IIM-B Study;ಒಬಿಸಿ, ಮುಸಲ್ಮಾನರಿಗೆ ಹೋಲಿಸಿದರೆ ವ್ಯಾಪಾರಸ್ಥರಾಗಿ ದಲಿತರ ಆದಾಯ ಶೇ 16 ಕಡಿಮೆ, ಕುತೂಹಲ ಕೆರಳಿಸಿದೆ ಐಐಎಂಬಿ ಹೊಸ ಅಧ್ಯಯನ ವರದಿ
Explaining Income Gaps; ಭಾರತದಲ್ಲಿ ಒಬಿಸಿ, ಮುಸಲ್ಮಾನರಿಗೆ ಹೋಲಿಸಿದರೆ ವ್ಯಾಪಾರಸ್ಥರಾಗಿ ದಲಿತರ ಆದಾಯ ಶೇ 16 ಕಡಿಮೆ ಇದೆಯಂತೆ. ಐಐಎಂಬಿ ಹೊಸ ಅಧ್ಯಯನ ವರದಿ ಇದರ ಕಡೆಗೆ ಬೆಳಕು ಚೆಲ್ಲಿದ್ದು, ಈ ಆದಾಯದ ಅಂತರಕ್ಕೆ ಕಾರಣವಾದ ಜಾತಿ ಮತ್ತು ಇತರೆ ಅಂಶಗಳು ಕುತೂಹಲ ಕೆರಳಿಸುವಂಥವು ಎಂದು ವರದಿ ವಿವರಿಸಿದೆ.
ಬೆಂಗಳೂರು: ಭಾರತದಲ್ಲಿ ಒಬಿಸಿ, ಆದಿವಾಸಿ ಮತ್ತು ಮುಸ್ಲಿಮರಂತಹ ಇತರ ರಚನಾತ್ಮಕವಾಗಿ ಹಿಂದುಳಿದವರಿಗೆ ಹೋಲಿಸಿದರೆ ದಲಿತ ಸಮುದಾಯದ ವ್ಯಾಪಾರಸ್ಥರು ತಮ್ಮ ಜಾತಿಗೆ ಅಂಟಿಕೊಂಡಿರುವ ಕೆಲವು ಕಳಂಕಗಳ ಕಾರಣ ಅವರಿಗಿಂತ ಅಂದಾಜು16 ಪ್ರತಿಶತದಷ್ಟು ಕಡಿಮೆ ಆದಾಯ ಅಥವಾ ಆದಾಯದ ಅಂತರವನ್ನು ಹೊಂದಿರುವುದನ್ನು ಅಧ್ಯಯನ ವರದಿ (Research Article) ಯೊಂದು ಬಹಿರಂಗಪಡಿಸಿದೆ.
ಈ ಅಧ್ಯಯನದಲ್ಲಿ ಅವರ ಶಿಕ್ಷಣ, ಭೂಮಾಲೀಕತ್ವ, ಭೌಗೋಳಿಕ ಪರಿಸರ, ಸಾಮಾಜಿಕ ಪರಿಸರ ಮುಂತಾದ ಪರಸ್ಪರ ಸಂಬಂಧಿತ ಅಂಶಗಳನ್ನು ಪರಿಗಣಿಸಲಾಗಿದೆ. ಅವರ ಆದಾಯದ ಅಂತರಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಲಾಗಿದೆ. ಈ ಅಂಶಗಳು ಸಾಮಾನ್ಯವಾಗಿ ಜಾತಿ ಆಧಾರಿತ ಅಧ್ಯಯನದಲ್ಲಿ ಕಡೆಗಣಿಸಲ್ಪಡುವ ಅಂಶಗಳಾಗಿವೆ ಎಂದು ವರದಿ ವಿವರಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನ ಸ್ಟ್ರಾಟೆಜಿ ವಿಭಾಗದ ಪ್ರೊಫೆಸರ್ ಪ್ರತೀಕ್ ರಾಜ್ ಈ ಅಧ್ಯಯನ ವರದಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಅವರು ಈ ಅಧ್ಯಯನ ವರದಿಯ ಸಹ ಬರಹಗಾರರೂ ಹೌದು.
