ಭಾರತ-ಪಾಕಿಸ್ತಾನಗಳ ನಡುವೆ ಯುದ್ಧವಾದರೆ ಯಾವೆಲ್ಲ ದೇಶಗಳು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಬೆಂಬಲ ನೀಡಬಹುದು? ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತ-ಪಾಕಿಸ್ತಾನಗಳ ನಡುವೆ ಯುದ್ಧವಾದರೆ ಯಾವೆಲ್ಲ ದೇಶಗಳು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಬೆಂಬಲ ನೀಡಬಹುದು? ಪಟ್ಟಿ ಇಲ್ಲಿದೆ

ಭಾರತ-ಪಾಕಿಸ್ತಾನಗಳ ನಡುವೆ ಯುದ್ಧವಾದರೆ ಯಾವೆಲ್ಲ ದೇಶಗಳು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಬೆಂಬಲ ನೀಡಬಹುದು? ಪಟ್ಟಿ ಇಲ್ಲಿದೆ

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ಯುದ್ಧವಾದರೆ ಯಾವೆಲ್ಲಾ ದೇಶಗಳು ಭಾರತ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತವೆ ಎಂಬ ಕುತೂಹಲ ಹೆಚ್ಚಾಗುತ್ತಿದೆ. ವಿಶ್ವರಾಜಕಾರಣದ ಸೂಕ್ಷ್ಮ ವಿವರಗಳು ಇಲ್ಲಿದೆ.

ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧವಾದರೆ ಯಾವೆಲ್ಲಾ ದೇಶಗಳು ಈ ಉಭಯ ದೇಶಗಳಿಗೆ ಬೆಂಬಲ ನೀಡುತ್ತವೆ ಎಂಬುದನ್ನು ನೋಡೋಣ.
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧವಾದರೆ ಯಾವೆಲ್ಲಾ ದೇಶಗಳು ಈ ಉಭಯ ದೇಶಗಳಿಗೆ ಬೆಂಬಲ ನೀಡುತ್ತವೆ ಎಂಬುದನ್ನು ನೋಡೋಣ.

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು. ಪಾಕಿಸ್ತಾನ ಬೆಂಬಲಿತ ಉಗ್ರರ ಈ ಕೃತ್ಯಕ್ಕೆ ಬಲವಾದ ಪ್ರತ್ಯುತ್ತರ ಕೊಡಲು ಇದೀಗ ಭಾರತ ಸಜ್ಜಾಗಿದೆ. ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಇವೆ ಎಂದು ಜಾಗತಿಕ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬುಧವಾರ (ಮೇ 7) ಅಣಕು ಕವಾಯತು (ಮಾಕ್ ಡ್ರಿಲ್) ನಡೆಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. 224 ಜಿಲ್ಲೆಗಳಲ್ಲಿ ಅಣಕು ಕವಾಯತು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಉಗ್ರರು ಬಲಿ ಪಡೆದ ವಿಚಾರವಾಗಿ ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಗೃಹ ಸಚಿವಾಲಯ ಈ ಅಣಕು ಕವಾಯತಿಗೆ ಸೂಚನೆ ನೀಡಿರುವುದು ಗಮನಾರ್ಹ. ಹೀಗಾಗಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಳ್ಳಲು ಸಜ್ಜಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಯಾವ ದೇಶಗಳು ಭಾರತದ ಪರ ಮತ್ತು ಯಾವ ದೇಶಗಳು ಪಾಕಿಸ್ತಾನದ ಪರ ನಿಲ್ಲಬಹುದು ಎನ್ನುವ ಚರ್ಚೆಯೂ ಚಾಲ್ತಿಗೆ ಬಂದಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನತೆಯ ನಡುವೆ ಕೆಲವೊಂದು ರಾಷ್ಟ್ರಗಳು ಶಾಂತಿಯ ಮಂತ್ರವನ್ನು ಜಪಿಸುತ್ತಿವೆ. ಶಾಂತಿ ಕಾಪಾಡಿಕೊಳ್ಳಿ, ನಿಯೋಗ ಮಟ್ಟದ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುತ್ತಿವೆ. ಆದರೆ ಕೆಲವು ರಾಷ್ಟ್ರಗಳು ಬಹಿರಂಗವಾಗಿ ಭಾರತ ಮತ್ತು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿವೆ. ಯಾವೆಲ್ಲಾ ದೇಶಗಳು ಭಾರತ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿವೆ ಎನ್ನುವುದನ್ನು ಒಮ್ಮೆ ನೋಡೋಣ.

