ಕೇರಳ: ಕೋಯಿಕೋಡ್‌ನ ದೇವಾಲಯದ ಉತ್ಸವದ ವೇಳೆ ದುರಂತ; ಆನೆಗಳು ಓಡಾಡಿ ಮೂವರು ಸಾವು, 36 ಜನರಿಗೆ ಗಾಯ
ಕೇರಳದ ಕೋಯಿಕ್ಕೋಡ್‌ನಲ್ಲಿರುವ ದೇವಾಲಯದ ಉತ್ಸವದಲ್ಲಿ ಭಾಗಿಯಾಗಿದ್ದ ಆನೆಗಳು ಪಟಾಕಿ ಶಬ್ದ ಕೇಳಿದ ನಂತರ ಇದ್ದಕ್ಕಿದ್ದಂತೆ ಓಡಿವೆ. ಈ ವೇಳೆ ಜನರು ಭಯಭೀತರಾಗಿ ಓಡಿದ್ದಾರೆ. ಘಟನೆಯಲ್ಲಿ ಮೂವರು ಹಿರಿಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಕೋಯಿಕ್ಕೋಡ್: ಕೇರಳದ ದೇವಸ್ಥಾನದಲ್ಲಿ ದುರಂತವೊಂದು ಸಂಭವಿಸಿದೆ. ಕೊಯ್ಲಾಂಡಿಯ ಕುರುವಂಗಾಡ್‌ನಲ್ಲಿರುವ ಮಣಕ್ಕುಳಂಗರ ಭಗವತಿ ದೇವಸ್ಥಾನದಲ್ಲಿ ಗುರುವಾರ ನಡೆದ ಉತ್ಸವದ ಸಮಯದಲ್ಲಿ ಆನೆಗಳು ಮದವೇರಿ ಓಡಾಡಿದ್ದು 3 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕನಿಷ್ಠ 36 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ದೇವಸ್ಥಾನದಲ್ಲಿ ಉತ್ಸವ ನಡೆಯುತ್ತಿದ್ದಾಗ, ಪಟಾಕಿ ಸದ್ದಿಗೆ ಆನೆಗಳಿಗೆ ಮದವೇರಿದೆ. ಆರಂಭದಲ್ಲಿ ಮಾವುತರಿಗೆ ಆನೆಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಭಯದಿಂದ ಜನರು ಕೂಡಾ ಪಾರಾಗಲು ಓಡಿದ್ದಾರೆ.
ದುರ್ಘಟನೆಲ್ಲಿ ಲೀಲಾ (68), ರಾಜನ್ (66), ಮತ್ತು ಅಮ್ಮುಕ್ಕುಟ್ಟಿ (65) ಎಂಬವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಹಿರಿಯ ನಾಗರಿಕರು. ಇವರಲ್ಲಿ ಲೀಲಾ ಮತ್ತು ಅಮ್ಮುಕುಟ್ಟಿ ಕುರುವಂಗಾಡ್ ಮೂಲದವರು. ಉಳಿದಂತೆ ಗಾಯಾಳುಗಳಲ್ಲಿ 21 ಜನರನ್ನು ಕೊಯ್ಲಾಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಹದಿನಾಲ್ಕು ಜನರನ್ನು ಕೋಯಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳು ಹಿಂಸಾತ್ಮಕ ವರ್ತಿಸಿದಾಗ ದುರ್ಘಟನೆ ಸಂಭವಿಸಿದೆ. “ಒಂದು ಆನೆ ಆಕ್ರಮಣಕಾರಿಯಾಗಿ ವರ್ತಿಸಿತು. ಈ ವೇಳೆ ಮತ್ತೊಂದು ಆನೆಯನ್ನು ಕೆರಳಿಸಿತು. ಇದು ಘರ್ಷಣೆಗೆ ಕಾರಣವಾಯಿತು. ಉತ್ಸವದಲ್ಲಿ ಭಾಗವಹಿಸಿದ ಅನೇಕರಿಗೆ ಗಾಯಗಳಾಗಿವೆ. ಕೊನೆಗೆ ಆನೆಗಳನ್ನು ಮಾವುತರು ನಿಯಂತ್ರಣಕ್ಕೆ ತಂದರು,” ಎಂದು ಅನೇಲಾ-ಕುರುವಂಗಾಡ್ ವಾರ್ಡ್ ಕೌನ್ಸಿಲರ್ ಬಿಂದು ಪಿ.ಬಿ. ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ದೇವಾಲಯದ ಉತ್ಸವಕ್ಕೆ ಎರಡು ಸೆರೆಹಿಡಿದ ಆನೆಗಳನ್ನು ಕರೆತರಲಾಗಿತ್ತು. ಪಟಾಕಿ ಸಿಡಿದಾಗ ಅವು ಓಡಲು ಶುರು ಮಾಡಿವೆ. ಆಗ ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಕುರವಂಗಾಡ್‌ನ ಮಣಕ್ಕುಲಂಗರ ಭಗವತಿ ದೇವಸ್ಥಾನದ ಆವರಣದಲ್ಲಿ ವಾರ್ಷಿಕ ಉತ್ಸವದ ಕೊನೆಯ ದಿನದಂದು ಈ ಘಟನೆ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆನೆ ತುಳಿತವೋ, ಕಾಲ್ತುಳಿತವೋ; ಸಿಗದ ಸ್ಪಷ್ಟನೆ
ಫೆ. 13ರ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆನೆಗಳು ಉತ್ಸವ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಪಟಾಕಿ ಶಬ್ದವನ್ನು ಕೇಳಿ ಎರಡು ಆನೆಗಳ ನಡುವೆ ಸಣ್ಣ ಜಗಳ ನಡೆಯಿತು. ಭಯದಿಂದ ಜನರು ಗದ್ದಲ ಶುರು ಮಾಡಿದರು. ಓಡಾಟ ತಳ್ಳಾಟದಲ್ಲಿ ಕೆಲವರು ನೆಲಕ್ಕೆ ಬಿದ್ದರು. ಈ ಮೂವರನ್ನು ಆನೆಗಳು ತುಳಿದು ಕೊಂದಿವೆಯೇ ಅಥವಾ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಘಟನೆಯಿಂದ ತಾತ್ಕಾಲಿಕ ಉತ್ಸವ ಕಚೇರಿ ಕಟ್ಟಡಕ್ಕೂ ಹಾನಿಯಾಗಿದೆ.
