿವಾರ್ಯವಾಗಿ ಹಿಂಸಾಚಾರ ಹತ್ತಿಕ್ಕುವ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವ ಮಾತುಗಳು ಕೇಳಿ ಬಂದವು. ಈ ಎರಡೂ ಸಂಗತಿಗಳು ಏನನ್ನು ಸೂಚಿಸುತ್ತವೆ?
ಅಪರಾಧ ಕೃತ್ಯಗಳು ನಡೆಯದಂತೆ ಕರ್ತವ್ಯ ನಿರ್ವಹಿಸಬೇಕಾದ್ದು ಯಾವುದೇ ಸರ್ಕಾರದ ಮೊದಲ ಜವಾಬ್ದಾರಿ. ಒಂದು ವೇಳೆ ಅಪರಾಧಗಳು ನಡೆದರೆ ಅದಕ್ಕೆ ಕಾರಣರಾದವರನ್ನು ಗುರುತಿಸಿ, ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾದ್ದು ನಂತರದ ಮುಖ್ಯ ಹೊಣೆಗಾರಿಕೆ. ಆದರೆ ಮಣಿಪುರದಲ್ಲಿ ಆಗಿರುವುದು ಏನು? ಈ ಘೋರ ಅಪರಾಧಕ್ಕೆ ಕಾರಣರಾದ ಯಾರೋ ನಾಲ್ವರು ಯುವಕರನ್ನು ಹಿಡಿದು ಶಿಕ್ಷಿಸಿದರೆ ಏನೂ ಮಾಡಿದಂತೆ ಆಗುವುದಿಲ್ಲ. ಹೊಣೆಗಾರಿಕೆಯನ್ನು ಉನ್ನತ ಸ್ತರದಿಂದಲೇ ನಿಗದಿಪಡಿಸಿ, ಕರ್ತವ್ಯಭ್ರಷ್ಟರನ್ನು ಗುರುತಿಸಿ ಶಿಕ್ಷಿಸಬೇಕು. ಭಾರತದ ಮತ್ಯಾವುದೇ ರಾಜ್ಯದಲ್ಲಿ ಇಂಥ ಘಟನೆಗಳು ಇನ್ನೆಂದೂ ನಡೆಯಬಾರದು.
ಈ ಘಟನೆ ಕುರಿತು ಮಣಿಪುರ ಸರ್ಕಾರಕ್ಕೆ 77 ದಿನಗಳ ನಂತರ ಅರಿವಾಗಿದೆ ಎನ್ನುವುದೇ ಶುದ್ಧ ಸುಳ್ಳು. ಮೇ 4ರಂದು ಈ ಘಟನೆ ನಡೆದಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್' ದಿನಪತ್ರಿಕೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆಗಿನ್ನೂ ಮಣಿಪುರದಲ್ಲಿ ಗಲಭೆಗಳು ಕಾವೇರುತ್ತಿದ್ದವು. ತಮ್ಮ ಜನಾಂಗದ ಮಹಿಳೆಯರ ಮೇಲೆ ಕುಕಿ ಜನಾಂಗದವರು ದೌರ್ಜನ್ಯ ಎಸಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ನಂಬಿಕೊಂಡ ಶಸ್ತ್ರಸಜ್ಜಿತರಾಗಿದ್ದ ಮೈತಿ ಜನಾಂಗದ ಪುಂಡರು ಕುಕಿ ಜನಾಂಗದವರಿದ್ದ ಹಳ್ಳಿಯೊಂದರ ಮೇಲೆ ದಾಳಿ ನಡೆಸಿದರು. ದಾಳಿಯಿಂದ ತಪ್ಪಿಸಿಕೊಳ್ಳಲು ಒಂದೇ ಕುಟುಂಬದ ಐವರು ಕಾಡಿಗೆ ಓಡಿಹೋಗಿದ್ದರು. ಅವರನ್ನು ಪತ್ತೆಹಚ್ಚಿದ ಪುಂಡರು ದೌರ್ಜನ್ಯ ಮೆರೆದರು. ಪೊಲೀಸರ ರಕ್ಷಣೆಯಲ್ಲಿದ್ದ ಮೂವರು ಮಹಿಳೆಯರ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದರು. ಇಷ್ಟೆಲ್ಲಾ ಆದ ನಂತರ ನಡೆದದ್ದು ಮತ್ತೂ ಘೋರ. ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪುಂಡರು, ಆಕೆಯ ರಕ್ಷಣೆಗೆ ಬಂದ ಆಕೆಯ 19 ವರ್ಷದ ಸೋದರನ ಕೊಲೆಯನ್ನೂ ಮಾಡಿದರು. ಈಗ ವೈರಲ್ ಆಗಿರುವ ವಿಡಿಯೊ ತುಣುಕಿನ ಹಿನ್ನೆಲೆ ಇದು.