ಪಾಕಿಸ್ತಾನಕ್ಕೆ ಚೀನಾ ಸೇರಿ ಹಲವು ದೇಶಗಳ ಬೆಂಬಲ

ತಾನು ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಸ್ನೇಹಕ್ಕೆ ಬೆಂಬಲವನ್ನು ನೀಡುತ್ತೇನೆ. ಪಹಲ್ಗಾಮ್ ಉಗ್ರರ ದಾಳಿಯ ಘಟನೆಯನ್ನು ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಒತ್ತಾಯಿಸಿರುವ ಪಾಕ್ ನಿರ್ಧಾರವನ್ನು ಬೆಂಬಲಿಸುವುದಾಗಿ ಚೀನಾ ಹೇಳಿದೆ. ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಜಿಯಾಂಗ್ ಝೈಡಾಂಗ್ ಮೇ 1 ರಂದು ಇಸ್ಲಾಮಾಬಾದ್ ನಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಈ ಮಾತುಗಳನ್ನು ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಅಂದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧವಾದರೆ ನೆರೆಯ ಚೀನಾ ತನ್ನ ಬೆಂಬಲವನ್ನು ಪಾಕಿಸ್ತಾನಕ್ಕೆ ಎಂಬುದು ಸ್ಪಷ್ಟವಾಗಿದೆ.

ಚೀನಾದ ಈ ಸಾಲಿಗೆ ಟರ್ಕಿ ಕೂಡ ಸೇರಿಕೊಂಡಿದೆ. ತಮ್ಮ ಬೆಂಬಲ ಪಾಕಿಸ್ತಾನಕ್ಕೆ ಅಂತ ಟರ್ಕಿ ಬಹಿರಂಗವಾಗಿಯೇ ಘೋಷಣೆ ಮಾಡಿದೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ಪಾಕ್ ಪ್ರಧಾನಿ ಷರೀಫ್ ಜೊತೆ ಮಾತನಾಡಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ತನ್ನ ಸೇನಾ ವಿಮಾನಗಳ ಮೂಲಕ ಪಾಕಿಸ್ತಾನಕ್ಕೆ ಶಸ್ತ್ರಾಶ್ತ್ರಗಳನ್ನು ಪೂರೈಸಿದೆ ಎಂದು ವರದಿಯಾಗಿದೆ. ಆದರೆ ತಾನು ಶಸ್ತ್ರಾಸ್ತ್ರಗಳನ್ನು ಪೂರೈಸಿಲ್ಲ ಎಂದು ಟರ್ಕಿ ಹೇಳಿಕೆ ಬಿಡುಗಡೆ ಮಾಡಿದೆ.

ಪಾಕಿಸ್ತಾನದ ಮಿತ್ರ ರಾಷ್ಟ್ರ ಅಜರ್‌ಬೈಜಾನ್ ಸಹ ಈ ಪಾಕ್ ಪರ ನಿಲ್ಲುವುದಾಗಿ ಸ್ಪಷ್ಟಪಡಿಸಿದೆ. ಪಾಕಿಸ್ತಾನ ಇಸ್ಲಾಂ ದೇಶವಾಗಿರುವುದು ಈ ಬೆಂಬಲಕ್ಕೆ ಕಾರಣ. ಈ ಮೊದಲು ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದಾಗಲೂ ತಾನು ಪಾಕ್ ಪರ ನಿಲ್ಲುವುದಾಗಿ ಅಜರ್‌ಬೈಜಾನ್ ಹೇಳಿತ್ತು. ಈ ನಡುವೆ ಮಲೆಷ್ಯಾ ಸಹ ಪಾಕಿಸ್ತಾನದ ಪರವಾಗಿ ಮೃದು ಧೋರಣೆಯ ಹೇಳಿಕೆಯನ್ನು ನೀಡುತ್ತಿದ್ದು, ‘ಯುದ್ಧದ ದಾರಿ ಸಲ್ಲದು’ ಎಂದು ಅಲ್ಲಿನ ಅಧ್ಯಕ್ಷರು ಹೇಳುತ್ತಿದ್ದಾರೆ.

