PM Modi Quotes: ಅಯೋಧ್ಯೆ ರಾಮಮಂದಿರ ಇನ್ನು ಶಾಶ್ವತ; ಪ್ರಧಾನಿ ಮೋದಿ ಭಾಷಣದಲ್ಲಿ ಏಕತೆ ಮತ್ತು ನಂಬಿಕೆಯ ಪ್ರತಿಧ್ವನಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Quotes: ಅಯೋಧ್ಯೆ ರಾಮಮಂದಿರ ಇನ್ನು ಶಾಶ್ವತ; ಪ್ರಧಾನಿ ಮೋದಿ ಭಾಷಣದಲ್ಲಿ ಏಕತೆ ಮತ್ತು ನಂಬಿಕೆಯ ಪ್ರತಿಧ್ವನಿ

PM Modi Quotes: ಅಯೋಧ್ಯೆ ರಾಮಮಂದಿರ ಇನ್ನು ಶಾಶ್ವತ; ಪ್ರಧಾನಿ ಮೋದಿ ಭಾಷಣದಲ್ಲಿ ಏಕತೆ ಮತ್ತು ನಂಬಿಕೆಯ ಪ್ರತಿಧ್ವನಿ

ಅಯೋಧ್ಯೆಯಲ್ಲಿ ಇಂದು (ಡಿ.30) ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಏಕತೆ ಮತ್ತು ನಂಬಿಕೆಯನ್ನು ಪ್ರತಿಧ್ವನಿಸಿತ್ತು. ಹಲವು ವಿಚಾರಗಳ ಕಡೆಗೆ ಗಮನಸೆಳೆದ ಅವರ ಭಾಷಣದ 10 ಮುಖ್ಯ ಅಂಶಗಳು ಹೀಗಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ (PTI)

ಅಯೋಧ್ಯಾ ನಗರದಲ್ಲಿರುವ ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲಾನ ಪ್ರಾಣಪ್ರತಿಷ್ಠೆ ನಡೆಯಲಿದೆ. ಅದಕ್ಕೂ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ - ಡಿ.30) ಅಯೋಧ್ಯೆಗೆ ಭೇಟಿ ನೀಡಿದ್ದು, 15,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ರಾಮಭಕ್ತರಾದ ನಾವು ಶ್ರೀರಾಮಚಂದ್ರ ಪ್ರಭುವಿಗೆ ಯಾವುದೇ ತೊಂದರೆ ಕೊಡಲು ಬಯಸುವುದಿಲ್ಲ. ನೀವೆಲ್ಲರೂ ಜನವರಿ 23 ರಿಂದ ಯಾವತ್ತು ಬೇಕಾದರೂ ಬರಬಹುದು... ರಾಮಮಂದಿರವು ಈಗ ಶಾಶ್ವತವಾಗಿ ಇರಲಿದೆ ಎಂದು ಭರವಸೆ ತುಂಬಿದರು.

ಪ್ರಧಾನಿ ನರೇಂದ್ರ ಮೋದಿ ಅವರು, ಅಯೋಧ್ಯಾ ಧಾಮ ಜಂಕ್ಷನ್ ರೈಲ್ವೆ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು. ಇದು ನವೀಕೃತ ರೈಲ್ವೆ ನಿಲ್ದಾಣವಾಗಿದ್ದು, ಇದೇ ನಿಲ್ಧಾಣದಿಂದ ಇಂದು ಅಮೃತ್ ಭಾರತ್ ಮತ್ತು ವಂದೇ ಬಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಾಗಿದೆ.

ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದ 10 ಮುಖ್ಯ ಅಂಶಗಳು

1. ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲಾನ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಎಲ್ಲರೂ ಅಯೋಧ್ಯೆಗೆ ಬರಬೇಕಾಗಿಲ್ಲ. ಎಲ್ಲ 140 ಕೋಟಿ ಜನರು ತಮ್ಮ ಮನೆಗಳಲ್ಲೇ ರಾಮಜ್ಯೋತಿ ಬೆಳಗಿ ದೀಪಾವಳಿ ಸಂಭ್ರಮ ಆಚರಿಸಬೇಕು.

2. ಅಯೋಧ್ಯೆಯ ರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ದೇಶವಾಸಿಗಳೆಲ್ಲರೂ ತಾವಿರುವಲ್ಲಿಂದಲೇ ಭಾಗವಹಿಸಬೇಕು. ಜನವರಿ 23ರಿಂದ ಯಾವಾಗ ಬೇಕಾದರೂ ಅಯೋಧ್ಯೆಗೆ ಬರಬಹುದು. ರಾಮ ಮಂದಿರ ಇನ್ನು ಶಾಶ್ವತವಾಗಿ ಇರುತ್ತದೆ.