ಯಾವುದೇ ನಾಗರಿಕ ಸಮಾಜದಲ್ಲಿ ಇಂಥ ವಿದ್ಯಮಾನ ನಡೆದಿರುವುದು ಅರಿವಾದ ತಕ್ಷಣ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ಜನರ ಮಾನಕ್ಕೆ, ಪ್ರಾಣಕ್ಕೆ ಕುತ್ತು ತರುವ ಪುಂಡರನ್ನು ಬಲಿಹಾಕಲು ಮುಂದಾಗುತ್ತವೆ. ಆದರೆ ಮಣಿಪುರದಲ್ಲಿ ಮಾತ್ರ ಸರ್ಕಾರಕ್ಕೆ ತನ್ನ ಕರ್ತವ್ಯ ಏನು ಎಂಬುದು ಅರಿವಾಗಲು ಎರಡು ತಿಂಗಳು ಬೇಕಾಯಿತು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಕಟುದನಿಯಲ್ಲಿ ಎಚ್ಚರಿಸಬೇಕಾಯಿತು. ‘ಘಟನೆಯಿಂದ ನೋವಾಗಿದೆ, ತಪ್ಪಿತಸ್ಥರನ್ನು ಶಿಕ್ಷಿಸುತ್ತೇವೆ’ ಎಂದು ಪ್ರಧಾನಿ ಭರವಸೆ ಕೊಡಬೇಕಾಯಿತು. ಈಗ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅಪರಾಧಿಗಳಿಗೆ ‘ಮರಣದಂಡನೆ ಆಗಬೇಕು’ ಎಂದು ಆಗ್ರಹಿಸುತ್ತಿದ್ದಾರೆ. ಅಧಿಕಾರದ ಸ್ಥಾನದಲ್ಲಿರುವ ಕೊಡುವ ಇಂಥ ಬೀಸು ಹೇಳಿಕೆಗಳಿಂದ ಏನಾದರೂ ಲಾಭವಿದೆಯೇ?
ಮಣಿಪುರದಲ್ಲಿ ಕುಕಿ, ನಾಗಾ ಮತ್ತು ಮೈತಿ ಸಮುದಾಯಗಳ ನಡುವಣ ಸಂಘರ್ಷಕ್ಕೆ ಹತ್ತಾರು ವರ್ಷಗಳ ಇತಿಹಾಸವಿದೆ. ಮೈತಿ ಜನಾಂಗಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವುದನ್ನು ನಾಗಾ ಮತ್ತು ಕುಕಿಗಳು ವಿರೋಧಿಸುತ್ತಿದ್ದಾರೆ. ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ತಮಗೆ ಭೂಮಿ ಖರೀದಿಸಲು ಅವಕಾಶವಿಲ್ಲ ಎನ್ನುವುದು ಮೈತಿಗಳಿಗೆ ಉಳಿದೆರೆಡು ಜನಾಂಗಗಳ ಮೇಲೆ ಸಿಟ್ಟು ಬರಲು ಕಾರಣ. ಬೂದಿಮುಚ್ಚಿದ ಕೆಂಡದಂತಿದ್ದ ವೈಷಮ್ಯ ಇದೀಗ ಪ್ರಜ್ವಲಿಸಿ ಮಣಿಪುರ ಹೊತ್ತಿ ಉರಿಯುತ್ತಿದೆ. ಇದರ ಭಾಗವಾಗಿ ಮಹಿಳೆಯರ ಬೆತ್ತಲೆ ಮೆರವಣಿಗೆಯಂಥ ಘೋರ ಕೃತ್ಯ ನಡೆದಿದೆ. ಇದೆಲ್ಲಕ್ಕೂ ನೆಪವಾಗಿ ಒದಗಿಬಂದಿದ್ದು ಒಂದು 'ಸುಳ್ಳು ಸುದ್ದಿ' (ಫೇಕ್ ನ್ಯೂಸ್) ಎನ್ನುವುದು ವಿಪರ್ಯಾಸ.
