Viral Photo: ಅಳಬೇಡ ನನ್ನ ಚಿನ್ನಅಮ್ಮ ಬರ್ತಾರೆ; ಪರೀಕ್ಷೆ ಬರೆಯಲು ಬಂದಾಕೆಯ 6 ತಿಂಗಳ ಮಗುವನ್ನು ಸಂತೈಸಿದ ಪೊಲೀಸಮ್ಮ, ಫೋಟೋಸ್ ನೋಡಿ
ಮಗುವನ್ನು ಸಂತೈಸಿದ ಮಹಿಳಾ ಪೇದೆ, ಮಗುವಿನ ತಾಯಿ ಇಬ್ಬರಿಗೂ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಹಮದಾಬಾದ್ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮದುವೆ, ಮಕ್ಕಳಾದ ನಂತರ ಮಹಿಳೆಯರ ಜೀವನ ಇನ್ಮುಂದೆ ಮಕ್ಕಳು, ಪತಿ ಹಾಗೂ ಮನೆಯವರ ಕಾಳಜಿ ಮಾಡುವುದಲ್ಲೇ ಮುಗಿಯುತ್ತದೆ ಅನ್ನೋದು ತಪ್ಪು ತಿಳುವಳಿಕೆ. ಛಲ, ಶ್ರಮ ಏನಾದರೂ ಸಾಧಿಸಬೇಕೆಂಬ ಮನಸ್ಸು ಇದ್ದರೆ ಮದುವೆ , ವಯಸ್ಸು ಯಾವುದೂ ಅಡ್ಡಿ ಬರುವುದಿಲ್ಲ. ಇದಕ್ಕೆ ಈ ಫೋಟೋಗಳೇ ಸಾಕ್ಷಿ.
6 ತಿಂಗಳ ಮಗುವಿನೊಂದಿಗೆ ಪರೀಕ್ಷೆಗೆ ಬಂದ ತಾಯಿ
ಈಗಂತೂ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರ ಸರಿ ಸಮ ನಿಂತು ಕೆಲಸ ಮಾಡುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಹೊರಗೆ ಕೆಲಸ, ಸಂಜೆ ಮನೆಯಲ್ಲಿ ಕೆಲಸದ ಒತ್ತಡ ಇದ್ದರೂ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಫೋಟೋಗಳನ್ನು ನೋಡಿ, ಇಲ್ಲಿ ಮಹಿಳೆಯೊಬ್ಬರು 6 ತಿಂಗಳ ಕಂದನನ್ನು ಎತ್ತಿ ಮುದ್ದಾಡುತ್ತಿದ್ದಾರೆ. ಅಸಲಿಗೆ ಈ ಮಗುವಿನ ಅಮ್ಮ ಸಮೀಪದಲ್ಲೇ ಒಂದು ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಹೊರಗೆ ಈ ಮಹಿಳಾ ಕಾನ್‌ಸ್ಟೇಬಲ್, ಆ ಮಗುವನ್ನು ಎತ್ತಿಕೊಂಡು ಸಂತೈಸುತ್ತಿದ್ದಾರೆ.
ಮಗುವನ್ನು ಸಂತೈಸಿದ ಮಹಿಳಾ ಪೇದೆ
ಗುಜರಾತ್‌ನ ಅಹಮದಾಬಾದ್‌ನ ಓದವ್ ಪರೀಕ್ಷಾ ಕೇಂದ್ರಕ್ಕೆ ಮಹಿಳೆಯೊಬ್ಬರು ತಮ್ಮ 6 ತಿಂಗಳ ಮಗುವಿನೊಂದಿಗೆ ಹೈ ಕೋರ್ಟ್ ಪ್ಯೂನ್ ಹುದ್ದೆಗೆ ಪರೀಕ್ಷೆ ಬರೆಯಲು ಬಂದಿದ್ದಾರೆ. ಪರೀಕ್ಷೆ ಬರೆಯಲು ಒಳಗೆ ಹೋದಾಗ, ಹೊರಗೆ ನಿಯೋಜಿಸಲಾಗಿದ್ದ ಮಹಿಳಾ ಪೇದೆಯೊಬ್ಬರಿಗೆ ಮಗುವನ್ನು ಕೊಟ್ಟು ಹೋಗಿದ್ದಾರೆ. ಅಮ್ಮ ಅಲ್ಲಿಂದ ಮರೆ ಆಗುತ್ತಿದ್ದಂತೆ ಮಗು ಒಂದೇ ಸಮ ಅಳತೊಡಗಿದೆ. ಪರೀಕ್ಷೆ ಶುರುವಾಗುತ್ತಿದೆ, ಒಳಗೆ ಹೋಗಿ ಪರೀಕ್ಷೆ ಬರೆಯುವುದೋ, ಅಳುತ್ತಿರುವ ಮಗುವನ್ನು ಸಂತೈಸುವುದೋ, ಆ ತಾಯಿಗೆ ದಿಕ್ಕು ತೋಚದಂತೆ ಆಗಿದೆ, ಆಗ ಆ ಮಹಿಳಾ ಕಾನ್‌ಸ್ಟೇಬಲ್, ಮಗುವನ್ನು ನಾನು ಸಮಾಧಾನ ಮಾಡುತ್ತೇನೆ, ನೀವು ಈ ಕಡೆ ಗಮನ ಹರಿಸದೆ ಹೋಗಿ ಪರೀಕ್ಷೆ ಬರೆಯಿರಿ ಎಂದು ತಾಯಿಗೆ ಧೈರ್ಯ ಹೇಳಿ ಪರೀಕ್ಷೆ ಬರೆಯಲು ಕಳಿಸಿದ್ದಾರೆ. ಜೊತೆಗೆ ಮಗುವನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ.
