ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸವಾಲುಗಳನ್ನು ಮೀರಿ ಹಾರಿದ ಫೀನಿಕ್ಸ್; ಭಾರತದ ಸ್ವದೇಶೀ ನಿರ್ಮಿತ ಡ್ರೋಣ್ ತಪಸ್

ಸವಾಲುಗಳನ್ನು ಮೀರಿ ಹಾರಿದ ಫೀನಿಕ್ಸ್; ಭಾರತದ ಸ್ವದೇಶೀ ನಿರ್ಮಿತ ಡ್ರೋಣ್ ತಪಸ್

ಈ ತಪಸ್ ಡ್ರೋಣ್‌ಗಳನ್ನು ಪಡೆದುಕೊಳ್ಳುವ ಮೂಲಕ, ಭಾರತೀಯ ಸೇನಾಪಡೆಗಳು ತಮ್ಮ ಕಾರ್ಯಾಚರಣಾ ಅವಶ್ಯಕತೆಗಳಿಗೆ ದೇಶೀಯ ನಿರ್ಮಾಣದ ರಕ್ಷಣಾ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಬದ್ಧತೆಯನ್ನು ಪ್ರದರ್ಶಿಸಿವೆ.

ಸವಾಲುಗಳನ್ನು ಮೀರಿ ಹಾರಿದ ಫೀನಿಕ್ಸ್; ಭಾರತದ ಸ್ವದೇಶೀ ನಿರ್ಮಿತ ಡ್ರೋಣ್ ತಪಸ್
ಸವಾಲುಗಳನ್ನು ಮೀರಿ ಹಾರಿದ ಫೀನಿಕ್ಸ್; ಭಾರತದ ಸ್ವದೇಶೀ ನಿರ್ಮಿತ ಡ್ರೋಣ್ ತಪಸ್

ಭಾರತೀಯ ವಾಯುಸೇನೆ (ಐಎಎಫ್) ಹತ್ತು ನೂತನ ತಪಸ್ ಡ್ರೋಣ್‌ಗಳ ಖರೀದಿಗೆ ಭಾರತ ಸರ್ಕಾರಕ್ಕೆ ತನ್ನ ಪ್ರಸ್ತಾವನೆ ಸಲ್ಲಿಸಿದೆ. ಈ ಡ್ರೋನ್‌ಗಳನ್ನು ಭಾರತದಲ್ಲೇ ದೇಶೀಯವಾಗಿ ನಿರ್ಮಿಸಲಾಗಿದೆ. ರಕ್ಷಣಾ ವಿಭಾಗದ ಅಧಿಕಾರಿಗಳ ಪ್ರಕಾರ, ಹತ್ತು ಡ್ರೋನ್‌ಗಳಲ್ಲಿ ಆರು ಡ್ರೋಣ್‌ಗಳನ್ನು ಭಾರತೀಯ ವಾಯುಸೇನೆ ಪಡೆದುಕೊಂಡರೆ, ಇನ್ನುಳಿದ ನಾಲ್ಕು ಡ್ರೋಣ್‌ಗಳನ್ನು ಭಾರತೀಯ ನೌಕಾ ಸೇನೆಗೆ ಒದಗಿಸಲಾಗುತ್ತದೆ. ತಪಸ್ ಡ್ರೋಣ್‌ಗಳನ್ನು ಖರೀದಿಸುವ ಭಾರತೀಯ ವಾಯುಸೇನೆಯ ನಿರ್ಧಾರ, ಕಣ್ಗಾವಲು ಕಾರ್ಯಾಚರಣೆಗಳಿಗೆ ಅವಶ್ಯಕವಾದ ಮಾನವ ರಹಿತ ವೈಮಾನಿಕ ವಾಹನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತಿದೆ.

