ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ; ಅತ್ಯುನ್ನತ ನಾಗರಿಕ ಪುರಸ್ಕೃತರ ಪಟ್ಟಿಯಲ್ಲೀಗ 50 ಗಣ್ಯರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ; ಅತ್ಯುನ್ನತ ನಾಗರಿಕ ಪುರಸ್ಕೃತರ ಪಟ್ಟಿಯಲ್ಲೀಗ 50 ಗಣ್ಯರು

ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ; ಅತ್ಯುನ್ನತ ನಾಗರಿಕ ಪುರಸ್ಕೃತರ ಪಟ್ಟಿಯಲ್ಲೀಗ 50 ಗಣ್ಯರು

ಹಿರಿಯ ರಾಜಕಾರಣಿ, ಮುತ್ಸದ್ದಿ ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆಯಾಗಿದೆ. ಈ ಅತ್ಯುನ್ನತ ನಾಗರಿಕ ಪುರಸ್ಕೃತರ ಪಟ್ಟಿಯಲ್ಲೀಗ 50 ಗಣ್ಯರು ಇದ್ದು, ಅವರ ವಿವರ ಹೀಗಿದೆ.

ಭಾರತದ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ (ಕಡತ ಚಿತ್ರ). ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆ ಬಳಿಕ ಅತ್ಯುನ್ನತ ನಾಗರಿಕ ಪುರಸ್ಕೃತರ ಪಟ್ಟಿಯಲ್ಲೀಗ 50 ಗಣ್ಯರು ಇದ್ದಾರೆ.
ಭಾರತದ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ (ಕಡತ ಚಿತ್ರ). ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆ ಬಳಿಕ ಅತ್ಯುನ್ನತ ನಾಗರಿಕ ಪುರಸ್ಕೃತರ ಪಟ್ಟಿಯಲ್ಲೀಗ 50 ಗಣ್ಯರು ಇದ್ದಾರೆ.

ಬಿಜೆಪಿಯ ಪ್ರಮುಖ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (Lal Krishna Advani) ಅವರಿಗೆ 'ಭಾರತ ರತ್ನ' (Bharat Ratna) ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಫೆ.3) ಘೋಷಿಸಿದರು.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ಇದುವರೆಗೆ 50 ಸಾಧಕರಿಗೆ ನೀಡಲಾಗಿದೆ. ಈ ಪೈಕಿ, 17 ಸಾಧಕರಿಗೆ ಮರಣೋತ್ತರವಾಗಿ ನೀಡಲಾಗಿದೆ. 1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗವನ್ನು ಲೆಕ್ಕಿಸದೆ ಸಾಧಕರನ್ನು ಗೌರವಿಸುವ ಪುರಸ್ಕಾರವಾಗಿದೆ.

ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ತೋರಿದವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಪ್ರಧಾನ ಮಂತ್ರಿಯವರು ಇಂತಹ ಸಾಧಕರ ಹೆಸರನ್ನು ಈ ಪುರಸ್ಕಾರಕ್ಕಾಗಿ ರಾಷ್ಟ್ರಪತಿಯವರಿಗೆ ಕಳುಹಿಸುತ್ತಾರೆ. ಅವರು ಅದನ್ನು ಅಂಗೀಕರಿಸಿ ಅಂತಿಮಗೊಳಿಸುತ್ತಾರೆ. ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿಗಳು ಸಹಿ ಮಾಡಿದ ಸನದ್ (ಪ್ರಮಾಣಪತ್ರ) ಮತ್ತು ಪದಕವನ್ನು ನೀಡಲಾಗುತ್ತದೆ. ಗೃಹ ಸಚಿವಾಲಯ ಪ್ರಕಾರ, ಭಾರತ ರತ್ನ ಪ್ರಶಸ್ತಿಯಲ್ಲಿ ನಗದು ಹಣ ಇರುವುದಿಲ್ಲ.