ಮಹಿಳಾ ಪೇದೆಯ ಕಾರ್ಯಕ್ಕೆ ಮೆಚ್ಚುಗೆ
ಅಮ್ಮ ಅತ್ತ ಹೋದ ನಂತರ ಅಳುತ್ತಲೇ ಇದ್ದ ಮಗು, ನಂತರ ಸುಮ್ಮನಾಗಿದೆ. ಕಾನ್‌ಸ್ಟೇಬಲ್ ದಯಾ, ಮಗುವನ್ನು ಸಂತೈಸುತ್ತಿರುವ ಫೋಟೋಗಳನ್ನು ಅಹಮದಾಬಾದ್ ಪೊಲೀಸರು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಪೇದೆಯ ಕಾರ್ಯಕ್ಕೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ''ದಯಾ ಮೇಡಂ ನಿಜಕ್ಕೂ ನಿಮ್ಮ ಸಹಾಯವನ್ನು ಎಷ್ಟು ಹೊಗಳಿದರೂ ಸಾಲದು, ಹೆತ್ತವಳು ಮಾತ್ರವಲ್ಲ, ಮಗುವಿನ ಆರೈಕೆ ಮಾಡುವವಳೂ ಕೂಡಾ ತಾಯಿ ಎಂಬುದನ್ನು ನೀವು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ'' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ''ಪೊಲೀಸರ ಬಗ್ಗೆ ಕೆಲವರು ತಪ್ಪು ತಿಳಿದಿದ್ದಾರೆ, ಆದರೆ ನಿಮ್ಮ ಮೂಲಕ ಪೊಲೀಸರಿಗೂ ಎಷ್ಟು ದಯೆ ಇದೆ ಎಂಬುದನ್ನು ತೋರಿಸಿದ್ದೀರಿ'', ''ನಿಮ್ಮ ಹೆಸರಿಗೆ ತಕ್ಕಂತೆ ನೀವು ದಯೆ ಇರುವ ಮಹಿಳೆ, ಅಹಮದಾಬಾದ್ ಪೊಲೀಸರ ಕಾರ್ಯಕ್ಕೆ ಒಂದು ಸೆಲ್ಯೂಟ್'' ಎಂದು ಕಾಮೆಂಟ್ ಮಾಡುವ ಮೂಲಕ ಹೊಗಳುತ್ತಿದ್ದಾರೆ.
ಅಮ್ಮನಿಗೂ ಮೆಚ್ಚುಗೆಯ ಮಹಾಪೂರ
ಕಾನ್‌ಸ್ಟೇಬಲ್ ದಯಾ ಮಾತ್ರವಲ್ಲ, ಮಗುವಿನ ತಾಯಿಗೂ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಜೀವನದಲ್ಲಿ ಕಷ್ಟವೋ, ಛಲವೋ ಗೊತ್ತಿಲ್ಲ, 6 ತಿಂಗಳ ಮಗು ಇದ್ದರೂ ಪರೀಕ್ಷಾ ಕೇಂದ್ರಕ್ಕೆ ಬಂದು ಬರೆದು ಹೇಗಾದರೂ ಕೆಲಸ ಪಡೆಯಬೇಕೆಂದು ಇಷ್ಟೆಲ್ಲಾ ರಿಸ್ಕ್ ತೆಗೆದುಕೊಂಡಿದ್ದೀರಿ, ನಿಮಗೆ ಒಳ್ಳೆಯದಾಗಲಿ, ಈ ಕೆಲಸ ನಿಮಗೇ ಸಿಗಲಿ ಎಂದು ಜನರು ಹಾರೈಸುತ್ತಿದ್ದಾರೆ.
ಮಕ್ಕಳೊಂದಿಗೆ ಈ ರೀತಿ ಪರೀಕ್ಷಾ ಕೇಂದ್ರಕ್ಕೆ ಬಂದು ಮಹಿಳೆಯರು ಪರೀಕ್ಷೆ ಬರೆದಿರುವ ಸಾಕಷ್ಟು ಉದಾಹರಣೆಗಳಿವೆ. ಜೊತೆಗೆ ಹಸುಗೂಸಿನೊಂದಿಗೆ ಮಹಿಳಾ ಟ್ರಾಫಿಕ್ ಪೊಲೀಸ್ ಒಬ್ಬರು ಡ್ಯೂಟಿ ಮಾಡುತ್ತಿದ್ದ ವಿಡಿಯೋ 2021ರಲ್ಲಿ ವೈರಲ್ ಆಗಿತ್ತು. ಮಕ್ಕಳಿಗಾಗಿ ಕಷ್ಟ ಪಡುವ ಎಲ್ಲಾ ಅಮ್ಮಂದಿರಿಗೆ ಈ ಸಮಯದಲ್ಲಿ ಚಪ್ಪಾಳೆ ತಟ್ಟಲೇಬೇಕು.