Ayodhya Dham: ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ, ಬಿಗಿ ಭದ್ರತೆಯಲ್ಲಿ 15000 ಕೋಟಿ ರೂ ಯೋಜನೆಗಳ ಲೋಕಾರ್ಪಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Dham: ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ, ಬಿಗಿ ಭದ್ರತೆಯಲ್ಲಿ 15000 ಕೋಟಿ ರೂ ಯೋಜನೆಗಳ ಲೋಕಾರ್ಪಣೆ

Ayodhya Dham: ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ, ಬಿಗಿ ಭದ್ರತೆಯಲ್ಲಿ 15000 ಕೋಟಿ ರೂ ಯೋಜನೆಗಳ ಲೋಕಾರ್ಪಣೆ

ಅಯೋಧ್ಯೆಯಲ್ಲಿ 15,000 ಕೋಟಿ ರೂಪಾಯಿಗೂ ಅಧಿಕ ಯೋಜನೆಗಳ ಲೋಕಾರ್ಪಣೆ ಇಂದು (ಡಿ.30) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಅಯೋಧ್ಯೆಗೆ ತಲುಪಲಿದ್ದು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 5 ಅಂಶಗಳಲ್ಲಿ ಕಾರ್ಯಕ್ರಮಗಳ ವಿವರ.

ಅಯೋಧ್ಯೆಯ ವಿಮಾನ ನಿಲ್ದಾಣದ ಬಳಿ ಬಿಗಿ ಭದ್ರತೆ
ಅಯೋಧ್ಯೆಯ ವಿಮಾನ ನಿಲ್ದಾಣದ ಬಳಿ ಬಿಗಿ ಭದ್ರತೆ

ದೇಗುಲ ನಗರಿ ಅಯೋಧ್ಯಾದಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಹಲವು ಯೋಜನೆಗಳ ಲೋಕಾರ್ಪಣೆ ಶನಿವಾರ (ಡಿ.30) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಅಯೋಧ್ಯೆಗೆ ಆಗಮಿಸಲಿದ್ದು, 15,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಹೀಗಾಗಿ ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಯಾಗಿದೆ.

ಪ್ರಧಾನಿ ಮೋದಿಯವರ ಜಿಲ್ಲೆಗೆ ಭೇಟಿ ನೀಡುವ ಕಾರಣ ಅವರ ಭದ್ರತೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ವ್ಯವಸ್ಥೆ ಮಾಡಲಾಗಿದೆ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಇತರ ಭದ್ರತಾ ಪಡೆಗಳನ್ನು ಸಹ ನಿಯೋಜಿಸಲಾಗಿದೆ ಎಂದು ಲಕ್ನೋ ವಲಯದ ಹೆಚ್ಚುವರಿ ಡಿಜಿಪಿ ಪಿಯೂಷ್ ಮೊರ್ಡಿಯಾ ಹೇಳಿರುವುದಾಗಿ ಎಎನ್‌ಐ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಕೂಡ ಇದ್ದು, ಇದಕ್ಕೆ ಭದ್ರತಾ ವ್ಯವಸ್ಥೆ ಪೂರ್ವಾಭ್ಯಾಸ ನಡೆಯಲಿದೆ. ಡ್ರೋನ್‌ಗಳೊಂದಿಗೆ ಎಲ್ಲ ಪ್ರದೇಶಗಳ ಮೇಲೆ ನಿಗಾ ಇರಿಸಲಿದ್ದೇವೆ. ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು, ಬದಲಿ ಮಾರ್ಗದ ಯೋಜನೆಯನ್ನು ಸಹ ಮಾಡಲಾಗಿದೆ ಎಂದು ಮೊರ್ಡಿಯಾ ವಿವರಿಸಿದ್ದಾರೆ.

ಭದ್ರತೆಗಾಗಿ ಮೂವರು ಡಿಐಜಿ, 17 ಎಸ್ಪಿ, 38 ಹೆಚ್ಚುವರಿ ಎಸ್ಪಿ, 82 ಡೆಪ್ಯುಟಿ ಎಸ್ಪಿ, 90 ಇನ್ಸ್‌ಪೆಕ್ಟರ್, 325 ಸಬ್ ಇನ್‌ಸ್ಪೆಕ್ಟರ್, 35 ಮಹಿಳಾ ಸಬ್ ಇನ್‌ಸ್ಪೆಕ್ಟರ್, 2000 ಕಾನ್‌ಸ್ಟೆಬಲ್, 14 ಕಂಪನಿ ಪಿಎಸಿ, 6 ಕಂಪನಿ ಸಿಆರ್‌ಪಿಎಫ್‌ಗಳನ್ನು ನಿಯೋಜಿಸಲಾಗುವುದು ಎಂದು ಮೊರ್ಡಿಯಾ ತಿಳಿಸಿದರು.

ಡಿಸೆಂಬರ್ 30ರಂದು ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳು

1. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು ಅಯೋಧ್ಯೆಗೆ ಬಂದು, ಅಯೋಧ್ಯಾ ಧಾಮ್‌ ಜಂಕ್ಷನ್‌ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಮೂಲಸೌಕರ್ಯ ಮತ್ತು ಸಂಪರ್ಕ ಸುಧಾರಣೆ ವಿಷಯದಲ್ಲಿ ಸರ್ಕಾರದ ಬದ್ಧತೆಗೆ ಇದೊಂದು ಮೈಲಿಗಲ್ಲು.

2. ಪ್ರಧಾನಿ ಮೋದಿಯವರು ಎರಡು ಅಮೃತ್ ಭಾರತ್ ರೈಲುಗಳನ್ನು ಉದ್ಘಾಟಿಸಲಿದ್ದಾರೆ. ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್.

3. ಹೆಚ್ಚುವರಿಯಾಗಿ, ಆರು ಹೊಸ ವಂದೇ ಭಾರತ್ ರೈಲುಗಳಿಗೂ ಹಸಿರು ನಿಶಾನೆ ತೋರಿಸಲಿದ್ದಾರೆ. ಅಯೋಧ್ಯೆ-ಆನಂದ ವಿಹಾರ್ ಟರ್ಮಿನಲ್, ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ, ಅಮೃತಸರ-ದೆಹಲಿ, ಕೊಯಮತ್ತೂರು-ಬೆಂಗಳೂರು ಕ್ಯಾಂಟ್, ಮಂಗಳೂರು-ಮಡ್ಗಾಂವ್ ಮತ್ತು ಜಲ್ನಾ-ಮುಂಬೈ ನಡುವೆ ವಂದೇ ಬಾರತ್ ರೈಲುಗಳು ಸಂಚರಿಸಲಿವೆ.

4. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನೂ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಅತ್ಯಾಧುನಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದ್ದು, ಜನವರಿ 7ರಿಂದ ವಿಮಾನಗಳ ವಾಣಿಜ್ಯ ಹಾರಾಟ ಶುರುವಾಗಲಿದೆ.

5. ಅಯೋಧ್ಯೆಯಲ್ಲಿ ಒಟ್ಟು 15,700 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಪೈಕಿ, ಅಯೋಧ್ಯೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು 11,100 ಕೋಟಿ ರೂಪಾಯಿ ಯೋಜನೆಗಳು ಮತ್ತು ಉತ್ತರ ಪ್ರದೇಶದ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 4600 ಕೋಟಿ ರೂಪಾಯಿ ಯೋಜನೆಗಳು ಸೇರಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.