ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು
ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆಯು ದುರದೃಷ್ಟಕರ ಎನ್ನುತ್ತ ಕಾಂಗ್ರೆಸ್ ಪಕ್ಷ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಜನಾಂಗೀಯ ಮನಸ್ಥಿತಿಯನ್ನು ಒಪ್ಪಿಕೊಳ್ಳಲಾಗದು ಎಂದು ಹೇಳಿಕೆಯನ್ನು ಖಂಡಿಸಿದ್ದಾರೆ. ಸ್ಯಾಮ್ ಪಿತ್ರೋಡಾ ಹೇಳಿಕೆ ಕುರಿತು ಪ್ರಧಾನಿ ಮೋದಿ ಏನಂದ್ರು ಎಂಬ ಪೂರ್ಣ ವಿವರ ಇಲ್ಲಿದೆ.
ನವದೆಹಲಿ: ಭಾರತದ ವೈವಿಧ್ಯ,, ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ವಿವರಿಸುತ್ತ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ನೀಡಿದ ಜನಾಂಗೀಯ ಹೇಳಿಕೆ ವಿವಾದಕ್ಕೀಡಾಗಿದೆ. ಈ ಹೇಳಿಕೆ ರಾಜಕೀಯವಾಗಿ ವಿವಾದಕ್ಕೀಡಾಗಿರುವ ಕಾರಣ, ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಸ್ವೀಕಾರಾರ್ಹವಲ್ಲ ಮತ್ತು ದುರದೃಷ್ಟಕರ ಎಂದು ಕಾಂಗ್ರೆಸ್ ಪಕ್ಷವು ಅದರಿಂದ ಅಂತರವನ್ನು ಕಾಯ್ದುಕೊಂಡಿದೆ.
ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಸ್ಯಾಮ್ ಪಿತ್ರೋಡಾ ಅವರು ಭಾರತದ ವೈವಿಧ್ಯವನ್ನು ವಿವರಿಸುವುದಕ್ಕೆ ಬಳಸಿಕೊಂಡ ಹೋಲಿಕೆಗಳು ಅತ್ಯಂತ ದುರದೃಷ್ಟಕರ. ಅವುಗಳನ್ನು ಸ್ವೀಕರಿಸಲಾಗದು, ಮನ್ನಿಸಲಾಗದು. ಅದು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಕಾಂಗ್ರೆಸ್ ಪಕ್ಷದ್ದಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಗಳಿಂದ ಸಂಪೂರ್ಣವಾಗಿ ದೂರ ಉಳಿದಿದೆ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಸ್ಪಷ್ಟಪಡಿಸಿದರು.
ಇತ್ತೀಚೆಗೆ ದಿ ಸ್ಟೇಟ್ಸ್‌ಮನ್‌ಗೆ ಸಂದರ್ಶನ ನೀಡಿದ್ದ ಸ್ಯಾಮ್ ಪಿತ್ರೋಡಾ, ವಿಭಿನ್ನ ಬಾಹ್ಯ ನೋಟಗಳನ್ನು ಹೊಂದಿರುವ ಜನರು ಸಾಮರಸ್ಯದಿಂದ ವಾಸಿಸುವ ಪ್ರಜಾಪ್ರಭುತ್ವ ನಾನು ಇಷ್ಟ ಪಡುವ ಭಾರತ ಎಂದು ಹೇಳಿದರು. ಅಲ್ಲದೆ, ಭಾರತದ ವೈವಿಧ್ಯವನ್ನು ಬಣ್ಣಿಸುವಾಗ, ಪೂರ್ವದ ಜನರು ಚೀನೀಯರಂತೆ ಕಾಣುತ್ತಾರೆ, ಪಶ್ಚಿಮದ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ. ಆದಾಗ್ಯೂ, ನಾವೆಲ್ಲರೂ ಸೋದರ, ಸೋದರಿಯರು ಆಗಿರುವ ಕಾರಣ ಇದು ಅಪ್ರಸ್ತುತವಾಗುತ್ತದೆ" ಎಂದು ಹೇಳಿದ್ದರು.
ಜನಾಂಗೀಯ ಮನಸ್ಥಿತಿಯ ಹೇಳಿಕೆ ಸಲ್ಲದು- ಪ್ರಧಾನಿ ಮೋದಿ
ಸ್ಯಾಮ್ ಪಿತ್ರೋಡಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಈ ಜನಾಂಗೀಯ ಮನಸ್ಥಿತಿಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ಹೇಳಿದರು.
"ನನ್ನನ್ನು ನಿಂದಿಸಿದರೆ ಅದನ್ನು ನಾನು ಸಹಿಸಬಲ್ಲೆ, ಆದರೆ, ಜನರನ್ನು ನಿಂದಿಸಿದರೆ, ಅವರ ಚರ್ಮದ ಬಣ್ಣವನ್ನು, ಆಕಾರವನ್ನು ಆಧರಿಸಿ ಹೇಳಿಕೆಗಳನ್ನು ನೀಡಿದರೆ ಅವುಗಳನ್ನು ಸಹಿಸಲಾಗದು. ಚರ್ಮದ ಬಣ್ಣವನ್ನು ಆಧರಿಸಿ ನಾವು ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸಬಹುದೇ? ನನ್ನ ಜನರನ್ನು ಈ ರೀತಿ ಕೀಳಾಗಿ ಕಾಣಲು ರಾಜಕುಮಾರನಿಗೆ ಅನುಮತಿ ನೀಡಿದವರು ಯಾರು? ಈ ಜನಾಂಗೀಯ ಮನಸ್ಥಿತಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದ ಬಗ್ಗೆ ಸ್ವಲ್ಪ ಸ್ವಲ್ಪವಾದರೂ ತಿಳಿದುಕೊಳ್ಳಿ ಎಂದ ಹಿಮಂತ ಬಿಸ್ವಾ ಶರ್ಮಾ
"ಸ್ಯಾಮ್ ಭಾಯ್, ನಾನು ಈಶಾನ್ಯದವನು. ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಬಹುದು. ಆದರೆ ನಾವೆಲ್ಲರೂ ಒಂದೇ. ನಮ್ಮ ದೇಶದ ಬಗ್ಗೆ ಸ್ವಲ್ಪ ಸ್ವಲ್ಪವಾದರೂ ತಿಳಿದುಕೊಳ್ಳಿ" ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, "ಕಾಂಗ್ರೆಸ್ ಯಾವಾಗಲೂ ತನ್ನ ಒಡೆದು ಆಳುವ ನೀತಿಯಿಂದ ಭಾರತವನ್ನು ವಿಭಜಿಸಲು ಪ್ರಯತ್ನಿಸಿದೆ. ಆದರೆ ಈಶಾನ್ಯ ರಾಜ್ಯಗಳು ಯಾವತ್ತಿದ್ದರೂ ಭಾರತದ ಒಂದು ಭಾಗವೇ ಆಗಿದೆ ಮತ್ತು ಯಾವಾಗಲೂ ಹಾಗೆಯೇ ಇರುತ್ತದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಈಶಾನ್ಯದ ಜನರ ವಿರುದ್ಧ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಯಿಡಾ ಅವರ ಜನಾಂಗೀಯ ಹೇಳಿಕೆಯನ್ನು ನಾನು ಖಂಡಿಸುತ್ತೇನೆ" ಎಂದು ಹೇಳಿದ್ದಾರೆ. ಅಲ್ಲದೆ, ಪಿತ್ರೋಡಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಸಿಂಗ್, ಭಾರತದ ವೈವಿಧ್ಯತೆಯನ್ನು ಅಣಕಿಸುವುದು ಅತ್ಯಂತ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.