Madhya Pradesh Elections: ಮಧ್ಯಪ್ರದೇಶ ಗೆಲ್ಲಲು ಕಾಂಗ್ರೆಸ್‍ಗೆ ಕರ್ನಾಟಕದ್ದೇ ಪ್ಲಾನ್; ಬಿಜೆಪಿಗೆ ಬಲ ತುಂಬಲು ಭಾನುವಾರ ಅಮಿತ್ ಶಾ ಪ್ರವಾಸ
Madhya Pradesh Elections: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಗೆಲುವಿನಿಂದ ಉತ್ತೇಜನ ಪಡೆದುಕೊಂಡಿರುವ ಕಾಂಗ್ರೆಸ್ ವರಿಷ್ಠರು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಅದೇ ಚುನಾವಣಾ ತಂತ್ರಗಾರಿಕೆ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಯಾವ ರೀತಿ ತಂತ್ರಗಾರಿಕೆ, ಹೇಗೆ ಅನುಷ್ಠಾನ ಮಾಡುತ್ತಿದ್ದಾರೆ. ಇಲ್ಲಿದೆ ಆ ಕುರಿತ ಒಂದು ವರದಿ
ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ (Madhya Pradesh Assembly Election) ಗೆಲ್ಲುವುದಕ್ಕೆ ಚುನಾವಣಾ ತಂತ್ರಗಾರಿಕೆ (Election Strategy) ಶುರುವಾಗಿದ್ದು, ಆಡಳಿತಾರೂಢ ಬಿಜೆಪಿಯನ್ನು ಎದುರಿಸುವುದಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಅನುಸರಿಸಿದ ಅದೇ ತಂತ್ರಗಾರಿಕೆಯನ್ನು ಮಧ್ಯಪ್ರದೇಶದಲ್ಲೂ ಅಳವಡಿಸುವ ಸಾಧ್ಯತೆ ಗೋಚರಿಸಿದೆ ಎಂದು ವರದಿಗಳು ಹೇಳಿವೆ.
ಈಗಾಗಲೇ ಉಚಿತ ವಿದ್ಯುತ್ ಭರವಸೆಯನ್ನು ಪಕ್ಷ ಘೋಷಿಸಿದೆ. ಈ ನಡುವೆ, ಚುನಾವಣಾ ತಂತ್ರಗಾರಿಕೆಯ ಆರಂಭಿಕ ಹೆಜ್ಜೆಯಾಗಿ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿಯಾಗಿದ್ದ ರಣದೀಪ್ ಸುರ್ಜೆವಾಲ ಅವರನ್ನು ಮಧ್ಯಪ್ರದೇಶದಲ್ಲಿ ಪಕ್ಷದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಆಡಳಿತಾರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷ, ಮಧ್ಯಪ್ರದೇಶದ ಜನರಿಗೆ ಉಚಿತ ಯೋಜನೆಗಳ ಘೋಷಣೆಗಳನ್ನು ಮಾಡಲಾರಂಭಿಸಿದೆ. ಆಡಳಿತಾರೂಢ ಬಿಜೆಪಿ ಕೂಡ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿಕೊಂಡಿದ್ದು, ಕಾಂಗ್ರೆಸ್ ವಾಗ್ದಾಳಿಯನ್ನು ರಕ್ಷಣಾತ್ಮಕವಾಗಿ ಎದುರಿಸತೊಡಗಿದೆ.
ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜೂನ್ 12ರಂದು ಜಬಲ್‍ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಾವು ಖಚಿತವಾಗಿ 100 ಪರ್ಸೆಂಟ್ ಈಡೇರಿಸುವುದಕ್ಕೆ ಸಾಧ್ಯವಿರುವಂತಹ ಕೆಲವು ಗ್ಯಾರೆಂಟಿಗಳನ್ನು ಘೋಷಿಸುತ್ತೇವೆ. ನಾವು ಈ ಭರವಸೆಯನ್ನು ಕರ್ನಾಟಕದ ಜನರಿಗೆ ಕೊಟ್ಟಿದ್ದೆವು. ಅಧಿಕಾರಕ್ಕೆ ಬಂದ ಕೂಡಲೇ ಈ ಸಂಬಂಧ ಮಸೂದೆಯನ್ನೂ ಜಾರಿಗೊಳಿಸಿದೆ ಎಂದು ಹೇಳಿದ್ದರು.
