ಕನ್ನಡ ಸುದ್ದಿ  /  Nation And-world  /  Idli Second Most Ordered Breakfast Item After Masala Dosa

Eating idli: "ಇಡ್ಲಿಗಿಂತ ರುಚಿ ಬೇರೆ ಇಲ್ಲ...", ಆರ್ಡರ್‌ನಲ್ಲೇ ದಾಖಲೆ ಮಾಡಿದ ಇಡ್ಲಿಪ್ರಿಯ, ಮಸಾಲೆದೋಸೆ ಬಳಿಕ ಇಡ್ಲಿಯೇ ಜನಪ್ರಿಯ

ತಟ್ಟೆ ಇಡ್ಲಿ, ರವಾ ಇಡ್ಲಿ, ಮಿನಿ ಇಡ್ಲಿ ಸೇರಿದಂತೆ ಬಗೆಬಗೆಯ ಇಡ್ಲಿಯನ್ನು ಪ್ರತಿನಿತ್ಯ ಇಡ್ಲಿಪ್ರಿಯರು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುತ್ತಿದ್ದು, ಇಡ್ಲಿ ಆರ್ಡರ್‌ ಮಾಡುವುದರಲ್ಲಿ ಇಡ್ಲಿಪ್ರಿಯರೊಬ್ಬರು ಹೊಸ ದಾಖಲೆ ಮಾಡಿದ್ದಾರೆ.

ಬೆಳಗ್ಗಿನ ಉಪಹಾರದಲ್ಲಿ ಇಡ್ಲಿ ಜನಪ್ರಿಯ
ಬೆಳಗ್ಗಿನ ಉಪಹಾರದಲ್ಲಿ ಇಡ್ಲಿ ಜನಪ್ರಿಯ

ಬೆಂಗಳೂರು: ನಿನ್ನೆ ವಿಶ್ವ ಇಡ್ಲಿ ದಿನ. ಪ್ರತಿನಿತ್ಯ ಇಡ್ಲಿ ತಿನ್ನೋರು ನಿನ್ನೆ ಒಂದೆರಡು ಇಡ್ಲಿ ಹೆಚ್ಚೇ ತಿಂದಿರಬಹುದು. ಚಟ್ನಿ ಜತೆ ಇಡ್ಲಿ ತಿನ್ನೋರು, ಸಾಂಬಾರ್‌ ಜತೆ ಇಡ್ಲಿ ತಿನ್ನೋರು "ಇಡ್ಲಿಗಿಂತ ರುಚಿ ಬೇರೆ ಇಲ್ಲ" ಎಂದು ಹೇಳಬಹುದು. ಆರೋಗ್ಯ ಚೆನ್ನಾಗಿರಬೇಕು ಎಂದು ಹಾರೈಸುವವರು ಇಡ್ಲಿ ತಿನ್ನುತ್ತಾರೆ. ಅದೇ ರೀತಿ, ಆರೋಗ್ಯ ಸರಿ ಇಲ್ಲದೆ ಇದ್ದರೂ ಇಡ್ಲಿ ತಿನ್ನಿ ಎಂದು ಸಜೆಸ್ಟ್‌ ಮಾಡುತ್ತಾರೆ. ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ ಎಂದೆಲ್ಲ ಬಗೆಬಗೆಯ ಇಡ್ಲಿ ಇವೆ. ಆದರೆ, ದಿನಾ ಇದೇ ಇಡ್ಲಿ ತಿನ್ನೋದು ಬೇಜಾರು ಅನ್ನೋರು ಇದ್ದಾರೆ.

ಕಳೆದ ಒಂದು ವರ್ಷದಲ್ಲಿ 33 ದಶಲಕ್ಷ ಇಡ್ಲಿ ಡೆಲಿವರಿ ಮಾಡಿದ್ದೇವೆ ಎಂದು ನಿನ್ನೆ ವಿಶ್ವ ಇಡ್ಲಿ ದಿನದ ಪ್ರಯುಕ್ತ ಫುಡ್‌ ಡೆಲಿವರಿ ಕಂಪನಿ ಸ್ವಿಗ್ಗಿ ಹೇಳಿದೆ. ಸ್ವಿಗ್ಗಿಯಲ್ಲಿ ಜನರು ಹೆಚ್ಚು ಬುಕ್‌ ಮಾಡುವ ಬ್ರೇಕ್‌ಫಾಸ್ಟ್‌ಗಳಲ್ಲಿ ಇಡ್ಲಿಗೆ ಎರಡನೇ ಸ್ಥಾನವಂತೆ. ಮೊದಲನೇ ಸ್ಥಾನ ಮಸಾಲೆ ದೋಸೆಗಂತೆ.

ಇಡ್ಲಿ ಪ್ರಿಯರು ಹೆಚ್ಚಿರುವುದು ಬೆಂಗಳೂರು, ಹೈದರಾಬಾದ್‌ ಮತ್ತು ಚೆನ್ನೈನಲ್ಲಿಯಂತೆ. ಈ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಇಡ್ಲಿಗೆ ಆರ್ಡರ್‌ ಬರುತ್ತದೆ ಎಂದು ಸ್ವಿಗ್ಗಿ ಹೇಳಿದೆ. ಇದಲ್ಲದೆ ಮುಂಬೈ, ದೆಹಲಿ, ಕೊಲ್ಕೊತ್ತಾ, ಕೊಚ್ಚಿ, ವಿಶಾಖಪಟ್ಟಣ, ಪುಣೆ ಮತ್ತು ಕೊಯಮತ್ತೂರಿನಲ್ಲಿ ಬ್ರೇಕ್‌ಫಾಸ್ಟ್‌ಗಾಗಿ ಹೆಚ್ಚಿನ ಜನರು ಸ್ವಿಗ್ಗಿಯಿಂದ ಇಡ್ಲಿ ಆರ್ಡರ್‌ ಮಾಡುತ್ತಾರಂತೆ.

