ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

ಉತ್ತರ ಪ್ರದೇಶದ ಮೊರಾದಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮೂವರು ಆಕ್ಸಿಸ್‌ ಬ್ಯಾಂಕ್‌( Axis Bank) ಸಿಬ್ಬಂದಿ ಮೃತಪಟ್ಟ ಘಟನೆ ನಡೆದಿದೆ.

ಕೋತಿ ತಪ್ಪಿಸಲು ಹೋಗಿ ಕಾರು ಟ್ಯಾಂಕರ್‌ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ.
ಕೋತಿ ತಪ್ಪಿಸಲು ಹೋಗಿ ಕಾರು ಟ್ಯಾಂಕರ್‌ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ.

ಲಕ್ನೋ: ರಸ್ತೆಯಲ್ಲಿ ಹೋಗುವಾಗ ಹಸು ಇಲ್ಲವೇ ನಾಯಿ ಅಡ್ಡ ಬಂದು ಅಪಘಾತವಾಗುವ ಘಟನೆ ಕೇಳಿದ್ದೀರಿ. ಆದರೆ ಕೋತಿ ಅಡ್ಡ ಬಂದು ಮೃತಪಟ್ಟ ಘಟನೆ ಕಡಿಮೆ. ಆದರೆ ಉತ್ತರ ಪ್ರದೇಶದಲ್ಲಿ ವಾಹನದಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ಕೋತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬ್ಯಾಂಕ್‌ ಅಧಿಕಾರಿ ಸೇರಿ ಮೂವರು ದುರ್ಮರಣಕ್ಕೆ ಈಡಾಗಿದ್ದಾರೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್‌ ಡಿಕ್ಕಿ ಹೊಡೆದ ರಭಸಕ್ಕೆ ಬ್ಯಾಂಕ್‌ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಜತೆಗಿದ್ದ ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯ ಡೋಮ್‌ ಗರ್‌ನಲ್ಲಿ. ಮೊರಾದಾಬಾದ್-‌ ಅಲಿಗರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ.

ಆಕ್ಸಿಸ್‌ ಬ್ಯಾಂಕ್‌ ನ ಅಧಿಕಾರಿ ಸೌರಭ್‌ ಶ್ರೀವಾಸ್ತವ, ಕ್ಯಾಷಿಯರ್‌ ದಿವ್ಯಾಂಶು ಹಾಗೂ ಸಿಬ್ಬಂದಿ ಅಮಿತ್‌. ಮೂವರು ಮೊರಾದಾಬಾದ್‌ನಿಂದ ಒಂದೇ ಕಾರಿನಲ್ಲಿ ಬ್ಯಾಂಕ್‌ಗೆ ಹೊರಟಿದ್ದರು. ಹೆದ್ದಾರಿಯಲ್ಲಿ ಹೋಗುವಾಗ ಏಕಾಏಕಿ ಕೋತಿಯೊಂದು ಅಡ್ಡ ಬಂದಿತು. ವೇಗದಲ್ಲಿದ್ದ ಕಾರನ್ನು ನಿಯಂತ್ರಿಸಲು ಮುಂದಾದಾಗ ನಿಯಂತ್ರಣವನ್ನು ಕಳೆದುಕೊಂಡಿತು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್‌ಗೆ ಕಾರು ರಭಸದಲ್ಲಿ ಗುದ್ದಿತು. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ನಡುವೆ ಸಿಲುಕಿಕೊಂಡ ಸೌರಭ್‌ ಹಾಗೂ ದಿವ್ಯಾಂಶು ಸ್ಥಳದಲ್ಲೇ ಮೃತಪಟ್ಟರು. ಸಿಬ್ಬಂದಿ ಅಮಿತ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಮೊರಾದಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್‌ ತಂಡಗಳು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಕಾರಿನಲ್ಲಿ ಸಿಲುಕಿದ್ದ ದೇಹಗಳನ್ನು ಹೊರ ತೆಗೆದರು. ಇಬ್ಬರು ಅಲ್ಲಿಯೇ ಮೃತಪಟ್ಟರೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅಮಿತ್‌ ಗೆ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಿಲ್ಲ.

ಇದೊಂದು ಭೀಕರ ಅಪಘಾತ. ಕೋತಿ ಎದುರಿಗೆ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಕಾರು ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಮೊರಾದಾಬಾದ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy appeared in Hindustan Times Kannada website. To read more like this please logon to kannada.hindustantimes.com)

IPL_Entry_Point