ಜಪಾನ್ ಅನ್ನು ಹಿಂದಿಕ್ಕಿತು ಭಾರತ, 4 ಲಕ್ಷ ಕೋಟಿ ಡಾಲರ್ ಅರ್ಥ ವ್ಯವಸ್ಥೆಯಾಗಿ ನಾಲ್ಕನೇ ಸ್ಥಾನಕ್ಕೆ ಬಂತು ನಮ್ಮದೇಶ
ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆ. ಜಪಾನ್ ದೇಶವನ್ನು ಹಿಂದಿಕ್ಕಿದ ಭಾರತದ ಅರ್ಥ ವ್ಯವಸ್ಥೆಯ ಮೌಲ್ಯ 4 ಲಕ್ಷ ಕೋಟಿ ಡಾಲರ್. ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಇದನ್ನು ಖಚಿತಪಡಿಸಿದ್ದಾರೆ. ಇಲ್ಲಿದೆ ಅದರ ವಿವರ.

ಭಾರತ ಈಗ ಜಗತ್ತಿನ ನಾಲ್ಕನೇ ಅತಿದೊಡ್ಡ ಅರ್ಥ ವ್ಯವಸ್ಥೆ. ಭಾರತದ ಆರ್ಥಿಕ ವ್ಯವಸ್ಥೆ ಈಗ 4 ಲಕ್ಷ ಕೋಟಿ ಡಾಲರ್ ಗಡಿ ದಾಟಿದೆ. ಜಪಾನ್ ಆರ್ಥಿಕ ವ್ಯವಸ್ಥೆಯನ್ನು ಹಿಂದಿಕ್ಕಿದ ಭಾರತ ಈಗ ಜಗತ್ತಿನ ನಾಲ್ಕನೇ ಅರ್ಥ ವ್ಯವಸ್ಥೆಯಾಗಿ ವಿರಾಜಮಾನವಾಗಿದೆ. ಅಮೆರಿಕ, ಚೀನಾ ಮತ್ತು ಜರ್ಮನಿ ಈ ಮೂರು ರಾಷ್ಟ್ರಗಳು ಸದ್ಯ ಜಗತ್ತಿನ ಮುಂಚೂಣಿ ಆರ್ಥಿಕತೆಗಳು ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ ಅಧಿಕೃತವಾಗಿ ಘೋಷಿಸಿದರು. ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದರು.
4 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆ 4ನೇ ಸ್ಥಾನಕ್ಕೇರಿತು ಭಾರತ
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ದತ್ತಾಂಶವನ್ನು ಉಲ್ಲೇಖಿಸಿದ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ, ಜಾಗತಿಕ ಆರ್ಥಿಕ ವ್ಯವಸ್ಥೆ ಗಮನಿಸುವಾಗ ಜಪಾನ್ ದೇಶದ ಆರ್ಥಿಕ ವ್ಯವಸ್ಥೆಯನ್ನು ಭಾರತ ಹಿಂದಿಕ್ಕಿರುವುದು ಖಚಿತವಾಗಿದೆ. ಈಗ ನಾವು ಮಾತನಾಡುತ್ತಿರುವ ಸಂದರ್ಭದಲ್ಲಿ, ನಾವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ದಾಖಲಾಗಿದ್ದೇವೆ. ನಮ್ಮ ಆರ್ಥಿಕ ವ್ಯವಸ್ಥೆಯ ಮೌಲ್ಯ ಈಗ 4 ಲಕ್ಷ ಕೋಟಿ ಡಾಲರ್. ಒಂದೊಮ್ಮೆ ನಾವು ಯೋಜಿತ ರೀತಿಯಲ್ಲೇ ಮುನ್ನಡೆದರೆ ಇನ್ನು ಎರಡೂವರೆ ಅಥವಾ ಮೂರು ವರ್ಷದೊಳಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ವಿರಾಜಮಾನವಾಗುತ್ತದೆ ಎಂದು ಸುದ್ಧಿಗೋಷ್ಠಿಯಲ್ಲಿ ಹೇಳಿದರು.
ಆಪಲ್ ಐಫೋನ್‌ಗಳನ್ನು ಭಾರತದಲ್ಲಿ ಅಥವಾ ಬೇರೆಡೆ ಉತ್ಪಾದಿಸುವ ಬದಲು ಅಮೆರಿಕದಲ್ಲೇ ಉತ್ಪಾದಿಸಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ನೀತಿ ಆಯೋಗದ ಸಿಇಒ ಸುಬ್ರಹ್ಮಣ್ಯಂ, ಸುಂಕಗಳು ಯಾವ ರೀತಿ ಬದಲಾಗುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ ಭಾರತ ಸರಕುಗಳ ಉತ್ಪಾದನೆ ವಿಚಾರದಲ್ಲಿ ಪರಿಣಾಮಕಾರಿ ವೆಚ್ಚದ ಚೌಕಟ್ಟಿನಲ್ಲೇ ಉಳಿದುಕೊಂಡಿದೆ ಎಂದು ಹೇಳಿದರು.
ಭಾರತ ಸರ್ಕಾರದ ಆಸ್ತಿ ನಗದೀಕರಣ ಯೋಜನೆಯ ಮತ್ತೊಂದು ಹೊಸ ಸುತ್ತು ಚಿಂತನೆಯಲ್ಲಿದೆ. ಅದರ ಕುರಿತಾದ ಘೋಷಣೆ ಆಗಸ್ಟ್ ತಿಂಗಳಲ್ಲಿ ಪ್ರಕಟಿಸಲಾಗುವುದು ಎಂದು ನೀತಿ ಆಯೋಗದ ಸಿಇಒ ಸುಬ್ರಹ್ಮಣ್ಯಂ ವಿವರಿಸಿದರು.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ; ವಿಕಸಿತ ಭಾರತಕ್ಕಾಗಿ ಒಂದಾಗಲು ಕರೆ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯ ಭಾರತ್ ಮಂಟಪದಲ್ಲಿ ಈ ಸಭೆ ನಡೆದಿದ್ದು, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
"ಪ್ರತಿಯೊಬ್ಬ ಭಾರತೀಯನೂ ದೇಶವು ವಿಕಸಿತ ಭಾರತ ಆಗಬೇಕೆಂದು ಬಯಸುತ್ತಾನೆ. ಇದು ಯಾವುದೇ ಪಕ್ಷದ ಕಾರ್ಯಸೂಚಿಯಲ್ಲ, ಆದರೆ, 140 ಕೋಟಿ ಭಾರತೀಯರ ಆಕಾಂಕ್ಷೆಯಾಗಿದೆ. ಈ ಗುರಿಯತ್ತ ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿದರೆ, ನಾವು ಅದ್ಭುತ ಪ್ರಗತಿ ಸಾಧಿಸುತ್ತೇವೆ. ನಾವು ಪ್ರತಿ ರಾಜ್ಯ, ಪ್ರತಿ ನಗರ ಮತ್ತು ಪ್ರತಿ ಹಳ್ಳಿಯನ್ನು ಅಭಿವೃದ್ಧಿಪಡಿಸಲು ಬದ್ಧರಾಗಿರಬೇಕು ಮತ್ತು ನಂತರ ವಿಕಸಿತ ಭಾರತ ಅನ್ನು 2047 ಕ್ಕಿಂತ ಮೊದಲೇ ಸಾಧಿಸಲಾಗುವುದು" ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ 24 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಭಾಗವಹಿಸಿದ್ದರು.