ಸರಳ ಜೀವನದ ಪ್ರತೀಕವೆಂಬಂತೆ ಬಾಳಿ ಬದುಕಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಿಧನ-india news buddhadeb bhattacharjee former chief minister of west bengal buddhadeb bhattacharya passes away at 80 ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸರಳ ಜೀವನದ ಪ್ರತೀಕವೆಂಬಂತೆ ಬಾಳಿ ಬದುಕಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಿಧನ

ಸರಳ ಜೀವನದ ಪ್ರತೀಕವೆಂಬಂತೆ ಬಾಳಿ ಬದುಕಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಿಧನ

Buddhadeb Bhattacharjee; ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಇಂದು (ಆಗಸ್ಟ್ 8) ಬೆಳಗ್ಗೆ ನಿಧನರಾಗಿದ್ದಾರೆ. ಕೆಲಕಾಲ ಅನಾರೋಗ್ಯದಿಂದ ಬಳಲಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ನಿಧನ
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ನಿಧನ

ಕೋಲ್ಕತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಜಿ ಗುರುವಾರ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕೆಲವು ವರ್ಷಗಳಿಂದ ಅವರಿಗೆ ವಯೋಸಹಜ ಕಾಯಿಲೆಗಳಿದ್ದು, ತೀವ್ರ ಉಸಿರಾಟದ ಸಮಸ್ಯೆ ಅವರನ್ನು ಕಾಡಿತ್ತು. ಬುದ್ಧದೇವ್ ಭಟ್ಟಾಚಾರ್ಜಿ ಅವರು ಪತ್ನಿ ಮೀರಾ ಮತ್ತು ಪುತ್ರಿ ಸುಚೇತನಾ ಅವರನ್ನು ಅಗಲಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 2000ದ ನವೆಂಬರ್ ತಿಂಗಳಿಂದ 2011ರ ಮೇ ವರೆಗೆ ಸೇವೆ ಸಲ್ಲಿಸಿದ ಭಟ್ಟಾಚಾರ್ಜಿ ಅವರು ದಕ್ಷಿಣ ಕೋಲ್ಕತ್ತಾದ ಬಲ್ಲಿಗುಂಗೆ ಪ್ರದೇಶದಲ್ಲಿ ಸಾಧಾರಣ ಎರಡು ಕೋಣೆಗಳ ಸರ್ಕಾರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಬುದ್ಧದೇವ ಭಟ್ಟಾಚಾರ್ಯ ಇಂದು ಬೆಳಗ್ಗೆ 8.20ಕ್ಕೆ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರು ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸರಳ ಜೀವನಕ್ಕೆ ಹೆಸರಾದವರು: ಬುದ್ಧದೇವ್ ಭಟ್ಟಾಚಾರ್ಯ ಅವರು ಸಿಎಂ ಆಗಿದ್ದಾಗಲೂ ದೊಡ್ಡ ಬಂಗಲೆ ಖರೀದಿಸಲು ನಿರಾಕರಿಸಿದ್ದರು. ಕೋಲ್ಕತ್ತಾದ ಬಲ್ಲಿಗುಂಗೆಯಲ್ಲಿ ಎರಡು ಕೋಣೆಗಳ ಅಪಾರ್ಟ್‌ಮೆಂಟ್‌ನಲ್ಲಿ ಅವರ ಕುಟುಂಬ ವಾಸಿಸುತ್ತಿದೆ. ಎರಡು ಕೋಣೆಗಳ ಅಪಾರ್ಟ್‌ಮೆಂಟ್‌ನಲ್ಲಿ ದಶಕಗಳ ಕಾಲ ವಾಸವಾಗಿದ್ದ ಅವರು ಅದೇ ನಿವಾಸದಲ್ಲಿದ್ದುಕೊಂಡೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಐದು ದಶಕಗಳ ರಾಜಕಾರಣ, 18 ವರ್ಷ ಸಚಿವ, 11 ವರ್ಷ ಸಿಎಂ ಆಗಿದ್ದರೂ ಬಂಗಲೆ, ಕಾರು ಇರಲಿಲ್ಲ. ತಮ್ಮ ಸಂಬಳವನ್ನೂ ಪಕ್ಷದ ನಿಧಿಗೆ ನೀಡುತ್ತಿದ್ದರು. ಸಚಿವರಾಗಿ, ಸಿಎಂ ಆಗಿದ್ದಾಗಲೂ ಅವರ ಕುಟುಂಬ ಸಾರ್ವಜನಿಕ ವಾಹನದಲ್ಲಿಯೇ ಸಂಚರಿಸುತ್ತಿತ್ತು. ಹೀಗೆ ಸರಳ ಜೀವನದ ಪ್ರತೀಕವೆಂಬಂತೆ ಬದುಕಿದವರು.

