ಭಾರತಕ್ಕೆ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್; ಲಕ್ನೋನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ, 10 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತಕ್ಕೆ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್; ಲಕ್ನೋನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ, 10 ಮುಖ್ಯ ಅಂಶಗಳು

ಭಾರತಕ್ಕೆ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್; ಲಕ್ನೋನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ, 10 ಮುಖ್ಯ ಅಂಶಗಳು

ಉತ್ತರ ಪ್ರದೇಶದ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಬ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ (ಮೇ 11) ಉದ್ಘಾಟಿಸಿದರು. ಈ ವಿದ್ಯಮಾನದ 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಭಾರತಕ್ಕೆ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್ ಸಿಕ್ಕಿದ್ದು, ಉತ್ತರ ಪ್ರದೇಶದಲ ಲಕ್ನೋನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಿದರು.
ಭಾರತಕ್ಕೆ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್ ಸಿಕ್ಕಿದ್ದು, ಉತ್ತರ ಪ್ರದೇಶದಲ ಲಕ್ನೋನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಿದರು. (REUTERS)

ಬ್ರಹ್ಮೋಸ್‌ ಕ್ಷಿಪಣಿ ಹಬ್: ಉತ್ತರ ಪ್ರದೇಶದ ಲಕ್ನೋ (ಲಖನೌ)ನಲ್ಲಿ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್ (ಬ್ರಹ್ಮೋಸ್ ಏರೋಸ್ಪೇಸ್ ಇಂಟೆಗ್ರೇಷನ್ ಆಂಡ್ ಟೆಸ್ಟಿಂಗ್ ಫೆಸಿಲಿಟಿ ) ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು (ಮೇ 11) ಉದ್ಘಾಟಿಸಿದರು. ಇದರೊಂದಿಗೆ ಭಾರತಕ್ಕೆ ಹೊಸ ಕ್ಷಿಪಣಿ ಹಬ್ ಸಿಕ್ಕಂತಾಗಿದೆ. ಉತ್ತರ ಪ್ರದೇಶದ ರಕ್ಷಣಾ ರಕ್ಷಣಾ ಕೈಗಾರಿಕಾ ಕಾರಿಡಾರ್ (ಯುಪಿ ಡಿಐಸಿ) ಯಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನಾ ಕ್ಲಸ್ಟರ್‌ಗಳ ಬೆಳವಣಿಗೆಯನ್ನು ವೇಗಗೊಳಿಸಲು ಸುಮಾರು 22 ಎಕರೆ ಪ್ರದೇಶದಲ್ಲಿ ಇದೇ ಮೊದಲ-ರೀತಿಯ ರಕ್ಷಣಾ ತಂತ್ರಜ್ಞಾನಗಳು ಮತ್ತು ಪರೀಕ್ಷಾ ಕೇಂದ್ರವನ್ನು (ಡಿಟಿಟಿಸಿ) ಸ್ಥಾಪಿಸಲಾಗಿದೆ.

