Girl Kidnapped: ಮುಂಬಯಿನಲ್ಲಿ 6 ವರ್ಷದ ಬಾಲಕಿಯ ಅಪಹರಣ, 500 ಕಿಮೀ ದೂರ ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ ಪತ್ತೆ, ರಕ್ಷಣೆ
Girl Kidnapped: ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಿಂದ 6 ವರ್ಷದ ಬಾಲಕಿ ಅಪಹರಣಕ್ಕೆ ಒಳಗಾಗಿದ್ದು, 500 ಕಿ.ಮೀ. ದೂರದಲ್ಲಿ ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ ಪತ್ತೆಯಾಗಿದ್ದಾಳೆ. ಅಪಹರಣಕಾರನನ್ನು ಪೊಲೀಸರು ಬಂಧಿಸಿದ್ದಾರೆ.
ನಾಗಪುರ: ಮುಂಬಯಿಯಿಂದ ಅಪಹರಣಕ್ಕೆ ಒಳಗಾದ 6 ವರ್ಷದ ಬಾಲಕಿಯನ್ನು (Girl Kidnapped) 500 ಕಿಮೀ ದೂರ ಶಾಲಿಮಾರ್ ಎಕ್ಸ್‌ಪ್ರೆಸ್ (Shalimar Express) ನಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಮುಂಬಯಿಯಿಂದ 500 ಕಿ.ಮೀ. ದೂರ ಇರುವ ಬುಲ್ಧಾನ ಜಿಲ್ಲೆಯಲ್ಲಿ ರೈಲು ನಿಲ್ಲಿಸಿ ಬಾಲಕಿಯನ್ನು ರಕ್ಷಿಸಲಾಗಿತ್ತು. ಕೋಲ್ಕತ್ತ ಮೂಲದ ರತಿನ್‌ಶಂಕರ್ ಘೋಷ್ (33) ಅಪಹರಣಕಾರ ಎಂದು ಗುರುತಿಸಲಾಗಿದೆ. ಆತನನ್ನು ಕೂಡ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮತ್ತು ಶೇಗಾಂವ್ ಪೊಲೀಸರನ್ನು ಒಳಗೊಂಡ ತಂಡವು ಈ ಕಾರ್ಯಾಚರಣೆ ನಡೆಸಿತ್ತು. ಮುಂಬಯಿ ಪೊಲೀಸರಿಂದ ಮಾಹಿತಿ ಪಡೆದ ನಂತರ ಈ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ರಣವೀರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ| ಡೆತ್ ಸರ್ಟಿಫಿಕೇಟ್ ಕೊಡೋಕೆ ಬಿಬಿಎಂಪಿ ಮೀನ ಮೇಷ, ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್
ಮುಂಬಯಿನ ನಾಗಪಾದದಲ್ಲಿ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಕೋಲ್ಕತ್ತ ತೆರಳುವ ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು ಏರಿದ್ದು ಸಿಸಿಟಿವಿ ಫೂಟೇಜ್‌ನಲ್ಲಿ ದೃಢಪಟ್ಟಿತ್ತು. ಶೇಗಾಂವ್ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ರೈಲಿನಲ್ಲಿ ಸಂಪೂರ್ಣ ಶೋಧ ನಡೆಸಿದರು. ಆಗ ರತಿನ್‌ಶಂಕರ್ ಘೋಷ್ ರೈಲಿನ ವಾಶ್ ರೂಂನಲ್ಲಿ ಅಡಗಿರುವುದು ಕಂಡುಬಂದಿದೆ. ಆದರೆ ಶೇಗಾಂವ್ ನಿಲ್ದಾಣದಲ್ಲಿ ಪೊಲೀಸರು ಆತನನ್ನು ವಾಷ್‌ರೂಮ್‌ನಿಂದ ಹೊರಗೆ ಬರುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ| ಬಿಎಂಟಿಸಿ ಬಸ್‌ಗಳಲ್ಲಿ ರಾತ್ರಿ ಪ್ರಯಾಣದರ ಏರಿಕೆ ರದ್ದು, ನಮ್ಮ ಬಿಎಂಟಿಸಿ ಆಪ್ ಸೆಪ್ಟೆಂಬರ್ 25ಕ್ಕೆ ಬಿಡುಗಡೆ
ಹಿಂದಿನ ನಿಲ್ದಾಣಗಳಲ್ಲಿ ಕೂಡ ವಾಶ್‌ರೂಮ್‌ನಲ್ಲಿ ಅಡಗಿಕೊಂಡಿದ್ದೆ ಎಂದು ಘೋಷ್ ಹೇಳಿದ್ದ. ಬಾಲಕಿಯನ್ನು ಜನರಲ್ ಬೋಗಿಯಲ್ಲಿ ಕರೆದುಕೊಂಡು ಹೊರಟಿದ್ದ. ಆಕೆಯನ್ನು ಬರ್ತ್ ಮೇಲೆ ಮಲಗಿಸಿ ಬೆಡ್ ಶೀಟ್ ಹೊದೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘೋಷ್ ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.