Sitaram Bank: ಅಯೋಧ್ಯೆ ಸೀತಾರಾಮ ಬ್ಯಾಂಕ್‌ನಲ್ಲಿವೆ 20 ಸಾವಿರ ಕೋಟಿ ಕಿರುಪುಸ್ತಕ, ಈ ಬ್ಯಾಂಕ್‌ ಖಾತೆ ಪಡೆಯಲು ನೀವೇನು ಮಾಡಬೇಕು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sitaram Bank: ಅಯೋಧ್ಯೆ ಸೀತಾರಾಮ ಬ್ಯಾಂಕ್‌ನಲ್ಲಿವೆ 20 ಸಾವಿರ ಕೋಟಿ ಕಿರುಪುಸ್ತಕ, ಈ ಬ್ಯಾಂಕ್‌ ಖಾತೆ ಪಡೆಯಲು ನೀವೇನು ಮಾಡಬೇಕು

Sitaram Bank: ಅಯೋಧ್ಯೆ ಸೀತಾರಾಮ ಬ್ಯಾಂಕ್‌ನಲ್ಲಿವೆ 20 ಸಾವಿರ ಕೋಟಿ ಕಿರುಪುಸ್ತಕ, ಈ ಬ್ಯಾಂಕ್‌ ಖಾತೆ ಪಡೆಯಲು ನೀವೇನು ಮಾಡಬೇಕು

Divine ಅಯೋಧ್ಯೆಯಲ್ಲಿ ನಿಮಗೆ ಸೀತಾರಾಮ ಬ್ಯಾಂಕ್‌ ಸಿಗುತ್ತದೆ. ಇದು ನಿಮ್ಮಲ್ಲಿ ಧಾರ್ಮಿಕ ಭಾವನೆ ಠೇವಣಿ ರೂಪದಲ್ಲಿ ಪಡೆದು ನೆಮ್ಮದಿಯೆಂಬ ಬಡ್ಡಿ ಪಾವತಿಸುತ್ತದೆ. ಈ ಬ್ಯಾಂಕ್‌ ವಿಶೇಷತೆಗಳನ್ನು ಇಲ್ಲಿ ಓದಿ

ಅಯೋಧ್ಯೆಯಲ್ಲಿರುವ ಸೀತಾರಾಮ ಬ್ಯಾಂಕ್‌
ಅಯೋಧ್ಯೆಯಲ್ಲಿರುವ ಸೀತಾರಾಮ ಬ್ಯಾಂಕ್‌

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿದೆ ವಿಶಿಷ್ಟ ಸೀತಾರಾಮ ಬ್ಯಾಂಕ್‌. ಈ ಬ್ಯಾಂಕ್‌ನಲ್ಲಿ ಹಣದ ವಹಿವಾಟು ಮುಖ್ಯ ಅಲ್ಲವೇ ಅಲ್ಲ. ಬದಲಿಗೆ ಸೀತಾರಾಮ ಎನ್ನುವ ಹೆಸರಿನ ಹಸ್ತಾಕ್ಷರದ ಪುಸ್ತಕಗಳು, ಕಿರು ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ನೆಲೆಸಿರುವ ಬ್ಯಾಂಕ್‌ನ ಎಲ್ಲಾ 35,000 ಖಾತೆದಾರರಿಗೆ ಸಿಗುವ ಏಕೈಕ ಪ್ರತಿಫಲವೆಂದರೆ ಮನಸ್ಸಿನ ಶಾಂತಿ, ನಂಬಿಕೆ ಮತ್ತು ಆಧ್ಯಾತ್ಮಿಕತೆ!

ಸೀತಾರಾಮ ಬ್ಯಾಂಕ್‌ ವಿಶೇಷ

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರಕ್ಕೆ ನೀವೇನಾದರೂ ಭೇಟಿ ನೀಡಿದರೆ ಅಲ್ಲಿಗೆ ಈ ಬ್ಯಾಂಕ್‌ ನಿಮ್ಮ ಕಣ್ಣಿಗೆ ಖಂಡಿತ ಬೀಳುತ್ತದೆ. ಅಯೋಧ್ಯೆಗೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ ಅಂತರರಾಷ್ಟ್ರೀಯ ಶ್ರೀ ಸೀತಾರಾಮ ಬ್ಯಾಂಕ್". ಇಲ್ಲಿನ ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗಿರುವ ಎಲ್ಲಾ ಪುಟಗಳಲ್ಲಿ "ಸೀತಾರಾಮ" ಎಂದು ಬಗೆಯಲಾದ ಕಿರುಪುಸ್ತಕಗಳು ಸಿಗುತ್ತವೆ. ಇದೇ ಈ ಬ್ಯಾಂಕಿನ ವಿಶೇಷತೆ ಹಾಗೂ ಶಕ್ತಿ.

