Sanatan Row: ಉದಯನಿಧಿ ಸ್ಟಾಲಿನ್ ಹೇಳಿಕೆ ಜನಾಂಗೀಯ ಹತ್ಯೆಗೆ ಕರೆ ಎಂದ ಅಮಿತ್ ಮಾಳವೀಯ ವಿರುದ್ಧ ಕೇಸ್ ದಾಖಲು-india news case against amit malviya for genocide tweet on udhayanidhi stalin bjp sanatan dharma row news in kannada uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sanatan Row: ಉದಯನಿಧಿ ಸ್ಟಾಲಿನ್ ಹೇಳಿಕೆ ಜನಾಂಗೀಯ ಹತ್ಯೆಗೆ ಕರೆ ಎಂದ ಅಮಿತ್ ಮಾಳವೀಯ ವಿರುದ್ಧ ಕೇಸ್ ದಾಖಲು

Sanatan Row: ಉದಯನಿಧಿ ಸ್ಟಾಲಿನ್ ಹೇಳಿಕೆ ಜನಾಂಗೀಯ ಹತ್ಯೆಗೆ ಕರೆ ಎಂದ ಅಮಿತ್ ಮಾಳವೀಯ ವಿರುದ್ಧ ಕೇಸ್ ದಾಖಲು

ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದ ಉದಯನಿಧಿ ಸ್ಟಾಲಿನ್ ಹೇಳಿಕೆ ಜನಾಂಗೀಯ ಹತ್ಯೆಗೆ ನೀಡಿದ ಕರೆ ಎಂದು ಬಿಜೆಪಿ ಐಟಿ ಸೆಲೆ ಮುಖ್ಯಸ್ಥ ಅಮಿತ್ ಮಾಳವೀಯ ವ್ಯಾಖ್ಯಾನಿಸಿದ್ದರು. ಇದರ ವಿರುದ್ಧ ಈಗ ತಿರುಚ್ಚಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್,  ಬಿಜೆಪಿ ನಾಯಕ ಅಮಿತ್ ಮಾಳವೀಯ
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಬಿಜೆಪಿ ನಾಯಕ ಅಮಿತ್ ಮಾಳವೀಯ

ಸನಾತನ ಧರ್ಮದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.

'ಸನಾತನ ಧರ್ಮ' ಕುರಿತು ಉದಯನಿಧಿ ಅವರ ಇತ್ತೀಚಿನ ಹೇಳಿಕೆಯು ಅದನ್ನು ಅನುಸರಿಸುವ 80 ಪ್ರತಿಶತದಷ್ಟು ಜನಸಂಖ್ಯೆಯ "ಜನಾಂಗೀಯ ಹತ್ಯೆ"ಗೆ ನೀಡಿದ ಕರೆಯಾಗಿದೆ ಎಂದು ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಮಿತ್ ಮಾಳವೀಯ ಅವರ ಈ ಅಭಿಪ್ರಾಯ ಸೌಹಾರ್ದತೆ ಕೆಡಿಸುವಂಥದ್ದು ಎಂದು ಆರೋಪಿಸಲಾಗಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153, 153 (A), 504 ಮತ್ತು 505 (1) (b) ಸೆಕ್ಷನ್‌ಗಳ ಅಡಿಯಲ್ಲಿ ತಿರುಚ್ಚಿ ದಕ್ಷಿಣ ಜಿಲ್ಲೆಯ ಡಿಎಂಕೆ ಕಾರ್ಯಾಧ್ಯಕ್ಷ ಕೆಎವಿ ದಿನಕರನ್ ಅವರು ನೀಡಿದ ದೂರಿನ ಮೇರೆಗೆ ತಮಿಳುನಾಡಿನ ತಿರುಚ್ಚಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ಅವರು ಬಳಿಕ ರಾಜಕೀಯ ಉದ್ದೇಶದ ಸ್ಪಷ್ಟನೆ ನೀಡಿದ್ದರೂ, ಎರಡು ಗುಂಪುಗಳ ನಡುವೆ ಹಿಂಸಾಚಾರ ಮತ್ತು ದ್ವೇಷವನ್ನು ಹುಟ್ಟುಹಾಕಲು ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಅಮಿತ್ ಮಾಳವೀಯ ಅವರು ಸಚಿವ ಉದಯನಿಧಿ ಸ್ಟಾಲಿನ್‌ ಮಾಡಿದ ಭಾಷಣವನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಹೇಳಿದ್ದೇನು

'ಸನಾತನ ಧರ್ಮ' ಕುರಿತು ಉದಯನಿಧಿ ಸ್ಟಾಲಿನ್ ಅವರ ಇತ್ತೀಚಿನ ಹೇಳಿಕೆಯು ವಿವಾದಕ್ಕೀಡಾಗಿತ್ತು. ಅದಾಗಿ, ಹಲವಾರು ಹಿಂದುತ್ವ ಗುಂಪುಗಳು, ಬಿಜೆಪಿ ಸೇರಿ ರಾಜಕೀಯ ಪಕ್ಷಗಳು ಡಿಎಂಕೆ ನಾಯಕ ಉದಯನಿದಿ ಸ್ಟಾಲಿನ್ ಅವರನ್ನು ಟೀಕಿಸಿದವು.

ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಶನಿವಾರ (ಸೆ.2) ಮಾತನಾಡಿದ ಉದಯನಿಧಿ, ಸನಾತನ ಧರ್ಮವನ್ನು ಕೇವಲ ವಿರೋಧಿಸಬಾರದು. ಅದರ ನಿರ್ಮೂಲನೆ ಮಾಡಬೇಕು. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ಮೂಲದಿಂದಲೇ ಕಿತ್ತೊಗೆಯಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಾವು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಆ ಸಮಾವೇಶದಲ್ಲಿ ಹೇಳಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.