8th Pay Commission: ಹೊಸ ವೇತನ ಆಯೋಗ ರಚನೆಗೆ ಒಪ್ಪಿಗೆ, ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಬಜೆಟ್ ಮುನ್ನವೇ ಶುಭಸುದ್ದಿ
8th Pay Commission: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗವನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. 2014ರಲ್ಲಿ 7ನೇ ವೇತನ ಆಯೋಗ ರಚನೆಯಾಗಿದ್ದು, ಇದೀಗ ಸುಮಾರು ಹತ್ತು ವರ್ಷ ಕಳೆದ ಬಳಿಕ ಎಂಟನೇ ಆಯೋಗ ರಚಿಸಲು ಸಮ್ಮತಿ ನೀಡಲಾಗಿದೆ.
ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8 ನೇ ವೇತನ ಆಯೋಗವನ್ನು ರಚಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. "ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8 ನೇ ವೇತನ ಆಯೋಗವನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಶೀಘ್ರದಲ್ಲೇ ನೇಮಿಸಲಾಗುವುದು" ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ವೇತನ ರಚನೆಯನ್ನು ಪರಿಷ್ಕರಿಸಲು ಪ್ರತಿ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ. ವೇತನ ಆಯೋಗಗಳು ಪಿಂಚಣಿ ಪಾವತಿಗಳನ್ನು ಸಹ ನಿರ್ಧರಿಸುತ್ತವೆ. 7ನೇ ವೇತನ ಆಯೋಗವನ್ನು 2016 ರಲ್ಲಿ ಸ್ಥಾಪಿಸಲಾಯಿತು. ಅದರ ಅವಧಿ 2026ರಲ್ಲಿ ಕೊನೆಗೊಳ್ಳುತ್ತದೆ.
ಸರಕಾರವು ಆದಾಯ ಸಂಗ್ರಹಿಸಿ ಇಡುವ ಖಾತೆಯಿಂದ ಕೇಂದ್ರ ಸರ್ಕಾರಿ ನೌಕರರು, ಕೇಂದ್ರ ಸರ್ಕಾರದ ನಾಗರಿಕ ಸೇವೆಗಳಲ್ಲಿರುವ ಎಲ್ಲಾ ವ್ಯಕ್ತಿಗಳು ವೇತನ ಪಡೆಯುತ್ತಾರೆ. ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯು) ಮತ್ತು ಸ್ವಾಯತ್ತ ಸಂಸ್ಥೆಗಳ ನೌಕರರು ಮತ್ತು ಗ್ರಾಮೀಣ ಡಾಕ್ ಸೇವಕರು 7ನೇ ವೇತನ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಉದಾಹರಣೆಗೆಕೋಲ್ ಇಂಡಿಯಾದಂತಹ ಪಿಎಸ್‌ಯುಗಳಲ್ಲಿ ಕೆಲಸ ಮಾಡುವವವರು ಇದಕ್ಕೆ ಒಳಪಡುವುದಿಲ್ಲ. ಪಿಎಸ್‌ಯು ಉದ್ಯೋಗಿಗಳಿಗೆ ಪ್ರತ್ಯೇಕ ವೇತನ ಶ್ರೇಣಿ ಇರುತ್ತದೆ.
7ನೇ ವೇತನ ಆಯೋಗದ ವೇತನ ಪರಿಷ್ಕರಣೆ ಸಮಯದಲ್ಲಿ ನೌಕರರ ಸಂಘಗಳು 3.68 ಫಿಟ್‌ಮೆಂಟ್ ಅಂಶವನ್ನು ಬೇಡಿಕೆ ಇಟ್ಟವು. ಆದರೆ ಸರ್ಕಾರವು 2.57 ರ ಫಿಟ್‌ಮೆಂಟ್ ಅಂಶವನ್ನು ನಿರ್ಧರಿಸಿತು. ಫಿಟ್‌ಮೆಂಟ್ ಅಂಶವು ಸಂಬಳ ಮತ್ತು ಪಿಂಚಣಿಗಳನ್ನು ಲೆಕ್ಕಾಚಾರ ಮಾಡಲು ಬಳಸುವ ಮಲ್ಟಿಪ್ಲಯರ್ ಆಗಿದೆ. ಇದರಿಂದಾಗಿ ಆರನೇ ವೇತನ ಆಯೋಗದಲ್ಲಿ ಇದ್ದ ಬೇಸಿಕ್ ವೇತನ 7 ಸಾವಿರ ರೂಪಾಯಿಯು ಏಳನೇ ವೇತನ ಆಯೋಗದಲ್ಲಿ 18,000 ರೂಪಾಯಿ ಮೂಲ ವೇತನವಾಗಿದೆ. ಇದರಿಂದ ಕನಿಷ್ಠ ಪಿಂಚಣಿ ಕೂಡ 3,500 ರೂನಿಂದ 9,000 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಗರಿಷ್ಠ ವೇತನ 2,50,000 ರೂಪಾಯಿ ಮತ್ತು ಗರಿಷ್ಠ ಪಿಂಚಣಿ 1,25,000 ರೂಗೆ ತಲುಪಿತ್ತು.
