Ayodhya Ram mandir: ಅಯೋಧ್ಯೆ ರಾಮಮಂದಿರದ ಪ್ರತಿಕೃತಿಗಳಿಗೆ ಅಮೆರಿಕ, ನ್ಯೂಜಿಲೆಂಡ್‌ ಸೇರಿ ಹಲವು ದೇಶಗಳಲ್ಲಿ ಭಾರಿ ಬೇಡಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಅಯೋಧ್ಯೆ ರಾಮಮಂದಿರದ ಪ್ರತಿಕೃತಿಗಳಿಗೆ ಅಮೆರಿಕ, ನ್ಯೂಜಿಲೆಂಡ್‌ ಸೇರಿ ಹಲವು ದೇಶಗಳಲ್ಲಿ ಭಾರಿ ಬೇಡಿಕೆ

Ayodhya Ram mandir: ಅಯೋಧ್ಯೆ ರಾಮಮಂದಿರದ ಪ್ರತಿಕೃತಿಗಳಿಗೆ ಅಮೆರಿಕ, ನ್ಯೂಜಿಲೆಂಡ್‌ ಸೇರಿ ಹಲವು ದೇಶಗಳಲ್ಲಿ ಭಾರಿ ಬೇಡಿಕೆ

Ayodhya ram mandir updates ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಸಿದ್ದತೆಗಳು ನಡೆದಿವೆ. ಹತ್ತೊಂಬತ್ತು ದಿನದಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ರಾಮಮಂದಿರದ ಕನಸು ನನಸಾಗುತ್ತಿರುವ ಖುಷಿಯಲ್ಲಿ ದೇಶದಲ್ಲಿರುವ ಭಕ್ತರು ಮಾತ್ರವಲ್ಲದೇ ವಿದೇಶದಲ್ಲಿರುವವರು ರಾಮಮಂದಿರ ಮರದ ಮಾದರಿ ಖರೀದಿಗೆ ಮುಂದಾಗಿದ್ದಾರೆ.

ಅಯೋಧ್ಯೆ ರಾಮಮಂದಿರದ ಮರದ ಮಾದರಿ ಸಹಿತ ಹಲವು ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ.
ಅಯೋಧ್ಯೆ ರಾಮಮಂದಿರದ ಮರದ ಮಾದರಿ ಸಹಿತ ಹಲವು ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ.

ದೆಹಲಿ: ಅಯೋಧ್ಯ ರಾಮಮಂದಿರದ ಉದ್ಘಾಟನೆಗೆ ದಿನಗಣನೇ ಶುರುವಾಗಿದೆ. ಭಾರತದಲ್ಲೂ ಎಲ್ಲೆಡೆ ಸಂಭ್ರಮದ ಸನ್ನಿವೇಶ ಸೃಷ್ಟಿಯಾಗುತ್ತಿರುವ ನಡುವೆಯೇ ಹೊರ ದೇಶಗಳಲ್ಲೂ ಭಾರತದ ಅಯೋಧ್ಯೆ ರಾಮಮಂದಿರ ಪ್ರತಿಕೃತಿಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಅದರಲ್ಲೂ ಅಮೆರಿಕಾ, ನ್ಯೂಜಿಲೆಂಡ್‌ ಸಹಿತ ಹಲವು ದೇಶಗಳಲ್ಲಿ ಅಯೋಧ್ಯೆ ರಾಮಮಂದಿರ ಪ್ರತಿಕೃತಿಗಳನ್ನು ಬುಕ್ಕಿಂಗ್‌ ಮಾಡಲಾಗುತ್ತಿದೆ.

ಭಾರತದ ಮೂರು ದಶಕದ ಕನಸಾಗಿ ರಾಮಮಂದಿರವನ್ನು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಜನವರಿ 22ರಂದು ಉದ್ಘಾಟನೆ ಮಾಡಲಾಗುತ್ತಿದೆ. ಭಾರತ ಮಾತ್ರವಲ್ಲದೇ ಹೊರ ದೇಶಗಳಿಂದಲೂ ಇದಕ್ಕಾಗಿ ರಾಮಭಕ್ತರು ಆಗಮಿಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳುವ ತವಕ ಕೋಟ್ಯಂತರ ಜನರಲ್ಲಿದೆ.

