ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16 ವರ್ಷದ ಹುಡುಗನೊಂದಿಗೆ ಓಡಿಹೋದ 5ನೇ ತರಗತಿ ಬಾಲಕಿ; ಪೋಷಕರೇ, ಮಕ್ಕಳ ಮೇಲೆ ನಿಗಾ ಇರಲಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16 ವರ್ಷದ ಹುಡುಗನೊಂದಿಗೆ ಓಡಿಹೋದ 5ನೇ ತರಗತಿ ಬಾಲಕಿ; ಪೋಷಕರೇ, ಮಕ್ಕಳ ಮೇಲೆ ನಿಗಾ ಇರಲಿ

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16 ವರ್ಷದ ಹುಡುಗನೊಂದಿಗೆ ಓಡಿಹೋದ 5ನೇ ತರಗತಿ ಬಾಲಕಿ; ಪೋಷಕರೇ, ಮಕ್ಕಳ ಮೇಲೆ ನಿಗಾ ಇರಲಿ

ತನ್ನ ತಾಯಿಯ ಫೋನ್ ಬಳಸುತ್ತಿದ್ದ ಬಾಲಕಿ, ಅವರಿಗೆ ಅರಿವಿಲ್ಲದಂತೆ ಇನ್‌ಸ್ಟಾಗ್ರಾಮ್‌ ಮೂಲಕ ಹುಡುಗನೊಂದಿಗೆ ಸಂಪರ್ಕ ಸಾಧಿಸಿದ್ದಳು. ಇಬ್ಬರ ನಡುವೆ ಸಲುಗೆ ಬೆಳೆದು ಓಡಿ ಹೋಗಿದ್ದಾರೆ. ಗುಜರಾತ್‌ನಲ್ಲಿ ನಡೆದ ಈ ಘಟನೆಯು ಹದಿಹರೆಯದ ಮಕ್ಕಳ ಮೇಲೆ ಪೋಷಕರು ಹೆಚ್ಚುವರಿ ನಿಗಾ ವಹಿಸುವಂತೆ ಪ್ರೇರೇಪಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16 ವರ್ಷದ ಹುಡುಗನೊಂದಿಗೆ ಓಡಿಹೋದ 5ನೇ ತರಗತಿ ಬಾಲಕಿ (ಸಾಂದರ್ಭಿಕ ಚಿತ್ರ)
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16 ವರ್ಷದ ಹುಡುಗನೊಂದಿಗೆ ಓಡಿಹೋದ 5ನೇ ತರಗತಿ ಬಾಲಕಿ (ಸಾಂದರ್ಭಿಕ ಚಿತ್ರ) (Pexel)

ಗುಜರಾತ್‌ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕೇವಲ 10 ವರ್ಷ ವಯಸ್ಸಿನ ಬಾಲಕಿಯೊಬ್ಬಳು 16 ವರ್ಷದ ಬಾಲಕನೊಂದಿಗೆ ಓಡಿಹೋಗಿರುವ ಘಟನೆ ಬೆಳಕಿಗೆ ಬದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕನ ಪರಿಚಯವಾದ ನಂತರ, ಸ್ನೇಹಿತರ ಸಹಾಯ ಪಡೆದು ಮನೆಯಿಂದ ಓಡಿ ಹೋಗಿರುವುದಾಗಿ ವರದಿಯಾಗಿದೆ. ಮಗಳಿಗಾಗಿ ಹುಡುಕಾಟ ನಡೆಸಿದ ಕುಟುಂಬಸ್ಥರು, ಆಕೆ ಸಿಗದ ಕಾರಣದಿಂದ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿದ ಕೆಲವೇ ಗಂಟೆಗಳ ನಂತರ ಇಬ್ಬರನ್ನು ಕೂಡಾ ಸಮೀಪದ ಹಳ್ಳಿಯಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಬಾಲಕ ಮತ್ತು ಬಾಲಕಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದಾರೆ. ಇಬ್ಬರು ಮಕ್ಕಳ ನಡುವೆ ಬಂಧ ಬೆಳೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಧನ್ಸುರಾ ಗ್ರಾಮದಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕಿ ಡಿಸೆಂಬರ್ 31ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಮನೆಯವರು ಎಷ್ಟೇ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಹೀಗಾಗಿ ಮಗಳ ಅಪಹರಣವಾಗಿದೆ ಎಂಬ ಭೀತಿಯಲ್ಲಿ ಕುಟುಂಬದವರು ಪೊಲೀಸ್ ದೂರು ದಾಖಲಿಸಿದ್ದರು.

ಆದರೆ, ಅಲ್ಲಿ ಘಟನೆ ನಡೆದಿದ್ದೇ ಬೇರೆ. ಬಾಲಕಿಗೆ ಪಕ್ಕದ ಹಳ್ಳಿಯ ಹುಡುಗ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದಾನೆ. ಅವರಿಬ್ಬರೂ ಫೋನ್‌ನಲ್ಲಿ ಆಗಾಗ್ಗೆ ಸಂವಹನ ನಡೆಸುತ್ತಿದ್ದರು ಎಂಬುದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ. ಅವರ ನಡುವೆ ಆತ್ಮೀಯತೆ ಬೆಳೆದಿದೆ. ಹೀಗಾಗಿ ಇಬ್ಬರೂ ತಮ್ಮ ಮೂವರು ಸ್ನೇಹಿತರ ಸಹಾಯದಿಂದ ಯೋಜನೆ ರೂಪಿಸಿ ಓಡಿಹೋಗಿದ್ದಾರೆ. ಈ ಕುರಿತು ಇಂಡಿಯಾ ಟುಡೇ ಶನಿವಾರ ವರದಿ ಮಾಡಿದೆ.

