Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ನಗುತ್ತಾ ನಿಂತ ಬಾಲರಾಮ, ಕೈಮುಗಿದ ದೇಶವಾಸಿಗಳಿಗೆ ನಗುಮೊಗದ ಅಭಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ನಗುತ್ತಾ ನಿಂತ ಬಾಲರಾಮ, ಕೈಮುಗಿದ ದೇಶವಾಸಿಗಳಿಗೆ ನಗುಮೊಗದ ಅಭಯ

Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ನಗುತ್ತಾ ನಿಂತ ಬಾಲರಾಮ, ಕೈಮುಗಿದ ದೇಶವಾಸಿಗಳಿಗೆ ನಗುಮೊಗದ ಅಭಯ

Ayodhya Ram Mandir inauguration: ಭಾರತೀಯರ ಶತಮಾನಗಳ ಕನಸು ನನಸಾಯಿತು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿದ್ದು, ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಪನ್ನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಕ್ತಿಭಾವದೊಂದಿಗೆ ಬಾಲರಾಮನಿಗೆ ಪುಷ್ಪಾರ್ಚನೆ ಮಾಡಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರವನ್ನು ನೆರವೇರಿಸಿಕೊಟ್ಟರು.

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ.
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನ.

ಅಯೋಧ್ಯೆ: ಭಾರತಕ್ಕೆ ಭಾರತವೇ ನಿರೀಕ್ಷಿಸುತ್ತಿದ್ದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಸೋಮವಾರ ಅಭಿಜಿತ್ ಮುಹೂರ್ತದಲ್ಲಿ ಸಂಪನ್ನಗೊಂಡಿತು. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿದ ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವ ಸೋಮವಾರ (ಜ.22) ಮಧ್ಯಾಹ್ನ 12.29:03 ರಿಂದ 12.30.35ರ ನಡುವಿನ 84 ಸೆಕೆಂಡ್‌ಗಳ ಅವಧಿಯಲ್ಲಿ ನೆರವೇರಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಿತು. ಬೀಜಾಕ್ಷರಗಳ ಘೋಷಣೆಯೊಂದಿಗೆ ಮೊಳಗಿತು ಶಂಖನಾದ. ಅಯೋಧ್ಯೆಯಲ್ಲಿ ಬಾಲರಾಮನ ಸುಂದರ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನದ ಅಂತಿಮ ಘಟ್ಟದಲ್ಲಿ ಕೈಲಿ ಹೂ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಭಕ್ತಿಯಿಂದ ರಾಮನ ಪಾದಕ್ಕೆ ನಮಸ್ಕರಿಸಿದರು. ಪ್ರಾಣ ಪ್ರತಿಷ್ಠಾಪನೆಗಳ ವಿಧಿಗಳನ್ನು ಅತ್ಯಂತ ಭಕ್ತಿಯಿಂದ ನೆರವೇರಿಸಿದರು.

ಬೆಳ್ಳಿಯ ಛತ್ರಿ ಇರಿಸಲಾದ ಕೆಂಪು ಮಡಿಸಿದ ದುಪಟ್ಟಾ ಹಿಡಿದು ಪ್ರಧಾನ ಮಂತ್ರಿಗಳು ದೇವಾಲಯದ ಆವರಣದೊಳಗೆ ನಡೆದರು. ಚಿನ್ನದ ಬಣ್ಣದ ಕುರ್ತಾವನ್ನು ಧರಿಸಿ ಕೆನೆ ಬಣ್ಣದ ಧೋತಿ ಮತ್ತು ಪಾಟ್ಕಾವನ್ನು ಧರಿಸಿ ಬಂದಿದ್ದ ಅವರು, "ಪ್ರಾಣ ಪ್ರತಿಷ್ಠಾ ಸಮಾರಂಭದ ಸಂಕಲ್ಪ" ಕೈಗೊಂಡು ಮುಂದಿನ ವಿಧಿ ವಿಧಾನಗಳನ್ನು ನೆರವೇರಿಸಲು ಗರ್ಭಗುಡಿಯೊಳಗೆ ಹೋದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಧಾರ್ಮಿಕ ವಿಧಿವಿಧಾನದ ವೇಳೆ ಗರ್ಭಗುಡಿಯೊಳಗೆ ಹಾಜರಿದ್ದರು.

ಪ್ರಾಣ ಪ್ರತಿಷ್ಠಾ ಮಹೋತ್ಸವದ ಮುಹೂರ್ತ ಕಾಲದಲ್ಲೇ ಅಯೋಧ್ಯೆ ರಾಮ ಮಂದಿರದ ಮೇಲೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ ಹೂಮಳೆಗೆರೆಯಿತು.

"ಅಯೋಧ್ಯಾ ಧಾಮದಲ್ಲಿ ಶ್ರೀ ರಾಮಲಲಾ ಪ್ರಾಣ ಪ್ರತಿಷ್ಠಾ ಕಾರ್ಯ ನೆರವೇರಿಸುವ ಈ ಸನ್ನಿವೇಶ ಎಲ್ಲರನ್ನೂ ಭಾವುಕರನ್ನಾಗಿಸುವ ಅಸಾಧಾರಣ ಕ್ಷಣವಾಗಿದೆ. ಈ ದಿವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸಂತೋಷ. ಶ್ರೀರಾಮನಿಗೆ ನಮನ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಭವ್ಯ ರಾಮ ಮಂದಿರವು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. 392 ಕಂಬಗಳು ಮತ್ತು ತೇಗದ ಮರದಿಂದ ನಿರ್ಮಿಸಲಾದ 44 ದ್ವಾರಗಳನ್ನು ಹೊಂದಿರುವ ಮೂರು ಅಂತಸ್ತಿನ ರಾಮ ಮಂದಿರಕ್ಕೆ ನಾಳೆಯಿಂದ ಸಾರ್ವಜನಿಕರು ಹೋಗಬಹುದು. ಬಾಲರಾಮನ ದರ್ಶನ ಪಡೆಯಬಹುದು.

ಅಭೂತ ಪೂರ್ವ ರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದ ನೇರಪ್ರಸಾರವನ್ನು ದೇಶ ವಿದೇಶಗಳಲ್ಲಿ ಭಾರತೀಯರು ಕಣ್ತುಂಬಿಕೊಂಡರು. ದೂರದರ್ಶನ ಮತ್ತು ಇತರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಾರ್ಯಕ್ರಮ ನೇರ ಪ್ರಸಾರವಾಗಿತ್ತು.

ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಒಡಿಶಾದಲ್ಲಿ ರಜೆ ಘೋಷಿಸಲಾಯಿತು. ಕೇಂದ್ರ ಸರ್ಕಾರ ಕೂಡ ಉದ್ಘಾಟನೆಯ ನಿಮಿತ್ತ ಮಧ್ಯಾಹ್ನ 2.30ರ ತನಕ ರಜೆ ಘೋಷಿಸಿದೆ.

-------------------------

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಲೈವ್ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ…

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.