ಪ್ರತಿ ತಿಂಗಳು ಮಹಿಳೆಯರು 1,500 ರೂಪಾಯಿ ಪಡೆಯುತ್ತಾರೆ. ಗ್ಯಾಸ್ ಸಿಲಿಂಡರ್ 500 ರೂಪಾಯಿಗೆ ಸಿಗಲಿದೆ ಮತ್ತು 100 ಯೂನಿಟ್ ವಿದ್ಯುತ್ ಫ್ರೀಯಾಗಿ ಸಿಗಲಿದೆ. 200 ಯೂನಿಟ್ ವಿದ್ಯುತ್ ದರದಲ್ಲಿ ಶೇಕಡ 50 ರಿಯಾಯಿತಿ ಸಿಗಲಿದೆ. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾಗುತ್ತದೆ. ಬಡ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಎಂದು ಐದು ಗ್ಯಾರೆಂಟಿಗಳ ವಿವರವನ್ನು ಅವರು ಆ ಭಾಷಣದಲ್ಲಿ ತಿಳಿಸಿದ್ದರು.
ರಣದೀಪ್ ಸಿಂಗ್ ಸುರ್ಜೇವಾಲಾ ನೇಮಕ ಮಹತ್ವದ ನಡೆ
ಮಧ್ಯಪ್ರದೇಶದ ಚುನಾವಣಾ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಪಕ್ಷ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಇದು ಮಹತ್ವದ ನಡೆ ಎಂದು ಪರಿಗಣಿಸಲ್ಪಟ್ಟಿದೆ. ಸುರ್ಜೆವಾಲಾ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದರು.
ಸುನಿಲ್ ಕಾನುಗೋಳು ತಂತ್ರಗಾರಿಕೆಯು ಪ್ರಕಾರ ಕಾಂಗ್ರೆಸ್ ಪಕ್ಷ ಕರ್ನಾಟಕದ ಚುನಾವಣೆಯನ್ನು ಎದುರಿಸಿತ್ತು. ದೊಡ್ಡ ಮಟ್ಟದ ಗೆಲುವನ್ನು ಪಡೆದುಕೊಂಡಿದೆ ಕೂಡ. ಇದೇ ರೀತಿಯ ದೊಡ್ಡ ಗೆಲುವನ್ನು ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಪಕ್ಷ ಸುನಿಲ್ ಅವರ ತಂತ್ರಗಾರಿಕೆಯಿಂದ ನಿರೀಕ್ಷಿಸುತ್ತಿದೆ.
ಮಧ್ಯಪ್ರದೇಶದಲ್ಲಿ ವಲಯವಾರು ಸಭೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದ, ಬಿಹಾರದ 230 ಶಾಸಕರು ಮಧ್ಯಪ್ರದೇಶಕ್ಕೆ ಬಂದು ಏಳು ದಿನಗಳ ಕಾಲ ರಾಜ್ಯದ ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಮಧ್ಯಪ್ರದೇಶದಲ್ಲಿ 50 ಪರ್ಸೆಂಟ್ ಕಮಿಷನ್ ಆರೋಪ
ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ ಹೊರಿಸಿದ್ದ ಕಾಂಗ್ರೆಸ್ ಪಕ್ಷ, ಈಗಾಗಲೇ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ 50 ಪರ್ಸೆಂಟ್ ಕಮಿಷನ್ ಆರೋಪ ಹೊರಿಸಿದೆ. ಅಂದರೆ ಕರ್ನಾಟಕಕ್ಕಿಂತ 10 ಪರ್ಸೆಂಟ್ ಹೆಚ್ಚು ಭ್ರಷ್ಟಾಚಾರ ಅಲ್ಲಿ ನಡೆಯುತ್ತಿದೆ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಮುಂದಾಗಿದೆ.
ಕಂಭ ಮೇಳದಲ್ಲೂ ಭ್ರಷ್ಟಾಚಾರವಾಗಿತ್ತು. ಸಿಂಹಸ್ಥ ಮೇಳದಲ್ಲೂ ಆಗಿದೆ. ಅಷ್ಟೇ ಏಕೆ ಮಹಾಕಾಳ ದೇವಸ್ಥಾನದ ನಿರ್ಮಾಣ ಕಾಮಗಾರಿಯಲ್ಲೂ ಭ್ರಷ್ಟಾಚಾರವಾಗಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ ಕಾಂಗ್ರೆಸ್; ಭಾನುವಾರ ಅಮಿತ್ ಶಾ ಪ್ರವಾಸ
ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರು ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕರು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಇದಕ್ಕೆ ಬಿಜೆಪಿ ಸ್ಪಷ್ಟವಾಗಿ ಪ್ರತಿಕ್ರಿಯಿಸಲಿದೆ ಎಂದು ಹೇಳಿದ್ದಾರೆ.
ಫೇಕ್ ಲೆಟರ್ ಇಟ್ಟುಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆ ಸ್ಪಷ್ಟ ಉತ್ತರ ನೀಡಲಾಗುತ್ತದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಪ್ರಿಯಾಂಕಾ ಗಾಂಧಿಗೆ ಉತ್ತರ ನೀಡಲಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಬೇಕು ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನೂ ಎದುರಿಸಬೇಕಾಗುತ್ತದೆ ಎಂದು ವಿಡಿ ಶರ್ಮಾ ಎಚ್ಚರಿಸಿದರು.
ಕಾಂಗ್ರೆಸ್ ನಿರೂಪಣೆಯನ್ನು ಅರ್ಥಮಾಡಿಕೊಂಡಿರುವ ಬಿಜೆಪಿ ಮಧ್ಯಪ್ರದೇಶದಲ್ಲಿ ಪ್ರತಿದಾಳಿ ಆರಂಭಿಸಿದೆ. ಕರ್ನಾಟಕದಲ್ಲಿ ಆಗಿರುವಂತೆ ಬಿಜೆಪಿ ನಾಯಕರು ಸುಮ್ಮನೆ ಕುಳಿತಿಲ್ಲ. ಬಿಜೆಪಿಯ ಸೆಂಟ್ರಲ್ ಇಲೆಕ್ಷನ್ ಕಮಿಟಿ ಸಭೆ ಮುಗಿದ ಮಾರನೇ ದಿನವೇ ಮಧ್ಯಪ್ರದೇಶದ 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನಾವು ಸಮರೋಪಾದಿಯಲ್ಲಿ ಚುನಾವಣೆಗೆ ಸಜ್ಜಾಗುತ್ತಿದ್ದೇವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾರಣ ಕಾಂಗ್ರೆಸ್ ವಿಚಲಿತವಾದಂತೆ ತೋರುತ್ತಿದೆ. ನಾವು ನಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತೇವೆ. ನಮ್ಮ ನಾಯಕರು ಈಗಾಗಲೇ ಕಾರ್ಯಕ್ಷೇತ್ರದಲ್ಲಿ ಕೆಲಸ ಶುರುಮಾಡಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ (ಆ.20) ಮಧ್ಯಪ್ರದೇಶ ಪ್ರವಾಸ ಮಾಡಲಿದ್ದಾರೆ. ಅವರು ಈ ಸಂದರ್ಭದಲ್ಲಿ ಬಿಜೆಪಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಪ್ರಚಾರ ಅಭಿಯಾನಕ್ಕೆ ವೇಗ ಸಿಗುವ ನಿರೀಕ್ಷೆ ಇದೆ.
(India News, Election News and Explainers from Hindustan Times Kannada. ಭಾರತದ, ವಿವಿಧ ರಾಜ್ಯಗಳು ರಾಜಕೀಯ ವಿದ್ಯಮಾನದ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)