ಇಡ್ಲಿ ಇಷ್ಟಪಡುವ ನಗರಗಳಲ್ಲಿ ಹೈದರಾಬಾದ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ಸ್ವಿಗ್ಗಿ ಹೇಳಿದೆ. ಹೈದರಾಬಾದ್‌ನ ವ್ಯಕ್ತಿಯೊಬ್ಬರು ಇಡ್ಲಿ ಆರ್ಡರ್‌ನಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಆರು ಲಕ್ಷ ರೂಪಾಯಿ ಮೊತ್ತದ ಇಡ್ಲಿ ಆರ್ಡರ್‌ ಮಾಡಿದ್ದಾರೆ ಎಂದು ಸ್ವಿಗ್ಗಿ ಹೇಳಿದೆ. ವರ್ಷಕ್ಕೆ ಆರು ಲಕ್ಷ ರೂಪಾಯಿ ವೇತನ ಇರುವವರು ಯೋಚಿಸಬೇಕಾದ ವಿಚಾರ!.

ಆ ವ್ಯಕ್ತಿಯು 8,428 ಪ್ಲೇಟ್‌ ಇಡ್ಲಿ ಆರ್ಡರ್‌ ಮಾಡಿದ್ದಾನೆ. ಎಲ್ಲವೂ ಆತನಿಗೆ ಒಬ್ಬನಿಗೆ ತಿನ್ನಲು ಅಲ್ಲ. ಆತ ತನ್ನ ಸ್ನೇಹಿತರು ಮತ್ತು ಕುಟುಂಬದ ಜತೆ ಬೆಂಗಳೂರು, ಚೆನ್ನೈ ಮುಂತಾದ ಕಡೆ ಹೋಗುವಾಗ ಬ್ರೇಕ್‌ಫಾಸ್ಟ್‌ಗೆ ಹೆಚ್ಚಾಗಿ ಇಡ್ಲಿಯೇ ಆರ್ಡರ್‌ ಮಾಡಿದ್ದು ಈ ಹೊಸ ದಾಖಲೆ ಸೃಷ್ಟಿಸಿದ್ದಾನೆ. 2022ರ ಮಾರ್ಚ್‌ 30ರಿಂದ 2023ರ ಮಾರ್ಚ್‌ 25ರವರೆಗೆ ಈತ ಇಷ್ಟೊಂದು ಇಡ್ಲಿ ಆರ್ಡರ್‌ ಮಾಡಿದ್ದಾನೆ ಎಂದು ಸ್ವಿಗ್ಗಿ ತಿಳಿಸಿದೆ.

ಸ್ವಿಗ್ಗಿ ಪ್ರಕಾರ ಮೆತ್ತಗಿನ ಇಡ್ಲಿಗೆ ಹೆಚ್ಚು ಜನರು ಆರ್ಡರ್‌ ಮಾಡುತ್ತಾನೆ. ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಹೆಚ್ಚು ಜನರು ಇಡ್ಲಿ ಆರ್ಡರ್‌ ಮಾಡುತ್ತಾರಂತೆ. ಬೆಂಗಳೂರಿನ ಜನರು ರವಾ ಇಡ್ಲಿ ಹೆಚ್ಚು ಆರ್ಡರ್‌ ಮಾಡುತ್ತಾರೆ ಎಂದು ಸ್ವಿಗ್ಗಿ ತಿಳಿಸಿದೆ. ತಮಿಳುನಾಡಿನ ಜನರಿಗೆ ತುಪ್ಪ ಹಾಕಿದ ಪುಡಿ ಇಡ್ಲಿ ಇಷ್ಟವಂತೆ. ಆಂಧ್ರಪ್ರದೇಶ ಮತ್ತು ತೆಲ್ಲಂಗಾಣದ ಜನರಿಗೂ ಪುಡಿ/ಪೊಡಿ ಇಡ್ಲಿ ಅಚ್ಚುಮೆಚ್ಚು ಎಂದು ಸ್ವಿಗ್ಗಿ ತಿಳಿಸಿದೆ.

ಬೆಂಗಳೂರು ಮತ್ತು ಚೆನ್ನೈನಲ್ಲಿ ಇಡ್ಲಿ ಆರ್ಡರ್‌ ಮಾಡಲು ಎ2bi ಅಡ್ಯಾರ್‌ ಭವನ್‌ ಹೆಚ್ಚು ಜನಪ್ರಿಯವಂತೆ. ಇದೇ ರೀತಿ ಹೈದರಾಬಾದ್‌ನಲ್ಲಿ ವರಲಕ್ಷ್ಮಿ ಟಿಫಿನ್ಸ್‌ ಮತ್ತು ಚೆನ್ನೈನಲ್ಲಿ ಸಂಗೀತಾ ವೆಜ್‌ ರೆಸ್ಟೂರೆಂಟ್‌ ಮತ್ತು ಹೈದರಾಬಾದ್‌ನಲ್ಲಿ ಉಡುಪಿ ಉಪಹಾರ ಫೇಮಸ್‌ ಎಂದು ಸ್ವಿಗ್ಗಿ ತಿಳಿಸಿದೆ.

IPL_Entry_Point