ಕನ್ನಡ ಸುದ್ದಿ  /  Nation And-world  /  Imran Khan Outs List Of 3 Suspects For Attack

Imran Khan: ತನ್ನ ಮೇಲಿನ ದಾಳಿಗೆ ಸರ್ಕಾರವೇ ಕಾರಣ ಎಂದ ಇಮ್ರಾನ್ ಖಾನ್; ಹತ್ಯೆ ಯತ್ನಕ್ಕೆ ವ್ಯಾಪಕ ಖಂಡನೆ

ಗುಂಡಿನ ದಾಳಿಯಲ್ಲಿ ಪಿಟಿಐ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದು, ಪಕ್ಷದ ಮುಖಂಡರಾದ ಅಹ್ಮದ್ ಚಟ್ಟಾ ಮತ್ತು ಫೈಸಲ್ ಜಾವೇದ್ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಪಿಸ್ತೂಲ್‌ನೊಂದಿಗೆ ಶಸ್ತ್ರಸಜ್ಜಿತನಾಗಿ ಬಂದಿದ್ದ ಶಂಕಿತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ.

ಗುಂಡಿನ ದಾಳಿ ನಡೆದ ಸಂದರ್ಭದ ದೃಶ್ಯ
ಗುಂಡಿನ ದಾಳಿ ನಡೆದ ಸಂದರ್ಭದ ದೃಶ್ಯ

ಸರ್ಕಾರದ ವಿರುದ್ಧ ರ‍್ಯಾಲಿಯನ್ನು ಮುನ್ನಡೆಸುತ್ತಿದ್ದಾಗ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಾಹನದ ಮೇಲೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿರುವ ಘಟನೆ ಗುರುವಾರ ಪಾಕಿಸ್ತಾನದಲ್ಲಿ ನಡೆದಿದೆ. ಘಟನೆಯಿಂದ ಮಾಜಿ ಪ್ರಧಾನಿಗೆ ಗಾಯಗಳಾಗಿದ್ದು, ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್ ಪಟ್ಟಣದಲ್ಲಿ ಲಾಹೋರ್‌ನಿಂದ ಸುಮಾರು 100 ಕಿಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ. 70 ವರ್ಷದ ಖಾನ್, ತಮ್ಮ ಬೆಂಬಲಿಗರೊಂದಿಗೆ ರ‍್ಯಾಲಿಯ ಮೂಲಕ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದರು. ಅವಧಿಪೂರ್ವ ಚುನಾವಣೆಗಳನ್ನು ನಡೆಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಒತ್ತಡ ಹೇರಲು ಈ ರ‍್ಯಾಲಿ ನಡೆಸಲಾಗುತ್ತಿತ್ತು. ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಇತರ ನಾಯಕರು ವಾಹನದ ಮೇಲೆ ನಿಂತಿದ್ದರು. ಈ ವೇಳೆ ಗುಂಡಿನ ದಾಳಿ ನಡೆಸಿರುವುದನ್ನು ವಿಡಿಯೋ ದೃಶ್ಯಾವಳಿಯನ್ನು ನೋಡಬಹುದು.

ಖಾನ್ ಅವರ ಬಲಗಾಲಿಗೆ ಪೆಟ್ಟು ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪಿಟಿಐ ಮುಖಂಡರು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಖಾನ್ ಅವರನ್ನು ಲಾಹೋರ್‌ನ ಶೌಕತ್ ಖಾನಮ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಗಳು ತಿಳಿಸಿವೆ. ಗುಂಡು ಹಾರಿಸಿದ ಬಳಿಕ ಗಾಯಗೊಂಡ ಖಾನ್, ತಮ್ಮ ಬೆಂಬಲಿಗರತ್ತ ಕೈ ಬೀಸುತ್ತಿರುವುದನ್ನು ದೂರದರ್ಶನದ ದೃಶ್ಯಾವಳಿಗಳು ತೋರಿಸಿವೆ. ಬಳಿಕ ಅವರನ್ನು ಬುಲೆಟ್ ಪ್ರೂಫ್ ಟ್ರಕ್‌ ಮೂಲಕ ಅವರನ್ನು ಸಾಗಿಸಲಾಯಿತು.

ಗುಂಡಿನ ದಾಳಿಯಲ್ಲಿ ಪಿಟಿಐ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದು, ಪಕ್ಷದ ಮುಖಂಡರಾದ ಅಹ್ಮದ್ ಚಟ್ಟಾ ಮತ್ತು ಫೈಸಲ್ ಜಾವೇದ್ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಪಿಸ್ತೂಲ್‌ನೊಂದಿಗೆ ಶಸ್ತ್ರಸಜ್ಜಿತನಾಗಿ ಬಂದಿದ್ದ ಶಂಕಿತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ.

