ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣಾ ಮತ ಎಣಿಕೆ ಆರಂಭ; ಬಿಜೆಪಿಗೆ ಆರಂಭಿಕ ಮುನ್ನಡೆ -Arunachal Pradesh Assembly Election Results

ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣಾ ಮತ ಎಣಿಕೆ ಆರಂಭ; ಬಿಜೆಪಿಗೆ ಆರಂಭಿಕ ಮುನ್ನಡೆ -Arunachal Pradesh Assembly Election Results

ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ಆರಂಭಿಕ ಟ್ರೆಂಡ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಬಿಜೆಪಿಗೆ ಆರಂಭಿಕ ಮುನ್ನಡೆ ಸಾಧಿಸಿದೆ.
ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಬಿಜೆಪಿಗೆ ಆರಂಭಿಕ ಮುನ್ನಡೆ ಸಾಧಿಸಿದೆ.

ದೆಹಲಿ: 2024ರ ಏಪ್ರಿಲ್ 19 ರಂದು ನಡೆದಿದ್ದ ಅರುಣಾಚಲ ಪ್ರದೇಶ ವಿಧಾನಸಭೆಯ ಚುನಾವಣೆಯ ಮತ ಎಣಿಕೆ ಇಂದು (ಜೂನ್ 2, ಭಾನುವಾರ) ಆರಂಭವಾಗಿದೆ. ದೇಶಾದ್ಯಂತ ಲೋಕಸಭಾ ಸ್ಥಾನಗಳ ಮತ ಎಣಿಕೆಗೆ ಎರಡು ದಿನ ಮುಂಚಿತವಾಗಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತ ಎಣಿಗೆ ನಡೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಈಶಾನ್ಯ ರಾಜ್ಯಗಳಾದ ಈ ಎರಡು ರಾಜ್ಯಗಳ ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 4 ರಂದು ನಡೆಯಲಿದ್ದು, ಅರುಣಾಚಲ ಪ್ರದೇಶ, ಸಿಕ್ಕಿಂ ವಿಧಾನಸಭೆಯ ಅವಧಿ ಇಂದಿಗೆ (ಜೂನ್ 2, ಭಾನುವಾರ) ಕೊನೆಗೊಳ್ಳುವುದರಿಂದ ಲೋಕಸಭಾ ಚುನಾವಣಾ ಫಲಿತಾಂಶದ 2 ದಿನ ಮುಂಚಿತವಾಗಿಯೇ ನಡೆಯುತ್ತಿದೆ.

ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ 60 ಸದಸ್ಯರಿದ್ದರೂ, ಮುಖ್ಯಮಂತ್ರಿ ಖಂಡು ಮತ್ತು ಉಪಮುಖ್ಯಮಂತ್ರಿ ಚೌವಾ ಮೇನ್ ಸೇರಿದಂತೆ ಆಡಳಿತಾರೂಢ 10 ಬಿಜೆಪಿಯ ಅಭ್ಯರ್ಥಿಗಳು ತಮ್ಮ ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದ್ದರಿಂದ 50 ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆದಿದೆ.

25 ಜಿಲ್ಲಾ ಕೇಂದ್ರಗಳ 40 ಮತ ಎಣಿಕೆ ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಮತ ಎಣಿಕೆ ಶುರುವಾಗಿದೆ. ಬೆಳಿಗ್ಗೆ 6.30ರ ರ ಸುಮಾರಿಗೆ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಯಿತು. ನಂತರ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (ಇವಿಎಂ) ಎಣಿಕೆ ಮಾಡಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮುಗಿಯುವ ನಿರೀಕ್ಷೆಯಿದೆ ಎಂದು ಅರುಣಾಚಲ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಪವನ್ ಕುಮಾರ್ ಸೈನ್ ತಿಳಿಸಿದ್ದಾರೆ.

ಈ ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಣಿಕೆ ಕೇಂದ್ರಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಫಲಿತಾಂಶ ಪ್ರಕಟವಾದ ನಂತರ ಯಾವುದೇ ವಿಜಯೋತ್ಸವ ಮೆರವಣಿಗೆಗೆ ಅವಕಾಶವಿರುವುದಿಲ್ಲ.

"50 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 10 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ. ಹಾಲಿ ವಿಧಾನಸಭೆಯ ಅಧಿಕಾರಾವಧಿ ಮುಗಿಯಲು ಜೂನ್ 2 ಕೊನೆಯ ದಿನವಾಗಿರುವುದರಿಂದ, ಎಣಿಕೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ಮತ ಎಣಿಕೆಯು ಬೆಳಿಗ್ಗೆ 8 ರಿಂದ ಅಲ್ಲ, ಬೆಳಿಗ್ಗೆ 6 ರಿಂದ ಪ್ರಾರಂಭವಾಗಲಿದೆ" ಎಂದು ಸೈನ್ ಹೇಳಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 19ರಂದು ಶೇ.82.95ರಷ್ಟು ಮತದಾನವಾಗಿತ್ತು. ಬಿಜೆಪಿ ಎಲ್ಲಾ 60 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಪ್ರತಿಪಕ್ಷ ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಜಿರೋ-ಹಪೋಲಿ, ತಾಲಿಹಾ, ತಾಲಿ, ಸಾಗಲೀ, ರೋಯಿಂಗ್, ಮುಕ್ತೋ, ಇಟಾನಗರ್, ಹಯುಲಿಯಾಂಗ್, ಚೌಖಾಮ್ ಮತ್ತು ಬೊಮ್ಡಿಲಾ ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧವಾಗಿ ಗೆದ್ದಿದೆ.

"ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದ ಫಲಿತಾಂಶವನ್ನು ಜೂನ್ 2 ರಂದು ಘೋಷಿಸಲಾಗುತ್ತಿರುವುದರಿಂದ, ನಾನು ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಬಿಜೆಪಿ ಭರ್ಜರಿ ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಬಿಜೆಪಿ ನಾಯಕಿ ಮತ್ತು ಉಪಮುಖ್ಯಮಂತ್ರಿ ಚೌನಾ ಮೇನ್ ಶನಿವಾರ (ಜೂನ್ 1) ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 41, ಜೆಡಿಯು 7, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 5, ಕಾಂಗ್ರೆಸ್ 4, ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ 1 ಮತ್ತು ಉಳಿದ 2 ಸ್ಥಾನಗಳನ್ನು ಸ್ವತಂತ್ರರು ಗೆದ್ದಿದ್ದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024