54 ವರ್ಷದ ಹಿಂದೆ ಆರಂಭ

ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಮುಖ್ಯಸ್ಥರಾಗಿರುವ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು 1970 ರ ನವೆಂಬರ್‌ ನಲ್ಲಿ ಸ್ಥಾಪಿಸಿದ ಆಧ್ಯಾತ್ಮಿಕ ಬ್ಯಾಂಕ್, ಯುಎಸ್, ಯುಕೆ, ಕೆನಡಾ, ನೇಪಾಳ, ಫಿಜಿ, ಯುಎಇ ಮತ್ತು ಇತರ ದೇಶಗಳು ಸೇರಿದಂತೆ ಭಾರತ ಮತ್ತು ವಿದೇಶಗಳಲ್ಲಿ 35,000 ಕ್ಕೂ ಹೆಚ್ಚು ಖಾತೆದಾರರನ್ನು ಹೊಂದಿದೆ. ಈವರೆಗೂ ಈ ಬ್ಯಾಂಕ್ ಭಗವಾನ್ ರಾಮನ ಭಕ್ತರಿಂದ 20,000 ಕೋಟಿ 'ಸೀತಾರಾಮ' ಕಿರುಪುಸ್ತಕಗಳ ಸಂಗ್ರಹವನ್ನು ಹೊಂದಿದೆ.

ಬ್ಯಾಂಕಿನ ವ್ಯವಸ್ಥಾಪಕ ಪುನೀತ್ ರಾಮ್ ದಾಸ್ ಮಹಾರಾಜ್ ಅವರ ಪ್ರಕಾರ, ಕಳೆದ ತಿಂಗಳು ಭವ್ಯ ದೇವಾಲಯದ ಪ್ರತಿಷ್ಠಾಪನಾ ಸಮಾರಂಭದ ನಂತರ ಬ್ಯಾಂಕಿನಲ್ಲಿ ದೈನಂದಿನ ಸಂದರ್ಶಕರ ಸಂಖ್ಯೆ ಹೆಚ್ಚಾಗಿದೆ.

ಬ್ಯಾಂಕ್ ಭಕ್ತರಿಗೆ ಉಚಿತ ಕಿರುಪುಸ್ತಕಗಳು ಮತ್ತು ಕೆಂಪು ಪೆನ್ನುಗಳನ್ನು ಒದಗಿಸುತ್ತದೆ. ಪ್ರತಿ ಖಾತೆಯ ಮೇಲೆ ನಿಗಾ ಇಡುತ್ತದೆ.

ದೇಶವಿದೇಶದಲ್ಲಿ 136 ಶಾಖೆ

ಭಾರತ ಮತ್ತು ವಿದೇಶಗಳಲ್ಲಿ ಬ್ಯಾಂಕಿನ 136 ಶಾಖೆಗಳಿವೆ. ಖಾತೆದಾರರು ನಮಗೆ ಕಿರುಪುಸ್ತಕಗಳನ್ನು ಅಂಚೆ ಮೂಲಕ ಕಳುಹಿಸುತ್ತಾರೆ ಮತ್ತು ನಾವು ಇಲ್ಲಿ ಲೆಡ್ಜರ್ ಅನ್ನು ನಿರ್ವಹಿಸುತ್ತೇವೆ ಎಂದು ಪುನೀತ್ ರಾಮ್ ದಾಸ್ ಪಿಟಿಐಗೆ ತಿಳಿಸಿದ್ದಾರೆ.

