ಕನ್ನಡ ಸುದ್ದಿ  /  Nation And-world  /  Independence Day 2022: Draping Indian Flag On Car, Bike Boat Aircraft Punishment And Jail In India

Independence Day 2022: ಕಾರು, ಬೈಕ್‌ ಸೇರಿದಂತೆ ವಾಹನಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದರೆ ಜೈಲು ಶಿಕ್ಷೆ?

ಕಾರು, ಬೈಕ್‌ ಸೇರಿದಂತೆ ವಾಹನಗಳ ಮೇಲೆ ರಾಷ್ಟ್ರಧ್ವಜ ಬಳಕೆ ಮಾಡಬಹುದೇ ಎನ್ನುವ ಪ್ರಶ್ನೆಯೂ ಹಲವರಲ್ಲಿದೆ. ಭಾರತದ ಫ್ಲಾಗ್‌ ಕೋಡ್‌ (Flag Code of India) ಪ್ರಕಾರ ರಾಷ್ಟ್ರಧ್ವಜವನ್ನು ವಾಹನಗಳಿಗೆ ಹೊದಿಸುವುದು ತಪ್ಪು, ಈ ರೀತಿ ಮಾಡಿದರೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.

ಸಾಂದರ್ಭಿಕ ಚಿತ್ರ (PTI Photo/Manvender Vashist Lav)(PTI08_13_2022_000255A)
ಸಾಂದರ್ಭಿಕ ಚಿತ್ರ (PTI Photo/Manvender Vashist Lav)(PTI08_13_2022_000255A) (PTI)

ಬೆಂಗಳೂರು: ದೇಶಾದ್ಯಂತ ಈಗ ಹರ್‌ ಘರ್‌ ತಿರಂಗ, ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹರ್‌ ಘರ್‌ ತಿರಂಗಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ದೊರಕಿದೆ. ಇಂತಹ ಸಮಯದಲ್ಲಿ ಕಾರು, ಬೈಕ್‌ ಸೇರಿದಂತೆ ವಾಹನಗಳ ಮೇಲೆ ರಾಷ್ಟ್ರಧ್ವಜ ಬಳಕೆ ಮಾಡಬಹುದೇ ಎನ್ನುವ ಪ್ರಶ್ನೆಯೂ ಹಲವರಲ್ಲಿದೆ. ಭಾರತದ ಫ್ಲಾಗ್‌ ಕೋಡ್‌ (Flag Code of India) ಪ್ರಕಾರ ರಾಷ್ಟ್ರಧ್ವಜವನ್ನು ವಾಹನಗಳಿಗೆ ಹೊದಿಸುವುದು ತಪ್ಪು, ಈ ರೀತಿ ಮಾಡಿದರೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.

ಭಾರತದ ಫ್ಲಾಗ್‌ ಕೋಡ್‌ ಪ್ರಕಾರ, ಭಾರತೀಯ ರಾಷ್ಟ್ರ ಧ್ವಜವನ್ನು ವಾಹನದ, ರೈಲಿನ, ದೋಣಿ ಅಥವಾ ವಿಮಾನದ ಯಾವುದೇ ಬದಿಗಳಲ್ಲಿ, ವುಡ್‌ನಲ್ಲಿ ಅಥವಾ ವಾಹನಗಳ ಹಿಂಭಾಗದಲ್ಲಿ ಹೊದಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಭಾರತೀಯ ರಾಷ್ಟ್ರ ಧ್ವಜಕ್ಕೆ ಅಗೌರವ ಎಂದು ಪರಿಗಣಿಸಲಾಗುತ್ತದೆ. ಫ್ಲಾಗ್‌ ಕೋಡ್‌ ಇಂಡಿಯಾ (Flag Code of India)ದನ್ವಯ ಇದನ್ನು ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವೆಂದೇ ಭಾವಿಸಲಾಗುತ್ತದೆ.

ಈ ರೀತಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಇವೆರಡನ್ನೂ ವಿಧಿಸಲು ಅವಕಾಶವಿದೆ. ಹೀಗಾಗಿ, ಹರ್‌ ಘರ್‌ ಅಭಿಯಾನದ ಉತ್ಸಾಹದಲ್ಲಿ ವಾಹನದ ಮೇಲೆ ಭಾರತದ ರಾಷ್ಟ್ರ ಧ್ವಜವನ್ನು ಕಟ್ಟುವುದು, ಹೊದೆಸುವುದು ಮಾಡಬೇಡಿ. ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬಹುದು.

ಯಾರು ಮೋಟಾರ್‌ ಕಾರುಗಳಲ್ಲಿ ರಾಷ್ಟ್ರ ಧ್ವಜ ಬಳಸಬಹುದು?

ವಾಹನಗಳಲ್ಲಿ ರಾಷ್ಟ್ರಧ್ವಜ ಹೊದಿಸಬಾರದು ಎಂಬ ಈ ನಿಯಮವು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು ಸೇರಿದಂತೆ ಪ್ರಮುಖರಿಗೆ ಅನ್ವಯವಾಗುವುದಿಲ್ಲ. ಈ ಫ್ಲಾಗ್‌ ಕೋಡ್‌ ಯಾರಿಗೆ ಅನ್ವಯವಾಗುವುದಿಲ್ಲ ಎಂದು ಈ ಮುಂದೆ ಮಾಹಿತಿ ನೀಡಲಾಗಿದೆ.

- ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ

- ಗವರ್ನರ್‌ ಮತ್ತು ಲೆಫ್ಟಿನೆಂಟ್‌ ಗವರ್ನರ್‌

- ಪ್ರಧಾನ ಮಂತ್ರಿ ಮತ್ತು ಇತರೆ ಕ್ಯಾಬಿನೆಟ್‌ ಮಂತ್ರಿಗಳು

- ಕೇಂದ್ರದಲ್ಲಿರುವ ರಾಜ್ಯ ಸಚಿವರುಗಳು

- ಮುಖ್ಯಮಂತ್ರಿಗಳು ಮತ್ತು ಕ್ಯಾಬಿನೆಟ್‌ ಮಂತ್ರಿಗಳು

-ಲೋಕ ಸಭೆ ಸ್ಪೀಕರ್‌ಗಳು

-ರಾಜ್ಯಸಭೆಯ ಉಪ ಚೇರ್ಮನ್‌ ಮತ್ತು ಲೋಕಸಭೆಯ ಡೆಪ್ಯುಟಿ ಸ್ಪೀಕರ್‌

- ವಿದೇಶದಲ್ಲಿರುವ ಭಾರತೀಯ ಸ್ಪೀಕರ್‌ಗಳು

- ಲೆಜಿಸ್ಲೇಟಿವ್‌ ಅಸೆಂಬ್ಲಿ ಮತ್ತು ಕೌನ್ಸಿಲ್‌ಗಳ ಸ್ಪೀಕರ್‌ಗಳು

- ಚೀಫ್‌ ಜಸ್ಟೀಸ್‌ ಆಫ್‌ ಇಂಡಿಯಾ, ಜಡ್ಜಸ್‌ ಆಫ್‌ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ನ ಚೀಫ್‌ ಜಸ್ಟೀಸ್‌ ಮತ್ತು ಜಡ್ಜ್‌ಗಳ ವಾಹನಗಳಲ್ಲಿ ರಾಷ್ಟ್ರಧ್ವಜದ ಬಳಕೆಗೆ ಅನುಮತಿ ಇದೆ ಎಂದು ಲಾಟ್ರೆಂಡ್‌ ವೆಬ್‌ ತಾಣ ಮಾಹಿತಿ ನೀಡಿದೆ.

ರಾಷ್ಟ್ರಧ್ವಜದ ಪ್ರದರ್ಶನ, ಹಾರಿಸುವಿಕೆ ಮತ್ತು ಬಳಕೆಯನ್ನು ಭಾರತದ ಧ್ವಜ ಸಂಹಿತೆ 2002 (Flag Code of India) ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ-1971ರ ಮೂಲಕ ನಿಯಂತ್ರಿಸಲಾಗುತ್ತದೆ.

ಇತ್ತೀಚಿನ ತಿದ್ದುಪಡಿಯಲ್ಲಿ ವಾಹನಗಳ ಉಲ್ಲೇಖವಿಲ್ಲ

ಅಜಾದಿ ಕ ಅಮೃತ ಮಹೋತ್ಸವಕ್ಕಾಗಿ ಭಾರತದ ರಾಷ್ಟ್ರಧ್ವಜ ಕಾಯಿದೆಯಲ್ಲಿ ಬದಲಾವಣೆ ಮಾಡಲಾಗಿದೆ ಅಲ್ವಾ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆದರೆ, ಇದರಲ್ಲಿ ವಾಹನಗಳಿಗೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ತಿದ್ದುಪಡಿ ಪ್ರಕಾರ ಮುಂದಿನ ದಿನಗಳಲ್ಲಿ ದೇಶದಲ್ಲಿ ಹಗಲು ಹೊತ್ತಿನಲ್ಲಿ ಮಾತ್ರವಲ್ಲದೆ, ರಾತ್ರಿ ವೇಳೆಯೂ ದೇಶದ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ನೀಡಲಾಗಿದೆ.

ಹರ್ ಘರ್ ತಿರಂಗಾ ಅಭಿಯಾನದಡಿ ಆಗಸ್ಟ್ 13ರಿಂದ 15ರವರೆಗೆ ದೇಶದ ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸುಲಭವಾಗುವಂತೆ ಕೇಂದ್ರ ಸರ್ಕಾರವು ಹೊಸ ಕ್ರಮ ಜಾರಿಗೆ ತಂದಿದೆ. ತ್ರಿವರ್ಣ ಧ್ವಜವನ್ನು ಹಾರಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತದ ಧ್ವಜ ಸಂಹಿತೆ -2002 ಅನ್ನು ತಿದ್ದುಪಡಿ ಮಾಡಿದ್ದು, ಸಾರ್ವಜನಿಕರು ಹಗಲು ಮತ್ತು ರಾತ್ರಿ ವೇಳೆಯೂ ಧ್ವಜ ಹಾರಿಸಲು ಅವಕಾಶ ನೀಡಲಾಗಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಧ್ವಜಗಳನ್ನು ಯಂತ್ರದಿಂದ ತಯಾರಿಸಲು ಮತ್ತು ಪಾಲಿಯೆಸ್ಟರ್‌ನಿಂದ ತಯಾರಿಸಲು ಸರ್ಕಾರ ಅನುಮತಿ ನೀಡಿತ್ತು. ರಾಷ್ಟ್ರಧ್ವಜವನ್ನು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಬಹುದು. ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ ಖಾದಿಯಿಂದಲೂ ಮಾಡಬಹುದು ಎಂದು ತಿದ್ದುಪಡಿ ಮಾಡಲಾಗಿತ್ತು.

ವಿಭಾಗ