ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bihar Caste Survey: ಬಿಹಾರದ ಜಾತಿ ಗಣತಿ ವರದಿ ಪ್ರಕಟ, ಜನಸಂಖ್ಯೆಯ ಶೇಕಡ 63 ಒಬಿಸಿ ಸಮುದಾಯ

Bihar Caste Survey: ಬಿಹಾರದ ಜಾತಿ ಗಣತಿ ವರದಿ ಪ್ರಕಟ, ಜನಸಂಖ್ಯೆಯ ಶೇಕಡ 63 ಒಬಿಸಿ ಸಮುದಾಯ

Bihar Caste Survey: ಬಿಹಾರದಲ್ಲಿ ಜಾತಿ ಗಣತಿ ಆಧಾರದ ವರದಿ ಪ್ರಕಟವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 63 ರಷ್ಟು ಒಬಿಸಿ ಜನರಿದ್ದಾರೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಹಾರ ಸರ್ಕಾರ ಈ ವರದಿ ಪ್ರಕಟಿಸಿದೆ. ಈ ವರದಿಯು ರಾಜಕೀಯ ಪ್ರಾಮುಖ್ಯತೆ ಪಡೆದುಕೊಂಡಿರುವ ಕಾರಣ ದೇಶದ ಗಮನಸೆಳೆದಿದೆ.

ಬಿಹಾರ ರಾಜಧಾನಿಯಲ್ಲಿ ಜಾತಿ ನಡೆಸಿದ ಕ್ಷಣದ ಒಂದು ನೋಟ (ಕಡತ ಚಿತ್ರ)
ಬಿಹಾರ ರಾಜಧಾನಿಯಲ್ಲಿ ಜಾತಿ ನಡೆಸಿದ ಕ್ಷಣದ ಒಂದು ನೋಟ (ಕಡತ ಚಿತ್ರ) (HT FILE)

ಭಾರತದ ಜಾತಿ ಗಣತಿ ಆಧಾರಿತ ವರದಿ (Caste-Based Survey Report) ಪ್ರಕಟಿಸಬೇಕು ಎಂಬ ಬೇಡಿಕೆ ಬಹುಕಾಲದ್ದು. ಲೋಕಸಭೆ ಚುನಾವಣೆ (Lok Sabha Elections) ಮೇಲೆ ಪರಿಣಾಮ ಬೀರಬಲ್ಲ ಈ ಬೇಡಿಕೆ ಈಡೇರಿಕೆ ಸುಲಭದ್ದಲ್ಲ. ಆದರೆ, ಬಿಹಾರ ಸರ್ಕಾರ (Bihar government) ಆ ರಾಜ್ಯ ಜಾತಿ ಗಣತಿ ಆಧಾರಿತ ವರದಿಯನ್ನು ಸೋಮವಾರ ಪ್ರಕಟಿಸಿದೆ. ಈ ವರದಿ ಪ್ರಕಾರ ಬಿಹಾರದ ಜನಸಂಖ್ಯೆಯ ಶೇಕಡ 63 ಜನ ಒಬಿಸಿ (Other Backward Classes) ಸಮುದಾಯದವರು ಎಂಬ ಅಂಶ ಬಹಿರಂಗವಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ಬಹು ನಿರೀಕ್ಷಿತ ವರದಿಯ ಮಾದರಿಯಲ್ಲೇ 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರವ್ಯಾಪಿ ಜನಗಣತಿಯನ್ನು ನಡೆಸಬೇಕೆ ಎಂದು ವಿಪಕ್ಷ ಮೈತ್ರಿ ಇಂಡಿಯಾ ಬ್ಲಾಕ್‌ನ ಬೇಡಿಕೆಗೆ ಇನ್ನಷ್ಟು ತುಂಬುವ ಸಾಧ್ಯತೆ ಇದೆ.

