DK Shivakumar: ಡಿಕೆ ಶಿವಕುಮಾರ್ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ; ಕೇರಳದ ಜೈಹಿಂದ್‌ ಚಾನೆಲ್‌ಗೆ ಸಿಬಿಐ ನೋಟಿಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Dk Shivakumar: ಡಿಕೆ ಶಿವಕುಮಾರ್ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ; ಕೇರಳದ ಜೈಹಿಂದ್‌ ಚಾನೆಲ್‌ಗೆ ಸಿಬಿಐ ನೋಟಿಸ್‌

DK Shivakumar: ಡಿಕೆ ಶಿವಕುಮಾರ್ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ; ಕೇರಳದ ಜೈಹಿಂದ್‌ ಚಾನೆಲ್‌ಗೆ ಸಿಬಿಐ ನೋಟಿಸ್‌

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಜೈಹಿಂದ್ ಚಾನೆಲ್‌ಗೆ ಸಿಬಿಐ ನೋಟಿಸ್ ಕಳುಹಿಸಿದೆ. ಆ ಚಾನೆಲ್‌ನಲ್ಲಿ ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬದ ಹೂಡಿಕೆ ಮತ್ತು ಹಣಕಾಸಿನ ವಹಿವಾಟಿನ ವಿವರ ಒದಗಿಸುವಂತೆ ಸೂಚಿಸಿದೆ.

ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (HT_PRINT/ PTI)

ನವದೆಹಲಿ: ಕೇರಳ ಮೂಲದ ಜೈಹಿಂದ್ ಚಾನೆಲ್‌ಗೆ ಸಿಬಿಐ ನೋಟಿಸ್ ರವಾನಿಸಿದ್ದು, ಅದರಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೂಡಿಕೆಯ ವಿವರವನ್ನು ಒದಗಿಸುವಂತೆ ಕೇಳಿದೆ.

ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಆದಾಯ ಮೀರಿದ ಆಸ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಜೈಹಿಂದ್ ಚಾನೆಲ್‌ನ ಹೂಡಿಕೆ ವಿಚಾರ ಗಮನಕ್ಕೆ ಬಂದಿದೆ. ಹೀಗಾಗಿ ಜೈಹಿಂದ್ ಚಾನೆಲ್‌ಗೆ ನೋಟಿಸ್ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಿಬಿಐನ ಬೆಂಗಳೂರು ಕಚೇರಿ ಈ ನೋಟಿಸ್ ಕಳುಹಿಸಿದೆ. ಜೈಹಿಂದ್ ಕಮ್ಯೂನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್‌ ಬಿಎಸ್‌ ಶಿಜು ಅವರು ಅಗತ್ಯ ದಾಖಲೆಗಳೊಂದಿಗೆ ಜನವರಿ 11 ರಂದು ಬೆಂಗಳೂರಿನಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 91 ಪ್ರಕಾರ ನೋಟಿಸ್ ಕಳುಹಿಸಲಾಗಿದೆ. ಡಿಕೆ ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಮಾಡಿದ ಹೂಡಿಕೆಗಳ ವಿವರ ಮತ್ತು ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ವಿವರ ನೀಡಬೇಕು. ಇಷ್ಟೇ ಅಲ್ಲ, ಜೈಹಿಂದ್ ಹೆಸರಿನಲ್ಲಿ ಅವರು ಮಾಡಿದ ಬ್ಯಾಂಕ್ ವಹಿವಾಟುಗಳ ವಿವರಗಳು, ಲೆಡ್ಜರ್ ಖಾತೆಗಳು, ಒಪ್ಪಂದದ ಟಿಪ್ಪಣಿಗಳ ವಿವರವನ್ನು ಕೂಡ ಒದಗಿಸುವಂತೆ ಸಿಬಿಐ ಕೇಳಿದೆ. ಅದೇ ರೀತಿ, ಶಿವಕುಮಾರ್ ಅವರ ಪುತ್ರ ಮತ್ತು ಇತರ ಕುಟುಂಬ ಸದಸ್ಯರು ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಪ್ರಸ್ತುತಪಡಿಸುವಂತೆ ಸಿಬಿಐ ಕೇಳಿದೆ.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 91 ಪೊಲೀಸ್ ತನಿಖಾಧಿಕಾರಿಗೆ ಆರೋಪಿಗೆ ಸಂಬಂಧಿಸಿದ ಕೇಸ್‌ನಲ್ಲಿ ದಾಖಲೆಗಳನ್ನು ಒದಗಿಸುವಂತೆ ಕೇಳುವ ಅಧಿಕಾರ ಸಿಗುತ್ತದೆ.

ಜೈಹಿಂದ್ ವ್ಯವಸ್ಥಾಪಕ ನಿರ್ದೇಶಕ ಬಿ ಎಸ್ ಶಿಜು ಅವರು ಸಿಬಿಐ ನೋಟಿಸ್ ಸ್ವೀಕರಿಸಿದ್ದು, ಸಂಸ್ಥೆ ಕೋರಿರುವ ಎಲ್ಲಾ ದಾಖಲೆಗಳನ್ನು ಒದಗಿಸುವುದಾಗಿ ಹೇಳಿದ್ದಾರೆ. ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಮತ್ತು ಯಾವುದೇ ಅಕ್ರಮ ಭಾಗಿಯಾಗಿಲ್ಲ. ಸಿಬಿಐನ ಕ್ರಮವು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ರಾಜಕೀಯ ದ್ವೇಷವನ್ನು ಬಿಂಬಿಸುವ ಸ್ಪಷ್ಟವಾದ ನಿದರ್ಶನ ಎಂದು ಆರೋಪಿಸಿದರು.

ಬಿಎಸ್ ಶಿಜು ಅವರು ಕೇರಳದಲ್ಲಿ ಕಾಂಗ್ರೆಸ್ ನಾಯಕರೂ ಆಗಿದ್ದು, ಯಾವುದೇ ಸ್ಪಷ್ಟ ಅಕ್ರಮ ಇಲ್ಲದೆಯೇ ಹಿಂದಿನ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವು ಪ್ರಕರಣದ ತನಿಖೆ ಮಾಡಿ ಮುಗಿಸಿದೆ. ಇದು ಮನಸ್ಸಿಗೆ ಕಿರಿಕಿರು ಉಂಟುಮಾಡುವ ಪ್ರಯತ್ನ ಎಂದು ಆರೋಪಿಸಿದರು.

ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಪ್ರಕರಣವನ್ನು ಸಿಬಿಐ 2020ರಲ್ಲಿ ದಾಖಲಿಸಿತ್ತು. ಇದು 2013 ಮತ್ತು 2018ರ ನಡುವಿನ ಆದಾಯಕ್ಕೆ ಸಂಬಂಧಿಸಿದೆ. ಈ ಅವಧಿಯಲ್ಲಿ 74 ಕೋಟಿ ರೂಪಾಯಿ ಸಂಪತ್ತು ಗಳಿಸಿದ್ದು, ಇದು ಅವರ ಆದಾಯಕ್ಕೆ ಮೀರಿದ ಆಸ್ತಿ ಎಂಬುದು ಕೇಸ್‌ನ ಮುಖ್ಯ ವಿಚಾರ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.