Imran Khan Attacked: ಪಾಕಿಸ್ತಾನದ 'ಗೃಹ'ಯುದ್ಧದ ಮೇಲೆ ಕಣ್ಣಿಟ್ಟ ಭಾರತ: ಇಮ್ರಾನ್ ಮೇಲಿನ ದಾಳಿಗೆ ಪ್ರತಿಕ್ರಿಯೆ ಏನು?
ಪಾಕಿಸ್ತಾನದ ವಜೀರಾಬಾದ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ, ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಮೇಲೆ ನಡೆದ ಹತ್ಯಾಯತ್ನ ಜಾಗತಿಕವಾಗಿ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಇಮ್ರಾನ್ ಖಾನ್ ಮೇಲಿನ ದಾಳಿಗೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವುದಾಗಿ ಸ್ಪಷ್ಟಪಡಿಸಿದೆ. ಪಾಕಿಸ್ತಾನದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.
ನವದೆಹಲಿ:ಪಾಕಿಸ್ತಾನದ ವಜೀರಾಬಾದ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ, ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಮೇಲೆ ನಡೆದ ಹತ್ಯಾಯತ್ನ ಜಾಗತಿಕವಾಗಿ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಇಮ್ರಾನ್ ಖಾನ್ ಮೇಲಿನ ದಾಳಿಗೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವುದಾಗಿ ಸ್ಪಷ್ಟಪಡಿಸಿದೆ.
ಟ್ರೆಂಡಿಂಗ್ ಸುದ್ದಿ
ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಭಾರತದ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ, "ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.." ಎಂದು ಹೇಳಿದ್ದಾರೆ. ಇದು ಪಾಕ್‌ನ ಆಂತರಿಕ ವಿಚಾರವಾದರೂ, ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಇಲಾಖೆಯು ಪಾಕಿಸ್ತಾನದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದೆ ಎಂದು ಬಾಗ್ಚಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಪೂರ್ವ ನಗರವಾದ ವಜೀರಾಬಾದ್‌ನಲ್ಲಿ, ಇಮ್ರಾನ್ ಖಾನ್ ಅವರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ವೇಳೆ ಅಪರಿಚಿತ ಬಂದೂಕುಧಾರಿಯೋರ್ವ, ಕಂಟೈನರ್-ಮೌಂಟೆಡ್-ಟ್ರಕ್ ಮೇಲೆ ನಿಂತಿದ್ದ ಇಮ್ರಾನ್ ಖಾನ್ ಅವರ ಮೇಲೆ ಗುಂಡು ಹಾರಿಸಿದ್ದ. ಇಮ್ರಾನ್ ಖಾನ್ ಅವರಿಗೆ ಒಟ್ಟು ನಾಲ್ಕು ಗುಂಡುಗಳು ತಗುಲಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಂಜಾಬ್ ಪ್ರಾಂತ್ಯದ ಅಲ್ಲಾವಾಲಾ ಚೌಕ್‌ನಲ್ಲಿ ಈ ಘಟನೆ ನಡೆದಿತ್ತು.
ಅವಧಿ ಪೂರ್ವ ಚುನಾವಣೆಗೆ ಒತ್ತಾಯಿಸಿ ರಾಜಧಾನಿ ಇಸ್ಲಾಮಾಬಾದ್‌ಗೆ 'ಹಖಿಕಿ ಆಜಾದಿ ಮಾರ್ಚ್' (ಸ್ವಾತಂತ್ರ್ಯದ ಹಕ್ಕಿನ ನಡಿಗೆ) ಹಮ್ಮಿಕೊಂಡಿರುವ ಇಮ್ರಾನ್ ಖಾನ್, ಪ್ರಸ್ತುತ ಪಾಕಿಸ್ತಾನದ ಮೈತ್ರಿಕೂಟ ಸರ್ಕಾರದ ವಿರುದ್ಧ ಜನ ಚಳುವಳಿ ನಡೆಸುತ್ತಿದ್ದಾರೆ. 70ರ ಹರೆಯದ ಖಾನ್ ಅವರ ಕಾಲಿಗೆ ಗುಂಡೇಟು ತಗುಲಿದ್ದು, ಅವರಿಗೆ ಲಾಹೋರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಹಿರಿಯ ನಾಯಕ ಅಸದ್ ಉಮರ್, ಇಮ್ರಾನ್ ಖಾನ್ ಚೇತರಿಸಿಕೊಳ್ಳುತ್ತಿದ್ದುಮ ಶೀಘ್ರದಲ್ಲೇ ಮತ್ತೆ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ, ಪಿಟಿಐ ಮುಖ್ಯಸ್ಥರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಇಮ್ರಾನ್ ಖಾನ್ ಮೇಲಿನ ಹೇಡಿತನದ ದಾಳಿಯನ್ನು ಖಂಡಿಸಿ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿ" ಎಂದು ಕರೆ ನೀಡಿದ್ದಾರೆ.
ಸದ್ಯ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿರುವ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, ಪಿಟಿಐ ಅಧ್ಯಕ್ಷರು ಮತ್ತು ಇತರ ಗಾಯಾಳುಗಳ ಚೇತರಿಕೆ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುವುದಾಗಿ ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಮೇಲಿನ ದಾಳಿಯನ್ನು ಖಂಡಿಸಿ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಸೇನಾ ಮುಖ್ಯ ಕಚೇರಿ ಮುಂದೆಯೂ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪಾಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಗರಿಕರು ಅಲ್ಲಿನ ಸೇನೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ಇಮ್ರಾನ್ ಖಾನ್ ಅವರ ಮೇಲೆ ಸೇನೆಯ ಅಣತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ನೇರವಾಗಿ ಆರೋಪಿಸುತ್ತಿದ್ದಾರೆ.
ಇಮ್ರಾನ್ ಖಾನ್ ಮೇಲಿನ ದಾಳಿಯಿಂದಾಗಿ ಪಾಕಿಸ್ತಾನದಲ್ಲಿ 'ಗೃಹ ಯುದ್ಧ'ದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ರಾಜೀನಾಮೆಗೆ ಪಿಟಿಐ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪಾಕ್ ಸೇನಾಧ್ಯಕ್ಷ ಜನರಲ್ ಖಮರ್ ಜಾವೇದ್ ಭಾಜ್ವಾ ವಿರುದ್ಧವೂ ಪಿಟಿಐ ಕಾರ್ಯಕರ್ತರು ಭಾರೀ ಆಕ್ರೋಶ ಹೊಹಾಕುತ್ತಿದ್ದಾರೆ.
ಸದ್ಯ ಭಾರತ ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಲ್ಲಿನ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.