ಇದಕ್ಕೆ ಔಪಚಾರಿಕ ಅರ್ಜಿ ಸಲ್ಲಿಸುವಿಕೆ ಇರುವುದಿಲ್ಲ. ವಾರ್ಷಿಕವಾಗಿ ಮೂವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಶಿಫಾರಸು ಮಾಡಬಹುದಾಗಿದೆ.

ಇದುವರೆಗಿನ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು

1954

1) ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಕಾರಣಿ, ಬರಹಗಾರ, ವಕೀಲ ಮತ್ತು ಸ್ವಾತಂತ್ರ್ಯ ಕಾರ್ಯಕರ್ತ)

2) ಡಾ.ಸರ್ವಪಲ್ಲಿ ರಾಧಾಕೃಷ್ಣನ್ (ತತ್ವಜ್ಞಾನಿ, ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

3) ಚಂದ್ರಶೇಖರ ವೆಂಕಟ ರಾಮನ್ (ಭೌತಶಾಸ್ತ್ರಜ್ಞ)

1955

4) ಭಗವಾನ್ ದಾಸ್ (ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಶಿಕ್ಷಣ ತಜ್ಞ)

5) ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸಿವಿಲ್ ಇಂಜಿನಿಯರ್, ರಾಜನೀತಿಜ್ಞ ಮತ್ತು ಮೈಸೂರಿನ ದಿವಾನ)

6) ಜವಾಹರಲಾಲ್ ನೆಹರು (ಸ್ವಾತಂತ್ರ್ಯ ಹೋರಾಟಗಾರ, ಲೇಖಕ ಮತ್ತು ಭಾರತದ ಮಾಜಿ ಪ್ರಧಾನಿ)

1957

7) ಗೋವಿಂದ ವಲ್ಲಭ ಪಂತ್ (ಸ್ವಾತಂತ್ರ್ಯ ಹೋರಾಟಗಾರ)

1958

8) ಧೋಂಡೋ ಕೇಶವ್ ಕರ್ವೆ (ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ)

1961

9) ಬಿಧಾನ್ ಚಂದ್ರ ರಾಯ್ (ವೈದ್ಯ, ರಾಜಕೀಯ ನಾಯಕ, ಲೋಕೋಪಕಾರಿ, ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ)

10) ಪುರುಷೋತ್ತಮ್ ದಾಸ್ ಟಂಡನ್ (ಸ್ವಾತಂತ್ರ್ಯ ಹೋರಾಟಗಾರ)

1962

11) ಬಾಬು ರಾಜೇಂದ್ರ ಪ್ರಸಾದ್ (ಸ್ವಾತಂತ್ರ್ಯ ಹೋರಾಟಗಾರ, ವಕೀಲ, ರಾಜಕಾರಣಿ, ವಿದ್ವಾಂಸ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

1963

12) ಝಕೀರ್ ಹುಸೇನ್ (ಸ್ವಾತಂತ್ರ್ಯ ಹೋರಾಟಗಾರ)

13) ಪಾಂಡುರಂಗ ವಾಮನ್ ಕಾನೆ, (ಭಾರತಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ)

1966

14) ಲಾಲ್ ಬಹದ್ದೂರ್ ಶಾಸ್ತ್ರಿ (ಮರಣೋತ್ತರ) (ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಮಾಜಿ ಪ್ರಧಾನಿ)

15) ಇಂದಿರಾ ಗಾಂಧಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ)

1975

16) ವರಾಹಗಿರಿ ವೆಂಕಟ ಗಿರಿ (ವಿವಿ ಗಿರಿ) (ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

1976

17) ಕುಮಾರಸ್ವಾಮಿ ಕಾಮರಾಜ್ (ಮರಣೋತ್ತರ) (ರಾಜಕಾರಣಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ)

1980

18) ಮದರ್ ಮೇರಿ ತೆರೇಸಾ ಬೊಜಾಕ್ಸಿಯು (ಮದರ್ ತೆರೇಸಾ) (ಮಿಷನರೀಸ್ ಆಫ್ ಚಾರಿಟಿಯ ಸ್ಥಾಪಕರು)

1983

19) ಆಚಾರ್ಯ ವಿನೋಬಾ ಭಾವೆ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ, ಸಮಾಜ ಸುಧಾರಕ)