ಭಾರತ- ಪಾಕ್ ಬಿಕ್ಕಟ್ಟಿನ ನಡುವೆ ಕ್ಷಿಪಣಿ ಹಬ್ ಉದ್ಘಾಟನೆ

ಪಹಲ್ಗಾಮ್ ದಾಳಿ ಬಳಿಕ ಭಾರತ- ಪಾಕಿಸ್ತಾನದ ನಡುವೆ ಸಮರ ಶುರುವಾಗಿರುವ ಈ ಹೊತ್ತಿನಲ್ಲಿ ಉತ್ತರ ಪ್ರದೇಶದ ಲಕ್ನೋನಲ್ಲಿ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್ ಉದ್ಘಾಟನೆಯಾಗಿರುವುದು ಗಮನಸೆಳೆದಿದೆ. ಕದನ ವಿರಾಮ ಘೋಷಣೆಯಾಗಿ ಮಾತುಕತೆ ವಿಚಾರ ಮುಂದಿರುವಾಗಲೇ ಗಡಿಭಾಗದಲ್ಲಿ ಪಾಕಿಸ್ತಾನ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಇದು ಪ್ರತಿದಾಳಿಗೂ ಕಾರಣವಾಯಿತು. ಜಮ್ಮು ಭಾಗದಲ್ಲಿ ಭಾರತೀಯ ಸೇನಾ ಪಡೆ ಹೈ ಅಲರ್ಟ್ ಸ್ಥಿತಿಯಲ್ಲಿ ಪಹರೆ ಮಾಡುತ್ತಿದೆ. ಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಭಾರತದ ಬ್ರಹ್ಮೋಸ್ ಕ್ಷಿಪಣಿ ಕೂಡ ಸದ್ದುಮಾಡಿದೆ. ಲಷ್ಮರ್ ಏ ತೊಯ್ಬಾದ ಕೇಂದ್ರ ಕಚೇರಿ ನಾಶಕ್ಕೆ ಬ್ರಹ್ಮೋಸ್ ಕ್ಷಿಪಣಿ ಕಾರಣ ಎಂಬ ಮಾತೂ ಕೇಳಿಬಂದಿದೆ.

ಬ್ರಹ್ಮೋಸ್ ಕ್ಷಿಪಣಿ ಹಬ್‌ ಉದ್ಘಾಟನೆ; 10 ಮುಖ್ಯ ಅಂಶಗಳು

1) ಬ್ರಹ್ಮೋಸ್ ಎಂಬುದು 2 ಹಂತದ ಕ್ಷಿಪಣಿಯಾಗಿದ್ದು, ಮೊದಲ ಹಂತದಲ್ಲಿ ಪ್ರೊಪೆಲ್ಲೆಂಟ್ ಬೂಸ್ಟರ್ ಮಾದರಿಯ ಎಂಜಿನ್ ಇದೆ. ಇದು ಕ್ಷಿಪಣಿಗೆ ಸೂಪರ್‌ಸಾನಿಕ್ ವೇಗವನ್ನು ಒದಗಿಸುವುದಲ್ಲದೇ, ಕ್ಷಿಪಣಿ ಬೇರ್ಪಟ್ಟು ಗುರಿ ಸುಡಲು ನೆರವಾಗುತ್ತದೆ.

2) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್‌ನ ಚೊಚ್ಚಲ ಪರೀಕ್ಷೆ 2017ರ ನವೆಂಬರ್ 22 ರಂದು ನಡೆಯಿತು. ಸು-30 ಎಂಕೆಐ ಎಂಬ ಯುದ್ಧ ವಿಮಾನದಿಂದಲೇ ಇದನ್ನು ಉಡಾಯಿಸಿ ಪರೀಕ್ಷೆ ಮಾಡಲಾಗಿತ್ತು.

3) ಬ್ರಹ್ಮೋಸ್ ಕ್ಷಿಪಣಿಯು 290 ಕಿಮೀ ರೇಂಜ್‌ನಲ್ಲಿ ಗುರಿ ಸುಡುವ ಸಾಮರ್ಥ್ಯ ಹೊಂದಿದೆ. ಜಗತ್ತಿನ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್ ಎಂದು ಇದು ವ್ಯಾಖ್ಯಾನಿಸಲ್ಪಟ್ಟಿದೆ. ನೆಲ, ಸಮುದ್ರ ಹಾಗೂ ಆಕಾಶದಿಂದಲೂ ಉಡಾಯಿಸಲು ಬೇಕಾದಂತೆ ನಿರ್ಮಿಸಲಾದ ಕ್ಷಿಪಣಿ ಇದು.