ಭಾರತದಲ್ಲಿನ ಜಾತಿ ಆಧರಿತ ಆದಾಯ ಅಸಮಾನತೆ - ಹೊಸ ಅಧ್ಯಯನ ವರದಿ
“ನಿಮಗೆ ಯಾರು ಗೊತ್ತು ಅನ್ನೋದು ಮುಖ್ಯವಲ್ಲ, ನೀವು ಯಾರು ಅನ್ನೋದೇ ಮುಖ್ಯ: ಭಾರತದ ಹಿಂದುಳಿದ ಜಾತಿಯ ವ್ಯಾಪಾರಸ್ಥರ ಆದಾಯ ಅಂತರದ ವಿವರಣೆ” (‘It’s not Who You Know, but Who You Are: Explaining Income Gaps of Stigmatized-Caste Business Owners in India’) ಎಂಬ ಶೀರ್ಷಿಕೆಯಲ್ಲಿ ಅಧ್ಯಯನ ವರದಿ ಪಿಎಲ್‌ಒಎಸ್ ಒನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಬೆಂಗಳೂರಿನ ಐಐಎಂ-ಬಿ ಪ್ರೊಫೆಸರ್ ಪ್ರತೀಕ್ ರಾಜ್ ಅವರು ಮೆಲ್ಬೋರ್ನ್ ವಿಶ್ವವಿದ್ಯಾನಿಲಯದ ಪ್ರೊ. ಹರಿ ಬಾಪೂಜಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರೊ. ಥಾಮಸ್ ರೌಲೆಟ್ ಜೊತೆ ಸೇರಿಕೊಂಡು ತಯಾರಿಸಿದ ಅಧ್ಯಯನ ವರದಿ ಇದಾಗಿದೆ. ಈ ವರದಿಯು ವ್ಯಾಪಾರದಿಂದ ಗಳಿಸುವ ಆದಾಯದ ಮೇಲೆ ಜಾತಿಯ ಗುರುತು ಪರಿಣಾಮ ಬೀರುತ್ತದೆಯೇ ಎಂಬ ಮಹತ್ವದ ಪ್ರಶ್ನೆಯ ಕುರಿತಾದ ಚರ್ಚೆಗೆ ಇನ್ನಷ್ಟು ಮಾಹಿತಿಯನ್ನು ಒದಗಿಸುತ್ತದೆ.
ಭಾರತದಲ್ಲಿ ಇತರ ಜಾತಿಯ ಹಿಂದುಳಿದ ವರ್ಗದವರಿಗೆ ಹೋಲಿಸಿದರೆ ವ್ಯಾಪಾರ ಮಾಡುತ್ತಿರುವ ದಲಿತ ವರ್ಗದ ಮಂದಿ ಸುಮಾರು 16% ನಷ್ಟು ಕಡಿಮೆ ಆದಾಯ ಗಳಿಸುತ್ತಾರೆ. ಸಾಮಾನ್ಯವಾಗಿ ತಪ್ಪಾಗಿ ನಿರೂಪಿಸಲಾಗುವ, ತಪ್ಪಾಗಿ ಲೆಕ್ಕಹಾಕಲಾಗುವ ಅಥವಾ ಜಾತಿ ಆಧರಿತ ಅಧ್ಯಯನದಲ್ಲಿ ಗಮನಕ್ಕೇ ತೆಗೆದುಕೊಳ್ಳಲಾಗದ ಅಂಶಗಳಾದ ಶಿಕ್ಷಣ, ಭೂ ಮಾಲೀಕತ್ವ, ನಗರ ವ್ಯವಸ್ಥೆ ಮತ್ತು ಸಾಮಾಜಿಕ ಪರಿಸರ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ನಡೆಸಿದ ಬಳಿಕ ಈ ವಿಚಾರವನ್ನು ಬಹಿರಂಗಗೊಳಿಸಿದೆ.