1987

20) ಖಾನ್ ಅಬ್ದುಲ್ ಗಫರ್ ಖಾನ್ (ಸ್ವಾತಂತ್ರ್ಯ ಹೋರಾಟಗಾರ)

1988

21) ಮರುದೂರು ಗೋಪಾಲನ್ ರಾಮಚಂದ್ರನ್ (ಎಂಜಿಆರ್‌) (ಮರಣೋತ್ತರ) ( ನಟನೆಯಿಂದ ರಾಜಕಾರಣಕ್ಕೆ ಬಂದವರು)

1990

22) ಡಾ. ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ (ಮರಣೋತ್ತರ) (ಸಮಾಜ ಸುಧಾರಕ)

23) ನೆಲ್ಸನ್ ರೋಲಿಹ್ಲಾ ಮಂಡೇಲಾ (ವರ್ಣಭೇದ ನೀತಿ ವಿರೋಧಿ ಕಾರ್ಯಕರ್ತ)

1991

24) ರಾಜೀವ್ ಗಾಂಧಿ (ಮರಣೋತ್ತರ) (ರಾಜಕಾರಣಿ, ಮಾಜಿ ಪ್ರಧಾನಿ)

25) ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) (ಸ್ವಾತಂತ್ರ್ಯ ಹೋರಾಟಗಾರ)

26) ಮೊರಾರ್ಜಿ ರಾಂಚೋಡ್ಜಿ ದೇಸಾಯಿ (ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಪ್ರಧಾನ ಮಂತ್ರಿ)

1992

27) ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ)

28) ಜಹಾಂಗೀರ್ ರತನ್‌ಜಿ ದಾದಾಭಾಯಿ ಟಾಟಾ (ಕೈಗಾರಿಕೋದ್ಯಮಿ)

29) ಸತ್ಯಜಿತ್ ರೇ (ಚಲನಚಿತ್ರ ನಿರ್ಮಾಪಕ)

1997

30) ಗುಲ್ಜಾರಿ ಲಾಲ್ ನಂದಾ (ಸ್ವಾತಂತ್ರ್ಯ ಕಾರ್ಯಕರ್ತ)

31) ಅರುಣಾ ಅಸಫ್ ಅಲಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ)

32) ಎ.ಪಿ.ಜೆ. ಅಬ್ದುಲ್ ಕಲಾಂ (ಏರೋಸ್ಪೇಸ್, ​​ರಕ್ಷಣಾ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

1998

33) ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಕರ್ನಾಟಿಕ್ ಶಾಸ್ತ್ರೀಯ ಗಾಯಕಿ)

34) ಚಿದಂಬರಂ ಸುಬ್ರಮಣ್ಯಂ (ಸ್ವಾತಂತ್ರ್ಯ ಹೋರಾಟಗಾರ)

35) ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ)

1999

36) ಜಯಪ್ರಕಾಶ್ ನಾರಾಯಣ್ (ಮರಣೋತ್ತರ) (ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ)

37) ಅಮರ್ತ್ಯ ಸೇನ್ (ಅರ್ಥಶಾಸ್ತ್ರಜ್ಞ)

38) ರವಿಶಂಕರ್ (ಸಿತಾರ್ ವಾದಕ)

2001

39) ಲತಾ ದೀನಾನಾಥ್ ಮಂಗೇಶ್ಕರ್ (ಹಿನ್ನೆಲೆ ಗಾಯಕಿ)

40) ಉಸ್ತಾದ್ ಬಿಸ್ಮಿಲ್ಲಾ ಖಾನ್ (ಹಿಂದೂಸ್ತಾನಿ ಶಾಸ್ತ್ರೀಯ ಶೆಹನಾಯಿ ವಾದಕ)

2009

41) ಭೀಮಸೇನ್ ಗುರುರಾಜ್ ಜೋಶಿ (ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ)

2014

42) ಸಿಎನ್‌ ಆರ್‌ ರಾವ್ (ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ)

