Lok Sabha News: ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಆಕ್ಷೇಪಾರ್ಹ ಹೇಳಿಕೆ, ಸ್ಪೀಕರ್‌ಗೆ ದೂರು, ಪಕ್ಷದಿಂದ ಶೋಕಾಸ್ ನೋಟಿಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha News: ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಆಕ್ಷೇಪಾರ್ಹ ಹೇಳಿಕೆ, ಸ್ಪೀಕರ್‌ಗೆ ದೂರು, ಪಕ್ಷದಿಂದ ಶೋಕಾಸ್ ನೋಟಿಸ್

Lok Sabha News: ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಆಕ್ಷೇಪಾರ್ಹ ಹೇಳಿಕೆ, ಸ್ಪೀಕರ್‌ಗೆ ದೂರು, ಪಕ್ಷದಿಂದ ಶೋಕಾಸ್ ನೋಟಿಸ್

ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅವರ ವಿರುದ್ಧ ಕ್ರಮಕ್ಕೆ ಒತ್ತಡ ಹೆಚ್ಚಾಗಿದೆ. ಡ್ಯಾನಿಶ್ ಅಲಿ ಸ್ಪೀಕರ್‌ಗೆ ಈ ಕುರಿತು ದೂರು ನೀಡಿದ್ದಾರೆ. ಬಿಧುರಿ ಅವರಿಗೆ ಪಕ್ಷ ಶೋಕಾಸ್ ನೋಟಿಸ್ ನೀಡಿದೆ.

ಬಿಜೆಪಿ ಸಂಸದ ರಮೇಶ್ ಬಿಧುರಿ, ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ
ಬಿಜೆಪಿ ಸಂಸದ ರಮೇಶ್ ಬಿಧುರಿ, ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮಸೂದೆ ಅಂಗೀಕಾರವಾಗಿದ್ದು, ಸ್ಮರಣೀಯ ಕ್ಷಣಗಳು ನೆನಪಿನಾಳಕ್ಕೆ ಇಳಿಯುವ ಮೊದಲೇ ಬಿಜೆಪಿ ಸಂಸದ ರಮೇಶ್ ಬಿಧುರಿ ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡಾನಿಶ್ ಅಲಿ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.

ರಮೇಶ್ ಬಿಧುರಿ ಲೋಕಸಭೆಯಲ್ಲಿ ಗುರುವಾರ ಚಂದ್ರಯಾನ-3ರ ಯಶಸ್ಸಿನ ಕುರಿತ ಚರ್ಚೆಯ ವೇಳೆ ನಡೆದ ವಾಕ್ಸಮರಲ್ಲಿ, ಡಾನಿಶ್ ಅಲಿ ಅವರನ್ನು ಧಾರ್ಮಿಕವಾಗಿ ಅವಹೇಳನ ಮಾಡುವಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರ ದೃಶ್ಯ ವಿಡಿಯೋದಲ್ಲಿದೆ. ಶುಕ್ರವಾರ ಈ ವಿಡಿಯೋ ತುಣುಕು ವೈರಲ್ ಆಗಿದ್ದು, ಸಂಸದರು ಪಕ್ಷ ಬೇಧವಿಲ್ಲದೆ ರಮೇಶ್ ಬಿಧುರಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ರಮೇಶ್ ಬಿಧುರಿ ಮಾತುಗಳನ್ನು ಕಡತದಿಂದ ತೆಗೆದುಹಾಕುವಂತೆ ಶುಕ್ರವಾರ ಸೂಚನೆ ನೀಡಿದರು. ಅಲ್ಲದೆ, ಭವಿಷ್ಯದಲ್ಲಿ ಈ ರೀತಿ ವರ್ತನೆ ತೋರಿದರೆ, ಮಾತುಗಳನ್ನಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.

ಆದರೆ, ಸ್ಪೀಕರ್ ಬಿರ್ಲಾ ಅವರ ಈ ಕ್ರಮದಿಂದ ವಿಪಕ್ಷ ನಾಯಕರು, ಸಂಸದರು ಸಮಾಧಾನಗೊಂಡಿಲ್ಲ. ಲೋಕಸಭೆಯಿಂದ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದರು. ಇದೇ ವೇಳೆ, ಬಿಎಸ್‌ಪಿಯ ಅಲಿ ಅವರು ಸ್ಪೀಕರ್‌ಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬಿಎಸ್‌ಪಿ ಸಂಸದ ಡಾನಿಶ್ ಅಲಿ ದೂರಿನಲ್ಲಿ ಏನಿದೆ

ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಬಿಎಸ್‌ಪಿ ಸಂಸದ ಡಾನಿಶ್ ಅಲಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರ ಸಲ್ಲಿಸಿದ್ದಾರೆ.

ಇದು ಅತ್ಯಂತ ದುರದೃಷ್ಟಕರ ಮತ್ತು ಸ್ಪೀಕರ್ ಆಗಿ ನಿಮ್ಮ ನೇತೃತ್ವದಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಇದು ನಡೆದಿರುವುದು ಈ ಮಹಾನ್ ರಾಷ್ಟ್ರದ ಅಲ್ಪಸಂಖ್ಯಾತ ಸದಸ್ಯನಾಗಿ ಮತ್ತು ಚುನಾಯಿತ ಸಂಸದನಾಗಿ ನನಗೆ ನಿಜವಾಗಿಯೂ ಬಹಳ ನೋವು ಉಂಟುಮಾಡಿದೆ ಎಂದು ಡಾನಿಶ್ ಅಲಿ ದೂರಿನಲ್ಲಿ ತಿಳಿಸಿದ್ದಾರೆ.