'ದಲಿತ ವರ್ಗದ ವ್ಯಾಪಾರಸ್ಥರು ಲಿಂಗ, ಜನಾಂಗ ಅಥವಾ ಜನಾಂಗೀಯತೆಯಂತಹ ಹಲವಾರು ಹಿಂದುಳಿದ ವರ್ಗದ ಜಾತಿಗೆ ಸಂಬಂಧಿಸಿದ ಅನನುಕೂಲತೆಯನ್ನು ಎದುರಿಸುತ್ತಾರೆ' ಎಂದು ಪ್ರೊಫೆಸರ್ ಪ್ರತೀಕ್ ರಾಜ್ ಹೇಳಿದರು.
ವಿಶೇಷವಾಗಿ ಆದಾಯ ಅಸಮಾನ ಹಂಚಿಕೆ ಒಂದೇ ರೀತಿ ಇರುವುದಿಲ್ಲ, ಸಾಮಾಜಿಕ ಬಂಡವಾಳ ಹೆಚ್ಚಿದಂತೆ ಆದಾಯದ ಅಂತರ ಹೆಚ್ಚಾಗುತ್ತ ಹೋಗುತ್ತದೆ ಎಂಬ ಅಂಶದ ಕಡೆಗೆ ವರದಿ ಬೆಳಕು ಚೆಲ್ಲುತ್ತದೆ. ಅದಲ್ಲದೆ, ದೇಶ ಮತ್ತು ಕಂಪನಿಗಳು ಎರಡಕ್ಕೂ ಒಳಗೊಳ್ಳುವಿಕೆಯ ಅಭ್ಯಾಸಗಳು ಮತ್ತು ನೀತಿಗಳು ಉತ್ತಮ ಪ್ರಯೋಜನ ಒದಗಿಸುತ್ತವೆ ಎಂಬುದನ್ನೂ ಈ ಅಧ್ಯಯನ ವರದಿ ವಿವರಿಸಿದೆ.
ಉದಾಹರಣೆಗೆ ಮೆಕ್ ಕಿನ್ಸೇ ಅಧ್ಯಯನವು ಯುಎಸ್ ನಲ್ಲಿನ ಜನಾಂಗೀಯ ಸಂಪತ್ತಿನ ಅಂತರವು ದೇಶದ ಜಿಡಿಪಿಗೆ ವಾರ್ಷಿಕವಾಗಿ 1 ಡಾಲರ್ ಮತ್ತು 1.5 ಟ್ರಿಲಿಯನ್ ಡಾಲರ್ ನಡುವೆ ಕೊಡುಗೆ ನೀಡುತ್ತದೆ ಎಂದು ಅಂದಾಜು ಮಾಡಿದೆ.
ಅಧ್ಯಯನ ವರದಿಯಲ್ಲಿ ವಿರೋಧಾಭಾಸದ ವಿಚಾರ
ಸಾಮಾಜಿಕ ಬಂಡವಾಳವು ಉದ್ಯಮದ ಗೆಲುವಿಗೆ ಸಾರ್ವತ್ರಿಕವಾಗಿ ಪ್ರಯೋಜನ ಉಂಟುಮಾಡುತ್ತದೆ ಎಂಬ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ ಈ ಅಧ್ಯಯನವು ಒಂದು ವಿರೋಧಾಭಾಸದ ವಿಚಾರವನ್ನು ತಿಳಿಸಿರುವುದು ಕುತೂಹಲ ಕೆರಳಿಸುವಂತಿದೆ.
ಸಾಮಾಜಿಕ ಬಂಡವಾಳದಿಂದ ದಲಿತರು ಇತರ ಹಿಂದುಳಿದ ಗುಂಪುಗಳಾದ ಓಬಿಸಿ ವರ್ಗ, ಎಸ್ ಟಿಗಳು ಮತ್ತು ಮುಸ್ಲಿಮ್ ಸಮುದಾಯದಂತಹ ಧಾರ್ಮಿಕ ಅಲ್ಪಸಂಖ್ಯಾತರಿಗಿಂತ ಗಣನೀಯವಾಗಿ ಕಡಿಮೆ ಲಾಭ ಪಡೆಯುತ್ತಾರೆ. ಇದಕ್ಕೆ ದಲಿತರ ಜಾತಿ ಗುರುತಿಗೆ ಅಂಟಿಕೊಂಡ ಕಳಂಕ ಕಾರಣ. ಇದೇ ಕಾರಣಕ್ಕೆ ದಲಿತ ವ್ಯಾಪಾರಸ್ಥರು ಸಾಮಾಜಿಕವಾಗಿ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ ಎಂಬುದು ಲೇಖಕರ ವಾದ.