3. ಅದೃಷ್ಟವಶಾತ್ ಈ ಐತಿಹಾಸಿಕ ಕ್ಷಣ ನಮ್ಮೆಲ್ಲರ ಬದುಕಿನಲ್ಲಿ ಬಂದಿದೆ. ನಾವು ದೇಶಕ್ಕಾಗಿ ಹೊಸ ಸಂಕಲ್ಪವನ್ನು ಮಾಡಬೇಕು ಮತ್ತು ಹೊಸ ಶಕ್ತಿಯನ್ನು ತುಂಬಬೇಕು.

4. ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು, ಭಾರತೀಯರಷ್ಟೇ ಅಲ್ಲ ಜಗತ್ತು ಕೂಡ ಕಾಯುತ್ತಿದೆ. ಇದೊಂದು ಐತಿಹಾಸಿಕ ಕ್ಷಣ.

5. ಇದುವರೆಗೂ ಬಾಲಾಲಯದಲ್ಲಿದ್ದ ರಾಮಲಲಾ ಇನ್ನು ಪಕ್ಕಾ ಮನೆಗೆ ಸ್ಥಳಾಂತರವಾಗುತ್ತಿದ್ದಾನೆ. ರಾಮಲಲಾ ಮಾತ್ರವಲ್ಲ ದೇಶದ 4 ಕೋಟಿ ಬಡವರು ಕೂಡ ಪಕ್ಕಾ ಮನೆಯನ್ನು ಪ್ರವೇಶಿಸಲಿದ್ದಾರೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಅಭಿಯಾನಕ್ಕೆ ಶಕ್ತಿ ತುಂಬುವ ಕೆಲಸ ಅಯೋಧ್ಯೆಯಿಂದಲೇ ಆಗುತ್ತಿದೆ.

6. ಅಭಿವೃದ್ಧಿ (ವಿಕಾಸ) ಮತ್ತು ಪರಂಪರೆ (ವಿರಾಸತ್‌)ಯ ಬಲವು ನಮ್ಮ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತದೆ.

7. ಅಯೋಧ್ಯೆಯಲ್ಲಿ ಶ್ರೀ ರಾಮಲಲಾನ ಪ್ರಾಣ ಪ್ರತಿಷ್ಠೆ ಆಗುತ್ತಿದೆ. ಇದು ದೀಪಾವಳಿ ಹಬ್ಬದಂತೆ ಸಂಭ್ರಮಾಚರಣೆಯ ಸಮಯ. ಹೀಗಾಗಿ ಜನವರಿ 14ರಿಂದ 22ರ ತನಕ ದೇಶದ ದೇವಸ್ಥಾನಗಳು, ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಬೇಕು.

8. ಕಳೆದ 5 ದಶಕದ ಅವಧಿಯಲ್ಲಿ ದೇಶದಲ್ಲಿ 14 ಕೋಟಿ ಮನೆಗಳಿಗೆ ಮಾತ್ರವೇ ಗ್ಯಾಸ್ ಸಂಪರ್ಕ ನೀಡಲಾಗಿತ್ತು. ಆದರೆ, ಈಗ 10 ವರ್ಷದ ಅವಧಿಯಲ್ಲಿ 18 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ಇದರಲ್ಲಿ 10 ಕೋಟಿ ಸಂಪರ್ಕ ಉಜ್ವಲಾ ಯೋಜನೆಯಲ್ಲಿ ಉಚಿತವಾಗಿ ನೀಡಿರುವಂಥದ್ದು.

9. ಉಜ್ವಲಾ ಯೋಜನೆಯು ದೇಶದ ಕೋಟ್ಯಂತರ ತಾಯಂದಿರ, ಸಹೋದರಿಯರ ಬದುಕಿನ ಪಥವನ್ನು ಬದಲಾಯಿಸಿದೆ. ಅನುಕೂಲ ಒದಗಿಸಿದೆ. ಅವರಿಗೆ ಹೆಚ್ಚು ಸಮಯಾವಕಾಶ ಸಿಗುವಂತೆ ಮಾಡಿದೆ.

10. ನವ ಭಾರತವು ತನ್ನ ಯಾತ್ರಾ ಸ್ಥಳಗಳನ್ನು ಸುಂದರಗೊಳಿಸುತ್ತಿದೆ. ಅಷ್ಟೇ ಅಲ್ಲ, ಡಿಜಿಟಲ್ ತಂತ್ರಜ್ಞಾನದ ಜಗತ್ತಿನಲ್ಲಿ ಕೂಡ ಮುಂಚೂಣಿಯಲ್ಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.