ಸೀತಾರಾಮ ಎಂದು ಬರೆದು ಬ್ಯಾಂಕಿನಲ್ಲಿ ಠೇವಣಿ ಇಡುವುದರಿಂದ ಆಗುವ ಪ್ರಯೋಜನಗಳನ್ನೂ ಸಂದರ್ಶಕರು ಪ್ರಶ್ನಿಸುತ್ತಾರೆ . ಆಂತರಿಕ ಶಾಂತಿ, ನಂಬಿಕೆ ಮತ್ತು ಸದ್ಗುಣಕ್ಕಾಗಿ ನಾವು ದೇವರು ಮತ್ತು ದೇವತೆಗಳ ದೇವಾಲಯಗಳಿಗೆ ಭೇಟಿ ನೀಡುವ ರೀತಿಯಲ್ಲಿ, 'ಸೀತಾರಾಮ್ ಎಂದು ಬರೆಯುವುದು ಮತ್ತು ಅದನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದು ಪ್ರಾರ್ಥನೆಯ ಒಂದು ರೂಪವಾಗಿದೆ ಎಂದು ನಾನು ಅವರಿಗೆ ಹೇಳುತ್ತೇನೆ. ಪ್ರತಿಯೊಬ್ಬರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಬಗ್ಗೆ ದೇವರಿಗೆ ತನ್ನದೇ ಆದ ಲೆಕ್ಕವಿದೆ ಎಂದು ನಾವು ಹೇಳುವುದಿಲ್ಲವೇ? ಇದು ಕೂಡ ಇದೇ ರೀತಿಯದ್ದಾಗಿದೆ ಎನ್ನುವುದು ಪುನೀತ್‌ರಾಮ್‌ ಅವರ ವಿವರಣೆ.

ಭಕ್ತರು ಭಗವಾನ್ ರಾಮನ ಹೆಸರನ್ನು ಬರೆಯುವಲ್ಲಿ, ಪಠಿಸುವಲ್ಲಿ ಮತ್ತು ನೆನಪಿಸಿಕೊಳ್ಳುವಲ್ಲಿ ಸಾಂತ್ವನ ಮತ್ತು ಆಳವಾದ ಆಧ್ಯಾತ್ಮಿಕ ಸಮೃದ್ಧಿಯನ್ನು ಕಂಡುಕೊಳ್ಳುತ್ತಾರೆ" ಎಂದು ಅವರು ಹೇಳಿದರು.

ಖಾತೆದಾರರು ಹೇಳೋದೇನು

14 ವರ್ಷಗಳಿಂದ ಬ್ಯಾಂಕಿಗೆ ಭೇಟಿ ನೀಡುತ್ತಿರುವ ಬಿಹಾರದ ಗಯಾದ ಜೀತು ನಗರ್, ಇದು ತನ್ನ ಪ್ರಾರ್ಥನೆಯ ಏಕೈಕ ರೂಪವಾಗಿದೆ. ದೇವಾಲಯದಲ್ಲಿ ಪ್ರಾರ್ಥಿಸುವ ಬದಲು, ನಾನು ಇದನ್ನು ಅಭ್ಯಾಸ ಮಾಡುತ್ತೇನೆ ಮತ್ತು ನಾನು ಖಿನ್ನತೆಗೆ ಒಳಗಾದಾಗ ಅಥವಾ ತೊಂದರೆಯಲ್ಲಿದ್ದಾಗಲೆಲ್ಲಾ ಸೀತಾರಾಮ ಬರೆಯುವ ಚಟುವಟಿಕೆ ಯಾವಾಗಲೂ ನನ್ನ ನೆರವಿಗೆ ಧಾವಿಸಿದೆ. ನಾನು ಅದನ್ನು ವರ್ಷವಿಡೀ ಬರೆಯುತ್ತೇನೆ ಮತ್ತು ವರ್ಷಕ್ಕೊಮ್ಮೆ ಬ್ಯಾಂಕಿನಲ್ಲಿ ಠೇವಣಿ ಇಡುತ್ತೇನೆ. ಅಂಚೆ ಮೂಲಕವೂ ಕಳುಹಿಸುವ ಆಯ್ಕೆ ಇದ್ದರೂ ಈ ನೆಪದಲ್ಲಾದರೂ ಬ್ಯಾಂಕ್‌ಗೆ ಬಂದು ನೆಮ್ಮದಿ ಪಡೆದುಕೊಂಡು ಹೋಗಲು ನೇರ ಭೇಟಿ ಮಾಡಲು ಬಯಸುತ್ತೇನೆ ಎಂದು ತಮ್ಮ ಅನುಭವ ಬಿಡಿಸಿಡುತ್ತಾರೆ. ನಗರ್ ಅವರು ಈಗಾಗಲೇ 1.37ಕೋಟಿ ಹೆಸರಿನ ಕಿರುಪುಸ್ತಕಗಳನ್ನು ಠೇವಣಿ ಇಟ್ಟಿದ್ದಾರೆ.