ಬುದ್ಧದೇವ ಭಟ್ಟಾಚಾರ್ಯ ಅವರ ಕಿರುಪರಿಚಯ

ಬುದ್ಧದೇವ ಭಟ್ಟಾಚಾರ್ಯ ಅವರು 1944ರ ಮಾರ್ಚ್ 1 ರಂದು ಉತ್ತರ ಕೋಲ್ಕತ್ತಾದಲ್ಲಿ ಜನಿಸಿದರು. ಅವರ ಪೂರ್ವಜರ ಮನೆ ಬಾಂಗ್ಲಾದೇಶದಲ್ಲಿದೆ. ಅವರು ಕೋಲ್ಕತ್ತಾದ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಂಗಾಳಿ ಸಾಹಿತ್ಯವನ್ನು ಅಧ್ಯಯನ ಮಾಡಿದರು ಮತ್ತು ಬೆಂಗಾಲಿಯಲ್ಲಿ ಬಿಎ (ಆನರ್ಸ್‌) ಪದವಿಯನ್ನು ಪಡೆದರು. ನಂತರ ಅವರು 1966 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಗೆ ಸೇರಿದರು. ಅವರನ್ನು 1968ರ ಜೂನ್‌ನಲ್ಲಿ ಸಿಪಿಐ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್‌ನ ರಾಜ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಅದು ನಂತರ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ವಿಲೀನವಾಯಿತು.

ಬಂಗಾಳದಲ್ಲಿ ಕೈಗಾರಿಕೀಕರಣ ಅಭಿಯಾನವನ್ನು ಬುದ್ಧದೇವ ಭಟ್ಟಾಚಾರ್ಯರು ಶುರುಮಾಡಿದರು. ಕೋಲ್ಕತ್ತ ಸಮೀಪದ ಸಿಂಗೂರಿನಲ್ಲಿ ಟಾಟಾದ ನ್ಯಾನೋ ಉತ್ಪಾದನಾ ಘಟಕವನ್ನು ಸ್ಥಾಪಿಸಿದವರು ಇವರೇ. ಆದರೆ, 2009ರ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಹೀನಾಯ ಸೋಲನ್ನು ಎದುರಿಸಿತು. ಇದಾದ ನಂತರ 2011ರ ವಿಧಾನಸಭೆ ಚುನಾವಣೆಯಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಮನೀಶ್ ಗುಪ್ತಾ ವಿರುದ್ಧ ಬುದ್ಧದೇವ್ ಭಟ್ಟಾಚಾರ್ಯ ಅವರು ಸೋಲು ಕಂಡಿದ್ದರು.

ಜ್ಯೋತಿ ಬಸು ಅವರ ಸಂಪುಟದಲ್ಲಿದ್ದ ಹಿರಿಯ ಸಿಪಿಐ (ಎಂ) ನಾಯಕ

ಬುದ್ಧದೇವ್ ಭಟ್ಟಾಚಾರ್ಯ ಅವರು ಸುಮಾರು 18 ವರ್ಷಗಳ ಕಾಲ ಜ್ಯೋತಿ ಬಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಆಗ ಗೃಹ ಇಲಾಖೆ ಸೇರಿ ಹಲವು ಪ್ರಮುಖ ಇಲಾಖೆಗಳ ಕೆಲಸಗಳನ್ನು ಮಾಡಿದ್ದರು. 1977ರಲ್ಲಿ ಮೊದಲ ಬಾರಿಗೆ ಕೋಸಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ 1987ರಲ್ಲಿ ಸಂಸ್ಕೃತಿ ಸಚಿವರಾದರು.

ಬುದ್ಧದೇವ್ ಭಟ್ಟಾಚಾರ್ಯ ಅವರು 1982ರ ಚುನಾವಣೆಯಲ್ಲಿ ಸೋತರು. ಆದಾಗ್ಯೂ ಪಕ್ಷದಲ್ಲಿ ಅವರ ಸ್ಥಾನಮಾನ ಹೆಚ್ಚಾಯಿತು. 1987ರಲ್ಲಿ ಜಾದವ್‌ಪುರದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಇದರ ನಂತರ, ಅವರು ಜಾದವ್‌ಪುರವನ್ನು ಭದ್ರಕೋಟೆಯನ್ನಾಗಿ ಮಾಡಿಕೊಂಡರು. ಜ್ಯೋತಿ ಬಸು ಅವರ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗುವುದರೊಂದಿಗೆ ಗೃಹ ಖಾತೆಯ ಜವಾಬ್ದಾರಿ ನಿರ್ವಹಿಸಿದರು. ನಂತರ ಅವರು ಜ್ಯೋತಿ ಬಸು ಅವರ ಉತ್ತರಾಧಿಕಾರಿಯಾದರು.

ಬುದ್ಧದೇವ ಭಟ್ಟಾಚಾರ್ಯ 1996ರಲ್ಲಿ ಗೃಹ ಸಚಿವರಾದರು. ನಂತರ 1999ರಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಇದಲ್ಲದೆ, ಅವರು 2000 ರಿಂದ 2011 ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಅರವತ್ತರ ದಶಕದಲ್ಲಿ ವಿಯೆಟ್ನಾಂ ಐಕ್ಯತಾ ಸಮಿತಿಯ ಪ್ರಮುಖ ಕಾರ್ಯನಿರ್ವಾಹಕರಾಗಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.