ಈ ತಪಸ್ ಡ್ರೋಣ್‌ಗಳನ್ನು ಪಡೆದುಕೊಳ್ಳುವ ಮೂಲಕ, ಭಾರತೀಯ ಸೇನಾಪಡೆಗಳು ತಮ್ಮ ಕಾರ್ಯಾಚರಣಾ ಅವಶ್ಯಕತೆಗಳಿಗೆ ದೇಶೀಯ ನಿರ್ಮಾಣದ ರಕ್ಷಣಾ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಬದ್ಧತೆಯನ್ನು ಪ್ರದರ್ಶಿಸಿವೆ. ಒಂದಷ್ಟು ಕಾರ್ಯಾಚರಣಾ ಇತಿಮಿತಿಗಳ ಹೊರತಾಗಿಯೂ, ಭಾರತೀಯ ಸೇನಾಪಡೆಗಳು ತಪಸ್ ಡ್ರೋಣ್‌ಗಳನ್ನು ಖರೀದಿಸಲು ನಿರ್ಧರಿಸಿರುವುದು ಸೇನೆಯ ದೂರದೃಷ್ಟಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ತೋರುತ್ತದೆ. ರಕ್ಷಣಾ ಸಚಿವಾಲಯ ಸೇನೆಯ ಪ್ರಸ್ತಾವನೆಯನ್ನು ಸದ್ಯದಲ್ಲೇ ಪರಿಶೀಲಿಸುವ ಸಾಧ್ಯತೆಗಳಿವೆ. ಆದರೆ, ಸದ್ಯದ ಮಟ್ಟಿಗೆ ಭಾರತೀಯ ವಾಯುಸೇನೆ ಮತ್ತು ನೌಕಾಸೇನೆಗಳು ಮಾತ್ರವೇ ತಪಸ್ ಡ್ರೋಣ್‌ಗಳನ್ನು ಖರೀದಿಸಲಿವೆ.

ದೇಶೀಯವಾಗಿ ನಿರ್ಮಿಸಿರುವ ಡ್ರೋಣ್‌ಗಳು

ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯುರೆನ್ಸ್ (ಮಧ್ಯಮ ಎತ್ತರ ದೀರ್ಘ ಸಹಿಷ್ಣುತೆ - MALE) ಡ್ರೋನ್‌ಗಳು ಎಂದು ವರ್ಗೀಕರಿಸಲ್ಪಟ್ಟಿರುವ ತಪಸ್ ಡ್ರೋಣ್‌ಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ದೇಶೀಯವಾಗಿ ಅಭಿವೃದ್ಧಿ ಪಡಿಸಿದೆ. ತಪಸ್ ಡ್ರೋಣ್‌ಗಳನ್ನು ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸೇರಿದಂತೆ, ವಿವಿಧ ಸಂಸ್ಥೆಗಳು ಉತ್ಪಾದಿಸಲಿವೆ.

ಟ್ರೆಂಡಿಂಗ್​ ಸುದ್ದಿ

ಟ್ಯಾಕ್ಟಿಕಲ್ ಏರ್‌ಬಾರ್ನ್ ಪ್ಲಾಟ್‌ಫಾರಂ ಫಾರ್ ಏರಿಯಲ್ ಸರ್ವಯಲೆನ್ಸ್ ಬಿಯಾಂಡ್ ಹಾರಿಜಾನ್ - 201 (TAPAS BH-201) ಎನ್ನುವ ಈ ಡ್ರೋನ್‌ಗಳನ್ನು ಮೊದಲು ರುಸ್ತುಂ-2 ಎಂದು ಕರೆಯಲಾಗುತ್ತಿತ್ತು. ಈ ಡ್ರೋನ್‌ಗಳನ್ನು ಜನರಲ್ ಅಟಾಮಿಕ್ಸ್ ಎಂಕ್ಯು-1 ಪ್ರಿಡೇಟರ್ ಡ್ರೋನ್‌ಗಳ ರೀತಿಯಲ್ಲಿ ಕಾರ್ಯಾಚರಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತು. ಭಾರತೀಯ ವಾಯುಸೇನೆಯು ಸದ್ಯದ ಮಟ್ಟಿಗೆ ಸರ್ಚರ್, ಹೆರಾನ್ ಮಾರ್ಕ್-1 ಮತ್ತು ಮಾರ್ಕ್-2 ನಂತಹ ಇಸ್ರೇಲ್ ನಿರ್ಮಾಣದ ಡ್ರೋಣ್‌ಗಳನ್ನು ಬಳಸುತ್ತಿದೆ. ಅದರೊಡನೆ, ಅಮೆರಿಕಾದ ಪ್ರಿಡೇಟರ್ ಎಂಕ್ಯು-9ಬಿ ಡ್ರೋಣ್‌ಗಳನ್ನು ಇತರ ಮಿಲಿಟರಿ ವಿಭಾಗಗಳ ಸಹಯೋಗದೊಡನೆ ಖರೀದಿಸಲು ಆಲೋಚಿಸುತ್ತಿದೆ.

