ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bharat Ratna: ಚೌಧರಿ ಚರಣ್‌ ಸಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಭಾರತ ರತ್ನ ಪುರಸ್ಕೃತ ದೇಶದ 5ನೇ ಪ್ರಧಾನಮಂತ್ರಿಯ ಕುರಿತು ತಿಳಿದುಕೊಳ್ಳೋಣ

Bharat Ratna: ಚೌಧರಿ ಚರಣ್‌ ಸಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು? ಭಾರತ ರತ್ನ ಪುರಸ್ಕೃತ ದೇಶದ 5ನೇ ಪ್ರಧಾನಮಂತ್ರಿಯ ಕುರಿತು ತಿಳಿದುಕೊಳ್ಳೋಣ

Bharat Ratna Chaudhary Charan Singh: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್‌ ಸಿಂಗ್‌ಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ್ದಾರೆ. ಭಾರತದ ಅಲ್ಪಾವಧಿಯ ಪ್ರಧಾನಿಯಾಗಿ ‌ಸೇವೆ ಸಲ್ಲಿಸಿದ ಚರಣ್‌ ಸಿಂಗ್‌ ಅವರ ಸಾಧನೆಗಳು, ರಾಜಕೀಯ ಜೀವನ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಭಾರತ ರತ್ನ ಪುರಸ್ಕೃತ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತ ರತ್ನ ಪುರಸ್ಕೃತ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್‌ ಸಿಂಗ್‌ಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ್ದಾರೆ. ಭಾರತದ ಅಲ್ಪಾವಧಿಯ ಪ್ರಧಾನಿಯಾಗಿ ‌ಸೇವೆ ಸಲ್ಲಿಸಿದ ಚರಣ್‌ ಸಿಂಗ್‌ ಅವರ ಸಾಧನೆಗಳು, ರಾಜಕೀಯ ಜೀವನ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ. ಇವರ ಬದುಕೆಂಬ ಪುಸ್ತಕದಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಮುನ್ನ ಮತ್ತು ಸ್ವಾತಂತ್ರ್ಯ ದೊರಕಿದ ಬಳಿಕದ ಘಟನಾವಳಿಗಳು ಇವೆ. ರೈತರಿಗೆ ಒಳಿತು ಮಾಡಲು ತುಡಿಯುತ್ತಿದ್ದ ಚೌಧರಿ ಚರಣ್‌ ಸಿಂಗ್‌ ಜುಲೈ 28, 1979ರಿಂದ ಜನವರಿ 14, 1980ರವರೆಗೆ ಭಾರತದ ಐದನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇವರನ್ನು ಭಾರತದ ರೈತರ ಚಾಂಪಿಯನ್‌ ಎಂದು ಕರೆಯುತ್ತಾರೆ. ಪ್ರತಿವರ್ಷ ಡಿಸೆಂಬರ್‌ 23ರನ್ನು ರಾಷ್ಟ್ರೀಯ ರೈತರ ದಿನವಾಗಿ ಆಚರಿಸುವ ಮೂಲಕ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಚೌಧರಿ ಚರಣ್‌ ಸಿಂಗ್‌ ಪ್ರೊಫೈಲ್‌

ಜನನ: 23 ಡಿಸೆಂಬರ್ 1902
ಜನ್ಮ ಸ್ಥಳ: ನೂರ್ಪುರ್, ಭಾರತ
ನಿಧನ: 29 ಮೇ 1987
ತಂದೆ: ಮೀರ್ ಸಿಂಗ್
ತಾಯಿ: ನೇತ್ರಾ ಕೌರ್
ಸಂಗಾತಿ: ಗಾಯತ್ರಿ ದೇವಿ
ರಾಜಕೀಯ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಜನತಾ ಪಕ್ಷ , ಪ್ರಧಾನ ಮಂತ್ರಿ (1979-1980)

