ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪುಣೆಯ ಆಟೋಮೊಬೈಲ್ ಕಂಪನಿ ಕ್ಯಾಂಟೀನ್‌ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆ, 5 ಆರೋಪಿಗಳ ಬಂಧನ

ಪುಣೆಯ ಆಟೋಮೊಬೈಲ್ ಕಂಪನಿ ಕ್ಯಾಂಟೀನ್‌ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆ, 5 ಆರೋಪಿಗಳ ಬಂಧನ

ಪುಣೆಯ ಆಟೋಮೊಬೈಲ್ ಕಂಪನಿ ಕ್ಯಾಂಟೀನ್‌ಗೆ ಪೂರೈಕೆಯಾಗಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆಯಾಗಿದ್ದು, 5 ಆರೋಪಿಗಳ ಬಂಧನವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗುತ್ತಿಗೆ ರದ್ದುಮಾಡಿರುವ ಕಾರಣ ಸಂಚು ರೂಪಿಸಿದ್ದು, ವಿಚಾರಣೆ ವೇಳೆ ಬಹಿರಂಗವಾಗಿದೆ.

ಪುಣೆಯ ಆಟೋಮೊಬೈಲ್ ಕಂಪನಿ ಕ್ಯಾಂಟೀನ್‌ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆಯಾಗಿರುವುದು ದೇಶದ ಗಮನಸೆಳೆದಿದೆ. (ಸಾಂಕೇತಿಕ ಚಿತ್ರ)
ಪುಣೆಯ ಆಟೋಮೊಬೈಲ್ ಕಂಪನಿ ಕ್ಯಾಂಟೀನ್‌ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆಯಾಗಿರುವುದು ದೇಶದ ಗಮನಸೆಳೆದಿದೆ. (ಸಾಂಕೇತಿಕ ಚಿತ್ರ) (Canva)

ಮುಂಬಯಿ: ಪುಣೆಯ ಪ್ರಮುಖ ಆಟೋಮೊಬೈಲ್‌ ಕಂಪನಿಗೆ ಸರಬರಾಜು ಮಾಡಿದ ಸಮೋಸಾದಲ್ಲಿ ಕಾಂಡೋಮ್‌, ಗುಟ್ಕಾ, ಕಲ್ಲುಗಳು ಪತ್ತೆಯಾದ ಕಾರಣ ಕೇಸ್ ದಾಖಲಾಗಿದೆ. ಈ ಸಂಬಂಧ 5 ಜನರನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ರಹೀಮ್ ಶೇಖ್, ಅಜರ್ ಶೇಖ್‌, ಮಜರ್ ಶೇಖ್‌, ಫಿರೋಜ್‌ ಶೇಕ್‌ ಮತ್ತು ವಿಕ್ಕಿ ಶೇಖ್‌ ಎಂದು ಗುರುತಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಪುಣೆಯ ಪಿಂಪರಿ ಚಿಂಚ್ವಾಡಾ ಪ್ರದೇಶದಲ್ಲಿರುವ ಆಟೋಮೊಬೈಲ್‌ ಕಂಪನಿಗೆ ಈ ರೀತಿ ಕಳಪೆ ಸಮೋಸಾಗಳನ್ನು ಸೋಮವಾರ (ಏಪ್ರಿಲ್ 8) ಪೂರೈಸಲಾಗಿತ್ತು. ಈ ಸಂಬಂಧ ದಾಖಲಾಗಿರುವ ದೂರಿನ ಪ್ರಕಾರ, ಸಮೋಸಾ ಪೂರೈಸುವ ಉಪಗುತ್ತಿಗೆ ಹೊಂದಿದ್ದ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಮತ್ತು ಇನ್ನೊಂದು ಅಂಥದ್ಧೇ ಸಂಸ್ಥೆಯ ಮೂವರು ಪಾಲುದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಪಾಲುದಾರರ ವಿರುದ್ಧ ಈ ಮೊದಲು ಇದೇ ರೀತಿ ಆರೋಪ ಇದ್ದ ಕಾರಣ ಅವರ ಜೊತೆಗಿನ ಗುತ್ತಿಗೆ ಒಪ್ಪಂದ ರದ್ದುಗೊಂಡಿತ್ತು. ಅವರ ಜೊತೆಗೆ ಸೇರಿಕೊಂಡು ಹೊಸ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಈ ರೀತಿ ಕಳಪೆ ಸಮೋಸಾ ಒದಗಿಸಿದ್ದರು. ಸಂಸ್ಥೆಗೆ ಕೆಟ್ಟ ಹೆಸರು ತರಬೇಕೆಂಬ ಪ್ರಯತ್ನ ಇದಾಗಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳಪೆ ಸಮೋಸಾ ಪೂರೈಕೆ ಪ್ರಕರಣದ ಹಿನ್ನೆಲೆ