4) ಬ್ರಹ್ಮೋಸ್ ಏರೋಸ್ಪೇಸ್‌ ಇದನ್ನು ನಿರ್ಮಿಸಿದೆ. ಬ್ರಹ್ಮೋಸ್ ಏರೋಸ್ಪೇಸ್ ಎಂಬುದು ಭಾರತ ಹಾಗೂ ರಷ್ಯಾದ ಜಂಟಿ ಉದ್ಯಮವಾಗಿದ್ದು, ಕ್ಷಿಪಣಿಗಳನ್ನು ಭಾರತದಲ್ಲೇ ಸಿದ್ಧಪಡಿಸಲಾಗುತ್ತಿದೆ. ಇದು ಶಬ್ದಕ್ಕಿಂತ ಮೂರು ಪಟ್ಟು ವೇಗವನ್ನು ಹೊಂದಿದೆ.

5) ಫೈರ್ ಆಂಡ್ ಫಾರ್ಗೆಟ್‌ ತತ್ತ್ವವನ್ನು ಆಧರಿಸಿ ಬ್ರಹ್ಮೋಸ್ ಕ್ಷಿಪಣಿ ಕಾರ್ಯನಿರ್ವಹಿಸುತ್ತದೆ. ಉಡಾವಣೆ ಬಳಿಕ ಕ್ಷಿಪಣಿಗೆ ಗೈಡ್ ಮಾಡಬೇಕಾದ ಅಗತ್ಯ ಇಲ್ಲ.

6) ವೈವಿಧ್ಯಮಯ ಕ್ಷಿಪಣಿ ಇದಾಗಿದ್ದು, ಸಾಟಿಯಿಲ್ಲದ ವೇಗ, ನಿಖರತೆ ಮತ್ತು ಶಕ್ತಿಯು ಅದನ್ನು ಅತ್ಯಾಧುನಿಕ ಆಯುಧವನ್ನಾಗಿ ಮಾಡಿದೆ. ಕ್ಷಿಪಣಿಯು ಶೇಕಡಾ 99.99 ರಷ್ಟು ಸ್ಟ್ರೈಕ್ ನಿಖರತೆಯ ಪ್ರಮಾಣವನ್ನು ಹೊಂದಿದೆ ಎಂದು ಅದನ್ನು ಅಭಿವೃದ್ಧಿ ಪಡಿಸಿದ ಬ್ರಹ್ಮೋಸ್ ಏರೋಸ್ಪೇಸ್ ಹೇಳಿಕೊಂಡಿದೆ.

7) ರಾಡಾರ್‌ ಕಣ್ಣು ತಪ್ಪಿಸಿ ಹೋಗಬಲ್ಲ ಸಾಮರ್ಥ್ಯ ಇದಕ್ಕಿದ್ದು, ಇದನ್ನು ಯಾವಾಗ ಉಡಾಯಿಸಲಾಯಿತು ಎಂಬುದನ್ನೂ ಶತ್ರುಗಳು ನಿರ್ಧರಿಸುವುದು ಕಷ್ಟ.

8) ಐಎನ್‌ಎಸ್‌ ರಜಪೂತ್‌ನಲ್ಲಿ ಬ್ರಹ್ಮೋಸ್ ಮಿಸೈಲ್‌ನ ಮೊದಲ ಮಾದರಿಯನ್ನು 2005ರಲ್ಲಿ ಅಳವಡಿಸಲಾಗಿದೆ.

9) 2016ರ ಮಾರ್ಚ್‌ನಲ್ಲಿ ಅಂದಿನ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿದ ಮಾಹಿತಿ ಪ್ರಕಾರ, ಕ್ಷಿಪಣಿಯ ಶೇಕಡ 65 ಬಿಡಿಭಾಗಗಳು ವಿದೇಶದಿಂದ ಆಮದು ಮಾಡಿಕೊಂಡಿರುವಂಥದ್ದು.

10) ಬ್ರಹ್ಮೋಸ್ ಏರೋಸ್ಪೇಸ್ ಎಂಡಿ ಮತ್ತು ಸಿಇಒ ಅತುಲ್ ದಿನಕರ್ ರಾಣೆ ಅವರು ಹೇಳುವ ಪ್ರಕಾರ, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗೆ ಸರಿಸಾಟಿ ಈ ಜಗತ್ತಿನಲ್ಲಿ ಯಾವುದೂ ಇಲ್ಲ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.