ಉತ್ತರ ಪ್ರದೇಶದ ಬರೇಲಿಯ ಮತ್ತೊಬ್ಬ ಖಾತೆದಾರ ಸುಮನ್ ದಾಸ್ ಅವರು 'ಸೀತಾರಾಮ' ಎಂದು 25 ಲಕ್ಷ ಬಾರಿ ಬರೆದಿದ್ದಾರೆ. ಬ್ಯಾಂಕಿನ ಬಗ್ಗೆ ನೆರೆಹೊರೆಯವರಿಗೆ ಹೇಳಿದಾಗ, ನಾನು ಹುಚ್ಚನೇ ಇರಬೇಕು ಎಂದು ಅವರು ಭಾವಿಸಿದರು ಆದರೆ ನನಗೆ ಬಲವಾದ ನಂಬಿಕೆ ಇದೆ. ನಾನು ಬರೆಯುವಾಗಲೆಲ್ಲಾ, ನಾನು ಹಗುರವಾಗಿದ್ದೇನೆ ಮತ್ತು ನನ್ನ ಪ್ರಾರ್ಥನೆಗಳನ್ನು ಕೇಳಲಾಗುತ್ತಿದೆ ಎಂದು ಭಾವಿಸುತ್ತೇನೆ" ಎನ್ನುತ್ತಾರೆ ಸುಮನ್‌ ದಾಸ್.

ನೀವೇನು ಮಾಡಬಹುದು

ಈ ಬ್ಯಾಂಕ್‌ನ ಖಾತೆದಾರರಾಗಬೇಕೆಂದರೆ ಪ್ರತಿಯೊಬ್ಬರು ಸೀತಾರಾಮ ಎಂದು ಬರೆದುಕೊಡಬೇಕು. ಬ್ಯಾಂಕಿನಲ್ಲಿ ಖಾತೆ ತೆರೆಯಲು ಕನಿಷ್ಠ 5 ಲಕ್ಷ ಬಾರಿ 'ಸೀತಾರಾಮ' ಎಂದು ಬರೆಯಬೇಕು ಮತ್ತು ನಂತರ ಪಾಸ್‌ ಬುಕ್ ನೀಡಲಾಗುತ್ತದೆ.

ರಾಮನಾಮ ಜಪವನ್ನು ಮನೆಯಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಎಲ್ಲರೂ ಮಾಡುವುದುಂಟು. ಕೆಲವರು ಶ್ರೀರಾಮ ಎಂದು ಬರೆದಿರುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಇದನ್ನು ಬರೆದರೆ ಆರ್ಥಿಕವಾಗಿ ಏನು ಲಾಭ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಭೌತಿಕವಾಗಿ ಇದರ ಫಲ ಹೆಚ್ಚು. ಮನಸನ್ನು ನಿರಾಳತೆಗೆ ತೆಗೆದುಕೊಂಡು ಹೋಗಿ ನಿರುಮ್ಮಳ ಬದುಕಿಗೆ ದಾರಿಯಾಗುತ್ತದೆ ಎಂದು ಶ್ರೀರಾಮ್‌ ಬರೆಯುವ ಪ್ರತಿಯೊಬ್ಬರೂ ಹೇಳುವ ಮಾತು. ಅದೇ ರೀತಿಯಲ್ಲಿ ಈ ಬ್ಯಾಂಕ್‌ ತನ್ನ ಖಾತೆದಾರರಿಂದ ಬರೆಯಿಸಿಕೊಳ್ಳುವುದು ಸೀತಾರಾಮ ಎಂದು. ಇದರೊಂದಿಗೆ ನಿಮ್ಮ ಖಾತೆ ಆರಂಭಗೊಳ್ಳುತ್ತದೆ. ಪ್ರತಿ ವರ್ಷ ನಿಮ್ಮ ಖಾತೆಗೆ ಸೀತಾರಾಮ ಎನ್ನುವುದನ್ನು ಖುದ್ದು ಬರೆದು ಸೇರಿಸುತ್ತಾ ಹೋಗಬೇಕು. ಇಲ್ಲಿ ಹಣದ ವಹಿವಾಟಿಗಿಂತ ಸೀತಾರಾಮ ವಹಿವಾಟಿಗೆ ಹೆಚ್ಚಿನ ಬೆಲೆ ಹಾಗೂ ಗೌರವ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.