ಕನ್ನಡ ಸುದ್ದಿ  /  Nation And-world  /  India News Crime Tractor Lost Control And Fell Into Lake 20 People Including 7 Children Died In Kasganj Up Rmy

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಟ್ರ್ಯಾಕ್ಟರ್; ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ 7 ಮಕ್ಕಳು ಸೇರಿ 20 ಮಂದಿ ದುರ್ಮರಣ -UP Accident

Kasganj Tractor Accident: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಭೀಕರ ದುರಂತ ಸಂಭವಿಸಿದ್ದು, ಗಂಗಾ ಸ್ನಾನಕ್ಕೆ ಹೊರಟ್ಟಿದ್ದ ಟ್ರ್ಯಾಕ್ಟರ್ ಕೆರೆಗೆ ಬಿದ್ದು 7 ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿರುವ ಟ್ರ್ಯಾಕ್ಟರ್. ದುರಂತದಲ್ಲಿ 7 ಮಕ್ಕಳು, 8 ಮಂದಿ ಮಹಿಳೆಯರು ಸೇರಿ 20 ಮಂದಿ ಮೃತಪಟ್ಟಿರುವ ವರದಿಯಾಗಿದೆ.
ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿರುವ ಟ್ರ್ಯಾಕ್ಟರ್. ದುರಂತದಲ್ಲಿ 7 ಮಕ್ಕಳು, 8 ಮಂದಿ ಮಹಿಳೆಯರು ಸೇರಿ 20 ಮಂದಿ ಮೃತಪಟ್ಟಿರುವ ವರದಿಯಾಗಿದೆ. (PTI)

ಕಾಸ್‌ಗಂಜ್ (ಉತ್ತರ ಪ್ರದೇಶ): ಹುಣ್ಣಿಮೆ ನಿಮಿತ್ತ ಭಕ್ತರನ್ನು ಕೂರಿಸಿಕೊಂಡು ಗಂಗಾ ಸ್ನಾನಕ್ಕೆ ತೆರಳಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಪರಿಣಾಮ 7 ಮಕ್ಕಳ, 8 ಮಹಿಳೆಯರು ಸೇರಿದಂತೆ 20 ಮಂದಿ ಮೃತಪಟ್ಟಿರುವ ಭೀಕರ ದುರಂತ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ.

ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅದೇ ವೇಳೆಗೆ ಸುದ್ದಿ ತಿಳಿಯುತ್ತಲೇ ಪೊಲೀಸರು ಕೂಡ ದೌಡಾಯಿಸಿದ್ದಾರೆ. ಗಾಯಾಳುಗಳು ಹಾಗೂ ಮೃತದೇಹಗಳನ್ನು ಹೊರತೆಗೆಯಲು ನೆರವಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲಾಗಿದೆ. ಇವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಕಾಸ್‌ಗಂಜ್‌ನಲ್ಲಿ ಸಂಭವಿಸಿರುವ ಭೀಕರ ಅಪಘಾತದ ಬಗ್ಗೆ ಅಲಿಗಢ ಐಜಿ ಶಲಭ್ ಮಾಥುರ್ ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಇದರಲ್ಲಿ 8 ಮಹಿಳೆಯರು ಹಾಗೂ 7 ಮಕ್ಕಳೂ ಸೇರಿದ್ದಾರೆ.ರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್ ಕೆರೆಗೆ ಬಿದ್ದಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ದರಿಯಾವ್‌ಗಂಜ್ ಗಂಜ್ ಪ್ರದೇಶದ ಗಾಧಿಯಾ ಗ್ರಾಮದ ಬಳಿಕ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಕೆರೆಗೆ ಉರುಳಿ ಬಿದ್ದಿದೆ ಎಂದು ವರದಿಯಾಗಿದೆ.

ಈ ಭೀಕರ ದುರಂತಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಕೂಡಲೇ ಉತ್ತಮ ಚಿಕಿತ್ಸೆ ನೀಡುವಂತೆ ಕಾಸ್‌ಗಂಡ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಸಮೀಪದ ಪ್ರದೇಶಗಳಲ್ಲಿನ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಬೇಕೆಂದು ಸಿಎಂ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ, ಗಾಯಗೊಂಡರಿಗೆ ತಲಾ 50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point

ವಿಭಾಗ