ಚೌಧರಿ ಚರಣ್‌ ಸಿಂಗ್‌ ಆರಂಭಿಕ ಜೀವನ ಮತ್ತು ಶಿಕ್ಷಣ

ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್‌ ಸಿಂಗ್‌ ಮೂಲತಃ ಕೃಷಿ ಕುಟುಂಬದಿಂದ ಬಂದವರು. ಮೀರಜ್‌ ಜಿಲ್ಲೆಯ ಭದೌಲಾಗ್ರಾಮದಲ್ಲಿ ನೆಲೆಸಿದ್ದ ಇವರು ಜಾನಿ ಖುರ್ದ್ ಗ್ರಾಮದಲ್ಲಿ ಆರಂಭಿಕ ಶಿಕ್ಷಣ ಪಡೆದರು. 1919 ರಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಶಿಕ್ಷಣ ಪೂರ್ಣಗೊಳಿಸಿದರು. 1923 ರಲ್ಲಿ ಆಗ್ರಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. 1925 ರಲ್ಲಿ ಇತಿಹಾಸದಲ್ಲಿ ಎಂಎ ಪದವಿ ಪೂರೈಸಿದರು. ಕಾನೂನು ವಿಷಯದಲ್ಲೂ ತರಬೇತಿ ಪಡೆದರು. ಗಾಜಿಯಾಬಾದ್‌ನಲ್ಲಿ ನಾಗರಿಕ ಕಾನೂನು ಅಭ್ಯಾಸ ಮಾಡಿದ್ದಾರೆ. ಬಳಿಕ ರಾಜಕೀಯವನ್ನು ತಮ್ಮ ಕರಿಯರ್‌ ಆಗಿ ಆಯ್ಕೆ ಮಾಡಿಕೊಂಡರು. 1929 ರಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. ತಮ್ಮ ಬದುಕಿನ ಉದ್ದಕ್ಕೂ ರೈತರು ಮತ್ತು ರೈತ ಕುಟುಂಬಕ್ಕಾಗಿ ಶ್ರಮಿಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಲವು ಬಾರಿ ಜೈಲಿಗೂ ಹೋಗಿದ್ದರು.

ಭಾರತ ರತ್ನ ಚೌಧರಿ ಚರಣ್‌ ಸಿಂಗ್‌ ರಾಜಕೀಯ ಜೀವನ

1. ಉತ್ತರ ಪ್ರದೇಶ ವಿಧಾನಸಭೆಗೆ 1937ರಲ್ಲಿ ಅವರು ಮೊದಲ ಬಾರಿಗೆ ಆಯ್ಕೆಯಾದರು. ಇದೇ ಕ್ಷೇತ್ರವನ್ನು 1946, 1952, 1962 ಮತ್ತು 1967ರಲ್ಲಿ ಪ್ರತಿನಿಧಿಸಿದ್ದರು. ಪಂಡಿತ್ ಗೋವಿಂದ್ ಬಲ್ಲಭ್ ಪಂತ್ ಸರಕಾರದಲ್ಲಿ 1946ರಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಂದಾಯ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ನ್ಯಾಯ, ಮಾಹಿತಿ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರು.

2. 1951ರಲ್ಲಿ ರಾಜ್ಯ ಕ್ಯಾಬಿನೆಟ್‌ ಮಂತ್ರಿಯಾಗಿ ಆಯ್ಕೆಯಾದರು. 1952 ರಲ್ಲಿ ಕಂದಾಯ ಮತ್ತು ಕೃಷಿ ಸಚಿವರಾದರು.

3. 1960 ರಲ್ಲಿ ಸಿಬಿ ಗುಪ್ತಾ ಸಚಿವಾಲಯದಲ್ಲಿ ಗೃಹ ಮತ್ತು ಕೃಷಿ ಸಚಿವರಾಗಿದ್ದರು. 1962-63ರವರೆಗೆ ಕೃಷಿ ಮತ್ತು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದರು. 1966 ರಲ್ಲಿ ಸ್ಥಳೀಯ ಸ್ವ-ಸರ್ಕಾರಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡರು.

4. ಕಾಂಗ್ರೆಸ್ ವಿಭಜನೆಯ ಬಳಿಕ 970 ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.ಆಡಳಿತದಲ್ಲಿನ ಅಸಮರ್ಥತೆ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಇವರು ಸಹಿಸುತ್ತ ಇರಲಿಲ್ಲ. 1970 ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.

5. 1977-78ರಲ್ಲಿ ಗೃಹ ಸಚಿವಾಲಯದ ಮಂತ್ರಿಯಾದರು. ಅಂದರೆ, ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಕ್ಯಾಬಿನೆಟ್‌ ಮಿನಿಸ್ಟರ್‌ ಆಗಿ ಆಯ್ಕೆಯಾದರು. 1977ರಲ್ಲಿ ಗೃಹ ಸಚಿವರಾದರು.

