ಯುದ್ಧ ಭೀತಿ ಅಂತ್ಯ, ಕೊನೆಗೂ ಕದನ ವಿರಾಮಕ್ಕೆ ಒಪ್ಪಿದ ಭಾರತ ಮತ್ತು ಪಾಕಿಸ್ತಾನ; ಅಮೆರಿಕ ಮಧ್ಯಪ್ರವೇಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುದ್ಧ ಭೀತಿ ಅಂತ್ಯ, ಕೊನೆಗೂ ಕದನ ವಿರಾಮಕ್ಕೆ ಒಪ್ಪಿದ ಭಾರತ ಮತ್ತು ಪಾಕಿಸ್ತಾನ; ಅಮೆರಿಕ ಮಧ್ಯಪ್ರವೇಶ

ಯುದ್ಧ ಭೀತಿ ಅಂತ್ಯ, ಕೊನೆಗೂ ಕದನ ವಿರಾಮಕ್ಕೆ ಒಪ್ಪಿದ ಭಾರತ ಮತ್ತು ಪಾಕಿಸ್ತಾನ; ಅಮೆರಿಕ ಮಧ್ಯಪ್ರವೇಶ

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಭೀತಿ ಕೊನೆಗೂ ಶಮನವಾಗಿದೆ. ಎರಡೂ ರಾಷ್ಟ್ರಗಳು ಕದನ ವಿರಾಮ ಘೋಷಿಸಿದ್ದು, ಅಮೆರಿಕ ಮಧ್ಯಸ್ಥಿಕೆ ವಹಿಸಿದೆ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12ರಂದು ಮತ್ತೆ ಮಾತನಾಡಲಿದ್ದಾರೆ .

ಯುದ್ಧ ಭೀತಿ ಅಂತ್ಯ, ಕೊನೆಗೂ ಕದನ ವಿರಾಮಕ್ಕೆ ಒಪ್ಪಿದ ಭಾರತ ಮತ್ತು ಪಾಕಿಸ್ತಾನ (ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ಕಡೆಗೆ ಭದ್ರತಾ ಅಧಿಕಾರಿಯೊಬ್ಬರು ಕಾವಲು ಕಾಯುತ್ತಿರುವ ಫೋಟೋ)
ಯುದ್ಧ ಭೀತಿ ಅಂತ್ಯ, ಕೊನೆಗೂ ಕದನ ವಿರಾಮಕ್ಕೆ ಒಪ್ಪಿದ ಭಾರತ ಮತ್ತು ಪಾಕಿಸ್ತಾನ (ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ಕಡೆಗೆ ಭದ್ರತಾ ಅಧಿಕಾರಿಯೊಬ್ಬರು ಕಾವಲು ಕಾಯುತ್ತಿರುವ ಫೋಟೋ) (PTI)

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಮಧ್ಯಪ್ರವೇಶಿಸಿರುವ ಅಮೆರಿಕ, ಉಭಯ ರಾಷ್ಟ್ರಗಳನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಸುದೀರ್ಘ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನ ತಕ್ಷಣವೇ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಸಂಪೂರ್ಣವಾಗಿ ಕದನ ವಿರಾಮ ಘೋಷಣೆಯಾಗಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪುವುದರೊಂದಿಗೆ ಎರಡು ರಾಷ್ಟ್ರಗಳ ನಡುವೆ ಯುದ್ಧದ ಭೀತಿ ಅಂತ್ಯವಾಗಿದೆ. ಕಳೆದ ಕೆಲವು ದಿನಗಳಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದ್ದು, ಕದನ ವಿರಾಮದೊಂದಿಗೆ ದೊಡ್ಡ ಭೀತಿ ಅಂತ್ಯವಾಗಿದೆ. ಸಂಘರ್ಷವನ್ನು ಪರಿಹರಿಸುವಲ್ಲಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಕ್ಕಾಗಿ ಎರಡೂ ದೇಶಗಳನ್ನು ಟ್ರಂಪ್‌ ಅಭಿನಂದಿಸಿದ್ದಾರೆ.

"ಅಮೆರಿಕದ ಮಧ್ಯಸ್ಥಿಕೆಯಲ್ಲಿ ಸುದೀರ್ಘ ರಾತ್ರಿಯ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನವು ಸಂಪೂರ್ಣವಾಗಿ ಮತ್ತು ತಕ್ಷಣದಿಂದಲೇ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಬುದ್ಧಿವಂತಿಕೆ ಪ್ರದರ್ಶಿಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು" ಎಂದು ಟ್ರಂಪ್‌ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರ ಟ್ವೀಟ್‌ ಬೆನ್ನಲ್ಲೇ ಭಾರತದ ಕಡೆಯಿಂದಲೂ ಸ್ಪಷ್ಟನೆ ಸಿಕ್ಕಿದೆ. ಇಂದು (ಮೇ 10) ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.

"ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಇಂದು ಮಧ್ಯಾಹ್ನ 3:35ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದ್ದರು. ಇಂದು ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂ ಮತ್ತು ವಾಯು ಮತ್ತು ಸಮುದ್ರ ಮಾರ್ಗದಲ್ಲಿ ಸೇರಿದಂತೆ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಎರಡು ದೇಶಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ತಿಳುವಳಿಕೆಯನ್ನು ಜಾರಿಗೆ ತರಲು ಎರಡೂ ಕಡೆಯಿಂದ ಸೂಚನೆ ನೀಡಲಾಗಿದೆ. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12ರಂದು ಮತ್ತೆ ಮಾತುಕತೆಗೆ ನಿರ್ಧರಿಸಲಾಗಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.

ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯ ಬೆನ್ನಲ್ಲೇ ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ದೃಢಪಡಿಸಿದ್ದಾರೆ. "ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳದೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಶ್ರಮಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.