ಜಾತಿ ಗಣತಿ ವರದಿ ಕುರಿತು ಬಿಹಾರ ಸಿಎಂ ನಿತೀಶ್ ಕುಮಾರ್‌

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಸಮೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಕೂಡಲೇ, ಜಾತಿ ಗಣತಿ ಪ್ರಕ್ರಿಯೆಯಲ್ಲಿ ತೊಡಗಿರುವ ಸಂಪೂರ್ಣ ತಂಡವನ್ನು ಅಭಿನಂದಿಸಿದರು. ಎಲ್ಲಾ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗಾಗಿ ಅದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಜಾತಿ ಆಧಾರಿತ ಜನಗಣತಿಯು ಜಾತಿಗಳನ್ನು ಬಹಿರಂಗಪಡಿಸುವುದು ಮಾತ್ರವಲ್ಲದೆ ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯ ಬಗ್ಗೆಯೂ ಮಾಹಿತಿ ನೀಡಿತು. ಇದರ ಆಧಾರದ ಮೇಲೆ ಎಲ್ಲ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಿತೀಶ್ ಕುಮಾರ್ ಅವರು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

ಗಾಂಧಿ ಜಯಂತಿ ದಿನ ಐತಿಹಾಸಿಕ ಕ್ಷಣ ಎಂದ ಆರ್‌ಜೆಡಿ ಮುಖ್ಯಸ್ಥ

ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ದ ಮುಖ್ಯಸ್ಥ ಲಾಲು ಪ್ರಸಾದ್ ಯಾದ್‌ ಅವರು ಇದೊಂದು ಐತಿಹಾಸಿಕ ಕ್ಷಣ ಎಂದು ಪ್ರತಿಕ್ರಿಯಿಸಿದ್ದಾರೆ.

ಇಂದು ಗಾಂಧಿ ಜಯಂತಿಯಂದು ನಾವೆಲ್ಲರೂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ. ಬಿಜೆಪಿಯ ಹಲವು ಪಿತೂರಿಗಳು, ಕಾನೂನು ಅಡೆತಡೆಗಳು ಮತ್ತು ಎಲ್ಲಾ ಪಿತೂರಿಗಳ ನಡುವೆಯೂ ಇಂದು ಬಿಹಾರ ಸರ್ಕಾರ ಜಾತಿ ಆಧಾರಿತ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಅಂಕಿಅಂಶಗಳು ವಂಚಿತ, ನಿರ್ಲಕ್ಷಿತ ಮತ್ತು ಬಡವರ ಸರಿಯಾದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ ಮತ್ತು ಜನಸಂಖ್ಯೆಯ ಅನುಪಾತದಲ್ಲಿ ಅಂಚಿನಲ್ಲಿರುವ ಗುಂಪುಗಳಿಗೆ ಪ್ರಾತಿನಿಧ್ಯ ನೀಡುವಲ್ಲಿ ದೇಶಕ್ಕೆ ಮಾದರಿಯಾಗುತ್ತವೆ ಎಂದು ಅವರು ಹೇಳಿದರು.

ಬಿಹಾರ ಜಾತಿಗಣತಿ ವರದಿ ಕಣ್ಣೊರೆಸುವ ತಂತ್ರ ಎಂದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್

ಕೇಂದ್ರ ಸಚಿವ, ಬಿಜೆಪಿ ನಾಯಕ ಗಿರಿರಾಜ್‌ ಸಿಂಗ್ ಅವರು ಬಿಹಾರದ ಜಾತಿ ಗಣತಿ ವರದಿ ಕುರಿತು ಪ್ರತಿಕ್ರಿಯಿಸಿದ್ದು, ಅದೊಂದು ಕಣ್ಣೊರೆಸುವ ತಂತ್ರ ಎಂದು ಟೀಕಿಸಿದ್ದಾರೆ. ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಅವರು ತಮ್ಮ 33 ವರ್ಷದ ಆಳ್ವಿಕೆಯ ವರದಿಯನ್ನು ಪ್ರಕಟಿಸಲಿ ಎಂದು ಸವಾಲು ಎಸೆದಿದ್ದಾರೆ.

ಜಾತಿ ಗಣತಿಯು ರಾಜ್ಯದ ಬಡವರು ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನು ಹರಡುವುದಕ್ಕಿಂತ ಹೆಚ್ಚೇನೂ ಮಾಡುವುದಿಲ್ಲ. ರಾಜ್ಯವನ್ನು ನಿತೀಶ್ ಕುಮಾರ್ 18 ವರ್ಷ, ಲಾಲು ಯಾದವ್ 15 ವರ್ಷ ರಾಜ್ಯವನ್ನು ಆಳಿದರೂ ರಾಜ್ಯದ ಅಭಿವೃದ್ಧಿ ಮಾಡಿಲ್ಲ ಎಂದು ರಿಪೋರ್ಟ್ ಕಾರ್ಡ್ ನೀಡಬೇಕಿತ್ತು. ಜಾತಿ ಗಣತಿಯ ರಿಪೋರ್ಟ್ ಕಾರ್ಡ್ ಕೇವಲ ಒಂದು ಕಣ್ಣೊರೆಸುವ ತಂತ್ರ ಎಂದು ಗಿರಿರಾಜ್ ಸಿಂಗ್ ಹೇಳಿದರು.