ಗಡಿಯಲ್ಲಿ ನಿಗಾ ಇರಿಸಲು ಸಹಾಯಕ

ಆರು ಸ್ವದೇಶೀ ನಿರ್ಮಿತ ತಪಸ್ ಡ್ರೋಣ್‌ಗಳನ್ನು ಹೊಂದುವುದರಿಂದ, ಉತ್ತರ ಮತ್ತು ಪಶ್ಚಿಮದ ಗಡಿಗಳಲ್ಲಿ ಸಮರ್ಥ ಮಾನವ ರಹಿತ ಕಣ್ಗಾವಲು ನಡೆಸಲು ವಾಯುಪಡೆಗೆ ಸಾಧ್ಯವಾಗುತ್ತದೆ. ಭಾರತೀಯ ವಾಯುಸೇನೆಯು ರಕ್ಷಣಾ ವಲಯದಲ್ಲಿ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಅಪಾರ ಉತ್ತೇಜನ ನೀಡುತ್ತಿದ್ದು, 1.6 ಲಕ್ಷ ಕೋಟಿ ರೂಪಾಯಿ ಮೊತ್ತದಲ್ಲಿ 180 ಎಲ್‌ಸಿಎ ಮಾರ್ಕ್ 1ಎ ಯುದ್ಧ ವಿಮಾನಗಳು ಮತ್ತು 156 ಎಲ್‌ಸಿಎಚ್ ದಾಳಿ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಆದೇಶ ನೀಡಿದೆ.

ಭಾರತೀಯ ನೌಕಾಸೇನೆಯು ಸಮುದ್ರ ಗಡಿಗಳ ಕಣ್ಗಾವಲಿಗೆ ತಪಸ್ ಡ್ರೋಣ್‌ಗಳನ್ನು ಬಳಸಲು ಆಲೋಚಿಸುತ್ತಿದೆ. ಈ ಡ್ರೋಣ್‌ಗಳು ಕ್ಷಿಪ್ರವಾಗಿ ಪೂರೈಕೆಯಾಗುವ ನಿರೀಕ್ಷೆಗಳಿದ್ದು, ಒಪ್ಪಂದಕ್ಕೆ ಸಹಿ ಹಾಕಿದ 24 ತಿಂಗಳುಗಳ ಒಳಗಾಗಿ ಮೊದಲ ಡ್ರೋಣ್‌ ಲಭ್ಯವಾಗಲಿದೆ. ಡಿಆರ್‌ಡಿಒ ತಪಸ್ ಡ್ರೋಣ್‌ಗಳ ಕ್ಷಮತೆಯನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ಕಾರ್ಯನಿರತವಾಗಿದೆ.

ತಪಸ್ ಮುಂದೆ ಸವಾಲುಗಳ ಹಾದಿ

'ತಾಪ' ಎಂದರೆ ಉಷ್ಣತೆ ಎಂಬ ಅರ್ಥವೂ ಇದ್ದು, ಶತ್ರುಗಳ ಅಪಾಯವನ್ನು ತಪ್ಪಿಸುವಲ್ಲಿ ಈ ಡ್ರೋಣ್‌ಗಳ ಸಾಮರ್ಥ್ಯವನ್ನೂ ಪ್ರತಿನಿಧಿಸುತ್ತದೆ. ಚಿತ್ರದುರ್ಗದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ಈಗಾಗಲೇ ತಪಸ್ ಡ್ರೋಣ್‌ಗಳ 200ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದೆ. ತಪಸ್ ಡ್ರೋಣ್‌ಗಳ 200ನೇ ಪರೀಕ್ಷೆಯನ್ನು ಭಾರತೀಯ ಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಪ್ರತಿನಿಧಿಗಳ ಜಂಟಿ ತಂಡ ವೀಕ್ಷಿಸಿತ್ತು.

ಡಿಆರ್‌ಡಿಒದ ತಪಸ್ ಯೋಜನೆಯು ಆಗಸ್ಟ್ 2016ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಹಲವಾರು ಸಮಸ್ಯೆಗಳ ಕಾರಣದಿಂದ ಯೋಜನೆ ವಿಳಂಬಗೊಳ್ಳುತ್ತಾ ಸಾಗಿತು. ಮೂಲ ಯೋಜನೆಯ ಪ್ರಕಾರ, ತಪಸ್ ಡ್ರೋಣ್‌ನ ತೂಕ 1,800 ಕೆಜಿ ಆಗಿರಬೇಕಿತ್ತು. ಆದರೆ, ಯೋಜನೆ ಸಾಗಿದಂತೆ, ಡ್ರೋಣ್ ತೂಕ ಬರೋಬ್ಬರಿ 2,850 ಕೆಜಿಗೆ ತಲುಪಿತ್ತು. ಅದರೊಡನೆ, ಮುಖ್ಯ ಇಂಜಿನ್ ಮತ್ತು ಪೇಲೋಡ್‌ಗಳಲ್ಲೂ ಸಮಸ್ಯೆಗಳು ತಲೆದೋರಿದ್ದವು. ಈ ಸವಾಲುಗಳು ತಪಸ್ ಯೋಜನೆಯನ್ನು ಸಾಕಷ್ಟು ವಿಳಂಬಗೊಳಿಸಿ, ಯೋಜನಾ ವೆಚ್ಚವನ್ನು 1,786 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದವು.

