Rajnath Singh: ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಭಾರತದ ಬಯಕೆ: ರಾಜನಾಥ್‌ ಸಿಂಗ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajnath Singh: ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಭಾರತದ ಬಯಕೆ: ರಾಜನಾಥ್‌ ಸಿಂಗ್‌

Rajnath Singh: ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಭಾರತದ ಬಯಕೆ: ರಾಜನಾಥ್‌ ಸಿಂಗ್‌

ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ ಭಾಗದ ನಿರ್ಮಾಣ ಭಾರತದ ಬಯಕೆಯಾಗಿದ್ದು, ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವ ಭಾರತದ ಬದ್ಧತೆ ಎದ್ದು ಕಾಣುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿ ನಡೆದ 9ನೇ ಆಸಿಯಾನ್ ರಕ್ಷಣಾ ಮಂತ್ರಿಗಳ ಸಭೆ(ADMM) ಪ್ಲಸ್ ಅನ್ನು ಉದ್ದೇಶಿಸಿ ರಾಜನಾಥ್‌ ಸಿಂಗ್‌ ಮಾತನಾಡಿದರು.

ಎಡಿಎಂಎಂ ಸಭೆಯಲ್ಲಿ ರಾಜನಾಥ್‌ ಸಿಂಗ್
ಎಡಿಎಂಎಂ ಸಭೆಯಲ್ಲಿ ರಾಜನಾಥ್‌ ಸಿಂಗ್ (PTI)

ಸೀಮ್ ರೀಪ್‌: ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ ಭಾಗದ ನಿರ್ಮಾಣ ಭಾರತದ ಬಯಕೆಯಾಗಿದ್ದು, ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವ ಭಾರತದ ಬದ್ಧತೆ ಎದ್ದು ಕಾಣುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿ ನಡೆದ 9ನೇ ಆಸಿಯಾನ್ ರಕ್ಷಣಾ ಮಂತ್ರಿಗಳ ಸಭೆ(ADMM) ಪ್ಲಸ್ ಅನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್‌ ಸಿಂಗ್‌, ನಂಬಿಕೆ ಮತ್ತು ವಿಶ್ವಾಸವನ್ನು ಕುಗ್ಗಿಸುವ ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹಾಳು ಮಾಡುವ ಕ್ರಮಗಳ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದು ಹೇಳಿದರು.

ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವ ಮೂಲಕ, ವಿವಾದಗಳನ್ನು ಮಾತುಕತೆಯ ಮೂಲಕ ಮತ್ತು ಅಂತರರಾಷ್ಟ್ರೀಯ ಚೌಕಟ್ಟಿನ ಅಡಿಯಲ್ಲಿ ಶಾಂತಿಯುತವಾಗಿ ಪರಿಹರಿಸಲು ನಾವು ಒತ್ತು ನೀಡಬೇಕು. ವಿವಾದಿತ ದಕ್ಷಿಣ ಚೀನಾ ಸಮುದ್ರದ ದೊಡ್ಡ ಭಾಗಗಳನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತಿದ್ದು, ಈ ಪ್ರದೇಶದಲ್ಲಿ ಅದರ ಆಕ್ರಮಣಕಾರಿ ನಡೆಗಳು ಉದ್ವಿಗ್ನತೆಯನ್ನು ಹೆಚ್ಚಿಸುವ ಅಪಾಯದ ಬಗ್ಗೆ ರಾಜನಾಥ್‌ ಸಿಂಗ್‌ ಇದೇ ವೇಳೆ ಎಚ್ಚರಿಸಿದರು.

ಭಾರತವು ಇಂಡೋ-ಪೆಸಿಫಿಕ್ ಭಾಗದಲ್ಲಿ ನ್ಯಾವಿಗೇಷನ್ ಮತ್ತು ಓವರ್‌ಫ್ಲೈಟ್ ಸ್ವಾತಂತ್ರ್ಯ, ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ ಚಟುವಟಿಕೆ, ಸಮುದ್ರ ವಿವಾದಗಳ ಶಾಂತಿಯುತ ಇತ್ಯರ್ಥ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಬದ್ಧತೆಯನ್ನು ಬಯಸುತ್ತದೆ ಎಂದು ರಾಜನಾಥ್‌ ಸಿಂಹ್‌ ಸ್ಪಷ್ಟಪಡಿಸಿದರು.

ದಕ್ಷಿಣ ಚೀನಾ ಸಮುದ್ರದಲ್ಲಿನ ನೀತಿ ಸಂಹಿತೆಯ ಕುರಿತು ನಡೆಯುತ್ತಿರುವ ಮಾತುಕತೆಗಳು, ಅಂತರಾಷ್ಟ್ರೀಯ ಕಾನೂನಿಗೆ ಅದರಲ್ಲೂ ನಿರ್ದಿಷ್ಟವಾಗಿ UNCLOSಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂದು ನಾವು ಭಾವಿಸುತ್ತೇವೆ. ಈ ಚರ್ಚೆಗಳಲ್ಲಿ ಭಾಗವಹಿಸದ ರಾಷ್ಟ್ರಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಪೂರ್ವಾಗ್ರಹ ಮಾಡಬಾರದು ಎಂಬುದು ನಮ್ಮ ಆಶಯ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಭಾರತವು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ನಡೆಗಳ ಮೇಲೆ ನಿಗಾ ಇರಿಸಿದೆ. ಚೀನಾದ ನೌಕಾಪಡೆಯು ಹಿಂದೂ ಮಹಾಸಾಗರಕ್ಕೆ ದಾರಿ ಮಾಡಿಕೊಡದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲಿ ಯುದ್ಧಕ್ಕೆ ಸಿದ್ಧವಾಗಿರುವ ಭಾರತೀಯ ಯುದ್ಧನೌಕೆಗಳು ಯಾವುದೇ ಅಪಾಯವನ್ನು ಎದುರಿಸಲಿ ರಾತ್ರಿಯಿಡೀ ಕಣ್ಗಾವಲು ನಡೆಸುತ್ತಿವೆ.