ಪುಣೆಯ ಆಟೋಮೊಬೈಲ್‌ ಕಂಪನಿಯ ಕ್ಯಾಂಟೀನ್‌ಗೆ ಸಮೋಸಾ ಪೂರೈಸುವ ಗುತ್ತಿಗೆ ಒಪ್ಪಂದವನ್ನು ಕ್ಯಾಟಲಿಸ್ಟ್ ಸರ್ವೀಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿತ್ತು. ಆದಾಗ್ಯೂ ಈ ಗುತ್ತಿಗೆಯನ್ನು ಅದು ಮನೋಹರ್ ಎಂಟರ್‌ಪ್ರೈಸಸ್ ಎಂಬ ಇನ್ನೊಂದು ಸಂಸ್ಥೆಗೆ ಉಪಗುತ್ತಿಗೆ ನೀಡಿತ್ತು.

ಕಳಪೆ ಸಮೋಸಾ ಪೂರೈಕೆ ಸಂಬಂಧ ಫಿರೋಜ್‌ ಶೇಖ್ ಮತ್ತು ವಿಕ್ಕಿ ಶೇಖ್‌ ಎಂಬ ಇಬ್ಬರು ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರೇ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳನ್ನು ಸಮೋಸಾಗೆ ಪಲ್ಯಕ್ಕೆ ಸೇರಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಇಬ್ಬರು ಆರೋಪಿಗಳು ಮನೋಹರ್ ಎಂಟರ್‌ಪ್ರೈಸಸ್‌ ಉದ್ಯೋಗಿಗಳು ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಈ ಉದ್ಯೋಗಿಗಳು ಎಸ್‌ಆರ್‌ಎ ಎಂಬ ಇನ್ನೊಂದು ಉಪಗುತ್ತಿಗೆ ಸಂಸ್ಥೆಯ ಹೆಸರು ಪ್ರಸ್ತಾಪಿಸಿದ್ದಾರೆ. ಎಸ್‌ಆರ್‌ಎ ಸಂಸ್ಥೆಯಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಕಳಪೆ ಆಹಾರ ಪೂರೈಕೆ ಕಾರಣ ಇದೇ ಸಂಸ್ಥೆಯ ಉಪಗುತ್ತಿಗೆಯನ್ನು ಕ್ಯಾಟಲಿಸ್ಟ್ ಸರ್ವೀಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರದ್ದುಗೊಳಿಸಿತ್ತು. ಯಾವಾಗ ಈ ಉಪಗುತ್ತಿಗೆಯನ್ನು ಮನೋಹರ್ ಎಂಟರ್‌ಪ್ರೈಸಸ್‌ಗೆ ನೀಡಿತೋ ಆಗ, ತನ್ನ ಎರಡು ಉದ್ಯೋಗಿಗಳನ್ನು (ಫಿರೋಜ್‌ ಶೇಖ್ ಮತ್ತು ವಿಕ್ಕಿ ಶೇಖ್‌) ಎಸ್‌ಆರ್‌ಎ ಮನೋಹರ್ ಎಂಟರ್‌ಪ್ರೈಸಸ್‌ಗೆ ಕಳುಹಿಸಿತ್ತು. ಅವರನ್ನು ಉದ್ಯೋಗಕ್ಕೆ ತೆಗೆದುಕೊಂಡ ಮನೋಹರ್ ಎಂಟರ್‌ಪ್ರೈಸಸ್‌ ಈಗ ಕಳಪೆ ಆಹಾರ ಪೂರೈಕೆ ಆರೋಪ ಎದುರಿಸಿದೆ.

ವಿಚಾರಣೆ ಬಳಿಕ ಎಸ್‌ಆರ್‌ಎ ಎಂಟರ್‌ಪ್ರೈಸಸ್‌ನ ಮೂವರು ಪಾಲುದಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯ ನಡೆಸುವುದಕ್ಕೆ ಉದ್ಯೋಗಿಗಳನ್ನು ಪ್ರೇರೇಪಿಸಿ ಬಳಸಿದ್ದಕ್ಕಾಗಿ ಅವರ ವಿರುದ್ಧವೂ ಕೇಸ್ ದಾಖಲಾಗಿದೆ. ಎಸ್‌ಆರ್‌ಎ ಸಂಸ್ಥೆ ಸಮೋಸಾ ಪೂರೈಸುತ್ತಿದ್ದಾಗ ಅದರಲ್ಲಿ ಬ್ಯಾಂಡೇಡ್‌ ಪತ್ತೆಯಾಗಿತ್ತು. ಹೀಗಾಗಿ ಅದರ ಗುತ್ತಿಗೆ ರದ್ದುಗೊಂಡಿತ್ತು ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪೊಲೀಸರು ಐಪಿಸಿ ಸೆಕ್ಷನ್‌ 328, 120 ಬಿ ಪ್ರಕಾರ ಕೇಸ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

IPL_Entry_Point