ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bihar Heat: ಬಿಹಾರದಲ್ಲಿ ಚುನಾವಣೆ ಸಿಬ್ಬಂದಿ ಸೇರಿ 14 ಮಂದಿ ಬಿಸಿಲಿನಿಂದ ಸಾವು

Bihar Heat: ಬಿಹಾರದಲ್ಲಿ ಚುನಾವಣೆ ಸಿಬ್ಬಂದಿ ಸೇರಿ 14 ಮಂದಿ ಬಿಸಿಲಿನಿಂದ ಸಾವು

ಬಿಹಾರದಲ್ಲಿ ಬಿಸಿಲ ಝಳಕ್ಕೆ ಸಾವಿನ ಸಂಖ್ಯೆ ಅಧಿಕವಾಗಿದೆ. ಶುಕ್ರವಾರ ಒಂದೇ ದಿನ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬಿಹಾರದಲ್ಲಿ ಮಿತಿ ಮೀರಿದ ಬಿಸಿಲ ಪ್ರಖರತೆ
ಬಿಹಾರದಲ್ಲಿ ಮಿತಿ ಮೀರಿದ ಬಿಸಿಲ ಪ್ರಖರತೆ

ಪಾಟ್ನಾ: ಬಿಹಾರದಲ್ಲಿ ಬಿಸಿಲಿಗೆ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ 14 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಲೋಕಸಭೆ ಚುನಾವಣೆ ಕಾರ್ಯಕ್ಕೆಂದು ಆಗಮಿಸಿದ್ದ ಹತ್ತು ಮಂದಿ ಸಿಬ್ಬಂದಿಗಳೂ ಸೇರಿದ್ದಾರೆ. ಹಲವರು ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನದ ಅಂತರದಲ್ಲಿಯೇ ಒಟ್ಟು 29 ಮಂದಿ ಬಿಸಿಲಿನ ಪ್ರಖರತೆಗೆ ಮೃತಪಟ್ಟಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದಾರೆ. ಕೆಲವರು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಶನಿವಾರ ಬಿಹಾರದ ಕೆಲವು ಜಿಲ್ಲೆಗಳಲ್ಲಿ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವೂ ನಡೆಯುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ಕಾರಣಕ್ಕೆ ಮತದಾನ ಕಡಿಮೆಯಾಗುವ ಆತಂಕವೂ ಎದುರಾಗಿದೆ. ಹಲವು ಭಾಗಗಳಲ್ಲಿ ಬಿಸಿಲಿಗೆ 54 ಮಂದಿ ಜೀವ ಕಳೆದುಕೊಂಡಂತಾಗಿದೆ.

ಟ್ರೆಂಡಿಂಗ್​ ಸುದ್ದಿ

ಬಿಹಾರದಲ್ಲಂತೂ ಬಿಸಿಲಿನ ಪ್ರಮಾಣ ಮೂರ್ನಾಲ್ಕು ದಿನದಿಂದ ಏರಿಕೆಯಾಗುತ್ತಲೇ ಇದೆ. ಕೆಲವು ಭಾಗಗಳಲ್ಲಿ 48 ಡಿಗ್ರಿ ಸೆಲ್ಸಿಯಸ್‌ ವರೆಗೂ ದಾಖಲಾಗಿದೆ. ಬುಕ್ಸಾರ್‌ ಜಿಲ್ಲೆಯಲ್ಲಿ ಶುಕ್ರವಾರ ಅತಿ ಹೆಚ್ಚಿನ ಉಷ್ಣಾಂಶ ಕಂಡು ಬಂದಿತು. ಆದರೆ ಕೊನೆ ಹಂತದ ಚುನಾವಣೆ ಕಾರ್ಯದಲ್ಲಿ ಭಾಗಿಯಾಗಲು ಆಗಮಿಸಿರುವ ಸಿಬ್ಬಂದಿ ಮೃತಪಟ್ಟಿರುವ ಸಂಖ್ಯೆ ಹೆಚ್ಚಿದೆ. ರೋಹ್ಟಾಸ್‌ನಲ್ಲಿ ಮೂವರು. ಕೈಮುರ್‌ ಹಾಗೂ ಔರಂಗಾಬಾದ್‌ನಲ್ಲಿ ತಲಾ ಒಬ್ಬರು ಹಾಗೂ ಬೋಜ್‌ ಪುರದಲ್ಲಿ ಐದು ಮಂದಿ ಸಿಬ್ಬಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅದರಲ್ಲೂ ಬಿಸಿಲಿನ ಝಳದಿಂದ ಕುಸಿದು ಹೋಗುತ್ತಿರುವ ಸಿಬ್ಬಂದಿಗೆ ಆರೈಕೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ.

ಬಿಹಾರದ ಇತರೆ ಭಾಗಗಳಲ್ಲಿ ನಾಲ್ಕು ಮಂದಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರವೂ ಔರಂಗಾಬಾದ್‌ನಲ್ಲಿ ಹಲವರು ಮೃತಪಟ್ಟಿದ್ದರು. ಈಗಾಗಲೇ ಭಾರೀ ಬಿಸಿಲಿನ ಕಾರಣಕ್ಕೆ ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶನಿವಾರ ಬಿಹಾರದಲ್ಲಿ ಎಂಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬಿಸಿಲಿನ ನಡುವೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಬಿಸಿಲಿನಿಂದ ಅಸ್ವಸ್ಥರಾಗಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಜಾರ್ಖಂಡ್‌ ರಾಜ್ಯದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆಯಾಗಿ ನಾಲ್ಕು ಮಂದಿ ಮೃತಪಟ್ಟು ಹಲವರು ಅಸ್ವಸೃರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಿಯಾಣ, ರಾಜಸ್ಥಾನದಲ್ಲ ಕೂಡ ಬಿಸಿಲಿನ ಪ್ರಮಾಣ ಹೆಚ್ಚಿದೆ. ದೆಹಲಿಯಲ್ಲಿ ಕೂಡ ಶುಕ್ರವಾರವೂ ಬಿಸಿಲು ಹೆಚ್ಚಿತ್ತು.

ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲೂ ಔಷಧಿ ತರಲೆಂದು ಮನೆಯಿಂದ ಹೊರಗೆ ಬಂದ ಮಕ್ಕಳಿಬ್ಬರು ಬಿಸಿಲಿನ ಝಳಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆಯೂ ನಡೆದಿದೆ.

ಮುಂಗಾರು ಆರಂಭಕ್ಕಾಗಿ ಕಾಯುತ್ತಿರುವ ನಡುವೆಯೆ ಬಿಹಾರ ಸೇರಿದಂತೆ ಉತ್ತರ ಭಾರತದ ಹಲವು ಕಡೆಗಳಲ್ಲಿ ಭಾರೀ ಬಿಸಿಲಿನ ವಾತಾವರಣ ಕಂಡು ಬಂದಿದೆ. ಇನ್ನೂ ಕೆಲವು ದಿನ ಇದೇ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024

ವಿಭಾಗ