ಕಳೆದ ವರ್ಷ ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್‌ನ ಕಮಾಂಡರ್ ಅಡ್ಮಿರಲ್ ಫಿಲ್ ಡೇವಿಡ್ಸನ್, ಆಕ್ರಮಣಕಾರಿ ಚೀನೀ ನೌಕಾ ಕ್ರಮಗಳು ಪ್ರಮುಖ ಸವಾಲಾಗಿದೆ ಎಂದು ಹೇಳಿದ್ದರು. ಇಂಡೋ-ಪೆಸಿಫಿಕ್ ಪ್ರದೇಶವು ಚೀನಾದ ಸರ್ವಾಧಿಕಾರಿ ಬಿಗಿ ದೃಷ್ಟಿಕೋನ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಕಲ್ಪನೆಯ ನಡುವೆ ಹೋಯ್ದಾಟದಲ್ಲಿದೆ ಎಂದು ಡೇವಿಡ್ಸನ್ ಮಾರ್ಮಿಕವಾಗಿ ನುಡಿದಿದ್ದರು.

ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು, ಜಪಾನ್‌ನ ಕರಾವಳಿಯಲ್ಲಿ ನಡೆಸಿದ ಮಲಬಾರ್ ಮಿಲಿಟರಿ ವ್ಯಾಯಾಮ ಮುಕ್ತಾಯಗೊಳ್ಳುತ್ತಿದ್ದಂತೇ, ಎಡಿಎಂಎಂ-ಪ್ಲಸ್ ಸಭೆ ನಡೆದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಅಲ್ಲದೇ ಚೀನಾದ ಯುದ್ಧ ಯುದ್ಧ ನೌಕೆಗಳು ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಕ್ಕೆ ಮುನ್ನುಗ್ಗುತ್ತಿರುವ ಈ ಸನ್ನಿವೇಶದಲ್ಲಿ, ಎಡಿಎಂಎಂ-ಪ್ಲಸ್ ಸಭೆ ಆಯೋಜನೆ ಮಾಡಲಾಗಿದೆ.

"ಆಸಿಯಾನ್‌ ಸದಸ್ಯ ರಾಷ್ಟ್ರಗಳು ಮತ್ತು ಪ್ರಮುಖ ಅತಿಥಿ ರಾಷ್ಟ್ರಗಳು ಎಡಿಎಂಎಂ-ಪ್ಲಸ್‌ನ್ನು, ಪ್ರಾದೇಶಿಕ ಭದ್ರತೆಯ ವೇದಿಕೆಯಾಗಿ ಪರಿಗಣಿಸಬಹುದು. ನಾವು ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಭಾಗವನ್ನು ಹೊಂದಿದ್ದೇವೆ ಎಂಬುದನ್ನು ನಾವು ಮರೆಯಬಾರದು ಎಂದು ರಾಜನಾಥ್‌ ಸಿಂಗ್‌ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.

ದೇಶೀಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯು ಅಂತರಾಷ್ಟ್ರೀಯ ಸಮುದಾಯದಿಂದ ತುರ್ತು ಮತ್ತು ದೃಢವಾದ ಹಸ್ತಕ್ಷೇಪದ ಅಗತ್ಯವಿರುವ ಗಂಭೀರ ಬೆದರಿಕೆಯಾಗಿದೆ. ಭಯೋತ್ಪಾದನೆಯು ಜಾಗತಿಕವಾಗಿ ಬಲಿಪಶುಗಳನ್ನು ಕಂಡುಕೊಂಡಿರುವುದರಿಂದ ಉದಾಸೀನತೆಯು ಈ ಸಮಸ್ಯೆಗೆ ಪ್ರತಿಕ್ರಿಯೆಯಾಗುವುದು ಸಾಧ್ಯವಿಲ್ಲ ಎಂದು ರಾಜನಾಥ್‌ ಸಿಂಗ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಭೌಗೋಳಿಕ-ರಾಜಕೀಯ ಮತ್ತು ಆರ್ಥಿಕ ಪರಿಭಾಷೆಯಲ್ಲಿ ಸಮಕಾಲೀನ ಪ್ರಪಂಚದ ಬೆಳೆಯುತ್ತಿರುವ ವಾಸ್ತವಗಳು, ಭಾರತೀಯ ಮತ್ತು ಪೆಸಿಫಿಕ್ ಮಹಾಸಾಗರಗಳ ಸಂಗಮದ ಅಗತ್ಯವನ್ನು ಒತ್ತಿಹೇಳುತ್ತವೆ ಎಂದು ರಾಜನಾಥ್‌ ಸಿಂಗ್‌ ಹೇಳಿರುವುದು ಗಮನ ಸೆಳೆದಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.