ರಾಮಮಂದಿರ ಮಾದರಿ

ಅಂದು ಅಯೋಧ್ಯೆ ರಾಮಮಂದಿರಕ್ಕೆ ಬರಲು ಆಗದೇ ಇರುವವರು, ರಾಮಮಂದಿರ ಹೇಗಿರಬಹುದು ಎನ್ನುವ ಕುತೂಹಲವನ್ನೂ ಹೊಂದಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಗಲು ಹಲವರು ಕಾಯುತ್ತಲೇ ಇದ್ದರು. ಇಂತಹ ಭಕ್ತರು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ನೆಲೆಸಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಹಲವರು ರಾಮಮಂದಿರದ ಮಾದರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದರಲ್ಲೂ ಮರದಲ್ಲಿ ಮಾಡಿದ ರಾಮಮಂದಿರ ಮಾದರಿಯನ್ನು ತರಿಸಿಕೊಂಡು ಖುಷಿ ಹಂಚಿಕೊಳ್ಳುವ ತವಕ ಅವರದ್ದು.

ಭಾರತದಲ್ಲಿ ರಾಮಮಂದಿರ ಉದ್ಘಾಟನೆ ವಿಷಯ ನಾಲ್ಕೈದು ತಿಂಗಳಿನಿಂದ ಹೆಚ್ಚು ಸದ್ದು ಮಾಡಿದೆ. ಇದರಿಂದ ರಾಮಮಂದಿರದ ಪ್ರತಿಕೃತಿಗಳನ್ನು ತಯಾರಿಸುವವರಿಗೂ ಬೇಡಿಕೆ. ಹೀಗೆ ತಯಾರಿಸುವವರಿಗೆ ಅಮೆರಿಕಾ ಹಾಗೂ ನ್ಯೂಜಿಲೆಂಡ್‌ನಿಂದ ಹೆಚ್ಚಿನ ಬೇಡಿಕೆಗಳು ಬಂದಿವೆ.

ರಾಮಜನ್ಮಭೂಮಿ ಮಂದಿರ ಅಯೋಧ್ಯೆ ಎನ್ನುವ ಒಕ್ಕಣೆಯೊಂದಿಗೆ ಮರದ ರಾಮಮಂದಿರ ಮಾದರಿಯನ್ನು ಹಲವರು ತಯಾರಿಸುತ್ತಿದ್ದಾರೆ. ಅದರಲ್ಲೂ ಹಿಂದಿಯ ಅಕ್ಷರಗಳಲ್ಲಿ ಹೆಚ್ಚಿನ ಮಾದರಿಗಳನ್ನು ತಯಾರಿಸಲಾಗುತ್ತಿದೆ. ಇವುಗಳನ್ನು ಹಲವರು ತರಿಸಿಕೊಳ್ಳಲು ಈಗಾಗಲೇ ಮುಂಗಡ ಬುಕ್ಕಿಂಗ್‌ ಕೂಡ ಮಾಡಿಕೊಂಡಿದ್ದಾರೆ.

ಇದರೊಟ್ಟಿಗೆ ರಾಮಮಂದಿರ ಹಿನ್ನೆಲೆಯ ಉಂಗುರಗಳು, ಲಾಕೆಟ್‌ಗಳು, ಬಟ್ಟೆಗಳಿಗೂ ಬೇಡಿಕೆ ಬಂದಿದೆ. ಅಲ್ಲದೇ ರಾಮನ ಭಾವಚಿತ್ರ ಇರುವ ಬಾವುಟಗಳನ್ನೂ ಹಲವರು ಖರೀದಿಸಿ ಇಟ್ಟುಕೊಳ್ಳುತ್ತಿದ್ದಾರೆ ಎನ್ನುವುದು ಮಾರಾಟಗಾರರ ಅಭಿಪ್ರಾಯ.

ಹೊಸ ವರ್ಷದ ಮರು ದಿನ ಅಯೋಧ್ಯೆ ಸಮೀಪದಲ್ಲೇ ಇರುವ ಫೈಜಾಬಾದ್‌ ನ ಶಹದತ್‌ಗಂಜ್‌ ಪ್ರದೇಶದಲ್ಲಿರುವ ಹತ್ತಾರು ಅಂಗಡಿಗಳಿಗೆ ತೆರಳಿದಾಗ ಅಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟ ಜೋರಾಗಿಯೇ ಇತ್ತು.

ವ್ಯಾಪಾರಿಗಳು ಹೇಳೋದೇನು

ಆವದ್‌ ಆದಿತ್ಯ ಕಂಪೆನಿಯ ಮಾಲೀಕ ಆದಿತ್ಯ ಸಿಂಗ್‌ , ಬಹಳಷ್ಟು ಮಂದಿ ರಾಮಮಂದಿರ ಮಾದರಿಗಳನ್ನು ನಿರ್ಮಿಸಿದ್ದಾರೆ. ಜನ ಇಷ್ಟಪಡುವ ಹಲವಾರು ವಸ್ತುಗಳು ಇದರಲ್ಲಿ ಬಂದಿವೆ. ಅದರಲ್ಲೂ ಮರದ ರಾಮಮಂದಿರ ಪ್ರತಿಕೃತಿಗಳಿಗೆ ಬಹಳಷ್ಟು ಬೇಡಿಕೆ ಇದೆ. ಈಗಂತೂ ಇದಕ್ಕೆ ಬೇಡಿಕೆ ಮೂರು ಪಟ್ಟು ಹೆಚ್ಚಿದೆ. ವಿದೇಶದಿಂದಲೂ ಕರೆಗಳು ಬರುತ್ತವೆ ಎನ್ನುತ್ತಾರೆ.

