Gutka Pan Masala Ban: ತೆಲಂಗಾಣದಲ್ಲಿ ಗುಟ್ಕಾ, ಪಾನ್ ಮಸಾಲ ಖರೀದಿ, ಮಾರಾಟ ನಿಷೇಧ; ಸರ್ಕಾರದಿಂದ ಮಹತ್ವದ ಆದೇಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gutka Pan Masala Ban: ತೆಲಂಗಾಣದಲ್ಲಿ ಗುಟ್ಕಾ, ಪಾನ್ ಮಸಾಲ ಖರೀದಿ, ಮಾರಾಟ ನಿಷೇಧ; ಸರ್ಕಾರದಿಂದ ಮಹತ್ವದ ಆದೇಶ

Gutka Pan Masala Ban: ತೆಲಂಗಾಣದಲ್ಲಿ ಗುಟ್ಕಾ, ಪಾನ್ ಮಸಾಲ ಖರೀದಿ, ಮಾರಾಟ ನಿಷೇಧ; ಸರ್ಕಾರದಿಂದ ಮಹತ್ವದ ಆದೇಶ

ತೆಲಂಗಾಣದಲ್ಲಿ ಮತ್ತೊಂದು ವರ್ಷದ ಮಟ್ಟಿಗೆ ಗುಟ್ಕಾ ಮತ್ತು ಪಾನ್ ಮಸಾಲವನ್ನು ನಿಷೇಧಿಸಲಾಗಿದೆ. ಗುಟ್ಕಾ, ಪಾನ್ ಮಸಾಲಾ ತಯಾರಿಕೆ, ಮಾರಾಟ, ಸಾಗಾಟ ಹಾಗೂ ವಿತರಣೆಯನ್ನು ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ತೆಲಂಗಾಣದಲ್ಲಿ ಗುಟ್ಕಾ, ಪಾನ್ ಮಸಾಲಾ ಖರೀದಿ, ಮಾರಾಟ ನಿಷೇಧ ಮಾಡಿ ಅಲ್ಲಿನ  ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ತೆಲಂಗಾಣದಲ್ಲಿ ಗುಟ್ಕಾ, ಪಾನ್ ಮಸಾಲಾ ಖರೀದಿ, ಮಾರಾಟ ನಿಷೇಧ ಮಾಡಿ ಅಲ್ಲಿನ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಹೈದರಾಬಾದ್: ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಇನ್ನೂ ಒಂದು ವರ್ಷದ ಮಟ್ಟಿಗೆ ಗುಟ್ಕಾ ಮತ್ತು ಪಾನ್ ಮಾಸಾ ನಿಷೇಧಿಸಲು (Gutka Pan Masala Ban in Telangana) ತೀರ್ಮಾನ ಕೈಗೊಳ್ಳಲಾಗಿದೆ. ತಂಬಾಕು ಮತ್ತು ನಿಕೋಟಿನ್ ನಿಂದ ತಯಾರಿಸಿದ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧವು 2024ರ ಮೇ 24 ರಿಂದ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಮಾರಾಟ, ಪೂರೈಕೆ, ಸಂಗ್ರಹಣೆ ಮತ್ತು ವಿತರಣೆಯನ್ನು ಒಂದು ವರ್ಷದವರೆಗೆ ನಿಷೇಧಿಸಲಾಗಿದೆ.

ಗುಟ್ಕಾ ಮತ್ತು ಪಾನ್ ಮಸಾಲಾ ಶಾಶ್ವತ ನಿಷೇಧಕ್ಕೆ ಆಗ್ರಹ

ಗುಟ್ಕಾ ಮತ್ತು ಪಾನ್ ಮಸಾಲದಲ್ಲಿರುವ ತಂಬಾಕು ಮತ್ತು ನಿಕೋಟಿನ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇವುಗಳ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುತ್ತವೆ. ಬಾಯಿ ಕ್ಯಾನ್ಸರ್, ಫೈಬ್ರೋಸಿಸ್ ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಬಳಕೆಯಿಂದ ಕ್ಯಾನ್ಸರ್ ಉಂಟಾಗುತ್ತದೆ. ವಾರಾಣಸಿಯಲ್ಲಿ ದಾಖಲಾಗುತ್ತಿರುವ ಶೇ 55ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ಗುಟ್ಕಾ ಮತ್ತು ಪಾನ್ ಮಸಾಲಾ ಕಾರಣ ಎಂದು ವೈದ್ಯರು ಪತ್ತೆಹಚ್ಚಿದ್ದಾರೆ. ಗುಟ್ಕಾ, ಪಾನ್ ಮಸಾಲಾ ನಿಷೇಧದ ಬಗ್ಗೆ ಜನ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇವುಗಳನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪ್ರಮುಖ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ

ಆಹಾರ ಸುರಕ್ಷತಾ ಅಧಿಕಾರಿಗಳು ತೆಲಂಗಾಣದ ಪ್ರಮುಖ ಹೋಟೆಲ್‌ಗಳ ಮೇಲೆ ಸತತ ದಾಳಿ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಹೊಟೇಲ್‌ಗಳು ಕೂಡ ಆಹಾರ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಕಂಡು ಬಂದಿದೆ. ದೊಡ್ಡ ಹೋಟೆಲ್‌ಗಳಲ್ಲೇ ಗುಣಮಟ್ಟದ ಆಹಾರಕ್ಕೆ ಸಂಬಂಧಿಸಿದ ನಿಮಯಗಳನ್ನು ಸರಿಯಾಗಿ ಪಾಲಿಸದಿರುವುದು ಕಂಡಬಂದಿದೆ.

ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ಇತ್ತೀಚೆಗೆ ಮಾದಾಪುರ ರಾಮೇಶ್ವರಂ ಕೆಫೆ ಮತ್ತು ಹೈದರಾಬಾದ್‌ನ ಬಾಹುಬಲಿ ಕಿಚನ್‌ನಲ್ಲಿ ತಪಾಸಣೆ ನಡೆಸಿದ್ದಾರೆ. ಈ ತಪಾಸಣೆಯ ವೇಳೆ ಅವಧಿ ಮೀರಿದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅವಧಿ ಮೀರಿದ ಪದಾರ್ಥಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಕಂಡುಬಂದಿದೆ.

ಕೃತುಂಗ, ಕೆಎಫ್‌ಸಿ, ರಾಮೇಶ್ವರಂ ಕೆಫೆಯಂತಹ ದೊಡ್ಡ ಹೊಟೇಲ್‌ಗಳಲ್ಲಿ ನೈರ್ಮಲ್ಯ ಕಾಪಾಡಿಲ್ಲ ಎಂಬುದನ್ನು ಸುರಕ್ಷತಾ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 2024ರ ಮಾರ್ಚ್ 24 ರಂದು ನಡೆದ ದಾಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ 100 ಕೆಜಿ ಬೇಳೆಕಾಳುಗಳು, 10 ಕೆಜಿ ಮೊಸರು ಹಾಗೂ 8 ಲೀಟರ್ ಹಾಲು ಪತ್ತೆಯಾಗಿದ್ದು, ಅವುಗಳನ್ನು ಸ್ಥಳದಲ್ಲೇ ಕಸದ ತೊಟ್ಟಿಗಳಲ್ಲಿ ಹಾಕಲಾಗಿದೆ.

ಲೇಬಲ್ ಇಲ್ಲದ ಹಸಿ ಅಕ್ಕಿ ಮತ್ತು ಬಿಳಿ ಲೋಬಿಯಾವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಹೋಟೆಲ್ ಸಿಬ್ಬಂದಿಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರದ ಕೊರತೆ, ಅಶುಚಿಯಾದ ಅಡುಗೆಮನೆಗಳು ಮತ್ತು ಡಸ್ಟ್‌ಬಿನ್ ಮುಚ್ಚಳಗಳು ತಪಾಸಣೆಯಲ್ಲಿ ಕಂಡುಬಂದಿವೆ. ಬಾಹುಬಲಿ ಕಿಚನ್‌ನ ಅಡುಗೆ ಮನೆಯಲ್ಲಿ ಜಿರಳೆಗಳು ಪತ್ತೆಯಾಗಿವೆ. ಸ್ಟೋರ್ ರೂಂನಲ್ಲಿದ್ದ ಆಹಾರ ಪದಾರ್ಥಗಳ ಮೇಲೂ ಜಿರಳೆ ಕಾಣಿಸಿಕೊಂಡಿವೆ.

ಟಾಸ್ಕ್ ಫೋರ್ಸ್ ಅಧಿಕಾರಿಗಳು ಬಂಜಾರಾ ಹಿಲ್ಸ್‌ನಲ್ಲಿರುವ ಲ್ಯಾಬೊನೆಲ್ ಫೈನ್ ಬೇಕಿಂಗ್‌ನಲ್ಲಿಯೂ ತಪಾಸಣೆ ನಡೆಸಿದ್ದಾರೆ. ಸುಮಾರು 4 ಸಾವಿರ ಮೌಲ್ಯದ ಬಳಕೆಯಲ್ಲಿ ಇಲ್ಲದ ವಸ್ತುಗಳನ್ನು ಮಾರಾಟ ಮಾಡಿರುವುದು ದಾಳಿಯ ವೇಳೆ ಕಂಡು ಬಂದಿದೆ. ಇಂಥ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.