Covid Updates: ಕೋವಿಡ್‌ಗೆ 24 ಗಂಟೆಗಳಲ್ಲಿ 5 ಮಂದಿ ಬಲಿ, 511 ತಲುಪಿದ ಜೆಎನ್‌ 1 ಪ್ರಕರಣಗಳು, ಕರ್ನಾಟಕದಲ್ಲೇ ಅಧಿಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಕೋವಿಡ್‌ಗೆ 24 ಗಂಟೆಗಳಲ್ಲಿ 5 ಮಂದಿ ಬಲಿ, 511 ತಲುಪಿದ ಜೆಎನ್‌ 1 ಪ್ರಕರಣಗಳು, ಕರ್ನಾಟಕದಲ್ಲೇ ಅಧಿಕ

Covid Updates: ಕೋವಿಡ್‌ಗೆ 24 ಗಂಟೆಗಳಲ್ಲಿ 5 ಮಂದಿ ಬಲಿ, 511 ತಲುಪಿದ ಜೆಎನ್‌ 1 ಪ್ರಕರಣಗಳು, ಕರ್ನಾಟಕದಲ್ಲೇ ಅಧಿಕ

covid Jn 1 ಭಾರತದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ, ಜೆಎನ್‌ 1 ಪ್ರಕರಣಗಳ ಸಂಖ್ಯೆ ಹಾಗೂ ಕೋವಿಡ್‌ನಿಂದ ಮಂಗಳವಾರ ಒಂದೇ ದಿನ ಮೃತಪಟ್ಟವರ ವಿವರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ದಿನದ ಬುಲೆಟಿನ್‌ನಲ್ಲಿ ಬಿಡುಗಡೆ ಮಾಡಿದೆ.

ಭಾರತದಲ್ಲಿ ಕೋವಿಡ್‌ ಜೆಎನ್‌  1 ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ.
ಭಾರತದಲ್ಲಿ ಕೋವಿಡ್‌ ಜೆಎನ್‌ 1 ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ.

ದೆಹಲಿ: ಭಾರತದಲ್ಲಿ ಕೋವಿಡ್‌ ಪ್ರಕರಣಗಳು ನಿಧಾನಗತಿಯಲ್ಲಿ ಏರುತಿದ್ದು, 24 ಗಂಟೆಗಳ ಅವಧಿಯಲ್ಲೇ 5 ಮಂದಿ ಮೃತಪಟ್ಟಿದ್ದಾರೆ. ಜೆಎನ್‌ 1ಪ್ರಕರಣಗಳಲ್ಲೂ ಹೆಚ್ಚಳವಾಗಿದ್ದು, ಈವರೆಗೂ 511 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕರ್ನಾಟಕವೇ ಅಧಿಕ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಕೋವಿಡ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ರೋಗ ನಿಯಂತ್ರಕಗಳ ಕೇಂದ್ರ( NCDC) ಅಡಿ ರೂಪಿಸಲಾಗಿರುವ ಸಮಗ್ರ ರೋಗ ಕಣ್ಗಾವಲು ಸಮಿತಿ( IDSP) ಕೂಡ ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದೆ. ಸಮಿತಿ ನೀಡಿರುವ ಮಾಹಿತಿಯೂ ದೇಶದಲ್ಲಿ ಕೋವಿಡ್‌ಗೆ ಐದು ಮಂದಿ ಮೃತಪಟ್ಟಿರುವುದು ಹಾಗೂ ಒಟ್ಟು 11 ರಾಜ್ಯಗಳಲ್ಲಿ ಕೋವಿಡ್‌ ಜೆಎನ್‌ 1 ಪ್ರಕರಣಗಳು ಕಾಣಿಸಿಕೊಂಡಿರುವುದನ್ನು ಉಲ್ಲೇಖಿಸಿದೆ.

ಇದರಲ್ಲಿ ಕೇರಳದಲ್ಲಿ ಇಬ್ಬರು, ಕರ್ನಾಟಕ, ಬಿಹಾರ ಹಾಗೂ ಪಂಜಾಬ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಅಧಿಕ ಒತ್ತಡದಿಂದ ಬಳಲುತ್ತಿದ್ದು, ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾನೆ.

ಜೆಎನ್‌ 1ನ 199 ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಕೇರಳದಲ್ಲಿ 148, ಗೋವಾದಲ್ಲಿ 47, ಗುಜರಾತ್‌ನಲ್ಲಿ 36 , ಮಹಾರಾಷ್ಟ್ರದಲ್ಲಿ 32 ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ 26 , ದೆಹಲಿಯಲ್ಲಿ 15, ತೆಲಂಗಾಣದಲ್ಲಿ 2, ಒಡಿಶಾ ಹಾಗೂ ಹರಿಯಾಣದಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿವೆ.

ಮಂಗಳವಾರ ಒಂದೇ ದಿನ ಭಾರತದಲ್ಲಿ ಒಟ್ಟು 602 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಈವರೆಗೂ ದೇಶದಲ್ಲಿ 4,440 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 722 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ದೇಶದಲ್ಲಿ 4,50,15,136, ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಗುಣಮುಖರಾದವರ ಪ್ರಕರಣಗಳ ಸಂಖ್ಯೆಯೂ 4,44,77,272ಕ್ಕೆ ತಲುಪಿದೆ.

ಜೆಎನ್‌ 1 ತೀವ್ರವಲ್ಲದ ಕೋವಿಡ್‌ ವೈರಾಣು. ಇದು ಒಂದು ರೀತಿ ಒಮಿಕ್ರಾನ್‌ ಇದ್ದ ರೀತಿಯೇ. ಜೆಎನ್‌ 1 ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುತ್ತದೆ. ಹಲವರಿಗೆ ವೈರಸ್‌ ಇದ್ದರೂ ರೋಗ ಲಕ್ಷಣಗಳು ಗೊತ್ತೇ ಆಗುವುದಿಲ್ಲ. ತೀವ್ರ ಮೂಗಿನ ಸೋರಿಕೆ. ಕೆಮ್ಮು, ಗಂಟಲಿನಲ್ಲಿ ನೋವು, ಧ್ವನಿ ಸಂಪೂರ್ಣ ಬದಲಾಗಿದ್ದರೆ ಜೆಎನ್‌ 1 ವೈರಸ್‌ನ ಲಕ್ಷಣ. ಆದರೂ ಆತಂಕ ಪಡುವ ಮಟ್ಟಿಗೇನೂ ಇಲ್ಲ. ರೋಗ ಲಕ್ಷಣಗಳಿದ್ದಾಗ ವೈದ್ಯರ ಸಲಹೆ ಪಡೆದು ಔಷಧಗಳನ್ನು ಪಡೆದು ಗುಣಮುಖರಾಗಬಹುದು ಎಂದು ದೆಹಲಿಯ ಅಪೊಲೋ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜೇಶ್‌ ಚಾವ್ಲಾ ಹೇಳುತ್ತಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.