ಭಾರತಕ್ಕೆ ರಷ್ಯಾ ಸೇರಿ ಹಲವು ದೇಶಗಳ ಬೆಂಬಲ

ಚೀನಾ ಸೇರಿದಂತೆ ಕೆಲವೇ ಕೆಲವು ದೇಶಗಳು ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆಂಬಲ ಘೋಷಣೆ ಮಾಡಿವೆ. ಆದರೆ ಭಾರತಕ್ಕೆ ಬೆಂಬಲ ನೀಡಿರುವ ದೊಡ್ಡ ರಾಷ್ಟ್ರಗಳ ಪಟ್ಟಿಯೇ ಇದೆ. ಭಾರತದ ಪರಮಾಪ್ತ ದೇಶ ಇಸ್ರೇಲ್ ಬಹಿರಂಗವಾಗಿಯೇ ಭಾರತಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತದಲ್ಲಿನ ಇಸ್ರೇಲ್ ರಾಯಭಾರಿ ಹಾಗೂ ಇತರೆ ಅಧಿಕಾರಿಗಳು ಪಹಲ್ಗಾಮ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿರುವ ಇಸ್ರೇಲ್ ಪ್ರಧಾನಿ, ನಾಗರಿಕರ ಸಾವಿಗೆ ಸಂತಾಪ ಸೂಚಿಸಿ, ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲಿನ ಹಮಾಸ್ ಜೊತೆ ಇಸ್ರೇಲ್ ಯುದ್ಧ ಮಾಡುತ್ತಿರುವ ನಡುವೆಯೇ ಭಾರತಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯನ್ನು ಖಂಡಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಘಟನೆಯಲ್ಲಿ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಭಾರತಲ್ಲಿ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಐರೋಪ್ಯ ಒಕ್ಕೂಟದಲ್ಲಿ ಇಟಲಿ ಪ್ರಮುಖ ದೇಶವಾಗಿದ್ದು, ಭಾರತಕ್ಕೆ ತನ್ನ ಬೆಂಬಲವನ್ನು ಘೋಷಿಸಿದೆ.

ಫ್ರಾನ್ಸ್ ಕೂಡ ಭಾರತಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದೆ. ಫ್ರಾನ್ಸ್ ಪ್ರಧಾನಿ ಇಮ್ಯಾನುವೆಲ್ ಮ್ಯಾಕ್ರನ್, ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಕಂಬನಿಯನ್ನು ಮಿಡಿದಿದ್ದು, ಭಾರತಕ್ಕೆ ಅಗತ್ಯ ಇರುವ ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಕೃತ್ಯವನ್ನು ನಡೆಸಿದವರ ವಿರದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ರಾಷ್ಟ್ರವಾಗಿರುವ ಫ್ರಾನ್ಸ್ ಜಗತ್ತಿನ ಸೂಪರ್ ಪವರ್ ದೇಶವಾಗಿದೆ. ರಕ್ಷಣಾ ವಲಯದಲ್ಲಿ ಭಾರತದ ಸ್ನೇಹ ರಾಷ್ಟ್ರವೂ ಆಗಿದೆ. ಹೀಗಾಗಿ ಫ್ರಾನ್ಸ್ ಬೆಂಬಲ ಕೂಡ ಭಾರತಕ್ಕೆ ಆನೆ ಬಲ ಬಂದಾಗಿದೆ. ಅಮೆರಿಕಾ, ರಷ್ಯಾ, ಯುಎಐಯಂತಹ ಬಲಿಷ್ಠ ರಾಷ್ಟ್ರಗಳ ಬೆಂಬಲದ ಜೊತೆಗೆ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಆಫ್ಘಾನಿಸ್ತಾನ ಹಾಗೂ ಭಾರತದ ನೆರೆಯ ಭೂತಾನ್ ಸಹ ಭಾರತದ ಪರವಾಗಿ ನಿಂತಿವೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.