ಬಿಹಾರದ ಜಾತಿ ಆಧಾರಿತ ಗಣತಿ ವರದಿಯ 5 ಮುಖ್ಯ ಅಂಶಗಳು

ಬಿಹಾರ ಸರ್ಕಾರ ಕೈಗೊಂಡು ಪ್ರಕಟಿಸಿದ ಜಾತಿ ಗಣತಿ ಆಧಾರಿತ ವರದಿಯು ಹಲವು ಅಂಶಗಳನ್ನು ಉಲ್ಲೇಖಿಸಿದೆ. ಆದಾಗ್ಯೂ, ಅದರಲ್ಲಿನ 5 ಮುಖ್ಯ ಅಂಶಗಳು ಹೀಗಿವೆ.

  1. ಬಿಹಾರದ ಜನಸಂಖ್ಯೆಯ 27 ಪ್ರತಿಶತವನ್ನು ಹಿಂದುಳಿದ ವರ್ಗದರನ್ನು ಹೊಂದಿದ್ದರೆ ಅತ್ಯಂತ ಹಿಂದುಳಿದ ವರ್ಗಗಳು 36 ಪ್ರತಿಶತ ಇದ್ದು, ಒಟ್ಟು ಇತರೆ ಹಿಂದುಳಿದ ವರ್ಗದ ಪ್ರಮಾಣವನ್ನು ಶೇಕಡ 63ಕ್ಕೇರಿಸಿದೆ.
  2. ಬಿಹಾರದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯು 19.65 ಪ್ರತಿಶತ ಮತ್ತು ಪರಿಶಿಷ್ಟ ಪಂಗಡಗಳು 1.68 ಪ್ರತಿಶತದಷ್ಟು ಇದೆ.
  3. ಬಿಹಾರದ ಜನಸಂಖ್ಯೆಯಲ್ಲಿ ಕುಶ್ವಾಹಾ ಮತ್ತು ಕುರ್ಮಿಗಳು ಕ್ರಮವಾಗಿ 4.27 ಪ್ರತಿಶತ ಮತ್ತು 2.87 ಪ್ರತಿಶತದಷ್ಟು ಇದೆ.
  4. ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಒಬಿಸಿ ಗುಂಪಿನ ಯಾದವ ಸಮುದಾಯದವರು ಜನಸಂಖ್ಯೆಯ ದೃಷ್ಟಿಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ ಯಾದವರ ಸಂಖ್ಯೆ ಶೇಕಡಾ 14.27.
  5. ಬಿಹಾರದ ಒಟ್ಟು ಜನಸಂಖ್ಯೆ 13.07 ಕೋಟಿ. ಈ ಪೈಕಿ ಜನರಲ್ ಕೆಟಗರಿಯವರು ಶೇಕಡ 15.52 ಮಾತ್ರ.

ಬಿಹಾರ ಜಾತಿ ಗಣತಿ ಆಧಾರಿತ ಸಮೀಕ್ಷಾ ವರದಿ 2023

ಜಾತಿ/ಸಮುದಾಯಜನ ಸಂಖ್ಯೆಯಲ್ಲಿ ಪಾಲು (%)
ಹಿಂದುಳಿದ ವರ್ಗ27.12
ಅತ್ಯಂತ ಹಿಂದುಳಿದ ವರ್ಗ36.01
ಪರಿಶಿಷ್ಟ ಜಾತಿ19.65
ಜನರಲ್ (ಸಾಮಾನ್ಯ ವರ್ಗ)15.52
ಪರಿಶಿಷ್ಟ ಪಂಗಡ1.68

ವಿಶೇಷವೆಂದರೆ, ಕಳೆದ ವರ್ಷ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಜನಗಣತಿಯ ಭಾಗವಾಗಿ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಇತರ ಜಾತಿಗಳ ಹೆಡ್ ಎಣಿಕೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಬಿಹಾರದಲ್ಲಿ ಈ ಸಮೀಕ್ಷೆಗೆ ಆದೇಶಿಸಲಾಗಿತ್ತು.

ಟಿ20 ವರ್ಲ್ಡ್‌ಕಪ್ 2024