ಭಾರತೀಯ ಸೇನೆಯ ಜಂಟಿ ಸೇನಾ ವಿಭಾಗಗಳ ಅವಶ್ಯಕತೆಯನ್ನು ಪೂರೈಸುವಲ್ಲೂ ತಪಸ್ ಡ್ರೋಣ್ ಸವಾಲುಗಳನ್ನು ಎದುರಿಸಿತ್ತು. ನಿಯಮಗಳ ಪ್ರಕಾರ, ಒಂದು ಎಂಎಎಲ್ಇ ಡ್ರೋಣ್ 30,000 ಅಡಿಗಳಷ್ಟು ಎತ್ತರದಲ್ಲಿ, ನಿರಂತರವಾಗಿ 24 ಗಂಟೆಗಳಷ್ಟು ಹಾರಾಟ ನಡೆಸಲು ಸಮರ್ಥವಾಗಿರಬೇಕು. ಆದರೆ, ಪರೀಕ್ಷೆಗಳಲ್ಲಿ ತಪಸ್ ಡ್ರೋಣ್‌ಗಳು ಗರಿಷ್ಠ 28,000 ಅಡಿಗಳನ್ನು ಮಾತ್ರವೇ ತಲುಪಲು ಯಶಸ್ವಿಯಾಗಿ, 18 ಗಂಟೆಗಳಷ್ಟು ಮಾತ್ರ ಹಾರಾಟ ನಡೆಸಲು ಯಶಸ್ವಿಯಾಗಿದ್ದವು.

ತಪಸ್ ಡ್ರೋಣ್‌ ಸಾಮರ್ಥ್ಯ ವೃದ್ಧಿ

ಪ್ರಸ್ತುತ ಅಭಿವೃದ್ಧಿ ಯೋಜನೆಗಳು, ತಪಸ್ ಡ್ರೋಣ್‌ಗಳನ್ನು ಇನ್ನಷ್ಟು ಉತ್ತಮಪಡಿಸುವ ಮತ್ತು ಅಭಿವೃದ್ಧಿಗೊಳಿಸುವ ಮತ್ತು ಅದರ ಪ್ರದರ್ಶನದ ಸವಾಲುಗಳನ್ನು ಸರಿಪಡಿಸುವ ಗುರಿ ಹೊಂದಿವೆ. ಅದರೊಡನೆ, ತಪಸ್ ಡ್ರೋಣ್‌ಗಳು ಆಧುನಿಕ ಯುದ್ಧದ ಅವಶ್ಯಕತೆಗಳನ್ನು ಪೂರೈಸುವಂತೆ ಮಾಡುವ ಅವಶ್ಯಕತೆಯಿದೆ. ಡಿಆರ್‌ಡಿಓ, ಬಿಇಎಲ್ ಮತ್ತು ಎಚ್ಎಎಲ್ ಗಳು ಜಂಟಿಯಾಗಿ ಕಾರ್ಯಾಚರಿಸಿ, ಈ ಸವಾಲುಗಳನ್ನು ಪೂರೈಸಲು ಪ್ರಯತ್ನಿಸುತ್ತಿವೆ.

ಇಷ್ಟೆಲ್ಲ ಅಡೆತಡೆಗಳ ಹೊರತಾಗಿಯೂ, ತಪಸ್ ಡ್ರೋಣ್‌ಗಳ ಖರೀದಿಗೆ ಇತ್ತೀಚಿನ ಆದೇಶ ತಪಸ್ ಯೋಜನೆಯ ಪಾಲಿನ ಸಾಧನೆಯೇ ಸರಿ. ಈ ಖರೀದಿ ಆದೇಶಗಳು ಪ್ರಾಯೋಗಿಕ ಅನುಭವ ನೀಡಿ, ಸ್ವದೇಶೀ ಡ್ರೋಣ್‌ಗಳನ್ನು ನಿರ್ಮಿಸುವಲ್ಲಿ ಭಾರತದ ಜ್ಞಾನವನ್ನು ವೃದ್ಧಿಸಲಿವೆ. ಭವಿಷ್ಯದಲ್ಲಿ ಭಾರತದ ಡ್ರೋಣ್‌ ತಂತ್ರಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವ ಸಾಧ್ಯತೆಗಳಿರುವುದರಿಂದ, ತಪಸ್ ಯೋಜನೆಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

(ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.