Modi at Kanyakumari: ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi At Kanyakumari: ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ

Modi at Kanyakumari: ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ

Modi Meditation ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಗೆ ಆಗಮಿಸಿ ಧ್ಯಾನವನ್ನು ಆರಂಭಿಸಿದರು. ಈ ಹಿಂದೆ ಹಿಮಾಲಯ, ಉತ್ತರಾಖಂಡದಲ್ಲೂ ಇದೇ ರೀತಿ ಧ್ಯಾನದಲ್ಲಿ ಮೋದಿ ಮಗ್ನರಾಗಿದ್ದರು.

ಕನ್ಯಾಕುಮಾರಿ ವಿವೇಕಾನಂದ ಸ್ಮಾರಕದ ಎದುರು ಪ್ರಧಾನಿ ಮೋದಿ
ಕನ್ಯಾಕುಮಾರಿ ವಿವೇಕಾನಂದ ಸ್ಮಾರಕದ ಎದುರು ಪ್ರಧಾನಿ ಮೋದಿ

ಕನ್ಯಾಕುಮಾರಿ : ಲೋಕಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಮುಕ್ತಾಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮಿಳುನಾಡಿನ ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಪ್ರಾರಂಭಿಸಿದರು. ಸಂಜೆ ನಗರಕ್ಕೆ ಆಗಮಿಸಿದ ಪ್ರಧಾನಿ, ವಿವೇಕಾನಂದ ರಾಕ್ ಮೆಮೋರಿಯಲ್ ಗೆ ತೆರಳುವ ಮೊದಲು ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹಿಂದೂ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು 'ಭಾರತ ಮಾತೆ' ಬಗ್ಗೆ ದೈವಿಕ ದರ್ಶನ ಹೊಂದಿದ್ದರು ಎಂದು ಹೇಳಲಾಗುವ ಧ್ಯಾನ ಮಂಟಪದಲ್ಲಿ ಗುರುವಾರ ಸಂಜೆಯಿಂದ ಜೂನ್ 1 ರ ಶನಿವಾರ ಸಂಜೆಯವರೆಗೆ ಮೋದಿ ಧ್ಯಾನ ಮಾಡಲಿದ್ದಾರೆ.

ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅವರ ವಾಸ್ತವ್ಯದ ಸಮಯದಲ್ಲಿ 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆ ಕೂಡ ಬಿಗಿಯಾದ ಭದ್ರತೆಯನ್ನು ವಹಿಸಿದ್ದು, ಅಧಿಕಾರಿಗಳು, ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

ಕಡಲತೀರವು ಗುರುವಾರದಿಂದ ಶನಿವಾರದವರೆಗೆ ಪ್ರವಾಸಿಗರಿಗೆ ಬಂದ್‌ ಆಗಲಿದೆ ಮತ್ತು ಖಾಸಗಿ ದೋಣಿಗಳ ಸಂಚಾರಕ್ಕೂಅನುಮತಿಸಲಾಗುವುದಿಲ್ಲ ಎಂದು ಪಿಟಿಐ ವರದಿ ಮಾಡಿದೆ.

2014 ರಲ್ಲಿ ಚುನಾವಣಾ ಪ್ರಚಾರದ ಕೊನೆಯಲ್ಲಿ ಮೋದಿ ಅವರು ಶಿವಾಜಿ ನೇತೃತ್ವದ ಮರಾಠಾ ಪಡೆಗಳು ಮತ್ತು ಜನರಲ್ ಅಫ್ಜಲ್ ಖಾನ್ ನೇತೃತ್ವದ ಬಿಜಾಪುರ ಪಡೆಗಳ ನಡುವೆ ಯುದ್ಧ ನಡೆದ ಪ್ರತಾಪ್ಗಢಕ್ಕೆ ಭೇಟಿ ನೀಡಿದಾಗ ಮತ್ತು 2019 ರಲ್ಲಿ ಕೇದಾರನಾಥದ ವಿಶೇಷ ಗುಹೆಯಲ್ಲಿ ಧ್ಯಾನ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೇ ರೀತಿಯಲ್ಲಿ ಹಲವು ಬಾರಿ ಅವರು ವಿರಾಮ ತೆಗೆದುಕೊಂಡು ಗಮನ ಸೆಳೆದಿದ್ದಾರೆ.

45 ಗಂಟೆಗಳ ಕಾಲ ಕನ್ಯಾಕುಮಾರಿಯ ಸಮುದ್ರಗಳ ನಡುವಿನ ವಿವೇಕಾನಂದ ಸ್ಮಾರಕದಲ್ಲಿ ಧ್ಯಾನಕ್ಕೆ ಕೂಡಲಿದ್ದಾರೆ. ಈ ವೇಳೆ ಜಲಾಹಾರ ಬಿಟ್ಟು ಏನನ್ನು ಸೇವಿಸುವುದಿಲ್ಲ. ಮೂರು ಹೊತ್ತು ಜಲಾಹಾರವನ್ನೂ ಸೇವಿಸುವರು. ಹಣ್ಣಿನ ರಸ ಇಲ್ಲವೇ ಎಳೆನೀರನ್ನು ಪ್ರಧಾನಿ ಅವರಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಸಂಜೆಯೇ ಅವರು ಆಗಮಿಸಿ ಕೆಲ ಹೊತ್ತು ಸುಂದರ ಪರಿಸರದಲ್ಲ ಕಳೆದರು. ಆನಂತರ ಧ್ಯಾನ ಆರಂಭಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಯಾರೂ ಇರಲಿಲ್ಲ. ಸ್ಮಾರಕದ ಪ್ರಮುಖ ಸಿಬ್ಬಂದಿ ಮಾತ್ರ ಹಾಜರಿದ್ದರು ಎನ್ನಲಾಗಿದೆ.

ಎರಡೂವರೆ ತಿಂಗಳು ಸತತ ಪ್ರಚಾರ

ಮಾರ್ಚ್ 16 ರಂದು ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದಾಗಿನಿಂದ, ಮೋದಿ ರ್ಯಾಲಿಗಳು ಮತ್ತು ರೋಡ್ ಶೋಗಳು ಸೇರಿದಂತೆ ಒಟ್ಟು 206 ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಲ್ಲಿ ಎರಡೂವರೆ ತಿಂಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

2019 ರ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 145 ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಹಿಂದಿನ ಚುನಾವಣೆ ದಾಖಲೆ ಮುರಿದಿದ್ಧಾರೆ. ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ 68 ದಿನಗಳಿಗೆ ಹೋಲಿಸಿದರೆ ಈ ಬಾರಿ ಪ್ರಚಾರದ ಅವಧಿ 76 ದಿನಗಳಿದ್ದವು.

ಕಾಂಗ್ರೆಸ್‌ ದೂರು

ವಿವೇಕಾನಂದ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಕನ್ಯಾಕುಮಾರಿಯಲ್ಲಿ 48 ಗಂಟೆಗಳ ಧ್ಯಾನ ಪ್ರವಾಸದೊಂದಿಗೆ ಮೋದಿ ಮೌನ ಅವಧಿಯ ನಿರ್ಬಂಧಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಆರೋಪಿಸಿದೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದರಿಂದ ಮಾಧ್ಯಮಗಳು ಪ್ರಸಾರ ಮಾಡದಂತೆ ನೋಡಿಕೊಳ್ಳುವಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಒತ್ತಾಯಿಸಿದ್ದು, ಚುನಾವಣಾ ಆಯೋಗಕ್ಕೆ ಔಪಚಾರಿಕ ದೂರನ್ನು ಸಹ ಸಲ್ಲಿಸಿದೆ.




(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.