BJP CEC Meet: ವರ್ಷಾಂತ್ಯದ ವೇಳೆ ಪಂಚ ರಾಜ್ಯ ಚುನಾವಣೆ; ನಾಳೆ ನಡೆಯಲಿದೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ
BJP CEC Meet: ದೇಶದ 5 ಪ್ರಮುಖ ರಾಜ್ಯಗಳಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಈ ರಾಜ್ಯಗಳು ಪೈಕಿ ಮಧ್ಯ ಪ್ರದೇಶದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಪಕ್ಷ ಬಹಳ ಮುಂಚಿತವಾಗಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಲು ಮುಂದಾಗಿದೆ. ಈ ಸಭೆ ನಾಳೆ (ಆ.16) ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ನವದೆಹಲಿ: ಐದು ರಾಜ್ಯಗಳಲ್ಲಿ ನಡೆಯಲಿರುವ ಈ ವರ್ಷಾಂತ್ಯದ ಚುನಾವಣೆಗೆ ಮುಂಚಿತವಾಗಿ ಪಕ್ಷದ ಸಿದ್ಧತೆಗಳನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯನ್ನು ನಾಳೆ (ಆ.16) ನಡೆಸುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಜೆಪಿ ನಡ್ಡಾ ಸೇರಿ 15 ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಇಸಿ ಸದಸ್ಯರಲ್ಲದೆ, ವರ್ಷಾಂತ್ಯದೊಳಗೆ ಚುನಾವಣೆಗೆ ಹೋಗುವ ರಾಜ್ಯಗಳ ರಾಜ್ಯ ಅಧ್ಯಕ್ಷರು ಮತ್ತು ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಚುನಾವಣೆಗಳು 2023 ರ ಅಂತ್ಯದ ವೇಳೆಗೆ ನಡೆಯಲಿದೆ. ಸಿಇಸಿ ಸಭೆಯು ಮುಂಚಿತವಾಗಿ ನಡೆಯುತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ, ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ಅಥವಾ ನಾಮಪತ್ರ ಸಲ್ಲಿಸುವ ದಿನಾಂಕದ ಆಸುಪಾಸಿನಲ್ಲಿ ಸಭೆ ನಡೆಯುತ್ತದೆ ಎಂದು ವರದಿ ಉಲ್ಲೇಖಿಸಿದೆ.
"ಪಕ್ಷವು ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಮೇಲೆ ಪಕ್ಷಿನೋಟವನ್ನು ಇಡಲು ಬಯಸುತ್ತದೆ ಮತ್ತು ಸಮಯಕ್ಕೆ ಪರಿಹರಿಸಬೇಕಾದ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತದೆ" ಎಂದು ರಾಜ್ಯ ನಾಯಕರೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.
ದುರ್ಬಲ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಬಲ ಪಡಿಸುವುದಕ್ಕಾಗಿ ಸಭೆ
ದುರ್ಬಲ ಸ್ಥಾನಗಳಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪಕ್ಷವು ಹೆಚ್ಚು ಗಮನಹರಿಸಬೇಕಾದ ಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಎಎನ್‍ಐ ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ಮತ್ತೊಂದು ವರದಿ ಹೇಳಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಜನರನ್ನು ತಲುಪುವುದು ಸೇರಿದಂತೆ ತಳಮಟ್ಟದಲ್ಲಿ ನಡೆಯುತ್ತಿರುವ ಕೆಲಸದ ಬಗ್ಗೆ ರಾಜ್ಯ ನಾಯಕತ್ವವು ಪ್ರತಿಕ್ರಿಯೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಮಹತ್ವದ ಸಭೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪಕ್ಷದ ರಾಜ್ಯ ಅಧ್ಯಕ್ಷ ವಿಡಿ ಶರ್ಮಾ ಮತ್ತು ಇತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಪ್ರಸ್ತುತ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ.