Adhir Ranjan: ಲೋಕಸಭೆಯ ಕಾಂಗ್ರೆಸ್ ನಾಯಕನ ಅಮಾನತು ಇದೇ ಮೊದಲು; ಪ್ರಧಾನಿಯನ್ನು ಅಂಧ ರಾಜನಿಗೆ ಹೋಲಿಸಿದ ಅಧೀರ್ ರಂಜನ್ ಚೌಧರಿ
Adhir Ranjan: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಇಂಡಿಯಾ ಮೈತ್ರಿಕೂಟ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಗುರುವಾರ ಸೋಲು ಕಂಡಿತು. ಆದರೆ ಈ ಗೊತ್ತುವಳಿ ಚರ್ಚೆ ವೇಳೆ ಹಲವು ವಿಚಾರಗಳು ಗಮನಸೆಳೆದವು. ಪ್ರಧಾನಿ ಮೋದಿ ಅವರನ್ನು ಅಪಮಾನಿಸುವಂತೆ ಹೇಳಿಕೆ ನೀಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಮಾನತಿಗೆ ಒಳಗಾದರು. ಇಲ್ಲಿದೆ ಆ ವಿವರ.
ನವದೆಹಲಿ: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಅವರ "ಒಟ್ಟಾರೆ, ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ದುರ್ನಡತೆ"ಗಾಗಿ ಅವರ ವಿರುದ್ಧ ವಿಶೇಷ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಲಾಗಿತ್ತು.
ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಧೃತರಾಷ್ಟ್ರನಿಗೆ ಹೋಲಿಸಲು ಪ್ರಯತ್ನಿಸಿದ ಕೆಲವೇ ಗಂಟೆಗಳ ನಂತರ ಮತ್ತು ಪ್ರಧಾನಿ "ನೀರವ್" (ಬಂಗಾಲಿ ಪದ ಇದಾಗಿದ್ದು ಮೌನ(ಮೂಕ) ಎಂಬರ್ಥ) ಎಂದು ಟೀಕಿಸಿದ್ದರು.
"ಸಂಸತ್ತಿನ ಇತಿಹಾಸದಲ್ಲಿ ಅತಿದೊಡ್ಡ ವಿರೋಧ ಪಕ್ಷದ ನಾಯಕನನ್ನು ಸದನದಿಂದ ಅಮಾನತುಗೊಳಿಸಿರುವುದು ಇದೇ ಮೊದಲು" ಎಂದು ಸಂಸತ್ತಿನ ಇತಿಹಾಸಕಾರ ರವೀಂದ್ರ ಗರಿಮೇಳ ಅವರು ಹಿಂದೂಸ್ತಾನ್ ಟೈಮ್ಸ್‌ಗೆ ಹೇಳಿದರು.
ಅಧೀರ್ ರಂಜನ್ ಚೌಧರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಸಚಿವ ಪ್ರಲ್ಹಾದ್ ಜೋಶಿ
ಅವಿಶ್ವಾಸ ನಿರ್ಣಯದ ಮೇಲಿನ ಸುದೀರ್ಘ ಚರ್ಚೆ ಗುರುವಾರ ಕೊನೆಗೊಂಡ ನಂತರ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿದರು.
“ಈ ಸದನವು ಅಧೀರ್ ರಂಜನ್ ಚೌಧರಿ ಅವರ ಸ್ಥೂಲ, ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ದುರ್ವರ್ತನೆಯನ್ನು ಸದನ ಮತ್ತು ಸ್ಪೀಕರ್ ಅವರು ಗಮನಿಸುತ್ತಲೇ ಇದ್ದರು. ದುರ್ನಡತೆಯ ವಿಷಯವನ್ನು ಹೆಚ್ಚಿನ ತನಿಖೆಗಾಗಿ ವಿಶೇಷಾಧಿಕಾರಗಳ ಸಮಿತಿಗೆ ಮತ್ತಷ್ಟು ಉಲ್ಲೇಖಿಸಲು ಮತ್ತು ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಚೌಧರಿ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಲು ನಿರ್ಧರಿಸಿದೆ" ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ದಿನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಚರ್ಚೆಯ ಸಮಯದಲ್ಲಿ ಚೌಧರಿ ಅವರ ವರ್ತನೆಯು ಸೂಕ್ತವಲ್ಲ ಎಂಬುದನ್ನು ಗಮನಿಸಿ ಸೂಕ್ಷ್ಮವಾಗಿ ಎಚ್ಚರಿಸಿದ್ದರು.
ಸ್ಪೀಕರ್ ಎಚ್ಚರಿಕೆ ನಿರ್ಲಕ್ಷಿಸಿದ್ದ ಅಧೀರ್ ರಂಜನ್ ಚೌಧರಿ
"ಇದು ಅವರಿಗೆ ಅಭ್ಯಾಸವಾಗಿದೆ. ಸ್ಪೀಕರ್ ಪದೇ ಪದೇ ಎಚ್ಚರಿಕೆ ನೀಡಿದರೂ ಅವರು ಸುಧಾರಿಸಿಕೊಂಡಿಲ್ಲ. ಯಾವಾಗಲೂ ತನ್ನ ಚರ್ಚೆಯಲ್ಲಿ ಅವರು ಈ ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ ಮತ್ತು ಸದನದ ಘನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಅವರ ವಾದಗಳಲ್ಲಿ ಯಾವುದೇ ಸತ್ಯಗಳಿಲ್ಲ ಮತ್ತು ಅವರು ಎಂದಿಗೂ ಕ್ಷಮೆಯಾಚಿಸುವುದಕ್ಕೂ ಮುಂದಾಗಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಅವಿಶ್ವಾಸ ಗೊತ್ತುವಳಿ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಮಾಯಣ ಉಲ್ಲೇಖಿಸಿದರೆ, ಅಧೀರ್ ರಂಜನ್ ಚೌಧರಿ ಮಹಾಭಾರತ ಉಲ್ಲೇಖಿಸಿದರು.
