ಹೊಸ ಲುಕ್‌ನಲ್ಲಿ ಮಿಂಚಲಿದ್ದಾರೆ ಏರ್ ಇಂಡಿಯಾ ಸಿಬ್ಬಂದಿ; ಹೀಗಿದೆ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಸಮವಸ್ತ್ರ
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುವವರು ಇನ್ನು ಮುಂದೆ ಬದಲಾವಣೆಯೊಂದನ್ನ ಗಮನಿಸಲಿದ್ದಾರೆ. ಅದೇನೆಂದರೆ ಏರ್ ಇಂಡಿಯಾ ತನ್ನ ಸಿಬ್ಬಂದಿಗಳಿಗೆ ಹೊಸ ಯೂನಿಫಾರಂ ನೀಡುತ್ತಿದೆ. ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಏರ್ ಇಂಡಿಯಾ ಸಿಬ್ಬಂದಿಗಳಿಗೆ ಉಡುಪು ಹಾಗೂ ಚಪ್ಪಲಿಗಳ ವಿನ್ಯಾಸ ಮಾಡಿದ್ದಾರೆ.

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುವವರು ಇನ್ನು ಮುಂದೆ ಸಿಬ್ಬಂದಿಯನ್ನು ಹೊಸ ರೂಪದಲ್ಲಿ ನೋಡಲಿದ್ದಾರೆ. ಕಾರಣ ಏರ್ ಇಂಡಿಯಾವು ತನ್ನ ಸಿಬ್ಬಂದಿಯ ಸಮವಸ್ತ್ರವನ್ನು ಬದಲಿಸುತ್ತಿದೆ. ಖಾಸಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವು ತನ್ನ ಸಿಬ್ಬಂದಿಗೆ ಹೊಸ ಸಮವಸ್ತ್ರವನ್ನು ಪರಿಚಯಿಸಿದೆ. ಇದನ್ನು ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ್ದಾರೆ ಎಂಬುದು ಇನ್ನೊಂದು ವಿಶೇಷ.
ʼಹಂತ ಹಂತವಾಗಿ ಈ ಯೂನಿಫಾರಂ ಅನ್ನು ಪರಿಚಯಿಸಲಾಗುವುದು, ಮೊದಲ ಬಾರಿ ಏರ್‌ಬಸ್ ಎ350 ವಿಮಾನದಿಂದ ಪರಿಚಯಿಸಲಾಗುವುದು. ಈ ಹೊಸ ಯೂನಿಫಾರಂ ಧರಿಸಿರುವ ಸಿಬ್ಬಂದಿಗಳು ನಿಮ್ಮನ್ನು ಸ್ವಾಗತಿಸಲಿದ್ದಾರೆʼ ಎಂದು ಕಂಪನಿಯು ಹೇಳಿದೆ.
ʼವಾಯುಯಾನ ಇತಿಹಾಸದಲ್ಲೇ ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಐಷಾರಾಮಿ ಹಾಗೂ ಆಕರ್ಷಕ ಸಮವಸ್ತ್ರಗಳನ್ನು ನೀಡುತ್ತಿದೆ. ಮನಿಶ್ ಮಲ್ಹೋತ್ರ ವಿನ್ಯಾಸ ಮಾಡಿರುವ ಉಡುಪುಗಳು ಅತ್ಯಾಕರ್ಷಕ ರೀತಿಯಲ್ಲಿ ವಿಮಾನಯಾನದಲ್ಲಿ ಗಮನ ಸೆಳೆಯಲಿದೆʼ ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಟೆಲ್ ವಿಲ್ಸನ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಸಿಬ್ಬಂದಿಯು ತೊಡಲಿರುವ ಹೊಸ ಸಮವಸ್ತ್ರವು ಈ ವಿಮಾನಯಾನ ಸಂಸ್ಥೆಗೆ ಹೊಸ ಗುರುತು ನೀಡಲಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
ಕ್ಯಾಬಿನ್‌ನ ಮಹಿಳಾ ಸಿಬ್ಬಂದಿಯು ಭಾರತೀಯ ಪರಂಪರೆಯ ವಾಸ್ತುಶೈಲಿಯನ್ನು (ಜರೋಖಾ) ಮತ್ತು ವಿಸ್ಟಾ (ಹೊಸ ಏರ್ ಇಂಡಿಯಾ ಲೋಗೋ ಐಕಾನ್) ನೆನಪಿಸುವ ಸಂಕೀರ್ಣ ಮಾದರಿಗಳೊಂದಿಗೆ ಒಂಬ್ರೆ ಸೀರೆಯನ್ನು ಹೊಂದಿದ್ದು, ಆರಾಮದಾಯಕವಾದ ಕುಪ್ಪಸ ಮತ್ತು ಬ್ಲೇಜರ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
ʼಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಾರವನ್ನು ಸೆರೆಹಿಡಿಯುವ ಸಮವಸ್ತ್ರಗಳನ್ನು ವಿನ್ಯಾಸಗೊಳಿಸುವುದು ತನ್ನ ಗುರಿಯಾಗಿತ್ತು. ಅದಕ್ಕೆ ಲೇಟೆಸ್ಟ್ ಟಚ್ ನೀಡುವ ಮೂಲಕ ಆಧುನಿಕ ನೋಟ ಸಿಗುವಂತೆ ಮಾಡಲಾಗಿದೆ. ಈ ಉಡುಪಿನ ಬಣ್ಣವು ಸಿಬ್ಬಂದಿಗೆ ಹೆಮ್ಮೆಯಂಟು ಮಾಡಲಿದೆ. ಅಲ್ಲದೆ ಈ ಉಡುಪು ಭಾರತದ ಉಷ್ಣತೆಗೂ ಹೊಂದಿಕೊಳ್ಳಲಿದೆʼ ಎಂದು ಮನೀಶ್ ಮಲ್ಹೋತ್ರಾ.
ಏರ್ ಇಂಡಿಯಾದ ಪ್ರಕಾರ ಇತ್ತೀಚೆಗೆ ಅನಾವರಣಗೊಂಡ ಸಮವಸ್ತ್ರ ವಿನ್ಯಾಸವು ಕ್ಯಾಬಿನ್ ಸಿಬ್ಬಂದಿ ಹಾಗೂ ಏರ್‌ಲೈನ್ ಇನ್‌ಫ್ಲೈಟ್ ಸೇವೆಗಳ ತಂಡದ ಸಹಭಾಗಿತ್ವದ ಪ್ರಯತ್ನದಿಂದ ಸಾಧ್ಯವಾಗಿದೆ. ಒಟ್ಟಾರೆ ಈ ಹೊಸ ಸಮವಸ್ತ್ರವು ಏರ್‌ಇಂಡಿಯಾ ಸಿಬ್ಬಂದಿಯ ಗೌರವ ಹೆಚ್ಚುವಂತೆ ಮಾಡುವುದು ಸುಳ್ಳಲ್ಲ ಎಂದು ಇದು ಹೇಳಿದೆ.
ಸಮವಸ್ತ್ರ ಮಾತ್ರವಲ್ಲ ಅದಕ್ಕೆ ಹೊಂದುವ ಚಪ್ಪಲಿಯನ್ನು ಕೂಡ ವಿನ್ಯಾಸ ಮಾಡಿದ್ದಾರೆ ಮನೀಶ್ ಮಲ್ಹೋತ್ರಾ. ಮಹಿಳಾ ಸಿಬ್ಬಂದಿಗೆ ಕಪ್ಪು ಹಾಗೂ ಕಡುಕೆಂಪು ಬಣ್ಣದ ಡ್ಯುಯಲ್-ಟೋನ್ ಬ್ಲಾಕ್ ಹೀಲ್ಸ್ ವಿನ್ಯಾಸ ಮಾಡಿದ್ದರೆ, ಪುರುಷರು ಕಪ್ಪು ಬ್ರೋಗ್ಸ್ ಅನ್ನು ಧರಿಸುತ್ತಾರೆ.

ವಿಭಾಗ