ಮಣಿಪುರದಲ್ಲಿ ಇಂದಿಗೂ ಈ ಜನಾಂಗಗಳಲ್ಲಿ ಯುದ್ಧೋನ್ಮಾದವೇ ತುಂಬಿದೆ. ಶಾಂತಿಯ ಪ್ರಯತ್ನಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಅಪರಾಧಿಗಳನ್ನು ಗುರುತಿಸಿ ಶಿಕ್ಷಿಸುವುದು ಬಾಯ್ಮಾತಿನ ಭರವಸೆಗಳಷ್ಟೇ ಆಗುತ್ತಿವೆ. ಜಾತಿಕಲಹ, ಕೋಮುಗಲಭೆಗಳು ನಡೆದಾಗ ಸರ್ಕಾರ ಅತಿಹೆಚ್ಚಿನ ಬಲ ಪ್ರಯೋಗಿಸುವುದರೊಂದಿಗೆ ನಿರ್ಬಂಧದ ಆದೇಶಗಳನ್ನು ಹೊರಡಿಸಬೇಕು. ಇನ್ನೊಂದೆಡೆ ಸಮುದಾಯ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕು. ಆಗ ಮಾತ್ರ ಹಿಂಸೆಯ ಮತ್ತೇರಿಸಿಕೊಂಡಿರುವ ಗುಂಪುಗಳು ತಣ್ಣಗಾಗಲು ಸಾಧ್ಯ. ಮಣಿಪುರಕ್ಕೆ ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಯ ಪಡೆಗಳನ್ನು ಯೋಜಿಸಿ ಪರಿಸ್ಥಿತಿಯನ್ನು ತಹಬದಿಗೆ ತರಬೇಕಿದೆ.
ಮಣಿಪುರ ಹಿಂಸಾಚಾರದ ಒಟ್ಟೂ ಘಟನೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಮತ್ತೆಮತ್ತೆ ಚರ್ಚೆಯಾಗುತ್ತಲೇ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ವಿಡಿಯೊ ವೈರಲ್ ಆಗದಿದ್ದರೆ ಮಣಿಪುರ ಸರ್ಕಾರ 77 ದಿನಗಳಷ್ಟು ತಡವಾಗಿಯಾದರೂ ಎಚ್ಚೆತ್ತುಕೊಳ್ಳುತ್ತಿರಲಿಲ್ಲ ಎನ್ನುವ ಮಾತು ಪ್ರಬಲವಾಗಿ ಕೇಳಿಬರುತ್ತಿದೆ. ಇದೀಗ ಸರ್ಕಾರಗಳು ಸಾಮಾಜಿಕ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವ ಮಾತು ಆಡುತ್ತಿವೆ. ವಾಸ್ತವ ಎಂದರೆ ಗಾಢನಿದ್ದೆಯಲ್ಲಿದ್ದ ಈ ಜಡ ಸರ್ಕಾರವನ್ನು ಬಡಿದೆಬ್ಬಿಸಿದ, ಭಾರತದ ಸಾಮೂಹಿಕ ಅಂತಃಕರಣವನ್ನು ಕಲಕಿದ ವಿಡಿಯೊವನ್ನು ಜಗಜ್ಜಾಹೀರುಗೊಳಿಸಿದ ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರ ಧನ್ಯವಾದ ಹೇಳಬೇಕಿತ್ತು. ಈ ಘಟನೆಗೆ ಕಾರಣವಾದ 'ಸುಳ್ಳು ಸುದ್ದಿ' ಉತ್ಪಾದಿಸಿದವರ ವಿರುದ್ಧ, ಹಂಚಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಿತ್ತು.
ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ, ಪರಿಸ್ಥಿತಿ ಕೈಮೀರುತ್ತಿದೆ ಎಂದು ಭಾರತದ ಮಾಧ್ಯಮಗಳು ಎಷ್ಟು ಬಾರಿ ಎಚ್ಚರಿಸಿದರೂ, ವರದಿಗಳನ್ನು ಪ್ರಕಟಿಸಿದರೂ ಸರ್ಕಾರಗಳು ಗಂಭೀರವಾಗಿ ಪ್ರತಿಕ್ರಿಯಿಸಲಿಲ್ಲ. ಆದರೆ ಒಂದು ವೈರಲ್ ವಿಡಿಯೊದಿಂದ ಅಂತರರಾಷ್ಟ್ರೀಯ ಮಾಧ್ಯಮಗಳು ಸಹ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸುವಂತೆ ಆಯಿತು. ಸ್ವತಃ ಪ್ರಧಾನಿ ಮಾತನಾಡಲೇಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ವಹಿಸದಿದ್ದರೆ ಸುಮ್ಮನಿರಲು ಆಗದು ಎಂದು ಸುಪ್ರೀಂಕೋರ್ಟ್ ಚಾಟಿ ಬೀಸುವ ಎಚ್ಚರಿಕೆ ನೀಡುವಂತೆ ಮಾಡಿತು. ನಮ್ಮ ಆಡಳಿತಕ್ಕೆ ಅಂಟಿರುವ ಜಡತ್ವದ ಶಾಪ ವಿಮೋಚನೆಗಾಗಿ ಹಿಂಸೆಯ ವಿಜೃಂಭಣೆ, ಹಿಂಸೆಯ ಪ್ರಚಾರ, ಹಿಂಸೆಯ ವೈರಲ್ ವಿಡಿಯೊಗಳು ಬೇಕಾಯಿತು ಎನ್ನುವುದು ವಿಪರ್ಯಾಸವಷ್ಟೇ ಅಲ್ಲ, ಅವಮಾನಕರ ಬೆಳವಣಿಗೆಯೂ ಹೌದು.
ಈ ಎಲ್ಲದರ ನಡುವೆ ಮಣಿಪುರ ಹಿಂಸಾಚಾರವು 'ಸುಳ್ಳು ಸುದ್ದಿ'ಯ ರಾಕ್ಷಸ ಶಕ್ತಿಯನ್ನೂ ಬೆಳಕಿಗೆ ತಂದಿದೆ. ಸುಳ್ಳು ಸುದ್ದಿ, ತಿರುಚಿತ ಮಾಹಿತಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಕಡಿವಾಣ ಹಾಕಲು ಸರ್ಕಾರ ಒಂದು ಸಮರ್ಪಕ ವ್ಯವಸ್ಥೆ ರೂಪಿಸಬೇಕಿದೆ. ಜನರೂ ಸಹ ಸಮಾಜದ ಸ್ವಾಸ್ಥ್ಯ ಕದಡುವ ಸುಳ್ಳು ಸುದ್ದಿ, ತಿರುಚಿದ ಮಾಹಿತಿಗಳನ್ನು ಪೂರ್ವಾಪರ ವಿವೇಚನೆಯಿಲ್ಲದೆ ನಂಬುವುದು, ಫಾರ್ವಾರ್ಡ್-ಶೇರ್ ಮಾಡುವುದನ್ನು ನಿಲ್ಲಿಸಬೇಕಿದೆ.