6. 1977ರ ಅಕ್ಟೋಬರ್‌ 3ರಂದು ಇಂದಿರಾ ಗಾಂಧಿಯ ಬಂಧನವಾಯಿತು. ಇದೇ ಸಮಯದಲ್ಲಿ ಚರಣ್‌ ಸಿಂಗ್‌ ಅವರು ರಾಜೀನಾಮೆ ಪತ್ರ ಸಲ್ಲಿಸಿದರು. ಆದರೆ, ಮೊರಾರ್ಜಿ ದೇಸಾಯಿ ಅದಕ್ಕೆ ಅಂಕಿತ ಹಾಕಲಿಲ್ಲ.

7. ಇಂದಿರಾ ಗಾಂಧಿ ವಿಚಾರಣೆಗೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ಹೆಚ್ಚಾದ ಕಾರಣ ಚರಣ್‌ ಸಿಂಗ್‌ 1978ರಲ್ಲಿ ಮೊರಾರ್ಜಿ ದೇಸಾಯಿ ಸಂಪುಟಕ್ಕೆ ರಾಜೀನಾಮೆ ನೀಡಿದರು. 1979ರಲ್ಲಿ ಕ್ಯಾಬಿನೆಟ್‌ಗೆ ಮರಳಿದರು.

8.1979ರ ಜುಲೈ 28ರಂದು ಭಾರತದ 5ನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು.

ಚೌಧರಿ ಚರಣ್ ಸಿಂಗ್ ಬರೆದ ಪುಸ್ತಕಗಳು

ಸರಳ ಜೀವನ ನಡೆಸುತ್ತಿದ್ದ ಚೌಧರಿ ಚರಣ್‌ ಸಿಂಗ್‌ ಅವರು ಕೆಲವು ಪುಸ್ತಕಗಳನ್ನ ಬರೆದಿದ್ದಾರೆ. ಇವರ ಬಹುತೇಕ ಪುಸ್ತಕಗಳು ಕೃಷಿಕರಿಗೆ ಸಂಬಂಧಪಟ್ಟಿವೆ. ಅಬಾಲಿಷನ್‌ ಆಫ್‌ ಜಮಿನ್ದಾರಿ, ಕೋ ಆಪರೇಟಿವ್‌ ಫಾರ್ಮಿಂಗ್‌- ಎಕ್ಸ್‌ರೇಯ್ಡ್‌, ಇಂಡಿಯಾ ಪಾವರ್ಟಿ ಆಂಡ್‌ ಇಟ್ಸ್‌ ಸೊಲ್ಯುಷನ್ಸ್‌, ಪಿಸಂಟ್‌ ಪ್ರಾರ್ಪರ್ಟಿಶಿಪ್‌ ಆರ್‌ ಲ್ಯಾಂಡ್‌ ಟು ದಿ ವರ್ಕರ್ಸ್‌, ಪ್ರಿವೆನ್ಸನ್‌ ಆಫ್‌ ಡಿವಿಷನ್‌ ಆಫ್‌ ಹೋಲ್ಡಿಂಗ್‌ ಬಿಲೊ ಎ ಸರ್ಟೈನ್‌ ಮಿನಿಮಮ್‌ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಬರೆದ ಬಹುತೇಕ ಪುಸ್ತಕಗಳು ಭಾರತದ ಬಡತನ ಮತ್ತು ಪರಿಹಾರ, ರೈತ ಮಾಲೀಕತ್ವ ಅಥವಾ ಕಾರ್ಮಿಕರಿಗೆ ಭೂಮಿ, ಕಡಿಮೆ ಹಿಡುವಳಿಗಳ ವಿಭಜನೆಯನ್ನು ತಡೆಗಟ್ಟುವುದು ಸೇರಿದಂತೆ ಹಲವು ಕೃಷಿ ಮತ್ತು ರೈತರ ವಿಚಾರಗಳಿಗೆ ಸಂಬಂಧಪಟ್ಟಿವೆ. ಚೌಧರಿ ಚರಣ್‌ ಸಿಂಗ್‌ ಅವರ ಹುಟ್ಟುಹಬ್ಬವನ್ನು ಕಿಸಾನ್‌ ದಿವಾಸ್‌ ಅಥವಾ ರಾಷ್ಟ್ರೀಯ ರೈತರ ದಿನವೆಂದು ಪ್ರತಿವರ್ಷ ಡಿಸೆಂಬರ್‌ 23ರಂದು ಆಚರಿಸಲಾಗುತ್ತದೆ. ಇದೀಗ ಚೌಧರಿ ಚರಣ್‌ ಸಿಂಗ್‌ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

 

ಟಿ20 ವರ್ಲ್ಡ್‌ಕಪ್ 2024