“ಇದು ಸ್ಪಷ್ಟವಾಗಿ ಹತ್ಯೆಯ ಪ್ರಯತ್ನವಾಗಿತ್ತು. ಖಾನ್‌ ಅವರಿಗೆ ಗಾಯಗಳಾದರೂ, ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಸಾಕಷ್ಟು ರಕ್ತಸ್ರಾವವಾಗಿದೆ” ಎಂದು ಪಿಟಿಐ ನಾಯಕ ಫವಾದ್ ಚೌಧರಿ ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಮತ್ತೊಬ್ಬ ಪಿಟಿಐ ನಾಯಕ ಫೈಸಲ್ ಸುಲ್ತಾನ್ ಮಾತನಾಡಿ, ಖಾನ್‌ ಅವರ ಕಾಲಿನಲ್ಲಿ ಗುಂಡುಗಳ ಚೂರುಗಳು ಮತ್ತು ಅವನ ಮೊಣಕಾಲಿನಲ್ಲಿ ಚಿಪ್ ಇರುವುದನ್ನು ಎಕ್ಸ್ ರೇಗಳಿಂದ ಬಹಿರಂಗವಾಗಿವೆ.

ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ತಕ್ತವಾಗಿದೆ. ಪಾಕ್‌ ಪ್ರಧಾನಿ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಾಯಕ ಆಸಿಫ್ ಅಲಿ ಜರ್ದಾರಿ ಅವರಂತಹ ನಾಯಕರು ದಾಳಿಯನ್ನು ಖಂಡಿಸಿದ್ದಾರೆ. ಇನ್ನೊಂದೆಡೆ ಇಮ್ರಾನ್ ಅಸದ್ ಉಮರ್ ಅವರು ಪ್ರಧಾನಿ ಷರೀಫ್, ಪಿಎಂಎಲ್-ಎನ್ ನಾಯಕ ಮತ್ತು ಫೆಡರಲ್ ಆಂತರಿಕ ಸಚಿವ ರಾಣಾ ಸನಾವುಲ್ಲಾ ಮತ್ತು ಮೇಜರ್ ಜನರಲ್ ಎಂಬ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ) ಅಧಿಕಾರಿ ಫೈಸಲ್ ನಸೀರ್ ಎಂಬವರು ಈ ಹತ್ಯೆಯ ಹಿಂದಿದ್ದಾರೆ ಎಂದು ದೂಷಿಸಿದ್ದಾರೆ.

ತನಗೆ ದೊರೆತ ಮಾಹಿತಿಯ ಆಧಾರದ ಮೇಲೆ ತಾನು ಆರೋಪ ಮಾಡಿದ್ದೇನೆ ಎಂದು ಖಾನ್ ಹೇಳಿರುವುದಾಗಿ ಉಮರ್ ಉಲ್ಲೇಖಿಸಿದ್ದಾರೆ. ಅವರು ವಿವರ ನೀಡಿಲ್ಲ. ಖಾನ್ ಅವರ ಇತ್ತೀಚಿನ ಹಲವಾರು ಸಾರ್ವಜನಿಕ ಭಾಷಣಗಳಲ್ಲಿ ಇಬ್ಬರು ಸೇನಾ ಅಧಿಕಾರಿಗಳಾದ ಆಂತರಿಕ ಭದ್ರತೆಯ ಜವಾಬ್ದಾರಿ ಹೊಂದಿರುವ ISIನ ಸಿ ನಿರ್ದೇಶನಾಲಯದ ಮುಖ್ಯಸ್ಥರಾದ ನಾಸೀರ್ ಮತ್ತು ಇಸ್ಲಾಮಾಬಾದ್‌ನ ಸೆಕ್ಟರ್ ಕಮಾಂಡರ್ ಬ್ರಿಗ್ ಫಹೀಮ್ ರಜಾ ಅವರನ್ನು ಗುರಿಯಾಗಿಸಿದ್ದಾರೆ.

2018ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಖಾನ್ ಅವರು ಅಧಿಕಾರಕ್ಕೆ ಬಂದಾಗ, ಮಿಲಿಟರಿಯ ಪ್ರೋತ್ಸಾಹದಿಂದ ಪ್ರಯೋಜನ ಪಡೆದರು. ಆದರೆ ಏಪ್ರಿಲ್‌ನಲ್ಲಿ ನಡೆದ ಅವಿಶ್ವಾಸ ನಿರ್ಣಯದಲ್ಲಿ ಅವರನ್ನು ಪದಚ್ಯುತಗೊಳಿಸಿದ ಬಳಿಕ ಪ್ರಬಲ ಪಾಕಿಸ್ತಾನ ಸೇನೆಯೊಂದಿಗಿನ ಅವರ ಸಂಬಂಧ ಹದಗೆಟ್ಟಿತು.

ಇನ್ನು ನಿನ್ನೆಯ ದಾಳಿ ಘಟನೆಯನ್ನು ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಖಾನ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. "ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಯ ಕುರಿತು ತಕ್ಷಣ ವರದಿ ನೀಡುವಂತೆ ಗೃಹ ಸಚಿವರಿಗೆ ಸೂಚಿಸಿದ್ದೇನೆ. ಪಿಟಿಐ ಅಧ್ಯಕ್ಷರು ಮತ್ತು ಇತರ ಗಾಯಾಳುಗಳ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆʼ ಎಂದು ಶೆಹಬಾಜ್ ಷರೀಫ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಘಟನೆ ಬಗ್ಗೆ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪಾಕಿಸ್ತಾನದಲ್ಲಿನ ಬೆಳವಣಿಗೆಗಳ ಮೇಲೆ ಭಾರತವು ನಿಗಾ ಇರಿಸುತ್ತಿದೆ ಎಂದು ಹೇಳಿದ್ದಾರೆ.

IPL_Entry_Point