ಮರದ ರಾಮಮಂದಿರದ ಜತೆಗೆ ಪಾಕೆಟ್‌ ಮಾದರಿಯ ರಾಮಮಂದಿರದ ಚಿತ್ರಗಳಿಗೂ ಬೇಡಿಕೆ ಹೆಚ್ಚಿದೆ. ಪಾಕೆಟ್‌ ಮಾದರಿ ನಾಲ್ಕು ಇಂಚು ಉದ್ದ, ಐದು ಇಂಚು ಎತ್ತರವಿದೆ. ಇದಕ್ಕೆ ಅಂದಾಜು ನೂರು ರೂ. ಆಗಬಹುದು. ಇದನ್ನು ಹೆಚ್ಚಿನ ಜನರ ಪಡೆದು ತಮ್ಮ ಪಾಕೆಟ್‌ಗಳಲ್ಲಿ ಇರಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಎಂಟು ಸಾವಿರ ರೂ. ಆಗುವ ರಾಮಮಂದಿರ ಪ್ರತಿಕೃತಿಗೂ ಬೇಡಿಕೆಯಿದೆ. ಈ ಭಾಗಕ್ಕೆ ಮಾತ್ರವಲ್ಲದೇ ಬೇರೆ ಭಾಗಗಳಿಗೂ ರಾಮಮಂದಿರಕ್ಕೆ ಸಂಬಂಧಿಸಿದ ಏನೇ ಉತ್ಪನ್ನಗಳಿದ್ದರೂ ಸರಬರಾಜು ಮಾಡುತ್ತೇವೆ ಎಂದು ಹೇಳುತ್ತಾರೆ.

ವಿದೇಶದಿಂದಲೂ ಕರೆ

ಅಮೆರಿಕಾದಲ್ಲಿರುವ ಭಾರತೀಯ ಮೂಲದವರು ಕರೆ ಮಾಡಿ ಹತ್ತು ಇಂಚು ಅಗಲ ಹಾಗೂ ಹನ್ನೆರಡು ಇಂಚು ಉದ್ದದ ರಾಮಮಂದಿರ ಮಾದರಿ ಬೇಕು ಎಂದು ಕೇಳಿದ್ದಾರೆ. ಮರದಲ್ಲಿ ಅವರಿಗಾಗಿಯೇ ರಾಮಮಂದಿರ ಮಾದರಿ ತಯಾರಿಸಿ ಕಳುಹಿಸುತ್ತಿದ್ದೇವೆ. ನ್ಯೂಜಿಲೆಂಡ್‌ನಿಂದ ಕರೆ ಮಾಡಿದವರು ಭಿನ್ನ ಅಳತೆಯ ಮಾದರಿಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನೂ ಪೂರೈಸುತ್ತಿದ್ದೇವೆ ಎನ್ನುತ್ತಾರೆ ಸಿಂಗ್‌.

ರಾಮನ ಹೆಸರಲ್ಲಿ ಖರೀದಿ

ಈಗ ರಾಮನ ಹೆಸರಿನಲ್ಲಿ ಏನೇ ತಯಾರಿಸಿದರೂ ಜನ ಖರೀದಿ ಮಾಡುತ್ತಾರೆ. ಇದಕ್ಕಾಗಿಯೇ ಈ ಭಾಗದಲ್ಲಿ ಕರಕುಶಲ ಉತ್ಪಾದಿಸುವವರಿಗೂ ಬೇಡಿಕೆ ಇದೆ. ಬಗೆಬಗೆಯ ಉತ್ಪನ್ನಗಳು ಮಾರುಕಟ್ಟೆಗೆ ಬಂದರೂ ಜನ ಆಸಕ್ತಿಯಿಂದಲೇ ಖರೀದಿಸುತ್ತಿದ್ದಾರೆ. ಮುಂದಿನ ಎರಡು ವಾರ ಈ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ರಾಮನ ಹೆಸರು ಈಗ ಜೋರಾಗಿಯೇ ಇದೆ ಎಂದು ಸ್ಥಳೀಯ ವ್ಯಾಪಾರಿ ಹೃತಿಕ್‌ ಗುಪ್ತ ಹೇಳುತ್ತಾರೆ.

========

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.