ಇತರ ಹಿಂದುಳಿದ ವರ್ಗ ಸಮುದಾಯಗಳಿಗೆ ಹೋಲಿಸಿದರೆ ‘ಶಿಕ್ಷಣ’ದಿಂದ ದಲಿತರಿಗೆ ಹೆಚ್ಚು ಪ್ರಯೋಜನವಾಗುತ್ತಿದೆ ಎಂಬುದನ್ನು ಅಧ್ಯಯನ ವರದಿ ಉಲ್ಲೇಖಿಸಿದೆ. ಎಲ್ಲಿ ಹೂಡಿಕೆ ಮಾಡಬೇಕು, ಎಲ್ಲಿ ಬೆಳವಣಿಗೆ ಹೊಂದಬಹುದು ಮತ್ತು ಯಾವ ರೀತಿಯ ಆವಿಷ್ಕಾರಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ಅವರಿಗೆ ಶಿಕ್ಷಣವು ತಿಳಿಸಿಕೊಡುತ್ತಿರುವುದನ್ನು ವರದಿ ಗುರುತಿಸಿದೆ.
'ನಮಗೆ ನ್ಯಾಯಯುತವಾದ ಆರ್ಥಿಕ ವ್ಯವಸ್ಥೆ ಬೇಕು. ಆ ವ್ಯವಸ್ಥೆಯಲ್ಲಿ ಒಬ್ಬರ ಜಾತಿಯ ಕಾರಣಕ್ಕೆ ಯಶಸ್ಸು ನಿರ್ಧಾರ ಆಗಬಾರದು. ದಲಿತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯದ ಮೂಲವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ಪರಿಹರಿಸಲು ಸೂಕ್ತವಾದ ಮಾರ್ಗಗಳನ್ನು ಹುಡುಕುವುದು ಬಹಳ ಮುಖ್ಯ' ಎಂಬುದು ಪ್ರೊ. ಪ್ರತೀಕ್ ರಾಜ್ ಅವರ ವಾದ.
ಸಂಕ್ಷಿಪ್ತವಾಗಿ ಹೇಳಬೇಕು ಎಂದರೆ, ಪ್ರೊ. ಪ್ರತೀಕ್ ರಾಜ್ ಅವರ ಹೊಸ ಅಧ್ಯಯನವು ದಲಿತ ಸಮುದಾಯದ ವ್ಯಾಪಾರಸ್ಥರು ಎದುರಿಸುತ್ತಿರುವ ಸವಾಲುಗಳ ಕುರಿತಾದ ವಿಸ್ತೃತ ಮಾಹಿತಿ, ಒಳನೋಟ ಒದಗಿಸುತ್ತದೆ. ಜೊತೆಗೆ ಭಾರತದಲ್ಲಿ ಅಸ್ಮಿತೆ, ಸಾಮಾಜಿಕ ಬಂಡವಾಳ, ಬಿಸಿನೆಸ್ ಯಶಸ್ಸನ್ನು ಪರಸ್ಪರ ಒಂದುಗೂಡಿಸಿಕೊಂಡು ಮುಂದೆ ಸಾಗಿ ಸಮಾನ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಲು ಮಾರ್ಗಸೂಚಿಯನ್ನು ಹಾಕಿ ಕೊಟ್ಟಿದೆ.
ಪ್ರೊಫೆಸರ್ ಪ್ರತೀಕ್ ರಾಜ್ ಅವರ ಅಧ್ಯಯನ ವರದಿ ಓದುವುದಕ್ಕಾಗಿ ಈ ಕೊಂಡಿ ಪರಿಶೀಲಿಸಬಹುದು.
https://journals.plos.org/plosone/article?id=10.1371/journal.pone.0307660#abstract0