ಪ್ರಧಾನಿ ಮೋದಿಯವರನ್ನು ಅಪಮಾನಿಸಿಲ್ಲ ಎಂದ ಅಧೀರ್ ರಂಜನ್ ಚೌಧರಿ
ನಾನು ಪ್ರಧಾನಿ ಮೋದಿಯವರನ್ನು ಅವಮಾನಿಸಿಲ್ಲ. ಮೋದಿಜಿ ಎಲ್ಲದರ ಬಗ್ಗೆ ಮಾತನಾಡುತ್ತಾರೆ ಆದರೆ ಮಣಿಪುರದ ವಿಷಯದಲ್ಲಿ ಅವರು ‘ನೀರವ್’ ಆಗಿ ಕುಳಿತಿದ್ದಾರೆ. ನೀರವ್ ಅಂದರೆ ಮೌನವಾಗಿರುವುದು. ಪ್ರಧಾನಿ ಮೋದಿಯವರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಪ್ರಧಾನಿ ಮೋದಿ ಅವರಿಗೆ ಅವಮಾನವಾಗಿದೆ ಎಂದು ಭಾವಿಸಿಲ್ಲ/ ಅವರ ಆಸ್ಥಾನಿಕರು (ದರ್ಬಾರಿ) ಹಾಗೆ ಭಾವಿಸಿ ನನ್ನ ವಿರುದ್ಧ ಈ ಹಕ್ಕುಚ್ಯುತಿ ಪ್ರಸ್ತಾಪವನ್ನು ತಂದರು. (ವಿಷಯ) ವಿಶೇಷಾಧಿಕಾರ ಸಮಿತಿಗೆ ಈ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಈ ವಿಚಾರ ಇತ್ಯರ್ಥವಾಗುವ ತನಕ ನನ್ನನ್ನು ಅಮಾನತುಗೊಳಿಸಲಾಗಿದೆ ಎಂಬುದು ನನ್ನ ಅರಿವಿಗೆ ಬಂದಿದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದರು.
ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಭಾಷಣದಲ್ಲಿ ಹೇಳಿರುವುದೇನು
ಚೌಧರಿಯವರ ಭಾಷಣವು ಪ್ರಾಸಂಗಿಕವಾಗಿ, ಮೂಲತಃ ಗುರುವಾರ ನಿಗದಿಯಾಗಿರಲಿಲ್ಲ. ಅವಿಶ್ವಾಸದ ಚರ್ಚೆಯಲ್ಲಿ ತಮ್ಮ ಭಾಷಣದ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚೌಧರಿ ಅವರಿಗೆ ಸಮಯ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಸಂಸದರಿಗೆ ಎನ್‌ಡಿಎ ಕೋಟಾದಿಂದ ಸ್ವಲ್ಪ ಸಮಯ ನೀಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.
ಚೌಧರಿ ತಮ್ಮ ಭಾಷಣದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಧೃತರಾಷ್ಟ್ರನಿಗೆ ಹೋಲಿಸಲು ಪ್ರಯತ್ನಿಸಿದರು ಮತ್ತು ಮಣಿಪುರದಲ್ಲಿ ಪ್ರಧಾನಿ "ನೀರವ್" (ಬಂಗಾಲಿಯಲ್ಲಿ ಮೌನ) ಎಂದು ಸೂಚಿಸಿದರು. ಅವರ ಈ ಹೇಳಿಕೆಗಳು ಆಡಳಿತ ಪಕ್ಷದ ಸದಸ್ಯರ ಆಕ್ರೋಶಕ್ಕೆ ಕಾರಣವಾದವು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ, ಪ್ರಧಾನಿಯ ಬಗ್ಗೆ ಯಾರೂ ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಅವರ ಹೇಳಿಕೆಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗೆ ವಂಚಿಸಿ ಭಾರತದಿಂದ ಪಲಾಯನಗೈದ ವಜ್ರದ ವ್ಯಾಪಾರಿ ನೀರವ್ ಮೋದಿಯ ಉಲ್ಲೇಖವಾಗಿಯೂ ಕಂಡುಬಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಆಕ್ಷೇಪಾರ್ಹ ಮಾತುಗಳನ್ನು ಕೈ ಬಿಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಬಿಜೆಪಿ ನಾಯಕ ವೀರೇಂದ್ರ ಸಿಂಗ್ ಕೂಡ ಲೋಕಸಭೆಯ ಘನತೆ ಮೀರಿ ವರ್ತಿಸಿದ್ದರು. ಸ್ಪೀಕರ್ ಈ ಕುರಿತು ಹೇಳಿದ ಕೂಡಲೇ ಅವರು ಕ್ಷಮೆಯಾಚಿಸಿದ್ದರು. ಆದರೆ, ಚೌಧರಿ ಅವರು ಕ್ಷಮೆ ಕೇಳದೆ ಸಭಾತ್ಯಾಗ ಮಾಡಿದ್ದರು.