ಬಾಲಕಿಯ ತಂದೆಗೆ ತನ್ನ ಮಗಳು ಸಾಮಾಜಿಕ ಮಾಧ್ಯಮ ಬಳಸುತ್ತಿರುವ ಬಗ್ಗೆ ತಿಳಿದಿರಲಿಲ್ಲ. ತಾಯಿಯ ಫೋನ್‌ನಿಂದ ಬಾಲಕಿ ಇನ್‌ಸ್ಟಾಗ್ರಾಮ್ ಬಳಸುತ್ತಿದ್ದ‌ಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಸದ್ಯ ಬಾಲಕಿಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ. ಕುಟುಂಬದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮಧ್ಯಪ್ರದೇಶದಲ್ಲಿಯೂ ಇಂತಹದೇ ಘಟನೆ

ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿಯೂ ಇಂತಹದೇ ಘಟನೆ ನಡೆದಿತ್ತು. 15 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 27 ವರ್ಷದ ಯುವಕನೊಂದಿಗೆ ಓಡಿಹೋಗಿದ್ದರು. ಅಲ್ಲದೆ ಮದುವೆಯಾಗುವುದಾಗಿ ಹೇಳಿದ್ದರು. ಇಂಡಿಯಾ ಟುಡೇ ವರದಿಯ ಪ್ರಕಾರ, ಮದುವೆ ಮಾಡಿಸುವಂತೆ ಯುವ ಜೋಡಿ ತಮ್ಮ ಹೆತ್ತವರಿಗೆ ಬೆದರಿಕೆ ಹಾಕಿದ್ದಾರೆ.

ಪೋಷಕರೇ ಮಕ್ಕಳ ನಡೆಯ ಬಗ್ಗೆ ಎಚ್ಚರವಿರಲಿ

ಎಲ್ಲಾ ಪೋಷಕರು ತಮ್ಮ ಮಕ್ಕಳ ನಡೆಯ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳ ಕೈಗೆ ಮೊಬೈಲ್‌ ಕೊಡುವ ಮುನ್ನ ಅವರು ಅದನ್ನು ಬಳಸುವ ಬಗೆಯ ಮೇಲೆ ನಿಗಾ ವಹಿಸುವುದು ಅಗತ್ಯ. ಮಕ್ಕಳ ಸ್ನೇಹಿತರು, ಅವರಿಗೆ ಆಗುವ ಹೊಸ ಸ್ನೇಹಿತರ ಬಗ್ಗೆ ತಿಳಿದುಕೊಂಡಿರುಬೇಕು. ಮಕ್ಕಳಿಗೆ ಮೊಬೈಲ್‌ ಕೊಡುವುದಿದ್ದರೂ, ಚೈಲ್ಡ್‌ ಸೇಫ್ಟಿ ಲಾಕ್‌ ಹಾಕಿ ಕೊಡುವುದು ಉತ್ತಮ. ಕಾಲೇಜು ಪ್ರವೇಶಕ್ಕಿಂತ ಮುಂಚೆ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಪರಿಚಯ ಮಾಡುವ ಅಗತ್ಯವಿಲ್ಲ. ಹೆತ್ತವರ ಫೋನ್‌ ಅನ್ನು ಮಕ್ಕಳು ಬಳಸುತ್ತಿದ್ದರೆ, ಅವರ ಆಕ್ಟಿವಿಟಿ ಹಿಸ್ಟರಿ ಗಮನಿಸುವುದು ಮುಖ್ಯ

ಹದಿಹರೆಯದ ಮಕ್ಕಳ ಮನಸ್ಸು ಚಂಚಲವಾಗಿರುವುದರಿಂದ, ಅವರಿಗೆ ಕೆಲವು ಸೂಕ್ಷ್ಮಗಳನ್ನು ತಿಳಿಹೇಳುವ ಅಗತ್ಯವಿದೆ. ಮಕ್ಕಳಿಗೆ ಹೊಸ ಸ್ನೇಹಿತರ ಪರಿಚಯವಾದಾಗ ಅವರ ಒಡನಾಟ ಹೇಗಿದೆ ಎಂಬುವುದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ. ಹಾಗಂತಾ, ಮಕ್ಕಳಿಬ್ಬರ ನಡುವಿನ ಒಡನಾಟಕ್ಕೆ, ಆತ್ಮೀಯತೆಗೆ ಪ್ರೀತಿ-ಪ್ರೇಮ-ಪ್ರಣಯವೆಂಬ ಬಣ್ಣ ಹಚ್ಚುವುದು ಸರಿಯಲ್ಲ. ಮಕ್ಕಳ ಮನಸನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಿ ಅವರೊಂದಿಗೆ ಮಾತನಾಡಬೇಕು. 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.