ಅವರ ಭಾಷಣದ ಸಂದರ್ಭದಲ್ಲಿ ಅವರು ಲೋಕಸಭೆಯ ಭಾಗವಾಗಿರುವ ನನ್ನ ವಿರುದ್ಧ ಅತ್ಯಂತ ಅಸಭ್ಯ, ನಿಂದನೀಯ ಹೇಳಿಕೆಗಳನ್ನು ನೀಡಿದರು... ಆದ್ದರಿಂದ ನಾನು ಕಾರ್ಯವಿಧಾನದ ನಿಯಮಗಳ ನಿಯಮ 222, 226, 227 ರ ಅಡಿಯಲ್ಲಿ ಈ ಸೂಚನೆಯನ್ನು ನೀಡಲು ಉದ್ದೇಶಿಸಿದ್ದೇನೆ ಮತ್ತು ಲೋಕಸಭೆಯಲ್ಲಿ ಸಂಸದ ರಮೇಶ್ ಬಿಧುರಿ ವಿರುದ್ಧ ಸ್ಪೀಕರ್ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪರೀಕ್ಷೆ, ತನಿಖೆ ಮತ್ತು ವರದಿಗಾಗಿ ಲೋಕಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 227 ರ ಅಡಿಯಲ್ಲಿ ಈ ವಿಷಯವನ್ನು ಸವಲತ್ತುಗಳ ಸಮಿತಿಗೆ ಉಲ್ಲೇಖಿಸಲು ನಾನು ನಿಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಅನುಭವಿ ಸದಸ್ಯರನ್ನು ಶಿಸ್ತುಬದ್ಧಗೊಳಿಸಲು ಇದು ಏಕೈಕ ಮಾರ್ಗವಾಗಿದೆ, ಇದರಿಂದ ನಮ್ಮ ದೇಶದ ವಾತಾವರಣವು ಮತ್ತಷ್ಟು ಹಾಳಾಗುವುದಿಲ್ಲ ಎಂದು ಡ್ಯಾನಿಶ್ ಅಲಿ ಅಹವಾಲು ಪತ್ರದಲ್ಲಿ ವಿವರಿಸಿದ್ದಾರೆ.

ರಮೇಶ್ ಬಿಧುರಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ

ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಲೋಕಸಭೆಯಲ್ಲಿ ನೀಡಿದ ಹೇಳಿಕೆಗೆ ವಿವರಣೆ ನೀಡುವಂತೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ನೋಟಿಸ್ ಜಾರಿಗೊಳಿಸಿದ್ಧಾರೆ.

ಬಿಧುರಿ ಹೇಳಿಕೆ ವಿಷಾಧನೀಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್ ನಗುತ್ತಿದ್ದರೇ?

ವೈರಲ್ ಆಗಿರುವ ವಿಡಿಯೋದಲ್ಲಿ ರಮೇಶ್ ಬಿಧುರಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂದರ್ಭದಲ್ಲಿ ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್ ನಗುತ್ತಿದ್ದರು ಎಂದು ಆರೋಪಿಸಲಾಗಿದೆ. ಎಎಪಿ ಈ ವಿಡಿಯೋ ಟ್ವೀಟ್ ಮಾಡಿ ಟೀಕೆ ಮಾಡಿದೆ. ಇದೇ ರೀತಿ ಮಾಜಿ ಸಚಿವ ರವಿಶಂಕರ ಪ್ರಸಾದ್ ಕೂಡ ನಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ವೈರಲ್ ಆದ ವಿಡಿಯೋ ಕ್ಲಿಪ್ ಪ್ರಕಾರ, ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ನಗುತ್ತಿದ್ದರು. ಇದಕ್ಕೆ, ಹರ್ಷವರ್ಧನ್ ಎಕ್ಸ್‌ನಲ್ಲಿ ದೀರ್ಘ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅವರು ಯಾವಾಗಲೂ ಮುಸ್ಲಿಂ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಸಮಜಾಯಿಷಿ ನೀಡಿದ್ದಾರೆ.

“ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ನನ್ನ ಹೆಸರನ್ನು ಇದಕ್ಕೆ ಎಳೆದು ತಂದಿರುವ ಬಗ್ಗೆ ನನಗೆ ಬೇಸರವಾಗಿದೆ ಮತ್ತು ಅವಮಾನವಾಗಿದೆ. ಒಬ್ಬರಿಗೊಬ್ಬರು ಎಸೆದ ಪದಗಳ ಕಣ್ಕಟ್ಟುಗೆ ನಾನು ನಿಸ್ಸಂದೇಹವಾಗಿ ಸಾಕ್ಷಿಯಾಗಿದ್ದೆ (ವಾಸ್ತವವಾಗಿ ಅದು ಇಡೀ ಸದನವಾಗಿತ್ತು), ವಿಷಯದ ಸತ್ಯವೆಂದರೆ ಅಸ್ತಿತ್ವದಲ್ಲಿದ್ದ ಗೊಂದಲದಲ್ಲಿ ನನಗೆ ಅವರು ಏನು ಹೇಳುತ್ತಿದ್ದರೆಂದು ಸ್ಪಷ್ಟವಾಗಿ ಕೇಳಲು ಸಾಧ್ಯವಾಗಲಿಲ್ಲ ಎಂದು ಡಾ.ಹರ್ಷವರ್ಧನ್ ಬರೆದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.