Bharat Bandh 2024; ಎಸ್‌ಸಿ ಎಸ್‌ಟಿ ಮೀಸಲಾತಿ ವಿಚಾರಕ್ಕೆ ಆಗಸ್ಟ್ 21ಕ್ಕೆ ಭಾರತ ಬಂದ್; ಕರ್ನಾಟಕದಲ್ಲೂ ಸಿಗುತ್ತಾ ಬೆಂಬಲ
Bharat Bandh; ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ವಿಚಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಉತ್ತರ ಭಾರತದಲ್ಲಿ ಸಂಚಲನ ಮೂಡಿಸಿದ್ದು, ಈ ಸಮುದಾಯಗಳ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಬುಧವಾರ (ಆಗಸ್ಟ್ 21) ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.

ನವದೆಹಲಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿಗೆ ಪ್ರತಿಕ್ರಿಯೆಯಾಗಿ ಬುಧವಾರ (ಆಗಸ್ಟ್ 21) ಭಾರತ್ ಬಂದ್ ನಡೆಯಲಿದೆ. ಈ ರಾಷ್ಟ್ರವ್ಯಾಪಿ ಮುಷ್ಕರದ ವಿಚಾರ ಈಗ ಹೆಚ್ಚು ಚರ್ಚೆಗೆ ಒಳಗಾಗಿದ್ದು, ನಾಳೆ ಬಂದ್ ನಡೆಯಲಿದೆಯೇ? ಯಾವೆಲ್ಲ ಸೇವೆಗಳು ಇರಲಿವೆ, ಯಾವುದು ಬಂದ್ ಆಗಲಿವೆ ಎಂಬ ಆತಂಕ ಹಲವರಲ್ಲಿ ಮನೆ ಮಾಡಿದೆ.
ಮೀಸಲಾತಿ ಬಚಾವೋ ಸಂಘರ್ಷ ಸಮಿತಿ ಈ ಭಾರತ್ ಬಂದ್‌ಗೆ ಕರೆ ನೀಡಿದ್ದು, ವಿಶೇಷವಾಗಿ ರಾಜಸ್ಥಾನದ ಎಸ್‌ಸಿ/ ಎಸ್‌ಟಿ ಸಂಘಟನೆಗಳು ಇದನ್ನು ಬೆಂಬಲಿಸಿವೆ. ಈ ನಡುವೆ, ಭಾರತ್ ಬಂದ್ ಕರೆಗೆ ವಿವಿಧ ರಾಜ್ಯಗಳಲ್ಲಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂಬ ಸುಳಿವು ಲಭ್ಯವಿಲ್ಲ. ಆದರೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ದೇಶದಲ್ಲಿ ಯಾವುದೇ ಅಹಿತಕರ ಪರಿಸ್ಥಿತಿಯನ್ನು ತಡೆಗಟ್ಟಲು ತಮ್ಮ ಉಪಸ್ಥಿತಿಯನ್ನು ಹೆಚ್ಚಿಸಲು ಎಲ್ಲ ರಾಜ್ಯಗಳ ಪೊಲೀಸರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದಾಗಿ ವರದಿಗಳು ಹೇಳುತ್ತಿವೆ. ಪ್ರತಿಭಟನೆಯ ಸಮಯದಲ್ಲಿ ಸ್ಥಿರವಾದ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಸೂಚನೆ ಹೋಗಿದೆ.
ಆಗಸ್ಟ್ 21 ರಂದು ಭಾರತ್ ಬಂದ್ ಏಕೆ
ಮೀಸಲಾತಿ ವಿಚಾರದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಮೀಸಲಿನಲ್ಲಿ ಉಪವರ್ಗ ರಚಿಸುವುದಕ್ಕೆ ರಾಜ್ಯಗಳಿಗೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪು ಈ ಸಮುದಾಯಗಳ ನಡುವೆ ಕಳವಳ ಸೃಷ್ಟಿಸಿದ್ದು, ನಾನಾ ರೀತಿಯ ಚರ್ಚೆಗಳಾಗುತ್ತಿವೆ.
ಅಗತ್ಯವಿರುವವರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಕೆನೆಪದರದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಈ ತೀರ್ಪಿಗೆ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಇದು ಮೀಸಲಾತಿಯ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ವಾದಿಸುತ್ತದೆ. ಈ ತೀರ್ಪನ್ನು ಪ್ರಶ್ನಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ಹಿಂಪಡೆಯುವಂತೆ ಒತ್ತಾಯಿಸಿ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.
ಭಾರತ್ ಬಂದ್ ಪರಿಣಾಮ ಎಲ್ಲೆಲ್ಲಿ ಹೆಚ್ಚು: ಮೀಸಲಾತಿ ಬಚಾವೋ ಸಂಘರ್ಷ ಸಮಿತಿ ಬುಧವಾರ (ಆಗಸ್ಟ್ 21) ಇಡೀ ದಿನ ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಸಮಿತಿಯ ಕರೆಗೆ ರಾಜಸ್ಥಾನ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಇಲ್ಲೆಲ್ಲ ಮಾರುಕಟ್ಟೆ, ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ.
ಆದಾಗ್ಯೂ, ಮಾರುಕಟ್ಟೆ ಸಮಿತಿಗಳು ಈ ಬಂದ್‌ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆಯೇ ಮತ್ತು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ರಾಷ್ಟ್ರವ್ಯಾಪಿ ಪ್ರತಿಭಟನೆಯು ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಕಚೇರಿಗಳು, ತುರ್ತು ಸೇವೆಗಳು, ಆಂಬ್ಯುಲೆನ್ಸ್‌ಗಳನ್ನು ಒಳಗೊಂಡಂತೆ ಅಡ್ಡಿಪಡಿಸುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಏನಿದೆ ವಾತಾವರಣ; ಬಂದ್ ಆದರೆ ಏನಿರುತ್ತೆ, ಏನಿರಲ್ಲ
ಮೀಸಲಾತಿ ಬಚಾವೋ ಸಂಘರ್ಷ ಸಮಿತಿಯ ಕರೆಗೆ ಕರ್ನಾಟಕದಲ್ಲಿ ಇದುವರೆಗೆ ಯಾವುದೇ ಸಂಘಟನೆ ಬೆಂಬಲ ನೀಡಿಲ್ಲ. ಹೀಗಾಗಿ ಬುಧವಾರ ಭಾರತ್ ಬಂದ್‌ಗೆ ಕರ್ನಾಟಕದಲ್ಲಿ ಯಾವ ರೀತಿ ಪ್ರತಿಕ್ರಿಯೆ ಇರಲಿದೆ ಎಂಬುದು ಸ್ಪಷ್ಟವಾಗಿಲ್ಲ. ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ನಾಳೆ ಪರಿಸ್ಥಿತಿ ನೋಡಿಕೊಂಡು ಸ್ಥಳೀಯಾಡಳಿತ ಸಂಸ್ಥೆಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬಹುದು. ಆದಾಗ್ಯೂ, ತುರ್ತು ವೈದ್ಯಸೇವೆಗಳು, ಆಸ್ಪತ್ರೆ, ಮೆಡಿಕಲ್ ಸೇರಿ ಅಗತ್ಯ ಸೇವೆಗಳಿಗೆ ಇದ್ಯಾವುದೂ ಅಡ್ಡಿಯಾಗಲಾರದು.

ವಿಭಾಗ