43) ಸಚಿನ್ ರಮೇಶ್ ತೆಂಡೂಲ್ಕರ್ (ಕ್ರಿಕೆಟಿಗ)

2015

44) ಅಟಲ್ ಬಿಹಾರಿ ವಾಜಪೇಯಿ (ರಾಜಕಾರಣಿ, ಮಾಜಿ ಪ್ರಧಾನಿ)

45) ಮದನ್ ಮೋಹನ್ ಮಾಳವೀಯ (ಮರಣೋತ್ತರ) (ವಿದ್ವಾಂಸ ಮತ್ತು ಶೈಕ್ಷಣಿಕ ಸುಧಾರಕ)

2019

46) ನಾನಾಜಿ ದೇಶಮುಖ್ (ಮರಣೋತ್ತರ) (ಸಾಮಾಜಿಕ ಕಾರ್ಯಕರ್ತ)

47) ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ) (ಹಿನ್ನೆಲೆ ಗಾಯಕ, ಗೀತರಚನೆಕಾರ, ಸಂಗೀತಗಾರ, ಕವಿ ಮತ್ತು ಚಲನಚಿತ್ರ ನಿರ್ಮಾಪಕ)

48) ಪ್ರಣಬ್ ಮುಖರ್ಜಿ (ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ)

49) ಕರ್ಪೂರಿ ಠಾಕೂರ್ (ಮರಣೋತ್ತರ) (ರಾಜಕಾರಣಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ)

50) ಲಾಲ್ ಕೃಷ್ಣ ಅಡ್ವಾಣಿ (ರಾಜಕಾರಣಿ ಮತ್ತು ಮಾಜಿ ಉಪಪ್ರಧಾನಿ)

ಯಾವ ರಾಜ್ಯ, ರಾಷ್ಟ್ರ ಮತ್ತು ಕ್ಷೇತ್ರದವರಿಗೆಲ್ಲ ಸಿಕ್ಕಿದೆ ಭಾರತ ರತ್ನ

ಭಾರತ ರತ್ನ ಪ್ರಶಸ್ತಿ ಗರಿಷ್ಠ ಸಾರ್ವಜನಿಕ ವ್ಯವಹಾರ ಕ್ಷೇತ್ರದ 27 ಸಾಧಕರಿಗೆ ಪ್ರದಾನ ಮಾಡಲಾಗಿದೆ. ಇದೇ ರೀತಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ 8, ಕಲಾಕ್ಷೇತ್ರದ 7, ಸಮಾಜ ಕಾರ್ಯ 6, ಶಿಕ್ಷಣ ಮತ್ತು ಸಾಹಿತ್ಯ 2, ಕ್ರೀಡೆ -1, ವಾಣಿಜ್ಯ ಮತ್ತು ಕೈಗಾರಿಕೆ -1, ನಾಗರಿಕ ಸೇವೆ ಕ್ಷೇತ್ರದ ಒಬ್ಬರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಜ್ಯವಾರು ಗಮನಿಸುವುದಾದರೆ, ಮಹಾರಾಷ್ಟ್ರ 9, ಉತ್ತರ ಪ್ರದೇಶ 8, ದೆಹಲಿ 5, ಪಶ್ಚಿಮ ಬಂಗಾಳ 4, ಗುಜರಾತ್ 3, ಬಿಹಾರ, ಅಸ್ಸಾಂ, ಕರ್ನಾಟಕ ತಲಾ 2, ಒಡಿಶಾ, ತೆಲಂಗಾಣದ ತಲಾ ಒಬ್ಬರಿಗೆ ಭಾರತ ರತ್ನ ಪ್ರಶಸ್ತಿಗೆ ಭಾಜನರಾದರು.

ದಕ್ಷಿಣ ಆಫ್ರಿಕಾ, ಬ್ರಿಟನ್, ಅಮೆರಿಕ, ಪಾಕಿಸ್ತಾನ ತಲಾ ಒಬ್ಬರು ಸಾಧಕರು ಭಾರತ ರತ್ನಕ್ಕೆ ಭಾಜನರಾಗಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.